ADVERTISEMENT

ಕಾರಾಗೃಹಗಳಲ್ಲಿ ಭದ್ರತಾ ಲೋಪ ತಡೆಗೆ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರಲಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 19:31 IST
Last Updated 12 ಜುಲೈ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ಶನಿವಾರ ಬೆಳಿಗ್ಗೆ ದಾಳಿ ಮಾಡಿ, ಶೋಧ ನಡೆಸಿದ್ದಾರೆ. ಜೈಲಿನ ಒಳಗಡೆಯೇ ಕೈದಿಗಳು ರೌಡಿ ಚಟುವಟಿಕೆ ನಡೆಸುತ್ತಿರುವುದು, ಮಾರಕಾಸ್ತ್ರ, ಮೊಬೈಲ್‌, ಮಾದಕವಸ್ತುಗಳನ್ನು ಇರಿಸಿಕೊಂಡಿರುವುದು ಶೋಧದ ವೇಳೆ ಪತ್ತೆಯಾಗಿದೆ. ಕೆಲವು ಕೈದಿಗಳಿಗೆ ಮಲಗಲು ಮಂಚ, ಹಾಸಿಗೆ, ಕುರ್ಚಿ, ಸೊಳ್ಳೆ ಪರದೆಯಂತಹ ಸೌಲಭ್ಯಗಳನ್ನು ಕಲ್ಪಿಸಿ ರುವುದೂ ಕಂಡುಬಂದಿದೆ. ಕೆಲವು ರೌಡಿಗಳು ಕಾರಾಗೃಹದ ಒಳಗಿದ್ದುಕೊಂಡೇ ಅಪರಾಧ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದರು ಮತ್ತು ತಮ್ಮ ಸಹಚರರ ಮೂಲಕ ಕೊಲೆ, ಸುಲಿಗೆಯಂತಹ ಕೃತ್ಯಗಳನ್ನು ಮಾಡಿಸುತ್ತಿದ್ದರು ಎಂಬುದಕ್ಕೆ ಶೋಧದ ವೇಳೆ ಪುರಾವೆಗಳು ಸಿಕ್ಕಿವೆ. ಕಾರಾಗೃಹದ ಒಳಗೆ ಮಾರಕಾಸ್ತ್ರ, ಮಾದಕವಸ್ತು, ಮೊಬೈಲ್‌ ಪತ್ತೆಯಾಗಿರುವುದು ಇದು ಮೊದಲೇನೂ ಅಲ್ಲ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೀಮಿತವಾಗಿಯೂ ಇಲ್ಲ. ರಾಜ್ಯದಲ್ಲಿ ಒಂಬತ್ತು ಕೇಂದ್ರ ಕಾರಾಗೃಹಗಳು, ಒಂದು ಬಯಲು ಬಂದೀಖಾನೆ, 21 ಜಿಲ್ಲಾ ಕಾರಾಗೃಹ, 29 ತಾಲ್ಲೂಕು ಉಪಕಾರಾಗೃಹಗಳು ಮತ್ತು 30 ತಾಲ್ಲೂಕು ಕಾರಾಗೃಹಗಳು ಇವೆ. ಹೆಚ್ಚಿನ ಕೇಂದ್ರ ಕಾರಾಗೃಹಗಳು ಮತ್ತು ಜಿಲ್ಲಾ ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದು ಆಗಾಗ ಪತ್ತೆಯಾಗುತ್ತಲೇ ಇರುತ್ತದೆ. ಬಹುಹಂತಗಳ ಭದ್ರತಾ ವ್ಯವಸ್ಥೆ, ಸಿ.ಸಿ ಟಿ.ವಿ ಕ್ಯಾಮೆರಾ ಕಣ್ಗಾವಲು ಮೀರಿ ಕೈದಿಗಳಿಗೆ ಮಾರಕಾಸ್ತ್ರ, ಮಾದಕವಸ್ತು, ಮೊಬೈಲ್‌, ಸಿಮ್‌ ಕಾರ್ಡ್‌, ನಗದು ತಲುಪುತ್ತಿರುವುದು ವ್ಯವಸ್ಥೆಯ ಅಣಕದಂತಿದೆ. ಕೈದಿಗಳ ಮನಃಪರಿವರ್ತನೆಯ ತಾಣಗಳಾಗಬೇಕಿದ್ದ ಕಾರಾಗೃಹಗಳು ಮತ್ತಷ್ಟು ಅಪರಾಧ ಕೃತ್ಯಗಳ ಸಂಚಿನ ಕೇಂದ್ರವಾಗುತ್ತಿವೆ ಎಂಬ ಆಘಾತಕಾರಿ ವಿಷಯ ಪೊಲೀಸರ ತನಿಖೆಯಿಂದ ಬಯಲಾಗಿದೆ. ರಾಜ್ಯದ ಬಹುತೇಕ ಕಾರಾಗೃಹಗಳ ಸ್ಥಿತಿ ಶೋಚನೀಯವಾಗಿದೆ. ಕರ್ನಾಟಕದ ಕಾರಾಗೃಹಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಕೈದಿಗಳನ್ನು ಇರಿಸಲಾಗಿದೆ ಎಂಬುದನ್ನು 2019ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಹೇಳಿತ್ತು. ಆ ಪರಿಸ್ಥಿತಿ ಈಗಲೂ ಬದಲಾಗಿಲ್ಲ. ರಾಜ್ಯದ ಕೇಂದ್ರ ಕಾರಾಗೃಹಗಳಲ್ಲಿ ಸಾಮರ್ಥ್ಯಕ್ಕಿಂತಲೂ ಅಧಿಕ ಸಂಖ್ಯೆಯ ಕೈದಿಗಳಿದ್ದಾರೆ. ಎಲ್ಲ ಕಾರಾಗೃಹಗಳಲ್ಲಿ ಒಟ್ಟು 13 ಸಾವಿರದಷ್ಟು ಕೈದಿಗಳನ್ನು ಇರಿಸಬಹುದಾದರೂ, ಅಲ್ಲಿರುವ ಕೈದಿಗಳ ಸಂಖ್ಯೆ 16 ಸಾವಿರದ ಆಸುಪಾಸಿನಲ್ಲಿದೆ ಎಂಬುದು ಸಮಸ್ಯೆಯ ತೀವ್ರತೆಯನ್ನು ತೆರೆದಿಡುತ್ತದೆ. ಸಿಬ್ಬಂದಿ ಕೊರತೆ, ಹೊಸ ಕಾರಾಗೃಹಗಳ ನಿರ್ಮಾಣದಲ್ಲಿನ ವಿಳಂಬ, ಕಾರಾಗೃಹಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಗಳು ದೀರ್ಘಕಾಲದಿಂದ ಬಾಕಿ ಇರುವುದು, ಪೊಲೀಸ್‌ ಮತ್ತು ಕಾರಾಗೃಹ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಇವೆಲ್ಲವೂ ಈ ಪರಿಸ್ಥಿತಿಗೆ ಕಾರಣ. ಕೆಲವು ಪ್ರಕರಣ
ಗಳಲ್ಲಿ ಕಾರಾಗೃಹ ಸಿಬ್ಬಂದಿ, ಕೈದಿಗಳ ಬೆಂಗಾವಲಿಗೆ ನಿಯೋಜಿತರಾದ ಪೊಲೀಸರಿಂದಲೇ ಜೈಲಿನೊಳಗೆ ನಡೆಯುವ ದುಷ್ಕೃತ್ಯಗಳಿಗೆ ನೆರವು ದೊರೆಯುತ್ತಿರುವುದೂ ಪತ್ತೆಯಾಗಿದೆ. ಮಾರಕಾಸ್ತ್ರ, ಮಾದಕವಸ್ತು, ಮೊಬೈಲ್‌ ಮತ್ತಿತರ ನಿಷೇಧಿತ ವಸ್ತುಗಳನ್ನು ಕಾರಾಗೃಹದೊಳಕ್ಕೆ ಸಾಗಿಸುವಲ್ಲೂ ಅವರು ನೆರವಾಗುತ್ತಿದ್ದಾರೆ ಎಂಬ ಆರೋಪಗಳಿವೆ.

ಕಾರಾಗೃಹಗಳ ಒಳಗೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು, ನಿಷೇಧಿತ ವಸ್ತುಗಳ ರವಾನೆಗೆ ಕಾರಾಗೃಹ ಇಲಾಖೆಯೊಂದನ್ನೇ ಹೊಣೆ ಮಾಡಲಾಗದು. ಕಾರಾಗೃಹಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಆಗಾಗ ಶೋಧ ನಡೆಸಬೇಕು ಮತ್ತು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಕೈದಿಗಳ ಮೇಲೆ ನಿಗಾ ಇರಿಸಬೇಕು ಎಂಬ ಸುತ್ತೋಲೆಯು ಹಲವು ವರ್ಷಗಳಿಂದಲೂ ಜಾರಿಯಲ್ಲಿದೆ. ಆದರೆ, ಪೊಲೀಸರು ಯಾವ ಕಾರಾಗೃಹದಲ್ಲೂ ನಿಯಮಿತವಾಗಿ ತಪಾಸಣೆ ನಡೆಸಿದ ಉದಾಹರಣೆ ಇಲ್ಲ. ಹಲವು ತಿಂಗಳಿಗೊಮ್ಮೆ ತಪಾಸಣೆ ಮಾಡುತ್ತಿದ್ದಾರೆ. ಚುನಾವಣೆ ಮತ್ತಿತರ ವಿಶೇಷ ಸಂದರ್ಭಗಳಲ್ಲಷ್ಟೇ ಕಾರಾಗೃಹಗಳಲ್ಲಿ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪೊಲೀಸರು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸು ವುದರಲ್ಲಿ ಆಸಕ್ತಿ ತೋರದಿರುವುದೇ ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳು ನಿರಾತಂಕವಾಗಿ ಮುಂದುವರಿಯಲು ಕಾರಣ ಎಂಬ ಟೀಕೆಗಳಿವೆ. ಇವುಗಳನ್ನು ಅಲ್ಲಗಳೆಯಲಾಗದು. ಇನ್ನೊಂದೆಡೆ ಕಾರಾಗೃಹಗಳಲ್ಲಿನ ಕೈದಿಗಳ ಅತಿಯಾದ ದಟ್ಟಣೆ ತಪ್ಪಿಸಲು ಐದು ಹೊಸ ಕೇಂದ್ರ ಕಾರಾಗೃಹಗಳ ನಿರ್ಮಾಣ ಯೋಜನೆ ಕುಂಟುತ್ತಾ ಸಾಗಿದೆ. ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯ ಕೈದಿಗಳನ್ನು ಒಂದೆಡೆ ಇರಿಸಬೇಕಾದ ಪರಿಸ್ಥಿತಿಯೇ ರೌಡಿ ಚಟುವಟಿಕೆಯಲ್ಲಿ ತೊಡಗಿರುವವರು ಕಾರಾಗೃಹಗಳ ಒಳಗೂ ಗುಂಪು ಸೇರಿ ದುಷ್ಟಕೃತ್ಯಗಳಿಗೆ ಸಂಚು ನಡೆಸಲು ಎಡೆಮಾಡುತ್ತಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲಿನ ಒತ್ತಡ ತಗ್ಗಿಸುವ ದಿಸೆಯಲ್ಲಿ ತ್ವರಿತ ಕ್ರಮಗಳು ಅನಿವಾರ್ಯವಾಗಿವೆ. ರಾಜ್ಯದ ಹೆಚ್ಚಿನ ಕಾರಾಗೃಹಗಳಲ್ಲಿ ಇರುವ ಮೊಬೈಲ್‌ ಜಾಮರ್‌ಗಳು ‘3ಜಿ’ ನೆಟ್‌ವರ್ಕ್‌ ಅನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಮಾತ್ರ ಹೊಂದಿವೆ. ಈಗ ಹೆಚ್ಚು ಬಳಕೆಯಲ್ಲಿರುವ ‘4ಜಿ’ ನೆಟ್‌ವರ್ಕ್‌ ನಿಯಂತ್ರಿಸಲಾಗದ ಸ್ಥಿತಿಯಲ್ಲಿ ಕಾರಾಗೃಹಗಳು ಇವೆ. ಭದ್ರತಾ ವ್ಯವಸ್ಥೆಗೆ ಪೂರಕವಾದ ಸ್ಕ್ಯಾನರ್‌ಗಳು, ಲೋಹ ಶೋಧಕಗಳನ್ನು ಮೇಲ್ದರ್ಜೆಗೇರಿಸದೇ ಇರುವುದು ಮಾರಾಕಾಸ್ತ್ರಗಳನ್ನು ಒಳಕ್ಕೆ ಕೊಂಡೊಯ್ಯಲು ಕಾರಣವಾಗುತ್ತಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಗೆಳತಿ ಶಶಿಕಲಾ ನಟರಾಜನ್‌ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸಿರುವುದು ಮತ್ತು ಮುಕ್ತ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದ ಸಂಗತಿ 2019ರಲ್ಲಿ ಬಯಲಿಗೆ ಬಂದಿತ್ತು. ಆ ಬಳಿಕ ಕಾರಾಗೃಹಗಳಲ್ಲಿನ ಭದ್ರತೆ ಹಾಗೂ ಕಣ್ಗಾವಲು ವ್ಯವಸ್ಥೆಯನ್ನು ಬಿಗಿಗೊಳಿಸುವ ಕುರಿತು ಅಧಿಕಾರಿಗಳು ಹಲವು ಶಿಫಾರಸುಗಳನ್ನು ಸಲ್ಲಿಸಿದ್ದರು. ಆದರೆ, ಈಗಲೂ ಪರಿಸ್ಥಿತಿ ಬದಲಾಗಿಲ್ಲ ಎಂಬುದಕ್ಕೆ ಕೆಲವು ರೌಡಿಗಳಿರುವ
ಬ್ಯಾರಕ್‌ಗಳಲ್ಲಿ ಪತ್ತೆಯಾದ ವಸ್ತುಗಳು ಸಾಕ್ಷ್ಯ ಒದಗಿಸಿವೆ. ಕಾರಾಗೃಹಗಳಲ್ಲಿನ ಅಕ್ರಮ ಚಟುವಟಿಕೆಗಳನ್ನು ತಡೆಯುವುದಕ್ಕೆ ಪೂರಕವಾಗಿ ದಟ್ಟಣೆ ತಗ್ಗಿಸಲು ಹೊಸ ಕಾರಾಗೃಹಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ಅತ್ಯಾಧುನಿಕ ಶೋಧನಾ ಯಂತ್ರಗಳ ಬಳಕೆ, ಮೊಬೈಲ್‌ ಜಾಮರ್‌ ಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಸಿಬ್ಬಂದಿ ಹೆಚ್ಚಳದ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಕಾರಾಗೃಹಗಳ ನಿಯಮಿತ ತಪಾಸಣೆಯ ಆದೇಶವನ್ನು ಪೊಲೀಸರು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವುದು ಈ ದಿಸೆಯಲ್ಲಿ ಹೆಚ್ಚು ಪರಿಣಾಮಕಾರಿ ಕ್ರಮ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT