ADVERTISEMENT

ವಾರ್ಡ್‌ ಮರುವಿಂಗಡಣೆ ಪೂರ್ಣಗೊಳಿಸಿ, ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಿ

ಸಂಪಾದಕೀಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 1:24 IST
Last Updated 15 ಸೆಪ್ಟೆಂಬರ್ 2021, 1:24 IST
SAMPADAKIYA-15-09-2021
SAMPADAKIYA-15-09-2021   

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಹಿಂದಿನ ಚುನಾಯಿತ ಕೌನ್ಸಿಲ್‌ನ ಅಧಿಕಾರದ ಅವಧಿ 2020ರ ಸೆಪ್ಟೆಂಬರ್ 10ಕ್ಕೆ ಕೊನೆಗೊಂಡಿದ್ದು, ಆ ಬಳಿಕ ಅಧಿಕಾರಿಗಳ ಆಡಳಿತ ಜಾರಿಯಲ್ಲಿದೆ. ಚುನಾಯಿತ ಕೌನ್ಸಿಲ್‌ನ ಅವಧಿ ಮುಗಿಯುವುದಕ್ಕೆ ಮುನ್ನವೇ ಹೊಸ ಕೌನ್ಸಿಲ್‌ ರಚನೆ ಪ್ರಕ್ರಿಯೆ ಪೂರ್ಣಗೊಳಿಸುವುದು ಸರ್ಕಾರದ ಹಾಗೂ ರಾಜ್ಯ ಚುನಾವಣಾ ಆಯೋಗದ ಸಂವಿಧಾನಬದ್ಧ ಕರ್ತವ್ಯ. ಕೌನ್ಸಿಲ್‌ನ ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನ ಚುನಾವಣೆ ನಡೆಸದಿರುವುದಕ್ಕೆ ರಾಜ್ಯ ಚುನಾವಣಾ ಆಯೋಗವಾಗಲೀ ಸರ್ಕಾರವಾಗಲೀ ಸ್ಪಷ್ಟ ಕಾರಣ ನೀಡಿಲ್ಲ. ಯಾವುದೇ ಕಾರಣದಿಂದ ಚುನಾವಣೆಯನ್ನು ಮುಂದೂಡಿದರೂ ಗರಿಷ್ಠ ಆರು ತಿಂಗಳಿಗೆ ಮಾತ್ರ ಆಡಳಿತಾಧಿಕಾರಿಯನ್ನು ನೇಮಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ನ ಆಡಳಿತ ಇಲ್ಲದೇ ಒಂದು ವರ್ಷ ಕಳೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಮುಖ್ಯ ಸ್ತರಗಳಲ್ಲಿ ಕೆಳಸ್ತರದ ಸ್ಥಳೀಯ ಆಡಳಿತ ಅತೀ ಮುಖ್ಯವಾದುದು. ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ವ್ಯವಸ್ಥೆ ಇದಾಗಿದೆ. ಅಂತಹ ವ್ಯವಸ್ಥೆಯು ಸಮರ್ಥವಾಗಿ ಕಾರ್ಯನಿರ್ವಹಿಸಲು ಕೌನ್ಸಿಲ್‌ ಬೇಕೇಬೇಕು ಎನ್ನುವುದನ್ನು ಸರ್ಕಾರ ಬೇಕಂತಲೇ ಮರೆತಂತಿದೆ.

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು ಕನಿಷ್ಠ 225ರಿಂದ ಗರಿಷ್ಠ 250ರವರೆಗೆ ಪರಿಷ್ಕರಿಸುವ ಬಗ್ಗೆ ಸರ್ಕಾರ 2020ರ ಅ.3ರಂದು ಅಧಿಸೂಚನೆ ಪ್ರಕಟಿಸಿತು. ಇದರ ಆಧಾರದಲ್ಲಿ ವಾರ್ಡ್‌ಗಳ ಮರು ವಿಂಗಡಣೆಗೆ 2020ರ ಅ. 14ರಂದು ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಆ ಬಳಿಕ ಬಿಬಿಎಂಪಿ ಮಸೂದೆ– 2020 ಅನ್ನು ವಿಧಾನ ಮಂಡಲದಲ್ಲಿ ತರಾತುರಿಯಲ್ಲಿ ಅಂಗೀಕರಿಸಲಾ ಯಿತು. ಹೊಸ ಕಾಯ್ದೆಯನ್ವಯ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಿ ಸರ್ಕಾರ 2021ರ ಜ. 29ರಂದು ಅಧಿಸೂಚನೆ ಹೊರಡಿಸಿತು. ವಾರ್ಡ್‌ ಮರುವಿಂಗಡಣೆಗೆ ಹಿಂದೆ ರಚಿಸಿದ್ದ ಸಮಿತಿಯ ಸದಸ್ಯರನ್ನೇ ಮುಂದುವರಿಸಿ ಅದೇ ದಿನ ಮತ್ತೊಮ್ಮೆ ಅಧಿಸೂಚನೆ ಹೊರಡಿಸಿತು. ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಸಲುವಾಗಿ ಸರ್ಕಾರ ಈ ಎಲ್ಲ ಕಸರತ್ತುಗಳನ್ನು ನಡೆಸುತ್ತಿದೆ ಎಂಬ ಬಗ್ಗೆ ಆಗ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದಷ್ಟು ಬೇಗ ವಾರ್ಡ್‌ಗಳ ಮರುವಿಂಗಡಣೆ ಪೂರ್ಣಗೊಳಿಸಿ ಬಿಬಿಎಂಪಿಗೆ ಚುನಾವಣೆ ನಡೆಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಈ ಭರವಸೆಯನ್ನು ಉಳಿಸಿಕೊಳ್ಳುವುದಕ್ಕೆ ಸರ್ಕಾರವು ಗಂಭೀರ ಪ್ರಯತ್ನ ಮಾಡುತ್ತಿರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಿದರೆ, ಬಿಬಿಎಂಪಿ ಚುನಾವಣೆ ಸದ್ಯಕ್ಕೆ ನಡೆಯುವುದು ಕನಸಿನ ಮಾತೇ ಸರಿ ಎಂದು ಅನಿಸದಿರದು. ವಾರ್ಡ್‌ಗಳ ಒಟ್ಟು ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವಾಗ ಗಡಿ ಪ್ರದೇಶದಲ್ಲಿ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಯಾವೆಲ್ಲ ಗ್ರಾಮಗಳನ್ನು ಬಿಬಿಎಂಪಿ ತೆಕ್ಕೆಗೆ ಸೇರಿಸಿಕೊಳ್ಳಬೇಕು ಎಂಬ ಕುರಿತು ಮರು ವಿಂಗಡಣಾ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ. ಸಮಿತಿ ರಚನೆಯಾಗಿ 11 ತಿಂಗಳುಗಳೇ ಕಳೆದಿವೆ. ಅಚ್ಚರಿ ಎಂದರೆ, ಈ ಅವಧಿಯಲ್ಲಿ ಒಂದು ಬಾರಿ ಮಾತ್ರ ಸಭೆ ನಡೆದಿದೆ. ಬಿಬಿಎಂಪಿಯಲ್ಲಿ ಮತ್ತೆ ಚುನಾಯಿತ ಪ್ರತಿನಿಧಿಗಳ ಆಡಳಿತದ ಮರುಸ್ಥಾಪನೆ ಬಗ್ಗೆ ಸರ್ಕಾರ ಎಷ್ಟರ ಮಟ್ಟಿನ ಆಸಕ್ತಿ ಹೊಂದಿದೆ ಎಂಬುದಕ್ಕೆ ಈ ವಿಳಂಬ ಧೋರಣೆಯೇ ಸಾಕ್ಷಿ.

ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಪಾತ್ರವೂ ಮುಖ್ಯವಾದುದು. ಬೆಂಗಳೂರಿನಲ್ಲಿ ಕೋವಿಡ್‌ ವ್ಯಾಪಿಸಿದ ಬಳಿಕವಂತೂ ಜನರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಬಿಬಿಎಂಪಿ ಮುಖ್ಯ ಆಯುಕ್ತರು ವಾರ್ಡ್‌ಗಳಿಗೆ ನೋಡಲ್‌ ಅಧಿಕಾರಿಯನ್ನು ನೇಮಿಸಿ ವಾರ್ಡ್‌ ಸಭೆಗಳನ್ನು ಪ್ರತೀ ತಿಂಗಳೂ ನಡೆಸುವಂತೆ ಆದೇಶ ಮಾಡಿದ್ದಾರೆ. ಈ ಆದೇಶವು ಕಡತದಲ್ಲಿ ಮಾತ್ರ ಇದ್ದಂತಿದೆ. ಬಹುತೇಕ ಕಡೆ ವಾರ್ಡ್‌ ಸಭೆಗಳು ಸಮರ್ಪಕವಾಗಿ ನಡೆದಿಲ್ಲ ತಮ್ಮ ಅಹವಾಲುಗಳನ್ನು ಯಾರ ಬಳಿ ಹೇಳಿಕೊಳ್ಳುವುದು ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ.

ADVERTISEMENT

ಇನ್ನು, ಬಿಬಿಎಂಪಿ ವ್ಯಾಪ್ತಿಯ 28 ಶಾಸಕರು, ನಗರದ 1.30 ಕೋಟಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಕನಸಿನ ಮಾತೇ ಸರಿ. ವಾರ್ಡ್‌ಗಳಿಗೆ ಪಾಲಿಕೆ ಸದಸ್ಯರು ಆಯ್ಕೆಯಾದರೆ ತಮ್ಮ ಅಧಿಕಾರಕ್ಕೆ ಕತ್ತರಿ ಬೀಳುತ್ತದೆ ಎಂಬ ಕಾರಣಕ್ಕೆ ಕೆಲವು ಶಾಸಕರು ಬಿಬಿಎಂಪಿಗೆ ಚುನಾವಣೆ ನಡೆಯುವುದನ್ನು ಬಯಸುತ್ತಿಲ್ಲ ಎಂಬ ಆರೋಪವೂ ಇದೆ. ಬಿಬಿಎಂಪಿ ಚುನಾವಣೆಯನ್ನು ನಡೆಸಲು ಶಾಸಕರು ಯಾವುದೇ ಒತ್ತಡ ಹೇರದಿರುವುದನ್ನು ನೋಡಿದರೆ ಈ ಆರೋಪದಲ್ಲಿ ಹುರುಳಿಲ್ಲದಿಲ್ಲ ಎಂದೆನಿಸುತ್ತದೆ. ವಿರೋಧ ಪಕ್ಷಗಳಂತೂ ಚುನಾವಣೆ ಮುಂದೂಡಿದ್ದನ್ನು ನೆಪಮಾತ್ರಕ್ಕೆ ಖಂಡಿಸಿ, ಆ ಬಳಿಕ ಜಾಣ ಮರೆವು ಪ್ರದರ್ಶಿಸಿವೆ. ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗಳಿಗೆ ಇತ್ತೀಚೆಗೆ ಚುನಾವಣೆ ನಡೆಸಲಾಗಿದೆ. ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಿಬಿಎಂಪಿಗೂ ಚುನಾವಣೆ ನಡೆಸಬೇಕು. ಸ್ಥಳೀಯ ಹಂತದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲ ಪಡಿಸುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.