ADVERTISEMENT

ಚುರುಮುರಿ: ಯಾಕೋ ನಿದ್ದೆ ಬರ‍್ತಿಲ್ಲ!

ಬಿ.ಎನ್.ಮಲ್ಲೇಶ್
Published 29 ಜುಲೈ 2021, 19:31 IST
Last Updated 29 ಜುಲೈ 2021, 19:31 IST
ಚುರುಮುರಿ
ಚುರುಮುರಿ   

‘ಹಲೋ... ನಮಸ್ಕಾರ ಸಾಹೇಬ್ರೆ, ‘ನಾನು’ ಮಾತಾಡೋದು...’

‘ಗೊತ್ತಾಯ್ತು, ಯಾಕೆ ಇನ್ನೂ ನಿದ್ದೆ ಬಂದಿಲ್ವ? ರಾತ್ರಿ ಹನ್ನೊಂದಾಯ್ತು, ಏನ್ಸಮಾಚಾರ?

‘ಏನಿಲ್ಲ ಸಾಹೇಬ್ರೆ, ಬೆಳಿಗ್ಗೆ ಮನೆದೇವರಿಗೆ ಹೋಗಿದ್ದೆ. ಆಮೇಲೆ ಸ್ನೇಹಿತ್ರು, ಸಂಬಂಧಿಕರೆಲ್ಲ ಮನೆಗೆ ಬಂದಿದ್ರು. ಜನವೋ ಜನ, ಹಾರ ತುರಾಯಿ ಬೇಡ ಅಂದ್ರೂ ಕೇಳಲ್ಲ...’

ADVERTISEMENT

‘ಸ್ವಲ್ಪ ದಿನ ಅದೆಲ್ಲ ಇರುತ್ತೆ, ಸರಿ ಬೇರೆ ಏನ್ಸಮಾಚಾರ? ಯರ‍್ಯಾರ‍್ನ ಮಂತ್ರಿ ಮಾಡ್ತೀರಿ?’

‘ಅಯ್ಯೋ ಅದೆಲ್ಲ ನಿಮಗೆ, ಹೈಕಮಾಂಡ್‌ಗೆ ಬಿಟ್ಟದ್ದು ಸಾಹೇಬ್ರೆ. ನೀವು ಹೇಳಿದಂಗೆ ಕೇಳೋದಷ್ಟೇ ನನ್ನ ಕೆಲಸ’.

‘ಹಂಗಂತ ಹೊರಗೆಲ್ಲಾದ್ರು ಹೇಳಿಬಿಟ್ಟೀರಿ, ಟಿ.ವಿ.ಯೋರು ಅದ್ನೇ ದೊಡ್ಡ ಸುದ್ದಿ ಮಾಡಿಬಿಡ್ತಾರೆ’.

‘ಇಲ್ಲ ಸಾಹೇಬ್ರೆ... ಅದೆಲ್ಲ ಗೊತ್ತಿದೆ. ಆಮೇಲೆ ನಮ್ಮ ಯತ್ನಾಳು, ವಿಶ್ವನಾಥು ಬೆಳಗ್ಗಿಂದ ಫೋನ್ ಮಾಡ್ತದಾರೆ. ವಿಶ್ ಮಾಡೋಕಿರಬೇಕು. ಫೋನು ರಿಸೀವ್ ಮಾಡ್ಲಾ ಸಾಹೇಬ್ರೆ?’

‘ಪರವಾಗಿಲ್ಲ, ರಿಸೀವ್ ಮಾಡಿ ಮಾತಾಡಿ... ಆದ್ರೆ ಹುಷಾರಾಗಿರಿ ಅಷ್ಟೆ’.

‘ಸರಿ ಸಾಹೇಬ್ರೆ, ಆಮೇಲೆ ನಾಳೆ ಕೆಲವು ಮಠಗಳಿಗೆ ಹೋಗೋಣ ಅಂತಿದೀನಿ, ಹೋಗ್ಲಾ ಸಾಹೇಬ್ರೆ?’

‘ಕೆಲವು ಮಠ ಯಾಕೆ? ಎಲ್ಲ ಮಠಗಳಿಗೂ ಹೋಗಿ ಸ್ವಾಮಿಗಳ ಆಶೀರ್ವಾದ ತಗಳಿ.
ಆಪತ್ಕಾಲದಲ್ಲಿ ಬೇಕಾಗ್ತಾರೆ.’

‘ಆಮೇಲೆ ಸಿದ್ದರಾಮಯ್ಯ, ಕುಮಾರಣ್ಣ, ಡಿಕೆಶಿ ಅವರತ್ರ ಹೆಂಗೆ ಸಾಹೇಬ್ರೆ?’

‘ಅವರೆಲ್ಲ ನಮ್ಮ ಸ್ನೇಹಿತ್ರು ಕಣ್ರಿ, ಸುಮ್ನೆ ಹೊರಗೆ ಬೈಕಂಡ್ ತಿರುಗಾಡ್ತಾರೆ, ಫ್ರೆಂಡ್‌ಶಿಪ್ ಇಟ್ಕಳಿ’.

‘ಅರ್ಥ ಆಯ್ತು, ಸರಿ ಮಲಗ್ಲಾ ಸಾಹೇಬ್ರೆ? ಯಾಕೋ ನಿದ್ದೆ ಬರ‍್ತಿಲ್ಲ’.

‘ಅದು ಹಾಗೇನೇ, ನಿಮಗೆ ಹೊಸದಲ್ವ. ನಂಗೆ ಎಂಟು ಸಲ ಹಾಗೆ ನಿದ್ದೆ ಬಂದಿರ‍್ಲಿಲ್ಲ’.

‘ಹೌದಾ? ಎಂಟು ಸಲಾನಾ?’‌

‘ಹೌದು, ನಾಲ್ಕು ಸಲ ಮುಖ್ಯಮಂತ್ರಿ ಆದಾಗ, ನಾಲ್ಕು ಸಲ ಮುಖ್ಯಮಂತ್ರಿ ಸ್ಥಾನದಿಂದ ಇಳಿದಾಗ...!’

‘ಸರಿ ಗುಡ್‌ನೈಟ್ ಸಾಹೇಬ್ರೆ, ಬೆಳಿಗ್ಗೆ ಎಷ್ಟ್ ಗಂಟೆಗೆ ಏಳಲಿ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.