ADVERTISEMENT

ಚುರುಮುರಿ: ಹೆಚ್ಚೆತ್ತ ಕರ್ನಾಟಕ!

ಚಂದ್ರಕಾಂತ ವಡ್ಡು
Published 31 ಮಾರ್ಚ್ 2023, 19:34 IST
Last Updated 31 ಮಾರ್ಚ್ 2023, 19:34 IST
.
.   

ಗಂಟೆ ಎಂಟಾದರೂ ಮಲಗಿಯೇ ಇದ್ದ ಮಗನ ಮೇಲಿನ ಸಿಟ್ಟನ್ನು ಹೆಂಡತಿಯ ಮೇಲೆ ಹಾಕಿದ ತಿಂಗಳೇಶ, ‘ನಿನಗೆ ಒಂಚೂರೂ ಜವಾಬ್ದಾರಿ ಇಲ್ಲ… ಅವನನ್ನು ಬೇಗ ಎಬ್ಬಿಸಬಾರದೇ? ಇಷ್ಟೊತ್ತಾದರೂ ಎಚ್ಚರಗೊಳ್ಳದ ಅವನೇನು ಭಾರತದ ಮತದಾರನೇ…?’

‘ನೋಡಿ… ನಿಮ್ಮ ‘ಎದ್ದೇಳು ಕರ್ನಾಟಕ’ ಅಭಿಯಾನ ಮನೆಯಲ್ಲಿ ಬೇಡ. ಅಂಥದ್ದನ್ನೆಲ್ಲಾ ಫೇಸ್‌ಬುಕ್ಕಿನಲ್ಲೇ ಹರಿಯಬಿಟ್ಟು ಲೈಕುಗಳನ್ನು ಒಟ್ಟುಗೂಡಿಸಿಕೊಳ್ಳಿ, ‘ಮಲಗು ಕರ್ನಾಟಕ’ ಅಭಿಯಾನ ಮಾಡಿದರೂ ಅಷ್ಟೇ ಲೈಕು ಬೀಳುತ್ತವೆ...’ ಮಡದಿಯ ಮಾಧ್ಯಮ ಜ್ಞಾನಕ್ಕೆ ದಂಗಾದ ತಿಂಗಳೇಶ! ‘ಹಾಗಾದರೆ ಚುನಾವಣೆ ಯಾರಿಗೆ ಪರೀಕ್ಷೆ ಹೇಳು ನೋಡೋಣ?’

‘ಪೂರ್ವಭಾವಿ ಪರೀಕ್ಷೆಯು ಅಭ್ಯರ್ಥಿಗಳು, ಪಕ್ಷಗಳಿಗೆ. ಅಂತಿಮ ಪರೀಕ್ಷೆ ಮತದಾರರಿಗೆ.
ಅಭ್ಯರ್ಥಿಗಳಿಗೆ ಕ್ಷೇತ್ರ ಆಯ್ಕೆಯ ಏಕೈಕ ಪ್ರಶ್ನೆ, ಪಕ್ಷಗಳಿಗೆ ಅಭ್ಯರ್ಥಿಯನ್ನು ಆಯುವ ಬಹು
ಆಯ್ಕೆಯ ಪ್ರಶ್ನೆಗಳಿರುತ್ತವೆ. ಕೆಲವು ಉಮೇದು
ವಾರರಿಗೆ ಬಹು ಕ್ಷೇತ್ರಗಳು, ಪಕ್ಷಗಳು ಎದುರಾಗಿ ದೈವಗಳ ಮೊರೆ ಹೋಗುವುದೂ ಉಂಟು…’

ADVERTISEMENT

‘ಅಂತಿಮ ಪರೀಕ್ಷೆಯಲ್ಲಿ…?’

‘ಮತದಾರರಿಗೂ ಬಹು ಆಯ್ಕೆ ಪ್ರಶ್ನೆ
ಪತ್ರಿಕೆಯೇ ಇರುತ್ತದೆ. ಆತ ಪಕ್ಷಗಳನ್ನು ಗುಣಿಸ
ಬೇಕು, ಜಾತಿ ಗಣಿಸಬೇಕು, ಅಭ್ಯರ್ಥಿಯನ್ನೂ ಪರಿಗಣಿಸಬೇಕು, ಕೊಡುಗೆಗಳನ್ನೂ ಕಡೆಗಣಿಸ
ಲಾಗದು. ಬಹಳ ಕಠಿಣ ಕಣ್ರೀ. ಆದರೂ ಮತ
ದಾರ ತಲೆ ಕೆರೆದುಕೊಂಡೋ ಅಕ್ಕಪಕ್ಕದವರಿಂದ ಕಾಪಿ ಮಾಡಿಯೋ ಉತ್ತರ ಬರೆಯಬಲ್ಲ. ಆದರೆ ಪರೀಕ್ಷೆ ಹಿಂದಿನ ರಾತ್ರಿ ಸೋರಿಕೆಯಾಗುವ ಪ್ರಶ್ನೆ
ಪತ್ರಿಕೆ ಮಾತ್ರ ಮತ್ತೆ ಗೊಂದಲಕ್ಕೆ ದೂಡುತ್ತದೆ’.

‘ಹೌದಾ… ಲೀಕ್ ಆದ ಪ್ರಶ್ನೆಪತ್ರಿಕೆಯಲ್ಲಿ ಅಂಥಾದ್ದೇನಿರುತ್ತದೆ?’

‘ಮತವನ್ನು ದಾನ ಮಾಡಬೇಕೆ, ಮಾರಬೇಕೆ, ಚಲಾಯಿಸಬೇಕೆ, ಹಂಚಬೇಕೆ ಇತ್ಯಾದಿ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳು ಇರುತ್ತವೆ’.

ಅಷ್ಟರಲ್ಲಿ ಎದ್ದುಬಂದ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದ ಮಗ, ‘ವೆರಿ ಸಿಂಪಲ್, ಮನೆಯಲ್ಲಿರುವ ಮತಗಳನ್ನು ಹುರಿಯಾಳುಗಳು ಕೊಟ್ಟ ಹಣಕ್ಕನುಸಾರ ಸಮನಾಗಿ ಹಂಚಿದರೆ ಮುಗೀತು…’ ಎಂದು ಘೋಷಿಸಿದ. ಮಗನಲ್ಲಿ ‘ಹೆಚ್ಚೆತ್ತ ಕರ್ನಾಟಕ’ ಕಂಡ ತಿಂಗಳೇಶ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.