ADVERTISEMENT

ಒಳನೋಟ: ಉಸಿರನೇ ಕಸಿದ ಅವ್ಯವಸ್ಥೆ

ವಿಶಾಲಾಕ್ಷಿ
Published 9 ಮೇ 2021, 3:13 IST
Last Updated 9 ಮೇ 2021, 3:13 IST
ಲಕ್ಕೂರಿನ ಮನೆಯ ಕಟ್ಟೆಯ ಮೇಲೆ ದಿಕ್ಕು ತೋಚದೇ ಕುಳಿತಿರುವ ಗುರುಪ್ರಸಾದ್ ಅವರ ತಾಯಿ ಮಹದೇವಮ್ಮ, ಪತ್ನಿ ಸವಿತಾ
ಲಕ್ಕೂರಿನ ಮನೆಯ ಕಟ್ಟೆಯ ಮೇಲೆ ದಿಕ್ಕು ತೋಚದೇ ಕುಳಿತಿರುವ ಗುರುಪ್ರಸಾದ್ ಅವರ ತಾಯಿ ಮಹದೇವಮ್ಮ, ಪತ್ನಿ ಸವಿತಾ   

ಚಾಮರಾಜನಗರ: ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿದ್ದವರು ಸೇರಿದಂತೆ 24 ರೋಗಿಗಳು ಮೃತಪಟ್ಟ ಪ್ರಕರಣವು ಕೋವಿಡ್‌ ದುರಿತ ಕಾಲದಲ್ಲಿ ರಾಜ್ಯ ಕಂಡ ಮಹಾದುರಂತ. ಕಳೆದ ಭಾನುವಾರದ ಸಂಜೆವರೆಗೂ ಭರವಸೆಯಲ್ಲಿಯೇ ಬದುಕಿದ್ದವರು, ಕತ್ತಲಾಗುತ್ತಿದ್ದಂತೆಯೇ ಕಣ್ಮುಚ್ಚಿದ ಬಗೆಯನ್ನು ಅವರ ಸಂಬಂಧಿಕರು ಬಿಚ್ಚಿಡುತ್ತ ಹೋದಂತೆ ಎದೆ ಒಡೆದುಹೋದ ಭಾವ. ನೋವು, ಹತಾಶೆ,ಸಂಕಟ, ಪ್ರಶ್ನೆಗಳ ಜೊತೆ ಜೊತೆಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನೂ ಅವರು ಬಟಾಬಯಲು ಮಾಡಿದ್ದಾರೆ.

ಅಂದು ಆಗಿದ್ದೇನು?: ಭಾನುವಾರ ರಾತ್ರಿ (ಮೇ 2), ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 23 ಹಾಗೂ ಹನೂರಿನ ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ ಒಬ್ಬ ರೋಗಿ ಸೇರಿದಂತೆ 24 ಮಂದಿ ಮೃತಪಟ್ಟರು. ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದ್ದೇ ಇದಕ್ಕೆ ಕಾರಣ ಎಂಬುದು ಅವರ ಸಂಬಂಧಿಕರ ಆರೋಪ. ಆದರೆ, ಜಿಲ್ಲಾಡಳಿತ ನೀಡಿರುವ ಡೆತ್‌ ಆಡಿಟ್‌ ವರದಿಯಲ್ಲಿ ಆಮ್ಲಜನಕದ ಕೊರತೆಯಿಂದ ಮೂವರು ಹಾಗೂ ಆಮ್ಲಜನಕದ ಪೂರೈಕೆಯಲ್ಲಿನ ನಿರ್ಬಂಧ ದಿಂದಾಗಿ ಉಂಟಾಗುವ ಸಮಸ್ಯೆಯಿಂದ (ಹೈಪಾಕ್ಸಿಕ್‌ ಬ್ರೇಯ್ನ್‌ಇಂಜುರೀಸ್‌) ಏಳು ಮಂದಿ ಮೃತಪಟ್ಟಿದ್ದಾಗಿ ಹೇಳಿತು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಪ್ರಕಾರ, ಅಂದು ಆಮ್ಲಜನಕ ಸಿಗದೇ ಮೃತಪಟ್ಟವರು ಮೂವರು ಮಾತ್ರ. ಈ ಹೇಳಿಕೆಗಳು, ಮೃತಪಟ್ಟವರ ಸಂಬಂಧಿಕರ ಆಕ್ರೋಶಕ್ಕೆತುಪ್ಪ ಸುರಿದಂತಾಗಿದೆ. ಪ್ರಾಣವಾಯುವಿಗಾಗಿ ಪರಿತಪಿಸಿದ ತಮ್ಮವರ ಕೊನೆಯಕ್ಷಣಗಳನ್ನು ಕಣ್ಣಾರೆ ಕಂಡಿರುವ ಅವರೆಲ್ಲಏಕಕಾಲಕ್ಕೆ ಜಿಲ್ಲಾಡಳಿತ, ಸಚಿವರು, ಮುಖ್ಯಮಂತ್ರಿ ಎಲ್ಲರನ್ನೂ ಮನಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಆದ ವೈಫಲ್ಯಕ್ಕೆ ಕ್ಷಮೆ ಯಾಚಿಸದೇ ಸಾವಿನ ಸಂಖ್ಯೆಯ ಬಗ್ಗೆ ತಮ್ಮದೇ ಲೆಕ್ಕ ನೀಡುತ್ತಿದ್ದಾರೆ ಎಂದು ಛೀಮಾರಿ ಹಾಕಿದ್ದು, ‘ಆಮ್ಲಜನಕವಿಲ್ಲದೇ ಹತ್ತು ಮಂದಿಯೇ ಸತ್ತಿದ್ದಾರೆಂದು ಅಂದುಕೊಂಡರೂ ಅದು ಸಾವಲ್ಲವೇ? ಸಾವನ್ನುಸಂಖ್ಯೆಯಾಗಿ ನೋಡುವ ವರಿಗೆ ಇದುಅರ್ಥವಾಗುವುದಿಲ್ಲ. ಅದು, ಬದುಕೊಂದು ಮುಗಿಯುವುದರ ಜೊತೆಗೆ ಅದನ್ನು ನೆಚ್ಚಿಕೊಂಡ ಪರಿವಾರದ ಮುಳುಗಡೆ ಎಂಬುದನ್ನು ಇವರಿಗೆ ಯಾರು ಅರ್ಥ ಮಾಡಿಸಬೇಕು?’ ಎಂದು ಕಿಡಿಕಾರುತ್ತಿದ್ದಾರೆ.

ADVERTISEMENT

‘ಕಾಯಿಲೆ ಉಲ್ಬಣಗೊಂಡು ಪರಿಸ್ಥಿತಿ ಕೈಮೀರಿ ಮೃತಪಟ್ಟಿದ್ದರೆ, ಈ ಹಾಳು ‘ಕೊರೊನಾ’ವನ್ನೇ ಶಪಿಸುತ್ತಿದ್ದೆವು. ಆದರೆ, ಚೇತರಿಸಿಕೊಳ್ಳುತ್ತಿದ್ದ ರೋಗಿಗಳಿಗೆ ಆಮ್ಲಜನಕವೇ ಸಿಗದಂತೆ ಮಾಡಿ ಕೊಂದಿದ್ದಾರೆ. ಸರ್ಕಾರವನ್ನಲ್ಲದೇ ಇನ್ನಾರನ್ನು ಶಪಿಸಬೇಕು’ ಎಂಬುದು ಅವರ ಪ್ರಶ್ನೆ.

ಪತಿಯನ್ನು ಕಳೆದುಕೊಂಡ, ಇಬ್ಬರು ಎಳೆಯ ಮಕ್ಕಳ ತಾಯಿ; ಮದುವೆಯಾದ ಎರಡು ತಿಂಗಳಿಗೇ ವಿಧವೆಯಾದ ಮಹಿಳೆ;ಮನೆಯ ನೊಗ ಹೊತ್ತಿದ್ದ ಮಗನನ್ನು ಕಳೆದುಕೊಂಡು ಹಾಸಿಗೆ ಹಿಡಿದ ವೃದ್ಧ ತಂದೆ ಹಾಗೂ ಹರೆಯದ ಮಗಳನ್ನು ಕಳೆದುಕೊಂಡ ಹೆತ್ತವರ ಸಂಕಟ; ನೂರಾರು ಜನರಿಗೆ ಉದ್ಯೋಗ ನೀಡಿ ಯಜಮಾನ ಎನಿಸಿದಾತನ ಮನೆಯ ಮೌನ... ಇವೆಲ್ಲವೂ ಘಟಿಸಿದ ಪ್ರಮಾದಕ್ಕೆ ಅವ್ಯವಸ್ಥೆಯತ್ತ ಬೆರಳು ತೋರುತ್ತಿವೆ.

ಪ್ರತ್ಯಕ್ಷದರ್ಶಿಯೂ ಆಗಿದ್ದ ರೋಗಿಯೊಬ್ಬರ ಸಂಬಂಧಿ ಹೇಳುವ ಪ್ರಕಾರ, ಭಾನುವಾರ ರಾತ್ರಿ ಎಂಟೂವರೆಗಾಗಲೇ ಆಸ್ಪತ್ರೆಯಲ್ಲಿ ಚೀರಾಟ ಶುರುವಾಗಿತ್ತು. ಹೆಚ್ಚು ಕಡಿಮೆ ಅದೇ ಹೊತ್ತಿಗೆ ಕರೆ ಮಾಡಿದ್ದ, ತಮ್ಮ ಅಣ್ಣನ ಫೋನ್‌ ಸಂಪರ್ಕ ಕಡಿತಗೊಂಡಿದ್ದರಿಂದ ಆತಂಕಗೊಂಡು ಆಸ್ಪತ್ರೆಗೆ ಧಾವಿಸಿದ ವ್ಯಕ್ತಿಯೊಬ್ಬರಿಗೆ ಕಂಡಿದ್ದು ಅಣ್ಣನ ಸಾವು! ಮಹಿಳೆಯೊಬ್ಬರು, ತಮ್ಮ ಪತಿಯ ಸ್ಯಾಚುರೇಶನ್‌ ಮಟ್ಟದಲ್ಲಿ ಏರಿಳಿತ ಆಗಿದ್ದನ್ನು ಗಮನಿಸಿ, ಆತಂಕದಿಂದ ಕೂಗಿಕೊಂಡಿದ್ದೂ ಅದೇ ಸಮಯಕ್ಕೆ. ಇವೆಲ್ಲವೂ ಎಂಟೂವರೆಗಾಗಲೇ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ನಿದರ್ಶನ.

ಉಸಿರಾಟಕ್ಕೆ ತೊಂದರೆಯಾಗುತ್ತಿರುವುದಾಗಿ ಅದೇ ದಿನ ರಾತ್ರಿ ಹನ್ನೊಂದೂವರೆಗೆ ಮನೆಯವರಿಗೆ ವಿಡಿಯೊ ಕರೆ ಮಾಡಿದ ಸುರೇಂದ್ರ ಎಂಬುವವರು ಅಳುತ್ತಲೇ ಹೇಳಿದ್ದು, ರೋಗಿಯ ಕೈಯಿಂದ ಸಿಬ್ಬಂದಿಯೊಬ್ಬರು ಫೋನ್‌ ಕಸಿದುಕೊಂಡಿರುವುದು. ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿ. ಹಾಸಿಗೆ ಸಿಗದೇ, ಒಂದು ತಾಸು ಸ್ಟ್ರೆಚರ್‌ನಲ್ಲಿಯೇ ಜೀವ ಹಿಡಿದಿದ್ದ ಯುವತಿಯೊಬ್ಬಳು ಮುಂದಿನ ಮತ್ತೊಂದು ಗಂಟೆಯಲ್ಲಿ ಅಸುನೀಗಲು ಕಾರಣವಾದ ಪ್ರಕರಣವು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಸಿದ್ಧತೆ ಇಲ್ಲದಿರುವುದಕ್ಕೆ ಸಾಕ್ಷ್ಯ ನುಡಿಯುತ್ತಿದೆ.

ಅನಾಹುತದ ಘಟಿಸಿದ ರಾತ್ರಿಯ ಚಿತ್ರಣವು ಅಧಿಕಾರಿಗಳ ಉದಾಸೀನತೆಯನ್ನು, ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ. ಮಾರಣಹೋಮದ ಸೂಚನೆ ಸಿಕ್ಕು ಕಂಗಾಲಾದ ಸಾಮಾನ್ಯ ನಾಗರಿಕರೊಬ್ಬರು ರಾತ್ರಿ ಹೊತ್ತಿನಲ್ಲಿ ಜಿಲ್ಲಾಧಿಕಾರಿಗೆ ಕರೆ ಮಾಡುತ್ತಾರೆ. ಆದರೆ, ಆಗುತ್ತಿರುವುದನ್ನೆಲ್ಲ ನೋಡಿಕೊಂಡು ಅಧಿಕಾರಿಗಳು, ವೈದ್ಯರು ಅಸಹಾಯಕರಂತೆ ಕೈಚೆಲ್ಲಿದ್ದಾರೆ.

ಅಪಾಯವನ್ನು ಮನಗಂಡು, ವಿಶಿಲ್‌ ಬ್ಲೋವರ್‌ ಆಗಿ ಆ ವ್ಯಕ್ತಿ ಕೆಲಸ ಮಾಡದೇ ಹೋಗಿದ್ದರೆ ಈ ಎಲ್ಲ ಸಾವುಗಳನ್ನೂ ಕೋವಿಡ್‌ ಸಾವುಗಳೆಂದೇ ಜಿಲ್ಲಾಡಳಿತ ಹೇಳಿಬಿಡುವ ಸಾಧ್ಯತೆಯೂ ಇತ್ತು. ಅಲ್ಲಿಗೆ, ಆಮ್ಲಜನಕ ಕೊರತೆಯ ಸಮಸ್ಯೆ ಜೀವಂತವಾಗಿದ್ದು, ಮತ್ತೆ ಹಲವು ಜೀವಗಳನ್ನು ಬಲಿ ಪಡೆಯುತ್ತಲೇ ಹೋಗುತ್ತಿತ್ತು.

ಪರಿಸ್ಥಿತಿ ಹೇಗಿದೆ ಎಂದು ವಿಚಾರಿಸಿಕೊಂಡ ಕ್ಷೇತ್ರದ ಸಂಸದ ವಿ.ಶ್ರೀನಿವಾಸಪ್ರಸಾದ ಅವರಿಗೆ ‘ಎಲ್ಲವೂ ಸರಿಯಾಗಿದೆ’ ಎಂದು ಹೇಳಿ, ಕೊರತೆ ಇದ್ದರೆ ಸರಿಪಡಿಸಿಕೊಳ್ಳುವಂತೆ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ನೀಡಿದ್ದ ಮುನ್ನೆಚ್ಚರಿಕೆಯನ್ನು ಜಿಲ್ಲಾಡಳಿತ ಕಡೆಗಣಿಸಿದ್ದೇಕೆ? ಕಳೆದ ಸಲ ಕೋವಿಡ್‌ ಸಂದರ್ಭವನ್ನು ನಿಭಾಯಿಸಿದ ತನಗೆ ಬೇರೆಯವರ ಸಲಹೆ ಬೇಕಿಲ್ಲ ಎಂಬ ದಾರ್ಷ್ಟ್ಯವೂ ಇರಬೇಕು ಎನ್ನುವ ಅಧಿಕಾರಿವರ್ಗದ ಕ್ಷೀಣದನಿ ಹೊರಗೆ ಕೇಳುವುದಿಲ್ಲ.

ಇಲ್ಲಿನ ಪರಿಸ್ಥಿತಿಯನ್ನು ತಿಳಿದ ತಕ್ಷಣ ಚಾಮರಾಜನಗರ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡಲಾಗಿದೆ ಎಂಬುದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಸಂಸದ ಪ್ರತಾಪ ಸಿಂಹ ಹೇಳಿಕೆ. ಆ ಬಗ್ಗೆ ಅಂದು ರಾತ್ರಿ 11.25ಕ್ಕೆ ಟ್ವೀಟ್‌ ಕೂಡ ಮಾಡಿದ್ದ ಪ್ರತಾಪಸಿಂಹ, ತುರ್ತಾಗಿ 50 ಸಿಲಿಂಡರ್‌ಗಳನ್ನು ಕಳುಹಿಸಿಕೊಟ್ಟಿದ್ದಾಗಿ ಹೇಳಿದ್ದಾರೆ. ಆದರೆ,ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್‌. ರವಿ, ಮೈಸೂರಿನ ಜಿಲ್ಲಾಡಳಿತ ಸ್ಪಂದಿಸಿಲ್ಲ; ತಾವೇ ಮೈಸೂರಿನ ಪದಕಿ ಏಜೆನ್ಸಿಯಿಂದ 50 ಸಿಲಿಂಡರ್‌ಗಳನ್ನು ತರಿಸಿಕೊಂಡಿದ್ದಾಗಿ ಹೇಳಿದ್ದಾರೆ. ಹಾಗಿದ್ದರೆ, ಮೈಸೂರು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು ಎನ್ನಲಾದ ಒಟ್ಟು 250 ಸಿಲಿಂಡರ್‌ಗಳು ಹೋಗಿದ್ದು ಎಲ್ಲಿಗೆ ಎಂಬುದಕ್ಕೆ ಇದುವರೆಗೂ ಉತ್ತರವಿಲ್ಲ.

‘ಮೈಸೂರಿನಿಂದ ಚಾಮರಾಜನಗರಕ್ಕೆ ನಿತ್ಯ 300 ಸಿಲಿಂಡರ್‌ ತರಿಸಲಾಗುತ್ತಿತ್ತು. ಏ.23ರಿಂದ ಪೂರೈಕೆಯಲ್ಲಿ ತುಸು ವ್ಯತ್ಯಯವಾಗುತ್ತಿತ್ತು. ಭಾನುವಾರವೂ (ಮೇ 2) ಮೈಸೂರಿನಿಂದ 300 ಸಿಲಿಂಡರ್‌ ಪೂರೈಕೆಯಾಗಲಿದೆ ಎಂಬ ವಿಶ್ವಾಸಲ್ಲಿದ್ದೆವು. ಅಂದು ಬೆಳಿಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕೂಡ ನಡೆದಿತ್ತು. ಆದರೆ, ಸರಿಯಾಗಿ ಪೂರೈಕೆ ಆಗಲಿಲ್ಲ.ಬಂದ ಹಾಗೆ ಬಳಕೆ ಆಗುತ್ತಿದ್ದರಿಂದ ದಾಸ್ತಾನು ಇರುವುದಿಲ್ಲ. ಅಂದು ಮಧ್ಯಾಹ್ನ 1.30ಕ್ಕೆ 66 ಸಿಲಿಂಡರ್‌ ಬಂದವು. ಸಂಜೆ ಆರೂವರೆಗೆ 65 ಸಿಲಿಂಡರ್‌ಗಳನ್ನು ಕೊಳ್ಳೇಗಾಲದಿಂದ ತರಿಸಲಾಯಿತು. ಮಧ್ಯರಾತ್ರಿ 2 ಗಂಟೆಗೆ ಮೈಸೂರಿನಿಂದ ಪೂರೈಕೆಯಾದವು’ ಎಂದಷ್ಟೇ ಹೇಳುತ್ತಾರೆ ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌. ಮೈಸೂರಿನಿಂದ ಬಂದ ಸಿಲಿಂಡರ್‌ಗಳು ಎಷ್ಟು ಎಂಬ ಮಾಹಿತಿ ಅವರಿಂದ ಸಿಗಲಿಲ್ಲ.

ಡೀನ್‌ ಹೇಳಿಕೆ ಪ್ರಕಾರ, ಎಂಟ್ಹತ್ತು ದಿನಗಳಿಂದಲೇ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿತ್ತು. ಇದರೊಂದಿಗೆ ಪ್ರಕರಣಗಳೂ ಹೆಚ್ಚುತ್ತಿದ್ದವು. ದಾಸ್ತಾನೂ ಇರಲಿಲ್ಲ. ಅಂದ ಮೇಲೆ ಇದಕ್ಕೆ ಹೊಣೆ ಯಾರು? ಜಿಲ್ಲಾಧಿಕಾರಿ ಎಂ.ಆರ್‌.ರವಿ ಈ ವಿಷಯವಾಗಿ ಪ್ರತಿಕ್ರಿಯಿಸಿಲ್ಲ. ಪ್ರತಿಕ್ರಿಯೆಗಾಗಿ ಹಲವಾರು ಸಲ ಪ್ರಯತ್ನಿಸಿದರೂ ಅವರು ಲಭ್ಯರಾಗಿಲ್ಲ. ಹೈಕೋರ್ಟ್‌ ಆದೇಶದ ಮೇರೆಗೆ, ಆಮ್ಲಜನಕ ಪೂರೈಕೆ– ವಿಲೇವಾರಿಗೆ ಸಂಬಂಧಿಸಿದ ಪ್ರಮುಖ ಕಡತಗಳನ್ನು ವಶಪಡಿಸಿಕೊಂಡ ನಂತರ ಬಹುತೇಕ ಅಧಿಕಾರಿಗಳು ಫೋನ್‌ ಸಂಪರ್ಕಕ್ಕೇ ಸಿಗುತ್ತಿಲ್ಲ.

ಮೂರು ವರ್ಷಗಳ ಹಿಂದೆ ಸುಳ್ವಾಡಿಯ ದೇವಾಲಯದಲ್ಲಿ ವಿಷ ಪ್ರಸಾದದ ಸೇವಿಸಿ ಹಲವು ಜೀವಗಳು ಬಲಿಯಾದ ಪ್ರಕರಣದ ನೋವು ಮಾಯುವ ಮುನ್ನವೇ ಈ ಅನಾಹುತ ಘಟಿಸಿದೆ. ಇಷ್ಟಾದರೂ ಆಸ್ಪತ್ರೆಯ ಸ್ಥಿತಿಯಲ್ಲಿ, ಆರೋಗ್ಯ ಇಲಾಖೆಯ ಸಿಬ್ಬಂದಿಯ ಕಾರ್ಯವೈಖರಿ ಬದಲಾಗಿಲ್ಲ. ಕೋವಿಡ್‌ ರೋಗಿಗಳು ಮೃತಪಟ್ಟು ವಾರ ಕಳೆಯುತ್ತ ಬಂದರೂ ಪ್ರಾಥಮಿಕ ಸಂಪರ್ಕದಲ್ಲಿದ್ದ ಬಹುತೇಕರ ಕುಟುಂಬದ ಸದಸ್ಯರಿಗೆ, ಆಸ್ಪತ್ರೆಯ ಕೋಣೆಯೊಂದರಲ್ಲಿ ಒಂದರ ಮೇಲೆ ಒಂದರಂತೆ ಎಳೆದೆಳೆದು ಹಾಕಿದ್ದ ಹೆಣಗಳ ರಾಶಿಯಿಂದ ತಮ್ಮವರ ಶವ ಗುರುತಿಸಿ ತಂದವರಿಗೆ ಇದುವರೆಗೆ ಕೋವಿಡ್‌ ಪರೀಕ್ಷೆಯಾಗಿಲ್ಲ!

ಜಿಲ್ಲಾಸ್ಪತ್ರೆಯಲ್ಲೇ ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು, ತಮ್ಮ ಪತಿಯ ಮೃತದೇಹದೊಂದಿಗೆ ಮನೆಗೆ ಮರಳಿದ್ದು, ಆಸ್ಪತ್ರೆಯಿಂದ ತಾವೇ ಸ್ವತಃ ಡಿಸ್ಚಾರ್ಜ್‌ ಆಗಿದ್ದಾರೆ. ಆಸ್ಪತ್ರೆಯಲ್ಲಿ ಅಂದು ಭಯಾನಕ ದೃಶ್ಯ ಕಂಡು, ಅಲ್ಲಿಂದ ಹೇಳದೇ ಬಂದವರೂ ಇದ್ದಾರೆ.

ಇದು ಜಿಲ್ಲಾಡಳಿತದ ವೈಫಲ್ಯವೇ? ಅಧಿಕಾರಿಗಳ ಪ್ರತಿಷ್ಠೆಯೇ ಎಂಬುದು ಇನ್ನೇನು ನ್ಯಾಯಾಂಗ ತನಿಖೆಯಿಂದ ಬಯಲಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.