ADVERTISEMENT

ವಿಶ್ಲೇಷಣೆ | ರೈತರ ‘ಆದಾಯ ಡಬಲ್’: ಯಾವಾಗ? ಎಲ್ಲಿ?

ಕೃಷಿ ಉತ್ಪಾದನೆ ಹೆಚ್ಚಾಗಿದ್ದರೂ ರೈತರ ಆದಾಯ ಹೆಚ್ಚಾಗದಿರುವುದಕ್ಕೆ ಹಲವು ಕಾರಣಗಳಿವೆ

ಗುರುರಾಜ್ ಎಸ್.ದಾವಣಗೆರೆ
Published 23 ಜೂನ್ 2021, 19:45 IST
Last Updated 23 ಜೂನ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ಸಾಂಕ್ರಾಮಿಕದ ಪಿಡುಗು ಇಡೀ ವಿಶ್ವದ ಬಹುತೇಕ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರೂ ಕಳೆದ ವರ್ಷದ ಉತ್ತಮ ಮಳೆಯು ಜಲಾಶಯಗಳು ಬರಿದಾಗದಂತೆ ನೋಡಿಕೊಂಡದ್ದರಿಂದ, ಅಚ್ಚರಿಯೆಂಬಂತೆ ನಮ್ಮ ಕೃಷಿ ಕ್ಷೇತ್ರ ಮಾತ್ರ ಹೆಚ್ಚಿನ ಉತ್ಪಾದನೆ ದಾಖಲಿಸಿ ಅನನ್ಯ ಸಾಧನೆ ಮಾಡಿದೆ. ಆದರೆ ವಿಪರ್ಯಾಸವೆಂಬಂತೆ, ರೈತರ ಆದಾಯವೇನೂ ಜಾಸ್ತಿಯಾಗಿಲ್ಲ. ಅಲ್ಲದೆ ಕೇಂದ್ರ ಸರ್ಕಾರ 2016ರಲ್ಲಿ ಘೋಷಿಸಿದ್ದ ‘ರೈತರ ಆದಾಯವನ್ನು ಡಬಲ್’ ಮಾಡುವ ಗುರಿ ತಲುಪಲು ಬಾಕಿ ಇರುವುದು ಇನ್ನು ಎಂಟು ತಿಂಗಳು ಮಾತ್ರ. ಅದನ್ನು ಸಾಧಿಸುವುದು ಅಸಾಧ್ಯ ಎಂಬ ಮಾತು ತಜ್ಞರಿಂದ ಕೇಳಿಬರುತ್ತಿದೆ.

ಸ್ವಾತಂತ್ರ್ಯದ 75ನೇ ವರ್ಷದ ಸಮಾರೋಪದ ವೇಳೆಗೆ ದೇಶದ ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದು 2016ರ ರಾಷ್ಟ್ರೀಯ ವಿಜ್ಞಾನ ದಿನದಂದು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ನಿರ್ದಿಷ್ಟ ಸೂಚನೆ ನೀಡುವಂತೆ ಕೇಂದ್ರ ಕೃಷಿ ಸಚಿವಾಲಯಕ್ಕೆ ತಾಕೀತು ಮಾಡಿದ್ದರು.

ಈ ಮಹತ್ವಾಕಾಂಕ್ಷಿ ಯೋಜನೆಗೆ ಸಾಥ್ ನೀಡಿದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್), ಪ್ರತೀ ರಾಜ್ಯದ ಜಿಲ್ಲೆಗಳಲ್ಲಿ ತಲಾ ಎರಡು ಹಳ್ಳಿಗಳನ್ನು ದತ್ತು ತೆಗೆದುಕೊಂಡು, ಸುಧಾರಿತ ಬೇಸಾಯ ಕ್ರಮಗಳ ಮೂಲಕ ಬೆಳೆ ಇಳುವರಿ ಹೆಚ್ಚಿಸಲು ಮುಂದಾಯಿತು.

ADVERTISEMENT

ಯೋಜನೆ ಅನುಷ್ಠಾನಗೊಳಿಸಿ ರೈತರಿಗೆ ಕಾಲ ಕಾಲಕ್ಕೆ ಮಾರ್ಗದರ್ಶನ ಮತ್ತು ಸಲಹೆ ನೀಡಿ ಬೆಳೆ ಮಾರಾಟ ಗೊಂಡು, ರೈತರ ಕೈಗೆ ಹಣ ಸಿಗುವವರೆಗೂ ಕೃಷಿ ವಿಜ್ಞಾನ ಕೇಂದ್ರಗಳು ನೆರವಾಗಬೇಕು ಎಂಬ ಸೂತ್ರ ಅನುಸರಿಸಲಾಯಿತು. ಅದರಂತೆ, ಎಲ್ಲ ರಾಜ್ಯಗಳ 651 ಕೃಷಿ ವಿಜ್ಞಾನ ಕೇಂದ್ರಗಳು 1,416 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಕೆಲಸ ಶುರು ಮಾಡಿದವು.

2019- 20ರ ಆರ್ಥಿಕ ಸಮೀಕ್ಷೆ ಪ್ರಕಾರ, ಆ ಹಿಂದಿನ ಆರು ವರ್ಷಗಳ (2014- 2020) ಕೃಷಿ ಪ್ರಗತಿಯ ದರ ಕೇವಲ ಶೇ 2.88ರಷ್ಟಿದೆ. ಈ ವರ್ಷದ ಕೊನೆಗೆ ಅದು ಶೇ 2.90 ತಲುಪಲಿದೆ ಎಂಬ ಅಂದಾಜಿದೆ. 2016ರಲ್ಲಿ ಯೋಜನೆ ಘೋಷಣೆಯಾದ ತಕ್ಷಣ ಪ್ರತಿಕ್ರಿಯಿಸಿದ್ದ ಕೃಷಿ ಮಾರುಕಟ್ಟೆ ತಜ್ಞರು, ಕೃಷಿಕರ ಆದಾಯ ಡಬಲ್ ಆಗಲು ಪ್ರಗತಿಯ ಪ್ರಮಾಣ ವರ್ಷಕ್ಕೆ ಶೇ 14.86ರಷ್ಟಿರಬೇಕು ಎಂದಿದ್ದರು. ಆದರೆ 2017ರ ಸಂಶೋಧನಾ ವರದಿ ಆಧರಿಸಿ ಹೇಳಿಕೆ ನೀಡಿದ ನೀತಿ ಆಯೋಗವು ಪ್ರತಿವರ್ಷ ಪ್ರಗತಿಯ ದರ ಶೇ 10.4ರಷ್ಟಿದ್ದರೆ ಸಾಕು ಎಂದಿದೆ. ಅದಕ್ಕೆ ಸಾಕ್ಷ್ಯ ನೀಡುವ ಆಯೋಗದ ಸದಸ್ಯ ರಮೇಶ್ ಚಂದ್, 2001- 2014ರ ಅವಧಿಯಲ್ಲಿ ದೇಶದ ಇಳುವರಿ ಕ್ಷೇತ್ರ ಶೇ 3.1ರ ಬೆಳವಣಿಗೆ ಕಂಡಿದೆ ಮತ್ತು 2021ರ ವೇಳೆಗೆ ಅದು ಶೇ 18.7 ತಲುಪಲಿದೆ ಎಂದು ಖಚಿತವಾಗಿ ವಾದ ಮಂಡಿಸುತ್ತಾರೆ. ಕೃಷಿಯ ಜೊತೆ ಜಾನುವಾರುಗಳಿಂದ ಬರುವ ಆದಾಯವನ್ನೂ ಸೇರಿಸಿದರೆ ರೈತರ ಆದಾಯ 2022ರ ವೇಳೆಗೆ ಶೇ 27.5ರಷ್ಟು ಹೆಚ್ಚಲಿದೆ ಎನ್ನುತ್ತಾರೆ.

ವಾಸ್ತವಾಂಶ ಬೇರೆಯೇ ಇದ್ದು, ಕಳೆದ ಸೆಪ್ಟೆಂಬರ್‌ ನಲ್ಲಿ ಲೋಕಸಭೆಯ ಕಲಾಪದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ನ್ಯಾಷನಲ್ ಸ್ಯಾಂಪಲ್ ಸರ್ವೆ ಕಚೇರಿಯ ಪ್ರಕಾರ, 2013- 14ರವರೆಗಿನ ದಾಖಲೆ ಮಾತ್ರ ಇದೆ, ನಂತರದ್ದು ಇಲ್ಲ’ ಎಂದಿದ್ದಾರೆ. 2020ರ ಮಾರ್ಚ್‌ನಲ್ಲಿ ವರದಿ ನೀಡಿದ ಸ್ಥಾಯಿ ಸಮಿತಿ, ಆದಾಯ ದ್ವಿಗುಣಗೊಳಿಸುವ ವಿವರಗಳ ಕುರಿತು ವಿಸ್ತೃತ ವಿಚಾರವಿಮರ್ಶೆ ಮಾಡಿದೆಯೇ ಹೊರತು ಬೆಳವಣಿಗೆ ದರದ ಕುರಿತು ಚಕಾರ ಎತ್ತಿಲ್ಲ.

ಯೋಜನೆಯ ಕುರಿತು ವಿಷಯ ಸಂಗ್ರಹಿಸಲು 70 ಕೃಷಿ ವಿಜ್ಞಾನ ಕೇಂದ್ರಗಳನ್ನು ಸಂಪರ್ಕಿಸುವ ಪ್ರಯತ್ನ ‘ಡೌನ್ ಟು ಅರ್ಥ್’ ತಂಡದಿಂದ ನಡೆಯಿತು. ಉತ್ತರ ಕೊಟ್ಟ ಕೇಂದ್ರಗಳು ಕೇವಲ 22. ‘ನಾವು ಮಾಹಿತಿ ಕೊಡುವುದಿಲ್ಲ’ ಎಂದು 27 ಕೇಂದ್ರಗಳು ನೇರವಾಗಿ ಹೇಳಿದರೆ, ಉಳಿದ 21 ಕೇಂದ್ರಗಳಿಗೆ ಕ್ರಿಯಾತ್ಮಕವಾದ ಫೋನ್ ನಂಬರ್‌ಗಳಾಗಲೀ ಇ– ಮೇಲ್ ವಿಳಾಸವಾಗಲೀ ಇರಲಿಲ್ಲ. ‌

ಪ್ರಶ್ನೆಗಳಿಗೆ ಉತ್ತರಿಸಿದ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ‘ಸರ್ಕಾರದ ಯೋಜನೆಯಂತೆ ಕೆಲಸ ನಡೆಯುತ್ತಿದೆ. ರೈತರು ಸ್ಪಂದಿಸುತ್ತಿದ್ದಾರೆ, ಆದರೆ ಹಾಕಿಕೊಂಡ ಗುರಿ ತಲುಪುತ್ತೇವೆಯೋ ಇಲ್ಲವೋ ಎಂದು ಈಗಲೇ ಹೇಳಲಾಗದು’ ಎಂದಿದ್ದಾರೆ. ರೈತರನ್ನೇ ಸಂಪರ್ಕಿಸಿದಾಗ ಆಶ್ಚರ್ಯಕರ ಮಾಹಿತಿ ಹೊರಬಿದ್ದಿದೆ. ಹತ್ತರಲ್ಲಿ 9 ರೈತರಿಗೆ ತಮ್ಮ ಹಳ್ಳಿಗಳನ್ನು ಅಂಥದ್ದೊಂದು ಯೋಜನೆಯ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ ಎಂಬುದೇ ತಿಳಿದಿರಲಿಲ್ಲ.

‘ನಿಮ್ಮ ಆದಾಯ ಡಬಲ್ ಆಗಬಹುದೆಂದು ನಿಮಗೆ ಅನ್ನಿಸುತ್ತಿದೆಯೇ’ ಎಂಬ ಪ್ರಶ್ನೆಗೆ ಒಬ್ಬರು ಮಾತ್ರ, ‘ಆಗಬಹುದೇನೋ, ಆದರೆ ನಮಗೆ ಬೇಕಾದ ಬೆಳೆ ಬೆಳೆಯಲು ಅವಕಾಶವಿಲ್ಲ. ಅವರು ಹೇಳಿದ್ದನ್ನೇ ಮಾಡಬೇಕು. ಇದ್ಯಾವ ನ್ಯಾಯ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶದ ಹರ್‍ದೋಯಿ ಜಿಲ್ಲೆಯ ಹರಿಯವನ್ ಹಳ್ಳಿಯ ಕಾಮೇಶ್ವರ್, ‘ಮೊದಲೆಲ್ಲ ಅರ್ಧ ಎಕರೆಗೆ 5-6 ಟನ್ ಕಬ್ಬು ಬೆಳೆಯುತ್ತಿದ್ದೆ. ಅಧಿಕಾರಿಗಳು ಬಂದು ನಿನ್ನ ಜಮೀನನ್ನು ‘ಇನ್‍ಕಂ ಡಬಲ್’ ಮಾಡುವ ಯೋಜನೆಗೆ ಗುರುತಿಸಿದ್ದೇವೆ, ಇನ್ನು ಮುಂದೆ ಹೊಸ ತಳಿ 0238 ಬೆಳೆಯಿರಿ ಎಂದು ಸಲಹೆ ನೀಡಿದ ನಂತರ ಇಳುವರಿ 4 ಟನ್‍ಗೆ ಇಳಿಕೆಯಾಗಿದೆ’ ಎಂದು ಹೇಳಿದ್ದಾರೆ.

‘ಕಬ್ಬಿನ ಬದಲಿಗೆ ಬೇರೆಯದನ್ನು ಬೆಳೆದರೆ ಮಾಡಿದ ಖರ್ಚೂ ವಾಪಸ್ ಬರುವುದಿಲ್ಲ’ ಎಂದಿರುವ ಇನ್ನೊಬ್ಬ ರೈತ ಅಶುತೋಶ್ ಮಿಶ್ರ, ‘ಕಳೆದ ಬಾರಿ ಗೋಧಿಬೆಳೆದಾಗ ಬೆಂಬಲ ಬೆಲೆ ಪ್ರತೀ ಕ್ವಿಂಟಲ್‌ಗೆ ₹ 1,868 ಇದ್ದರೂ ಸಿಕ್ಕಿದ್ದು ಕೇವಲ ಸಾವಿರ ರೂಪಾಯಿ. ಇನ್ನೊಂದು ಹೊಲದಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಪ್ರತೀ ಕ್ವಿಂಟಲ್‌ಗೆ ಬೆಂಬಲ ಬೆಲೆಗಿಂತ ಸಾವಿರ ರೂಪಾಯಿ ಕಡಿಮೆಸಿಕ್ಕಿತ್ತು. ಪರಿಸ್ಥಿತಿ ಹೀಗಿರುವಾಗ ಅದ್ಯಾವ ರೀತಿಯಲ್ಲಿ ಆದಾಯ ಡಬಲ್ ಆಗುತ್ತದೆ?’ ಎಂದು ಖಾರವಾಗಿಪ್ರಶ್ನಿಸಿದ್ದಾರೆ.

ಅಹಮದಿ ಹಳ್ಳಿಯ ರಾಮ್‍ಪಾಲ್, ‘ಕಳೆದ ಸಲ ಬೆಳೆದ ಕಬ್ಬಿಗೆ ಕೆಂಪು ಕೂಳೆ ರೋಗ ತಗುಲಿದ್ದರಿಂದ ಶುಗರ್ ಮಿಲ್‍ನವರು ಒಂದೇ ಒಂದು ಕೆ.ಜಿ ಕಬ್ಬನ್ನೂ ಕೊಳ್ಳಲಿಲ್ಲ, ಹಾಕಿದ್ದ ಬಂಡವಾಳವೆಲ್ಲ ಸಾಲವಾಗಿ ತಲೆ ಮೇಲೆ ಬಂದಿದೆ’ ಎಂದಿದ್ದಾರೆ.

ಹರಿಯಾಣ ಮತ್ತು ಮಧ್ಯಪ್ರದೇಶದ ಸದತ್‌ಪುರ ಮತ್ತು ಲೊಕ್ರ ಹಳ್ಳಿಗಳ ಆಶೋಕ್ ಕುಮಾರ್ ಮತ್ತು ಭೀಮಸಿಂಗ್, ಹೂವು, ಹತ್ತಿ, ಬಟಾಣಿ ಬೆಳೆಗಳನ್ನು ಸಾವಯವ ವಿಧಾನದಲ್ಲಿ ಬೆಳೆದು ಆದಾಯ ಡಬಲ್ ಮಾಡಿಕೊಂಡಿದ್ದರೂ, ಸಾಧನೆಯ ಶ್ರೇಯಸ್ಸನ್ನು ಕೃಷಿ ‌ವಿಜ್ಞಾನ ಕೇಂದ್ರಕ್ಕೆ ಕೊಡಲು ಒಪ್ಪಿಲ್ಲ. ಕಪ್ಪು ಗೋಧಿಯನ್ನು ಬೆಳೆಯುವ ಅಶೋಕ್, ‘ಉತ್ಪನ್ನವನ್ನು ಯಾವ ಮಾರುಕಟ್ಟೆಗೂ ತೆಗೆದುಕೊಂಡು ಹೋಗುವುದಿಲ್ಲ, ಕೊಳ್ಳುವವರು ಇಲ್ಲಿಯೇ ಬರುತ್ತಾರೆ. ನಮ್ಮ ಬೆಲೆಗೇ ಖರೀದಿಸುತ್ತಾರೆ’ ಎಂದಿದ್ದು, ‘ಬೆಳೆ ಆಯ್ಕೆಯ ಸ್ವಾತಂತ್ರ್ಯ ನಮಗೇ ಇರಬೇಕು. ಆಗ ಮಾತ್ರ ಆದಾಯವನ್ನು ಡಬಲ್ ಅಷ್ಟೇ ಅಲ್ಲ, ನಾಲ್ಕು ಪಟ್ಟು ಏರಿಸಬಹುದು’ ಎಂಬ ಭರವಸೆಯ ಮಾತನ್ನಾಡಿದ್ದಾರೆ.

ಆಯ್ದ ಕೆಲವು ಹಳ್ಳಿಗಳ ರೈತರ ಆದಾಯ ಹೆಚ್ಚಿಸುವ ಉಪಕ್ರಮಗಳ ಪ್ರಗತಿಯ ಸ್ಥಿತಿಯೇ ಹೀಗಿರಬೇಕಾದರೆ, ಉಳಿದ ಕೋಟ್ಯಂತರ ರೈತರ ಆದಾಯ ಡಬಲ್‌ ಆಗುವುದು ಯಾವಾಗ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.