ADVERTISEMENT

ಒಳನೋಟ: ಭತ್ತ, ಕಬ್ಬಿನ ಗದ್ದೆಯಲ್ಲಿ ದುರ್ವಾಸನೆ

ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಗಿತ, ಕಲುಷಿತಗೊಂಡ ಗುತ್ತಲು ಕೆರೆ lಕೊಡಗಿನಲ್ಲೇ ಕಾವೇರಿ ಮಲಿನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 20:22 IST
Last Updated 24 ಏಪ್ರಿಲ್ 2021, 20:22 IST
ಮಂಡ್ಯದ ಹೊರವಲಯದಲ್ಲಿರುವ ಗುತ್ತಲು ಕೆರೆ ಕಲುಷಿತಗೊಂಡಿರುವುದು
ಮಂಡ್ಯದ ಹೊರವಲಯದಲ್ಲಿರುವ ಗುತ್ತಲು ಕೆರೆ ಕಲುಷಿತಗೊಂಡಿರುವುದು   

ಮಂಡ್ಯ: ಮಂಡ್ಯ ನಗರದಲ್ಲಿ ಉತ್ಪಾದನೆಯಾಗುವ ಕೊಳಚೆ ನೀರು ನೇರವಾಗಿ ಗುತ್ತಲು ಕೆರೆ ಸೇರುತ್ತಿದ್ದು, ಕೆರೆಯಂಗಳ ಹಾಗೂ ಹಿಂಭಾಗದ ಅಚ್ಚುಕಟ್ಟು ಪ್ರದೇಶ ಕಲುಷಿತಗೊಂಡಿದೆ. ಕಬ್ಬು, ಭತ್ತದ ಗದ್ದೆಗಳು ದುರ್ವಾಸನೆ ಬೀರುತ್ತಿದ್ದು, ರೋಗಭೀತಿ ಎದುರಾಗಿದೆ.

ಗದ್ದೆಗಳಲ್ಲಿ ಕೆರೆಯ ಕಲುಷಿತ ನೀರು ಹರಿಯುತ್ತಿದ್ದು ರೈತರಿಗೆ ಕೆಮ್ಮು, ಚರ್ಮದ ಸಮಸ್ಯೆಗಳು ಸಾಮಾನ್ಯವಾಗಿವೆ. ಇದರಿಂದ ಕೃಷಿ ಕಾರ್ಮಿಕರು ನಾಟಿಗೆ ಬರಲು ಹಿಂಜರಿಯುತ್ತಿದ್ದಾರೆ. ಗುತ್ತಲು, ಭೂತನಹೊಸೂರು, ಚನ್ನಪ್ಪನ ದೊಡ್ಡಿ, ಚಿಕ್ಕೇಗೌಡನದೊಡ್ಡಿ ಮುಂತಾದ ಗ್ರಾಮಗಳ ರೈತರು ಗುತ್ತಲು ಕೆರೆಯ ಅಚ್ಚುಕಟ್ಟುದಾರರಾಗಿದ್ದಾರೆ.

ನಗರದಲ್ಲಿ ಎರಡು ಕೋಟಿ ಲೀಟರ್‌ ಕೊಳಚೆ ನೀರು ಉತ್ಪಾದನೆಯಾಗುತ್ತಿದ್ದು, ಅದನ್ನು ಶುದ್ಧೀಕರಣಗೊಳಿಸಲು ಯತ್ತಗದಹಳ್ಳಿ (89 ಲಕ್ಷ ಲೀಟರ್‌ ಸಾಮರ್ಥ್ಯ), ಚಿಕ್ಕೇಗೌಡನ ದೊಡ್ಡಿಯಲ್ಲಿ (96 ಲಕ್ಷ ಲೀಟರ್‌ ಸಾಮರ್ಥ್ಯ) ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ, ಈ ಘಟಕಗಳು ನಿರ್ವಹಣೆಯ ಕೊರತೆಯಿಂದ ‍ಪದೇಪದೇ ಸ್ಥಗಿತಗೊಳ್ಳುತ್ತಿದ್ದು, ಕೊಳಚೆ ನೀರು ನೇರವಾಗಿ ಕೆರೆಯೊಡಲು ಸೇರುತ್ತಿದೆ. ಚಿಕ್ಕೇಗೌಡನದೊಡ್ಡಿ ಘಟಕದ ಕೊಳಚೆ ನೇರವಾಗಿ ಹೆಬ್ಬಾಳ ಸೇರುತ್ತಿದೆ. ಕೊಳಚೆ ನೀರು ಸೇರ್ಪಡೆಯಿಂದ ಕೆರೆಯ ನೀರು ಶುದ್ಧತಾ ಗುಣ (ಪಿಎಚ್‌ ವ್ಯಾಲ್ಯೂ) ಕಳೆದುಕೊಂಡಿದೆ.

ADVERTISEMENT

ನೀರಿನ ಶುದ್ಧತೆ ಪರೀಕ್ಷೆ ನಡೆಸುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಪರೀಕ್ಷೆ ನಡೆಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಯತ್ತಗದಹಳ್ಳಿ ಘಟಕದಲ್ಲಿ ಮೋಟರ್‌ ಸಮಸ್ಯೆಯಿಂದ ಘಟಕ ಸ್ಥಗಿತಗೊಂಡಿತ್ತು, ಈಗ ದುರಸ್ತಿ ಮಾಡಿಸಲಾಗಿದೆ. ಮುಂದೆ ಘಟಕ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್ ಹೇಳಿದರು.

ಮೂರು ಭಾಗದಲ್ಲಿ ಘಟಕ: ಮೈಸೂರು ನಗರದ ಕೊಳಚೆ ನೀರನ್ನು ಸಂಸ್ಕರಿಸಲಿಕ್ಕಾಗಿಯೇ ಮೂರು ಭಾಗದಲ್ಲಿ ಎಸ್‌ಟಿಪಿ ಪ್ಲಾಂಟ್‌ ನಿರ್ಮಿಸಲಾಗಿದೆ. ಸಿವೇಜ್‌ ಫಾರ್ಮ್‌ನಲ್ಲಿನ ಎಸ್‌ಟಿಪಿ ಪ್ಲಾಂಟ್‌ನಲ್ಲಿ ಸಂಸ್ಕರಣೆಗೊಂಡ ನೀರನ್ನು 100 ಎಕರೆಯಲ್ಲಿ ಹುಲ್ಲು ಬೆಳೆಸಲು ಬಳಸಲಾಗುತ್ತಿದೆ. ರೇಸ್‌ ಕೋರ್ಸ್‌, ಗಾಲ್ಫ್‌ ಕ್ಲಬ್‌ನ ಮೈದಾನ ಹಸಿರೀಕರಣಕ್ಕೆ ಪೂರೈಸಲಾಗುತ್ತಿದೆ.

ನದಿಯೊಡಲಿಗೆ ಕೊಳಚಿ ನೀರು: ಕೆಸರೆ ಬಳಿ, ರಾಯನಕೆರೆಯ ಕೋಟೆ ಹುಂಡಿ ಬಳಿ ತಲಾ ಒಂದೊಂದು ಎಸ್‌ಟಿಪಿ ಪ್ಲಾಂಟ್‌ ಇವೆ. ಇಲ್ಲಿ ಸಂಸ್ಕರಿಸಿದ ನೀರು ನೇರವಾಗಿ ಕೆರೆಯ ಒಡಲು ಸೇರುತ್ತಿದೆ. ಲಕ್ಷ್ಮಣತೀರ್ಥ ನದಿಗೆ ಹುಣಸೂರಿನ ಕೊಳಚೆ ನೀರು ಸೇರುತ್ತಿದೆ. ನಂಜನಗೂಡು, ತಿ.ನರಸೀಪುರದ ಕೊಳಚೆ ನೀರು ಕಪಿಲೆಯ ಒಡಲು ಸೇರುತ್ತಿದೆ.

ಚಾಮರಾಜನಗರ ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಮಾತ್ರ ತಲಾ 9 ಎಂಎಲ್‌ಡಿ‌ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿವೆ. ಹಾಸನದ ಹೊರವಲಯದಲ್ಲಿ ಬಿಟ್ಟಗೋಡನಹಳ್ಳಿ ಬಳಿ 10 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇದೆ. ಶ್ರವಣಬೆಳಗೊಳದಲ್ಲಿ ₹ 3 ಕೋಟಿ ವೆಚ್ಚದಲ್ಲಿ 15 ಲಕ್ಷ ಲೀಟರ್‌ ಸಾಮರ್ಥ್ಯದ ಎಸ್‌ಟಿಪಿ ಘಟಕ ತೆರೆಯಲಾಗಿದೆ.

ಕಾವೇರಿ ಕಲುಷಿತ: ‘ಜೀವನದಿ’ ಕಾವೇರಿಯು, ತನ್ನ ಉಗಮ ಸ್ಥಳವಾದ ಕೊಡಗಿನಲ್ಲೇ ಕಲುಷಿತಗೊಂಡು ಮುಂದಕ್ಕೆ ಹರಿಯುತ್ತಿದ್ದಾಳೆ. ಕಾಫಿ ಕೊಯ್ಲು ಸಂದರ್ಭದಲ್ಲಿ ನದಿ ಬದಿಯ ಎಸ್ಟೇಟ್‌ಗಳಲ್ಲಿ ಕಾಫಿ ಪಲ್ಪಿಂಗ್‌ ಮಾಡಿದ ಕಲುಷಿತ ನೀರನ್ನು ನೇರವಾಗಿ ನದಿಗೆ ಹರಿಯಬಿಡಲಾಗುತ್ತಿದೆ. ನೂರಾರು ಹೋಂಸ್ಟೇಗಳು ನಿರ್ಮಾಣಗೊಂಡಿದ್ದು ಅವುಗಳ ಕಲುಷಿತ ನೀರೂ ಕಾವೇರಿಯ ಒಡಲು ಸೇರುತ್ತಿದೆ. ಶುದ್ಧೀಕರಣ ಘಟಕ ಅಳವಡಿಕೆ ಮಾಡಿಕೊಳ್ಳುವಂತೆ ಹೋಂಸ್ಟೇ ಮಾಲೀಕರು ಹಾಗೂ ನದಿ ಬದಿಯ ಕಾಫಿ ಬೆಳೆಗಾರರಿಗೆ ಸೂಚನೆ ನೀಡಿದ್ದರೂ ಅವರು ಕ್ಯಾರೆ ಎನ್ನುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.