ADVERTISEMENT

ಸಂಸ್ಕರಿತ ತ್ಯಾಜ್ಯ ನೀರಿನ ಬಳಕೆ ಕಡ್ಡಾಯವೇನೋ ಸರಿ, ಆದರೆ...

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 3:02 IST
Last Updated 15 ಅಕ್ಟೋಬರ್ 2019, 3:02 IST
   

ರಾಜಧಾನಿಯಲ್ಲಿ ಇನ್ನು ಮುಂದೆ ಕಟ್ಟಡ ನಿರ್ಮಾಣ ಮಾಡುವವರು ಜಲಮಂಡಳಿಯು ಸಂಸ್ಕರಿಸಿದ ತ್ಯಾಜ್ಯ ನೀರನ್ನೇ ಖರೀದಿಸಿ ಬಳಕೆ ಮಾಡುವುದು ಕಡ್ಡಾಯವಾಗಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು (ಬಿಬಿಎಂಪಿ), ಒಂದುವೇಳೆ ನಿರ್ಮಾಣ ಚಟುವಟಿಕೆಯಲ್ಲಿ ಅಂತರ್ಜಲವನ್ನೋ ಅಥವಾ ಕಾವೇರಿ ನೀರನ್ನೋ ಬಳಕೆ ಮಾಡಿದ್ದು ಕಂಡುಬಂದರೆ ಅಂತಹ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರವನ್ನು (ಒ.ಸಿ) ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಬೆಂಗಳೂರು ನಗರದ ಕುಡಿಯುವ ನೀರಿನ ಕೊರತೆಯನ್ನು ನೀಗಿಸುವಲ್ಲಿ ಹಾಗೂ ನಗರದ ಅಂತರ್ಜಲ ಮಟ್ಟವನ್ನು ಸಂರಕ್ಷಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ನದಿಯಂತಹ ದೊಡ್ಡ ಜಲಮೂಲದಿಂದ ಬಹುದೂರದಲ್ಲಿರುವ ಈ ನಗರಕ್ಕೆ ಪೂರೈಕೆಯಾಗುವ ಕಾವೇರಿ ಜಲದ ಒಂದೊಂದು ಹನಿಯೂ ನೂರು ಕಿ.ಮೀ.ನಷ್ಟು ದೂರದಿಂದ ಪಂಪ್‌ ಆಗಿ ಬರುತ್ತದೆ. ಅಂತಹ ಅಮೂಲ್ಯ ಜೀವಜಲದ ಬಳಕೆಯಲ್ಲಿ ನಾಗರಿಕರು ನಿಷ್ಕಾಳಜಿ ತೋರುತ್ತಾ ಬಂದಿರುವುದು ಎದ್ದು ಕಾಣುವ ಸತ್ಯ. ನಗರದ ಕೆಲಭಾಗಗಳ ಜನ ಕುಡಿಯಲೂ ನೀರಿಲ್ಲದೆ ಪರಿತಪಿಸುವಾಗ, ಇನ್ನು ಹಲವು ಪ್ರದೇಶಗಳ ಜನರಿಗೆ ಕಾರುಗಳನ್ನು ತೊಳೆಯಲು, ಕೈತೋಟಕ್ಕೆ ಹನಿಸಲು ಕಾವೇರಿ ನೀರನ್ನೇ ಬಳಸುವ ಖಯಾಲಿ. ನಗರದ ಯಾವ ದಿಕ್ಕಿನಲ್ಲಿ ನೋಡಿದರೂ ಗಗನಚುಂಬಿ ಕಟ್ಟಡಗಳ ನಿರ್ಮಾಣದ್ದೇ ಭರಾಟೆ. ಬಹುತೇಕ ಕಟ್ಟಡಗಳ ನಿರ್ಮಾಣಕ್ಕೆ ಅಂತರ್ಜಲವೇ ಮುಖ್ಯ ಆಧಾರ. ಒಂದೆಡೆ ಕಾವೇರಿ ನೀರಿನ ಬಳಕೆಯಲ್ಲಿ ನಿಷ್ಕಾಳಜಿ ಮೆರೆಯುತ್ತಾ, ಇನ್ನೊಂದೆಡೆ ಅಂತರ್ಜಲಕ್ಕೂ ಕನ್ನ ಹಾಕುತ್ತಾ ಬಂದಿರುವ ಕಾರಣ ಬೆಂಗಳೂರು ಬಹುಬೇಗ ನೀರಿನ ಬರ ಎದುರಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಂಗಳೂರಿಗೆ ಪ್ರತಿದಿನ 135 ಕೋಟಿ ಲೀಟರ್‌ ಕಾವೇರಿ ನೀರು ಪೂರೈಕೆಯಾದರೆ ಅದರಲ್ಲಿ ಬಳಕೆಯಾಗಿ ಚರಂಡಿ ಪಾಲಾಗುವ ನೀರಿನ ಪ್ರಮಾಣ 110 ಕೋಟಿ ಲೀಟರ್‌ನಷ್ಟು. ಇಷ್ಟೊಂದು ಪ್ರಮಾಣದ ನೀರನ್ನು ಸಂಸ್ಕರಿಸಿ ಕುಡಿಯುವುದಕ್ಕೆ ಹೊರತಾದ ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಾದರೆ ಜಲಮಂಡಳಿ ಮೇಲಿನ ಹೊರೆ ಬಹುಪಾಲು ತಗ್ಗಲಿದೆ. ಅಲ್ಲದೆ, ಜಲಸಂಪನ್ಮೂಲದ ಸದ್ಬಳಕೆಯೂ ಇದರಿಂದ ಸಾಧ್ಯವಾಗಲಿದೆ. ಸಂಸ್ಕರಿಸಿದ ನೀರಿನ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ಏಕೋ ಮಡಿವಂತಿಕೆ ಭಾವ. ಅದು ಅಷ್ಟೊಂದು ಶುದ್ಧವಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು. ಸಿಂಗಪುರದಂತಹ ದೇಶದಲ್ಲಿ ಮೂರು ಹಂತಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕುಡಿಯುವ ಉದ್ದೇಶಕ್ಕೂ ಬಳಸಲಾಗುತ್ತಿದೆ. ತಾನು ಪೂರೈಸುವ ಕಾವೇರಿ ನೀರಿನ ಶುದ್ಧತೆಯ ವಿಷಯದಲ್ಲೂ ವಿಶ್ವಾಸ ಉಳಿಸಿಕೊಳ್ಳದ ಜಲಮಂಡಳಿ, ಸಂಸ್ಕರಣೆ ಮಾಡಿದ ನೀರಿನ ವಿಷಯವಾಗಿ ನಾಗರಿಕರಲ್ಲಿ ಮೂಡಿರುವ ಎಲ್ಲ ಸಂಶಯಗಳನ್ನು ನಿವಾರಿಸುವತ್ತ ಕಾರ್ಯೋನ್ಮುಖವಾಗಬೇಕಿದೆ. ಬೆಂಗಳೂರಿನಲ್ಲಿ ಪ್ರತಿಯೊಂದು ಕಟ್ಟಡದಲ್ಲೂ ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಬೇಕು ಎನ್ನುವ ನಿಯಮ ಜಾರಿಗೆ ತಂದು ಹಲವು ವರ್ಷಗಳು ಕಳೆದಿವೆ. ಬಿಬಿಎಂಪಿ ದಾಖಲೆಗಳ ಪ್ರಕಾರವೇ, ನಗರದಲ್ಲಿರುವ 20 ಲಕ್ಷಕ್ಕೂ ಅಧಿಕ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹದ ವ್ಯವಸ್ಥೆ ಇರುವುದು ಬರೀ 1.50 ಲಕ್ಷ ಕಟ್ಟಡಗಳಲ್ಲಿ. ಸಂಸ್ಕರಣೆ ಮಾಡಿದ ನೀರಿನ ಬಳಕೆ ಕಡ್ಡಾಯಗೊಳಿಸಿದ ನಿಯಮವೂ ಇದೇ ರೀತಿ ಜಾರಿಗೆ ಬರುವುದಾದರೆ, ಜನರ ಶೋಷಣೆಗೆ ಭ್ರಷ್ಟರ ಕೈಗೆ ಮತ್ತೊಂದು ಆಯುಧ ಕೊಟ್ಟಂತೆ ಆಗುತ್ತದಲ್ಲದೆ ಮೂಲ ಉದ್ದೇಶ ಈಡೇರದು. ಸಂಸ್ಕರಿಸಿದ ಶುದ್ಧ ನೀರನ್ನು ತುಂಬಾ ಕಡಿಮೆ ದರಕ್ಕೆ ಮತ್ತು ಯಾವುದೇ ವಿಳಂಬವಿಲ್ಲದೆ ಪೂರೈಸಲು ಜಲಮಂಡಳಿ ಕ್ರಮ ಕೈಗೊಂಡರೆ ಸಹಜವಾಗಿಯೇ ಅದರ ಬಳಕೆ ಹೆಚ್ಚಾಗಲು ಸಾಧ್ಯವಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲೂ ನೀರಿನ ಪೋಲು ತಪ್ಪಿಸಲು ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಿ, ಸಂಸ್ಕರಣೆ ಮಾಡಲಾದ ನೀರಿನ ಬಳಕೆಯನ್ನು ಕಡ್ಡಾಯಗೊಳಿಸಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT