ADVERTISEMENT

ಒಳನೋಟ: ನಿಲ್ಲದ ಬೆಟ್ಟ ಕೊರೆಯುವ ಕೆಲಸ

ಕೊಡಗು: ಭೂಕುಸಿತವಾಗಿದ್ದ ಪ್ರದೇಶದಲ್ಲಿ ಮತ್ತೆ ಭೀತಿ; ಗ್ರಾಮಸ್ಥರಲ್ಲಿ ಆತಂಕ

ಅದಿತ್ಯ ಕೆ.ಎ.
Published 1 ಆಗಸ್ಟ್ 2021, 2:52 IST
Last Updated 1 ಆಗಸ್ಟ್ 2021, 2:52 IST
ಕೊಡಗಿನಲ್ಲಿ ಭೂಕುಸಿತದಿಂದ ಸರ್ವನಾಶವಾಗಿದ್ದ ಕೃಷಿ ಜಮೀನು (ಸಂಗ್ರಹ ಚಿತ್ರ)
ಕೊಡಗಿನಲ್ಲಿ ಭೂಕುಸಿತದಿಂದ ಸರ್ವನಾಶವಾಗಿದ್ದ ಕೃಷಿ ಜಮೀನು (ಸಂಗ್ರಹ ಚಿತ್ರ)   

ಮಡಿಕೇರಿ: ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈಗ ಪ್ರತಿ ಮಳೆಗಾಲದಲ್ಲೂ ತಲ್ಲಣ ಶುರುವಾಗುತ್ತದೆ. ಅದು ಇತ್ತೀಚಿನ ವರ್ಷಗಳ ಬೆಳವಣಿಗೆ. ನಾಲ್ಕು ತಿಂಗಳು ಸುರಿಯುತ್ತಿದ್ದ ನಿರಂತರ ಮಳೆಗೂ ಜಗ್ಗದ ಶತಮಾನದ ದೈತ್ಯ ಬೆಟ್ಟಗಳು, ಈಗ ನಾಲ್ಕು ದಿನದ ಮಳೆಗೇ ಕುಸಿದು ಬೀಳುತ್ತಿವೆ. ಬಿರುಕು ಬಿಡುತ್ತಿವೆ; ಸ್ಫೋಟಗೊಳ್ಳುತ್ತಿವೆ. ಬೆಟ್ಟದ ತಪ್ಪಲಿನ ಕೃಷಿ ಜಮೀನು, ಜನವಸತಿ ಪ್ರದೇಶ ಎಲ್ಲವೂ ನಾಶವಾಗುತ್ತಿದೆ.

ಪಶ್ಚಿಮಘಟ್ಟದ ಸಾಲಿನಲ್ಲಿ ಕಾಡುನಾಶ, ಅಭಿವೃದ್ಧಿಯ ಭರಾಟೆ, ಬೆಟ್ಟದ ತುದಿಯಲ್ಲಿ ಬೃಹತ್‌ ಯಂತ್ರಗಳ ಕೆಲಸ, ಪ್ರವಾಸಿಗರ ಸೆಳೆಯುವ ಯೋಜನೆಗಳು–ಇವೇ ದುರಂತಕ್ಕೆ ಕಾರಣವೆಂಬ ತಜ್ಞರ ಎಚ್ಚರಿಕೆಯ ನಡುವೆಯೂ ಬೆಟ್ಟ ಕೊರೆಯುವ ಕೆಲಸ ಮಾತ್ರ ನಿಂತಿಲ್ಲ.

ನಾಲ್ಕು ವರ್ಷದ ಹಿಂದೆ ಭೂಕುಸಿತವಾದ ಸ್ಥಳಗಳಲ್ಲೇ ಈ ವರ್ಷವೂ ಸಣ್ಣ ಪ್ರಮಾಣದ ಕುಸಿತವಾಗಿದೆ. ಹೆಬ್ಬಟ್ಟಗೇರಿ, ದೇವಸ್ತೂರು, ಉದಯಗಿರಿ ಭಾಗದಲ್ಲಿ ಜನರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ತಾತಿಮನೆ ಪೈಸಾರಿಯಲ್ಲಿ ಭೂಮಿಯ ಒಳಗಿನಿಂದ ಸದ್ದು ಕೇಳಿಸುತ್ತಿದೆ. ‘ಮೂರು ವರ್ಷಗಳ ಹಿಂದೆಯೂ ಗುಡ್ಡ ಕುಸಿಯುವ ಮುನ್ನ ಇದೇ ರೀತಿಯ ಅನುಭವವಾಗಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಸ್ಥಳೀಯರು.

ADVERTISEMENT

ಸಂತ್ರಸ್ತರ ಪುನರ್ವಸತಿ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ಕೃಷಿ ಜಮೀನು ಕಳೆದುಕೊಂಡವರಿಗೆ ಪರಿಹಾರ ಲಭಿಸಿಲ್ಲ. ಬೆಳೆ ಪರಿಹಾರ ಮಾತ್ರ ನೀಡಲಾಗಿದೆ. ಇದು ರೈತರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ಹೆದ್ದಾರಿ ಬದಿಯಲ್ಲಿ, ಮಡಿಕೇರಿ ನಗರದಲ್ಲಿ ಭೂಕುಸಿತವಾದ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣವೂ ನಡೆದಿದೆ.

23 ಕಡೆ ಭೂಕುಸಿತದ ಸಂಭವ: ‘ಈ ವರ್ಷವೂ ಮಳೆ ಹೆಚ್ಚಾದರೆ 23 ಸ್ಥಳಗಳಲ್ಲಿ ಭೂಕುಸಿತವಾಗುವ ಸಾಧ್ಯತೆಯಿದೆ’ ಎಂದು ತಜ್ಞರು ವರದಿ ನೀಡಿದ್ದಾರೆ. ಅಲ್ಲಿನ ನಿವಾಸಿಗಳಿಗೆ ನೋಟಿಸ್ ನೀಡಲಾಗಿದೆ.

ಹಿಂದಿನ ವರ್ಷ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬದ ಐವರು ಭೂಸಮಾಧಿಯಾಗಿದ್ದರು. ಪರಿಹಾರ ಕಾರ್ಯ ಅರ್ಧಕ್ಕೆ ನಿಂತಿತ್ತು. ಗುಡ್ಡ ಕುಸಿಯಲು ಬೆಟ್ಟದ ಮೇಲ್ಭಾಗದಲ್ಲಿ ಅರಣ್ಯ ಇಲಾಖೆ ತೆಗೆದಿದ್ದ ಇಂಗುಗುಂಡಿಗಳೇ ಕಾರಣ ಎಂಬ ಆರೋಪವಿತ್ತು. ದುರಂತದ ಬಳಿಕ ಅರಣ್ಯ ಇಲಾಖೆ ಅಂದಾಜು ಒಂದು ಸಾವಿರ ಇಂಗುಗುಂಡಿಗಳನ್ನು ಮುಚ್ಚಿತ್ತು.

‘ಗಜಗಿರಿಯಲ್ಲಿ ಭೂಕುಸಿತ ತಡೆಗಟ್ಟಲು ಹಣ್ಣಿನ ಗಿಡಗಳನ್ನು ನೆಟ್ಟು ಹುಲ್ಲಿನ ಬೀಜಗಳನ್ನು ಬಿತ್ತಿದ್ದು ಮಳೆಗೆ ಚಿಗುರೊಡೆದಿವೆ. ಆ ಭಾಗದ ಬೆಟ್ಟದಲ್ಲಿ ಬೇಗ ಬೆಳೆಯುವ ಹಾಗೂ ಭೂಸವಕಳಿ ತಡೆಗಟ್ಟುವ ಸಸಿಗಳನ್ನೂ ನಾಟಿ ಮಾಡಲಾಗಿದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ. ಈ ಅನಾಹುತಗಳ ನಡುವೆಯೂ ಪ್ರವಾಸೋದ್ಯಮ ಇಲಾಖೆ ರಾಜಾಸೀಟ್‌ನಲ್ಲಿ ಬೆಟ್ಟ ಕೊರೆದು ಉದ್ಯಾನ ವಿಸ್ತರಣೆಗೆ ಕೈಹಾಕಿದೆ. ವೀಕ್ಷಣಾ ಗೋಪುರ, ಪ್ರವಾಸಿಗರ ಮೋಜಿಗೆ ಕಾಲುದಾರಿ ನಿರ್ಮಿಸುತ್ತಿದೆ.

‘ರಾಜಾಸೀಟ್‌ ಕಾಂಕ್ರೀಟ್ ಕಾಡಾಗಿ ಮಾರ್ಪಟ್ಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸುತ್ತಮುತ್ತಲಿನ ಬೆಟ್ಟವನ್ನು ಅಗೆದು ಕಾಂಕ್ರೀಟ್‌ಮಯಗೊಳಿಸಲಾಗಿದೆ. ರಾಜಾಸೀಟ್ ಪ್ರದೇಶವು ಮಂಗಳೂರು ರಸ್ತೆಗೆ ಕುಸಿಯುವ ಸಾಧ್ಯತೆಯಿದೆ’ ಎಂದು ಪರಿಸರ ಹೋರಾಟಗಾರ ಹರೀಶ್ ಜಿ.ಆಚಾರ್ಯ ಆತಂಕ ವ್ಯಕ್ತಪಡಿಸುತ್ತಾರೆ.

***

3 ವರ್ಷಗಳಿಂದಲೂ ಆಗಸ್ಟ್‌ನಲ್ಲೇ ಅನಾಹುತ ಸಂಭವಿಸುತ್ತಿದೆ. ಜನ ಎಚ್ಚರದಿಂದ ಇರಬೇಕು. ಹವಾಮಾನ ಬದಲಾವಣೆ ಯಾಗಿರುವುದರಿಂದ ಒಮ್ಮೆಲೇ ಹೆಚ್ಚು ಮಳೆ ಸುರಿಯುತ್ತಿದೆ

- ಚೆಪ್ಪುಡೀರ ಮುತ್ತಣ್ಣ, ಪರಿಸರ ಹೋರಾಟಗಾರ

***
ಜಮೀನು ಕಳೆದುಕೊಂಡವರಿಗೆ ನ್ಯಾಯಯುತ ಪರಿಹಾರ ಸಿಕ್ಕಿಲ್ಲ. ಗದ್ದೆಗಳಲ್ಲಿ ಸಂಗ್ರಹವಾದ ಮಣ್ಣು ತೆರವು ಆಗಿಲ್ಲ. ಹೆಸರಿಗಷ್ಟೇ ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ

- ರವಿ, ಕಾಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.