ADVERTISEMENT

ಸಂಗತ: ಹಸಿರಿನ ಹಸಿವು ನೀಗುವುದು ಹೇಗೆ?

ತೋರಣಗಟ್ಟೆಯ ಜನರು ಬರದ ನಾಡಿನ ಸಂಕಷ್ಟ ದಾಟಲೊಂದು ಸ್ವಂತದ ದಾರಿ ಕಂಡುಕೊಂಡಿದ್ದಾರೆ

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 4 ಮೇ 2021, 20:20 IST
Last Updated 4 ಮೇ 2021, 20:20 IST
   

‘ಬಳ್ಳಾರಿಗೆ ಇರುವುದು ಎರಡೇ ಕಾಲ. ಒಂದು ಬೇಸಿಗೆ ಮತ್ತೊಂದು ಕಡುಬೇಸಿಗೆ, ಅಷ್ಟೇ’ ಅಂದಿದ್ದರು ಹಾಸ್ಯಬ್ರಹ್ಮ ಬೀಚಿ. ಹೌದು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬರ, ಒಣಹವೆ, ಅನಾವೃಷ್ಟಿ, ಕುಡಿಯುವ ನೀರಿನ ಅಭಾವವನ್ನು ನಿರಂತರವಾಗಿ ಅನುಭವಿಸುತ್ತಲೇ ಬಂದಿವೆ. ಬಾಧಿಸುತ್ತಲೇ ಇರುವ ಇಂಥ ಸಂಕಷ್ಟಗಳನ್ನು ಮೀರುವ ಹಾದಿಯಲ್ಲಿ ಪ್ರಯತ್ನಗಳು ಕೂಡ ಅಲ್ಲಲ್ಲಿ ಸದ್ದಿಲ್ಲದೇ ಸಾಗಿವೆ.

ಹೊರಜಗತ್ತು ಕೊರೊನಾ ವೈರಾಣುವಿನ ಆತಂಕದಲ್ಲಿ ನಲುಗುತ್ತಿರುವ ಹೊತ್ತಿನಲ್ಲಿಯೇ ಶ್ರಮಿಕವರ್ಗದ ದೂರದೃಷ್ಟಿಯ ಕಸುವಿಗಲ್ಲಿ ಜೀವಬಂದಿದೆ. ಭೂಪರಿಸರಕ್ಕೆ ಬಲ ತುಂಬುವುದರ ಜೊತೆಗೆ ರಾಜಸ್ಥಾನದ ನಂತರದಲ್ಲಿ ತೀವ್ರಗತಿಯಲ್ಲಿ ಮರು
ಭೂಮೀಕರಣಗೊಳ್ಳುತ್ತಿರುವ ಕರುನಾಡಲ್ಲಿ ಹಳ್ಳಿಯೊಂದರ ಹಸಿರಿನ ಹೆಜ್ಜೆಗಳು ಮಹತ್ವವೂ ಮಾದರಿಯೂ ಆಗಿವೆ.

ಅದು ರಾಜ್ಯದಲ್ಲಿಯೇ ಕಡಿಮೆ ಮಳೆ ಪಡೆಯುವ (ವಾರ್ಷಿಕ ಸರಾಸರಿ 556 ಮಿ.ಮೀ) ಬಯಲುಸೀಮೆಯ ಹಳ್ಳಿ. ನಾಡಿನ ಶಾಶ್ವತ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿರುವ ಜಾಗವೂ ಹೌದು. ಅದು, ಜಗಳೂರು ತಾಲ್ಲೂಕಿನ ‘ತೋರಣಗಟ್ಟೆ’. ಬಿಸಿಲ ಧಗೆ, ಬರದ ಬೇಗೆ, ಒಲಿಯದ ಮಳೆ, ಬೆಳೆನಾಶ, ಅಂತರ್ಜಲ ಕುಸಿತ, ಜೀವಜಲಕ್ಕಾಗಿಯ ಪರದಾಟಗಳೆಲ್ಲಾ ಅಲ್ಲಿಯ ಮಾಮೂಲು ಕಥೆ ಮತ್ತು ವ್ಯಥೆ. ಕಾಡುವ ಇಂತಹ ಸಂಕಟಗಳನ್ನು ತಮ್ಮದೇ ಮಾರ್ಗದಲ್ಲಿ ದಾಟಿಬಿಡಬೇಕೆಂಬ ಹಂಬಲದಲ್ಲಿ ತಣ್ಣಗೆ ಶುರುವಾಗಿದ್ದೇ ಸಾಮೂಹಿಕ ‘ಗಿಡ ನೆಡುವ ಕಾಯಕ’.

ADVERTISEMENT

ನರೇಗಾ ಯೋಜನೆಯಡಿ ಊರಕೆರೆಗೆ ಪುನರ್ಜೀವ ನೀಡುವ ಕಾಯಕದಲ್ಲಿ ಹೂಳು ತೆಗೆದವರು ನೀರು ತುಂಬಿಕೊಳ್ಳಲು ಮಳೆಗಾಗಿ ಮುಗಿಲಿಗೆ ಮುಖಮಾಡಿ ಕೂತಿದ್ದರು. ಮರಗಿಡಗಳನ್ನು ಬೆಳೆಸುವ ಕೆಲಸ ಮಲೆನಾಡಿಗಷ್ಟೇ ಸೀಮಿತ ಮತ್ತದು ಕೇವಲ ಅರಣ್ಯ ಇಲಾಖೆಯ ಕರ್ತವ್ಯವೆಂಬ ದೃಷ್ಟಿಕೋನ ಅಲ್ಲಿಯೂ ಇತ್ತು. ಆದರೀಗ ‘ಕತ್ತಲನ್ನು ಶಪಿಸುತ್ತಾ ಕೂರುವ ಬದಲು ಪುಟ್ಟದೊಂದು ಹಣತೆ ಹಚ್ಚುವ ಕೆಲಸವೇ ಮೇಲು’ ಎಂಬುದನ್ನರಿತ ಊರಿನ ಉತ್ಸಾಹಿ ಯುವಮನಸುಗಳು ತಮ್ಮೊಳಗೆ ಮೊಳಕೆಯೊಡೆದ ವಿಚಾರವನ್ನು ಊರ ಹಿರಿಯರೊಡನೆ ಚರ್ಚಿಸಿದರು. ಬರದ ನಾಡಿನ ಶಾಶ್ವತ ಸಮಸ್ಯೆಗೆ ಸ್ವಯಂ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಎರಡು ವರ್ಷಗಳಲ್ಲಿ ಹತ್ತು ಸಾವಿರ ಗಿಡ ನೆಡುವ ಯೋಜನೆ ಸಿದ್ಧಪಡಿಸಿದರು.

ಬೀದಿಗಳು, ಶಾಲೆಯ ಆವರಣ, ದೇವಸ್ಥಾನ, ಗೋಮಾಳ, ಬೋಳುಗುಡ್ಡ, ಕೆರೆದಂಡೆ, ಗದ್ದೆ ಯಂಚು ಸೇರಿದಂತೆ ಸ್ಥಳಾವಕಾಶ ಇದ್ದಲ್ಲೆಲ್ಲಾ ಹಸಿರುಹೊದಿಕೆ ಹೊದಿಸುವ ಕೈಂಕರ್ಯವನ್ನು ಕೈಗೊಂಡಿದ್ದಾಯ್ತು. ಪೂರ್ತಿ ಊರಿಗೂರೇ ಗಿಡ ನೆಡುವ ಕಾಯಕದಲ್ಲಿ ಪಾಲ್ಗೊಂಡಿತು.

ಎಲ್ಲ ವರ್ಗವನ್ನೂ ಒಳಗೊಂಡ ಸುಮಾರು 1,500 ಕುಟುಂಬಗಳಿರುವ ಜೇನುಗೂಡಿನಂತಹ ಊರಲ್ಲಿ ಕನಿಷ್ಠ ಮನೆಗೆರಡು ಗಿಡ ನೆಟ್ಟು ರಕ್ಷಿಸಿಕೊಳ್ಳುವ ಹೊಣೆಯನ್ನು ಮನೆಮಂದಿಯೇ ಸ್ವಇಚ್ಛೆಯಿಂದ ವಹಿಸಿಕೊಂಡರು. ಊರವರ ಹಸಿರ ಹಸಿವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅರಣ್ಯ ಇಲಾಖೆಯು ಒಣಭೂಮಿಗೆ ಸೂಕ್ತವಾದ ಬಹುವಿಧದ ಅರಳಿ, ಹೊಂಗೆ, ಬೇವು, ಹುಣಸೆ, ನೇರಳೆ, ಮಾವು, ಸಂಪಿಗೆಯಂತಹ ಉಪಯುಕ್ತ ಸಸಿಗಳನ್ನು ಪೂರೈಸಿತು.

ಕಳೆದ ಜೂನ್ 5ರಂದು ಗಿಡ ನೆಡುವ ಮೂಲಕ ಅಭಿಯಾನವು ಸಾಂಕೇತಿಕವಾಗಿ ಆರಂಭಗೊಂಡಿತು. ಅಂದು ಊರಲ್ಲಿ ಹಬ್ಬದ ವಾತಾವರಣ. ಸಡಗರದಿಂದಲೇ ಎಲ್ಲರೂ ಸೇರಿಕೊಂಡು ಸಣ್ಣ ತಯಾರಿಯೊಂದಿಗೆ ತಲಾ ಎಂಟ್ಹತ್ತು ಗುಂಡಿ ತೆಗೆದರು. ಮುಂದೆ, ಗಿಡ ನೆಟ್ಟು, ನೀರುಣಿಸಿ, ಬೇಲಿ ಮಾಡುವ ಮೂಲಕ ಮೊದಲ ಹಂತದಲ್ಲಿ 2,000 ಸಸಿಗಳನ್ನು ನೆಡಲಾಯಿತು. ಮನೆಯೆದುರಿನ ಗಿಡಗಳನ್ನು ತಾವೇ ಜತನದಿಂದ ಸಾಕುತ್ತಿದ್ದು, ಅವುಗಳ ಬೇಲಿಕೋಲು, ನೀರು, ಗೊಬ್ಬರ, ಔಷಧಗಳಂತಹ ಆರೈಕೆಯಲ್ಲಿ ಹಿಗ್ಗುತ್ತಾರೆ. ಸಾಮಾನ್ಯಜನರು ದೂರದ ಕೈಪಂಪುಗಳನ್ನು ಜಗ್ಗಿತಂದು ಮನೆಮುಂದಿನ ಮತ್ತು ರಸ್ತೆಬದಿಯ ಗಿಡಗಳಿಗೆ ನೀರುಣಿಸುತ್ತಿರುವ ದೃಶ್ಯ ನಿಜಕ್ಕೂ ಹೊರಜಗತ್ತಿಗೆ ಮಾದರಿಯ ನಡೆ. ಬೆಳೆಸುವ ಗಿಡ ತಮ್ಮದೆನ್ನುವ ಪ್ರೀತಿ ಮತ್ತು ಮನೆಯ ಸದಸ್ಯರು ಗಿಡದೊಟ್ಟಿಗೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುವ ಪರಿ ಅಚ್ಚರಿ ಹುಟ್ಟಿಸುತ್ತದೆ.

ಗಮನಿಸಬೇಕಾದ್ದೇನೆಂದರೆ, ಅಲ್ಲೀಗ ಓದು, ವಯೋಮಾನಗಳಾಚೆಗೆ ಪರಿಸರ ಪ್ರಜ್ಞೆಯೊಂದು ಜಾಗೃತವಾಗಿದೆ. ತಮ್ಮ ಇಂದು-ನಾಳೆಗಳನ್ನು ತಂಪಾಗಿರಿಸಲು ಒಳಗೊಳ್ಳುವಿಕೆಯ ಬಲದಲ್ಲಿ ಬರದ ಛಾಯೆಯನ್ನು ಸರಿಸಿಬಿಡಬೇಕೆನ್ನುವ ಹಂಬಲ ಹೊತ್ತಿರುವ ಊರೀಗ ಹಸಿರು ಸೇನೆಯಂತಾಗಿದೆ.

ನಿಜ, ವರ್ಷವೂ ವನಮಹೋತ್ಸವದ ಹೆಸರಿನಲ್ಲಿ ನೆಡುವಂತಹ ಲಕ್ಷಗಟ್ಟಲೆ ಗಿಡಗಳಲ್ಲಿ ಬದುಕುಳಿಯುವುದು ಬೆರಳೆಣಿಕೆಯಷ್ಟು ಮಾತ್ರ. ನೆಡುವ ಗಿಡಗಳನ್ನೆಲ್ಲಾ ಬದುಕಿಸಿಕೊಂಡಿದ್ದರೆ ಇಷ್ಟೊತ್ತಿಗೆ ರಾಜ್ಯದ ಭೂಪಟದಲ್ಲಿ ಹಸಿರುಬಣ್ಣದ ಹರವು ವಿಸ್ತರಿಸ
ಬೇಕಿತ್ತು. ಹಾಗಾಗಿ, ಗಿಡ ನೆಡುವುದಷ್ಟೇ ಮುಖ್ಯವಲ್ಲ, ನೆಡುವಾಗಿನ ಉತ್ಸಾಹ, ಕಾಳಜಿಯನ್ನು ನಿರಂತರವಾಗಿ ಸಾಕಿಕೊಂಡು, ಗಿಡಗಳನ್ನು ಮರವಾಗುವಂತೆ ಕಾಪಾಡಿಕೊಳ್ಳುವುದು ಕೂಡ ನಮ್ಮ ಜವಾಬ್ದಾರಿಯೇ.

ನೆಲಪದರಕ್ಕೆ ಹಸಿರು ಹೊದೆಸುವಂತಹ ಮಹತ್ವದ ಪ್ರಯತ್ನಕ್ಕೆ ತೆರೆದುಕೊಳ್ಳುತ್ತಿರುವ ಬರದ ನಾಡಿನ ಪುಣ್ಯಕಾರ್ಯವು ಎಲ್ಲೆಡೆಗೂ ವ್ಯಾಪಿಸಲಿ. ಜೊತೆಗದು ಪರಿಸರಾಸಕ್ತಿಯಾಗಿ ಆಂದೋಲನದ ರೂಪ ಪಡೆಯಲಿ ಎಂಬುದು ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.