ADVERTISEMENT

ಒಳನೋಟ: ಬಳಕೆಯಲ್ಲಿರುವ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಶೇ 78ರಷ್ಟು ಮಾತ್ರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:31 IST
Last Updated 20 ಮಾರ್ಚ್ 2021, 19:31 IST
ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಶೌಚಾಲಯ.
ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಶೌಚಾಲಯ.   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಶೇ 98ರಷ್ಟು ಶಾಲೆಗಳಲ್ಲಿ ಶೌಚಾಲಯ ಹಾಗೂ ಶೇ 99ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ, ಬಳಕೆಯಲ್ಲಿ ಇರುವುದು ಶೇ 78ರಷ್ಟು ಮಾತ್ರ.

ಇಲ್ಲಿ ಒಟ್ಟು 2,813 ಕಿರಿಯ ಪ್ರಾಥಮಿಕ ಶಾಲೆಗಳು, 3,820 ಹಿರಿಯ ಪ್ರಾಥಮಿಕ, 1,031 ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ಇವೆ. ಇವುಗಳಲ್ಲಿ ಶೇ 98ರಷ್ಟು ಕಿರಿಯ ಪ್ರಾಥಮಿಕ, ಶೇ 99ರಷ್ಟು ಹಿರಿಯ ಪ್ರಾಥಮಿಕ ಹಾಗೂ ಶೇ 99ರಷ್ಟು ಪ್ರೌಢಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಇನ್ನೂ 76 ಕಿರಿಯ ಪ್ರಾಥಮಿಕ, 51 ಹಿರಿಯ ಪ್ರಾಥಮಿಕ ಹಾಗೂ 11 ಪ್ರೌಢಶಾಲೆ–ಪದವಿಪೂರ್ವ ಕಾಲೇಜುಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು ಎಂದು ‘ಯುನೈಟೆಡ್‌ ಡಿಸ್ಟ್ರಿಕ್ಟ್‌ ಇನ್ಫರ್ಮೇಷನ್‌‌ ಸಿಸ್ಟಂ ಫಾರ್ ಎಜುಕೇಷನ್‌ (ಯುಡಿಐಎಸ್‌ಇ)’ ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದಲೂ ಶಾಲೆಗಳ ಮೂಲಸೌಲಭ್ಯಕ್ಕೆ ಅನುದಾನ ಬಳಸಲಾಗುತ್ತಿದೆ. 2019ರವರೆಗೆ ಶೇ 36ರಷ್ಟು ಶಾಲೆಗಳಿಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಂಡಳಿ ಕಲ್ಪಿಸಿದೆ.

ADVERTISEMENT

2020–21ನೇ ಸಾಲಿನಲ್ಲಿ ಮಂಡಳಿಯು ಒಟ್ಟು 661 ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ₹ 205 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಿದೆ. ಆದರೆ, ಕೊರೊನಾ ಕಾರಣದಿಂದಾಗಿ ಮಂಡಳಿಗೆ ಅನುದಾನ ಕಡಿತಗೊಂಡಿದ್ದರಿಂದ ಇದುವರೆಗೆ ಯಾವುದೇ ಕಾಮಗಾರಿಗೆ ಮಂಜೂರಾತಿ ಸಿಕ್ಕಿಲ್ಲ.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನವಿಲ್ಲ:ಅನುದಾನಿತ ಅಥವಾ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಕೆಕೆಆರ್‌ಡಿಬಿ ನಿಧಿಯಲ್ಲಿ ಅನುದಾನ ನೀಡಲು ಅವಕಾಶವಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ. ಆದರೆ, ಇದುವರೆಗೆ ನೂರಾರು ಕೋಟಿ ಅನುದಾನವು ಮಂಡಳಿಯಲ್ಲಿ ಬಳಕೆ ಆಗದೇ ಉಳಿದಿದೆ. ಅದು ಮರಳಿ ಕೂಡ ಹೋಗುವುದಿಲ್ಲ. ಅದನ್ನು‘ಶೈಕ್ಷಣಿಕ ಕಲ್ಯಾಣ ನಿಧಿ’ಯಾಗಿ ಪರಿವರ್ತಿಸಿಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಬಳಸಬೇಕು ಎಂಬ ಕೂಗು ಕೇಳಿಬರುತ್ತಿದೆ.

ಸಿಗದ ಎರಡು ಲೀಟರ್‌ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿಗೆ ಎರಡು ಲೀಟರ್ ಶುದ್ಧ ಕುಡಿಯುವ ನೀರು ಒದಗಿಸುವ ಹೊಣೆಯನ್ನು ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಕರಿಗೆ ನೀಡಲಾಗಿತ್ತು. ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿಗೂ ಉಂಟಾದ ತತ್ವಾರವನ್ನು ಗಮನಿಸಿದ ಜಿಲ್ಲಾ ಪಂಚಾಯಿತಿ, ಎರಡು ವರ್ಷದ ಹಿಂದೆ ಈ ನಿರ್ದೇಶನ ನೀಡಿತ್ತು. ಆದರೆ, ಇದು ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲಿಲ್ಲ. ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ಶುದ್ಧನೀರು ಒದಗಿಸುವ ಹೊಣೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ನೀಡಲಾಗಿತ್ತು.

ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕಿನ ಶಾಲೆಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಹೆಚ್ಚು. ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಅನೇಕ ಮಕ್ಕಳು ಮನೆಯಿಂದಲೇ ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 136 ಶಾಲೆಗಳಲ್ಲಿ ಶಾಶ್ವತ ನೀರಿನ ವ್ಯವಸ್ಥೆ ಇಲ್ಲ ಎಂದು ಗುರುತಿಸಲಾಗಿದ್ದು, ಜಲಜೀವನ್ ಯೋಜನೆಯಡಿ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಲು ಜಿಲ್ಲಾ ಪಂಚಾಯ್ತಿ ಯೋಜನೆ ರೂಪಿಸಿದೆ.

* ಶೌಚಾಲಯದಲ್ಲಿ ನಲ್ಲಿ ಇಲ್ಲ. ಹೊರಗಿನಿಂದ ಬಕೆಟ್‌ನಲ್ಲಿ ನೀರು ಕೊಂಡೊಯ್ಯಬೇಕು. ಶಾಲಾಭಿವೃದ್ಧಿ ಸಮಿತಿಯಿಂದ ಸ್ಯಾನಿಟೈಸರ್, ಸಾಬೂನು ವ್ಯವಸ್ಥೆ ಮಾಡಿದ್ದೇವೆ

- ಸುರೇಶ್ ಅಬ್ಬಿಗುಂಡಿ, ಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಲೇಮನೆ, ಕೊಪ್ಪ ತಾಲ್ಲೂಕು

* ಕಡೂರು ಶಾಸಕರ ಮಾದರಿ ಶಾಲೆಯಲ್ಲಿ ಹೊಸದಾಗಿ ಎರಡು ಅಂತಸ್ತಿನ ಕಟ್ಟಡ ಕಟ್ಟಲಾಗಿದೆ. ಆದರೆ, ಶೌಚಾಲಯವಿಲ್ಲ. ಹಳೆಯ ಕಟ್ಟಡದ ಶೌಚಾಲಯವನ್ನೇ ಬಳಸಬೇಕಿದೆ.

-ಚಂದ್ರಶೇಖರ್, ಮುಖ್ಯಶಿಕ್ಷಕ, ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.