ADVERTISEMENT

ಸಂಗತ| ಹೆಸರಿಗೆ ಮಾತ್ರ ‘ಕಲ್ಯಾಣ’

ಏನೆಲ್ಲಾ ಇದ್ದೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ಸಾಮಾಜಿಕ ಸ್ಥಾನಮಾನ ಎಲ್ಲದರಲ್ಲಿ ಕಲ್ಯಾಣ ಕರ್ನಾಟಕಕ್ಕೆ ಕಟ್ಟಕಡೆಯ ಸ್ಥಾನ. ಯಾಕಿರಬಹುದು?

ಮಲ್ಲಿಕಾರ್ಜುನ ಕಡಕೋಳ
Published 16 ಸೆಪ್ಟೆಂಬರ್ 2021, 19:33 IST
Last Updated 16 ಸೆಪ್ಟೆಂಬರ್ 2021, 19:33 IST
Sangatha 17-09-2021.jpg
Sangatha 17-09-2021.jpg   

ಐವರು ಸಂಸದರು, ಎಂಎಲ್‌ಸಿಗಳು ಸೇರಿದಂತೆ ಎಪ್ಪತ್ತು ಮಂದಿ ಶಾಸಕರು, ಲೆಕ್ಕವಿಲ್ಲದಷ್ಟು ಮಂದಿ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು... ಹೀಗೆ ಜನಪ್ರತಿನಿಧಿಗಳು ಮತ್ತು ನೇಮಕಾತಿ ಪ್ರತಿನಿಧಿ ಗಳಿಂದ ಕಲ್ಯಾಣ ಕರ್ನಾಟಕ ತುಂಬಿ ತುಳುಕುತ್ತಿದೆ. ಹೆಸರಿಗೆ ಕಲ್ಯಾಣ ಕರ್ನಾಟಕ ಆಗಿ ಎರಡು ವರ್ಷಗಳು ಕಳೆದುಹೋದವು. ಜನರ ಉಸಿರಲ್ಲಿ ಮಾತ್ರ ಮತ್ತದೇ ಹಳೆಯ ಹೈದರಾಬಾದ್ ಕರ್ನಾಟಕದ ನಿಟ್ಟುಸಿರುಗಳು.

ಮೂರು ಬಾರಿ ಮುಖ್ಯಮಂತ್ರಿ ಅವಕಾಶ, ಹತ್ತಾರು ಬಾರಿ ಕೇಂದ್ರದ ಸಚಿವ ಸ್ಥಾನ ದೊರಕಿದೆ. ಲೆಕ್ಕವಿಲ್ಲದಷ್ಟು ಬಾರಿ ರಾಜ್ಯದ ಮಂತ್ರಿ, ನಿಗಮ, ಮಂಡಳಿಗಳ ಅಧಿಕಾರ ಸಿಕ್ಕಿದೆ. ಸಾಲದ್ದಕ್ಕೆ 371(ಜೆ) ಸೌಲಭ್ಯ. ನೋಡುವವರ ಕಣ್ಣಿಗೆ ಇನ್ನೇನು ಬೇಕು ಎನ್ನುವಷ್ಟು ಅವಕಾಶಗಳ ತೋರಿಕೆಗಳು. ತುಂಬಿ ಹರಿವ ಕೃಷ್ಣೆ, ಭೀಮೆ, ತುಂಗಭದ್ರೆ, ಇತರೆ ಸಣ್ಣಪುಟ್ಟ ಉಪನದಿಗಳು. ಎರಡು ಬೃಹತ್ ಪ್ರಮಾಣದ ಅಣೆಕಟ್ಟುಗಳು. ಒಂದೆರಡು ವಿಮಾನ ನಿಲ್ದಾಣಗಳು. ಐದಾರು ವಿಶ್ವ ವಿದ್ಯಾಲಯಗಳು. ಕುಳುಬಾನ ಒಟ್ಟಿದಂತೆ ಪುಸ್ತಕಗಳನ್ನು ಪ್ರಕಟಿಸಿದ, ತಿಂಗಳಿಗೆ ಲಕ್ಷಗಟ್ಟಲೆ ಪಗಾರ ಪಡೆಯುವ ನೂರಾರು ಮಂದಿ ಪ್ರಾಧ್ಯಾಪಕರು... ಹೀಗೆ ಕಣ್ಣಿಗೆ ನೆದರಾಗುವಷ್ಟು ಅವಕಾಶಗಳ ಪಟ್ಟಿಗಳು.

ಇಷ್ಟೆಲ್ಲಾ ಇದ್ದೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಕಟ್ಟಕಡೆಯ ಸ್ಥಾನ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಸಾಮಾಜಿಕ ಸ್ಥಾನಮಾನ ಎಲ್ಲದರಲ್ಲೂ ಕೊನೆಯ ಸ್ಥಾನಮಾನ. ಯಾಕಿರಬಹುದು? ನಾವು ಹಿಂದುಳಿದಿದ್ದೇವೆಯೇ? ಅಥವಾ ಹಿಂದುಳಿಸಲ್ಪಟ್ಟಿದ್ದೇವೆಯೇ?

ADVERTISEMENT

ಈ ಭಾಗದ ರಾಜಕಾರಣಿಗಳು ತಮಗೆ ರಾಜಕೀಯ ವಾಗಿ ಸಿಗಬಹುದಾದ ಅಗತ್ಯ ಅವಕಾಶಗಳನ್ನು ಸಾದ್ಯಂತವಾಗಿ ಪಡೆದುಕೊಂಡಿದ್ದಾರೆ. ಒಮ್ಮೊಮ್ಮೆ ಭರ್ಜರಿಯಾಗಿ ಹೈ.ಕ. ಎಂಬ ಹಿಂದುಳಿದ ಹೆಸರಲ್ಲಿ ಎಲ್ಲ ಹೊಡೆದುಕೊಂಡಿದ್ದಾರೆ. ಹೀಗೆ ಪಡಕೊಂಡು ಮತ್ತು ಹೊಡಕೊಂಡು ಎಪ್ಪತ್ತೈದು ವರ್ಷಗಳು ಕಳೆದು ಹೋಗುತ್ತಿರುವಾಗ ಎಲ್ಲ ಪಕ್ಷಗಳ ರಾಜಕಾರಣಿಗಳು ಯಾವತ್ತಾದರೂ ತಮ್ಮ ‘ಆತ್ಮವಂಚನೆ’ ಕುರಿತು ಆತ್ಮಾವಲೋಕನ ಮಾಡಿಕೊಂಡಿದ್ದಾರೆಯೇ? ಖಂಡಿತಾ ‘ಇಲ್ಲ’ ಎನಿಸುತ್ತದೆ. ಅವರ ಮೋಜು ಮಸ್ತಿ ಮೇಜವಾನಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನೂ ಯಾವುದೇ ದರಕಾರ ಇಲ್ಲದೇ ದಕ್ಕಿಸಿಕೊಂಡಿದ್ದಾರೆ. ಜನರ ಕುರಿತು ಧೇನಿಸುವ ಹರಕತ್ತು ಅವರಿಗಿರುವುದಿಲ್ಲ. ಆದರೆ ಜನರು ಮಾತ್ರ ತಮ್ಮ ಬವಣೆಗಳ ಕುರಿತು ತಾವೇ ಯೋಚಿಸಬೇಕಾದ ದುಃಸ್ಥಿತಿ ಮುಂದುವರಿದಿದೆ.

ಅಷ್ಟಕ್ಕೂ ರಾಜಕೀಯ ಅಧಿಕಾರದಿಂದಲೇ ಒಂದು ಪ್ರದೇಶದ ಅಭಿವೃದ್ಧಿ ಸಾಧ್ಯವೇ? ವರ್ಷದಲ್ಲಿ ನಮಗೆ ಎರಡೆರಡು ಸ್ವಾತಂತ್ರ್ಯ ಉತ್ಸವ ಆಚರಿಸುವ ಅವಕಾಶಗಳು. ಒಂದು ಮಾತು ಮಾತ್ರ ಖರೇ. ಅದೇನೆಂದರೆ ಕಲ್ಯಾಣ ಕರ್ನಾಟಕಕ್ಕೆ ದೊರಕಿರುವ ಸರ್ಕಾರಿ ಅವಕಾಶಗಳಿಂದ ರಾಜಕಾರಣಿಗಳು ಮತ್ತು ಬಹುಪಾಲು ಅಧಿಕಾರಿಗಳು ಮಾತ್ರ ಸೊಂಪಾಗಿದ್ದಾರೆ. ನಮ್ಮ ಭಾಗದ ಶಾಸಕ ಮಹಾಶಯರು ತಮಗೆ ಸರ್ಕಾರ ನೀಡುವ ಅನುದಾನವನ್ನು ನೆಟ್ಟಗೆ ಉಪಯೋಗಿಸುವ ಗೋಜಿಗೂ ಹೋಗದವರು. ಎಲ್ಲದಕ್ಕೂ ‘ಜಾಂದೇ ಚೋಡೋ’ ಎನ್ನುವ ವಾಡಿಕೆ. ಈ ಬಾರಿ ಕಲಬುರ್ಗಿ ಜಿಲ್ಲೆಯ ಶಾಸಕ ಮಹಾನುಭಾವರು ತಮ್ಮ ಅನುದಾನದಲ್ಲಿ ಶೇಕಡ 7.5ರಷ್ಟು ಮಾತ್ರ ಬಳಕೆ ಮಾಡಿಕೊಂಡಿದ್ದಾರೆ. ಇದು ಬರೀ ಕಲಬುರ್ಗಿಯ ಕತೆಯಲ್ಲ, ಇತರ ಜಿಲ್ಲೆಗಳೂ ಇದಕ್ಕೆ ಹೊರತಾಗಿಲ್ಲ. ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಕೈಯಲ್ಲಿರುವ ಎರಡು ಕೋಟಿ ರೂಪಾಯಿ ಖರ್ಚು ಮಾಡುವ ಅವಕಾಶವನ್ನೇ ಸದುಪಯೋಗ ಮಾಡಿಕೊಳ್ಳ
ದವರಿಂದ ಹೊಸ ಯೋಜನೆಗಳು, ಯೋಚನೆಗಳನ್ನು ನಿರೀಕ್ಷಿಸಲು ಸಾಧ್ಯವೇ?

ಹೆಚ್ಚೆಂದರೆ ಚುನಾವಣೆಯಲ್ಲಿ ಇವರನ್ನು ಸೋಲಿಸಬಹುದು. ಆದರೆ ನಂತರ ಆರಿಸಿ ಬರುವವರೂ ಇಂತಹವರೇ ಆಗಿರುತ್ತಾರೆ. ಹಾಗೆಂದು ಪರ್ಯಾಯ ಪರಿಹಾರವೇ ಇಲ್ಲವೆಂದೇನಿಲ್ಲ. ಇದೆ, ಅದನ್ನು ಪ್ರಯೋಗ ಮಾಡಿ ನೋಡಬೇಕಾಗಿದೆ.

ಕೇವಲ ಚುನಾವಣೆಗಳ ಸೋಲು ಗೆಲುವುಗಳೇ ಜನಪ್ರತಿನಿಧಿಯನ್ನು ಹದ್ದುಬಸ್ತಿನಲ್ಲಿಡುವ ಮತ್ತು ಪ್ರದೇಶ ಅಭಿವೃದ್ಧಿಯ ಮಾನದಂಡಗಳಲ್ಲ. ಜನ ಪ್ರತಿನಿಧಿಗಳು ಗೆದ್ದ ಮೇಲೆ ಹೆಚ್ಚು ಹತ್ತಿರವಾಗುವುದು ಬೆಂಗಳೂರಿಗೆ. ಅದರ ಜತೆಗೆ ಪ್ರಭುತ್ವದ ಕುರ್ಚಿಗೆ. ಅಬ್ಬಬ್ಬಾ ಅಂದರೆ ತಾವೇ ಸಾಕಿಕೊಂಡ ತಮ್ಮ ಭಟ್ಟಂಗಿಗಳಿಗೆ ತುಸು ಹತ್ತಿರವಾಗಿರಬಲ್ಲರು.

ಅವರು ಇನ್ನೂ ಇಂತಹ ಹತ್ತು ಹಲವು ಅಪಸವ್ಯಗಳ ಆಗರವೇ ಆಗಿರುತ್ತಾರೆ. ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ಸದಸ್ಯನವರೆಗೂ ಯಾರೇ ಆಗಿರಲಿ, ಅವರು ಜನರಿಗೆ ಹೆಚ್ಚು ಹತ್ತಿರವಾಗಿರುವಂತೆ, ಸ್ಥಳೀಯ ಸಮಸ್ಯೆಗಳಿಗೆ ಕರಾರುವಾಕ್ಕಾಗಿ ಸ್ಪಂದಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಮತದಾರರ ಸಾರ್ವತ್ರಿಕ ಹೊಣೆ.

ಇದು ಪಕ್ಷಾತೀತ ರಾಜಕೀಯ ಪ್ರಜ್ಞೆಯಾಗಿ ಅಭಿವೃದ್ಧಿಗೊಳ್ಳಬೇಕು. ತಾವಿರುವ ಪಕ್ಷಗಳ ಕಾರ್ಯಕರ್ತ ರಂತೆ ಮಾತನಾಡುವುದನ್ನೇ ರಾಜಕೀಯ ಪ್ರಜ್ಞೆ ಎಂದು ನಾವೆಲ್ಲ ತಪ್ಪಾಗಿ ತಿಳಿದುಕೊಂಡಿದ್ದೇವೆ. ದುರಂತವೆಂದರೆ, ಇದನ್ನು ತಿಳಿಸಿ ಹೇಳುವವರ ಕೊರತೆ. ಹೇಳಿದರೂ ಸಮಾಧಾನದಿಂದ ಕೇಳುವವರ ಕೊರತೆ. ಕಡೆಯಪಕ್ಷ ನಾವು ಇರುವ ವಾಸ್ತವ ಒಪ್ಪಿಕೊಳ್ಳುವುದನ್ನು ಕಲಿಯಬೇಕಿದೆ. ಅದಕ್ಕೆ ಬದಲು ಕೊಂಬು ಕಿತ್ತ ಕಳಗಿಯಂತೆ ವರಾ... ವರಾ... ಒದರುವುದನ್ನು ಕಲಿತಿದ್ದೇವೆ. ಅದನ್ನಾದರೂ ಬಿಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.