ADVERTISEMENT

ಒಳನೋಟ: ಕೈಗಾರಿಕೆಗಳಿಗೆ ಪೆಟ್ಟು ನೀಡಿದ ಕೋವಿಡ್‌ ಎರಡನೇ ಅಲೆ; ಉತ್ಪಾದನೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:58 IST
Last Updated 29 ಮೇ 2021, 21:58 IST
ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಪ್ರವೇಶ ಭಾಗ
ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಪ್ರವೇಶ ಭಾಗ   

ಕೋಲಾರ: ಕೈಗಾರಿಕೆಗಳಿಗೆ ಕೋವಿಡ್‌ ಎರಡನೇ ಅಲೆ ದೊಡ್ಡ ಪೆಟ್ಟು ನೀಡಿದೆ. ಜಿಲ್ಲೆಯಲ್ಲಿ ನರಸಾಪುರ ಮತ್ತು ವೇಮಗಲ್‌ ಸೇರಿದಂತೆ 8 ಕೈಗಾರಿಕಾ ಪ್ರದೇಶಗಳಿವೆ. ಹೋಂಡಾ, ಮಿಟ್ಸುಬಿಷಿ, ಸ್ಕ್ಯಾನಿಯಾ, ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ, ಮಹೀಂದ್ರ ಏರೋಸ್ಪೇಸ್‌, ನಹಾರ್ಸ್‌, ಎಕ್ಸಿಡಿ, ಬಡ್ವೆ ಎಂಜಿನಿಯರಿಂಗ್‌ ಲಿಮಿಟೆಡ್‌ ಸೇರಿದಂತೆ ಹಲವು ಪ್ರತಿಷ್ಠಿತ ಕೈಗಾರಿಕೆಗಳಿವೆ.

ಜಿಲ್ಲೆಯ 19,261 ಕೈಗಾರಿಕೆಗಳಲ್ಲಿ ₹ 7,477 ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಸುಮಾರು 1.64 ಲಕ್ಷ ಮಂದಿಗೆ ಕೆಲಸ ನೀಡಿದೆ. ಸ್ಥಳೀಯರ ಜತೆಗೆ ಅಕ್ಕಪಕ್ಕದ ಜಿಲ್ಲೆಗಳ ಹಾಗೂ ಹೊರರಾಜ್ಯಗಳ ಕಾರ್ಮಿಕರು ಜಿಲ್ಲೆಗೆ ವಲಸೆ ಬಂದು ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ.

ಲಾಕ್‌ಡೌನ್‌ ಪರಿಣಾಮ ಜಿಲ್ಲೆಯಿಂದ ಕಾರ್ಮಿಕರ ಮಹಾವಲಸೆಯಾಗಿದ್ದು, ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲದ ಕೊರತೆ ಎದುರಾಗಿದೆ. ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿರುವುದರಿಂದ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳು ಪೂರೈಕೆಯಾಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಯ ನಡುವೆಯೂ ಕೈಗಾರಿಕೆಗಳು ಉತ್ಪಾದನಾ ಚಟುವಟಿಕೆ ನಡೆಸಿದರೂ ಮಾರುಕಟ್ಟೆ ಬಂದ್‌ ಆಗಿರುವುದು ಸಮಸ್ಯೆಯನ್ನು ಇಮ್ಮಡಿಗೊಳಿಸಿದೆ.

ADVERTISEMENT

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಹೋಂಡಾ ಮೋಟಾರ್‌ ಸೈಕಲ್‌ ಮತ್ತು ಸ್ಕೂಟರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಘಟಕವು ಜಗತ್ತಿನಲ್ಲೇ ಅತಿದೊಡ್ಡ ಘಟಕವಾಗಿದೆ. ಈ ಘಟಕದಲ್ಲಿ 10 ಸಾವಿರ ಮಂದಿ ಕೆಲಸ ಮಾಡುತ್ತಿದ್ದು, ಲಾಕ್‌ಡೌನ್‌ ಜಾರಿಯಾದ ನಂತರ 6 ಸಾವಿರಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ.

‘ಲಾಕ್‌ಡೌನ್‌ಗೂ ಮುನ್ನ ಘಟಕದಲ್ಲಿ ದಿನಕ್ಕೆ 9,600 ಬೈಕ್‌ ಉತ್ಪಾದನೆ ಯಾಗುತ್ತಿದ್ದವು. ಕಳೆದೊಂದು ತಿಂಗಳಿಂದ ಘಟಕವನ್ನು ಬಂದ್ ಮಾಡಲಾಗಿತ್ತು. ನಾಲ್ಕೈದು ದಿನದಿಂದ ಉತ್ಪಾದನೆ ಆರಂಭವಾಗಿದ್ದು, ಅರ್ಧದಷ್ಟು ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳ ಲಾಗುತ್ತಿದೆ. ಈಗ ದಿನಕ್ಕೆ ಕೇವಲ 450 ಬೈಕ್‌ ಉತ್ಪಾದನೆಯಾಗುತ್ತಿವೆ’ ಎಂದು ಹೋಂಡಾ ಘಟಕದ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಜಿ.ಬಿ. ವಿನೋದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.