ADVERTISEMENT

ಚುರುಮುರಿ| ಬ್ಯಾಗಿನಲ್ಲಿ ಕುರ್ಚಿ

ಸುಮಂಗಲಾ
Published 18 ಜುಲೈ 2021, 19:31 IST
Last Updated 18 ಜುಲೈ 2021, 19:31 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

‘ಬ್ರೇಕ್ ಇನ್‌ಸ್ಪೆಕ್ಟರ್ ಆಗಾಕೆ ಏನು ಓದಬಕು?’ ಮೊನ್ನೆ ಬೆಕ್ಕಣ್ಣ ಬಲು ಗಂಭೀರವಾಗಿ ಕೇಳಿತು.

‘ಏನರ ಡಿಗ್ರಿ ಮಾಡಿರಬಕು... ನಿನಗೆದಕ್ಕಲೇ’ ಎಂದೆ.

‘ಬ್ರೇಕ್ ಇನ್‌ಸ್ಪೆಕ್ಟರ್ ಆಗತೀನಿ. 30 ಅಲ್ಲದಿದ್ದರೂ ಒಂದಾದರೂ ಸೈಟು ಮಾಡಬೌದು’ ಎಂದಿತು.

ADVERTISEMENT

ಮೊನ್ನೆ ಪೇಪರಿನಲ್ಲಿ ಬ್ರೇಕ್ ಇನ್‌ಸ್ಪೆಕ್ಟರ್ ಒಬ್ಬರು 30 ನಿವೇಶನ ಸೇರಿ ಬಹಳಷ್ಟು ಆಸ್ತಿಪಾಸ್ತಿ ಮಾಡಿದ್ದಾರೆಂದು ಓದಿದಾಗಿನಿಂದ ಬೆಕ್ಕಣ್ಣನ ತಲೆಯಲ್ಲಿ ಇದೇ ಹುಳ ಓಡಾಡುತ್ತಿತ್ತು ಅಂತ ಕಾಣುತ್ತೆ.

‘ಬರೀ ಓದಿದ್ರೆ ಆಗಂಗಿಲ್ಲ, ಬೆರಿಕಿತನ, ಚಾಣಾಕ್ಷತನ ಬೇಕು, ಮೊದ್ಲು ಇಲಿ ಹಿಡಿಯೂದ ಕಲಿ’ ಎಂದು ಬೈದೆ.

ತದನಂತರ ನಿನ್ನೆ ಟಿ.ವಿ. ರಿಪೋರ್ಟರ್ ಆಗಿ ಬ್ರೇಕಿಂಗ್ ನ್ಯೂಸ್ ಬಿತ್ತರಿಸುವ ಹುಳ ತಲೆಗೆ ಹೊಕ್ಕಿತ್ತು. ಮೈಕ್ ಹಿಡಿದು, ನಟಿಸುತ್ತ ‍ಪ್ರ್ಯಾಕ್ಟೀಸ್ ಮಾಡುತ್ತಿತ್ತು. ಆಮೇಲೆ ಕಾವೇರಕ್ಕಂಗೆ ವಿಡಿಯೊ ಕಾಲ್ ಮಾಡಿತು. ‘ಕಾವೇರಕ್ಕ... ಇದನ್ನೆಲ್ಲ ನೋಡುದ್ರೆ, ಕೇಳುದ್ರೆ ಏನನ್ನಿಸುತ್ತೆ ನಿಮಗೆ’ ಸ್ಟೈಲಾಗಿ ಕೇಳಿತು.

‘ಯಾರನ್ನೂ ಅಡ್ಡ ಮಲಗಸಾದು ಬ್ಯಾಡ, ವಣ ತೌಡುಕುಟ್ಟೂದು ಬ್ಯಾಡ...ಗಣಿಗಾರಿಕೆ ನಿಲ್ಲಿಸುದ್ರೆ ಕೆಆರ್‌ಎಸ್ ಬಿರುಕಷ್ಟೇ ಅಲ್ಲ, ಭೂಮ್ತಾಯಿನೂ ತಣ್ಣಗಿರತಾಳೆ’.

‘ಮತ್ತೆ ಅತ್ ಕಡೆ ನಿಮ್ಮ ಗಂಗಕ್ಕಾರು ಹೆಂಗದಾರಂತೆ ಈಗ?’

‘ಸೆಂದಾಗವಳೆ. ವಿಶ್ವದಾಗೆ ಉತ್ತರಪ್ರದೇಶ ಅತ್ಯುತ್ತಮ ಕೋವಿಡ್ ನಿರ್ವಹಣೆ ಮಾಡೈತಂತ ಪ್ರಧಾನಿಗಳೇ ಹೊಗಳವ್ರೆ. ಕೊರೊನಾಗೆ ಅಂಜಿ ಅಲ್ಲ, ಸುಪ್ರೀಂ ಚಾಟಿಗೆ ಅಂಜಿ ಕಾವಂಡ್ ಯಾತ್ರೆ ಪವಿತ್ರಸ್ನಾನ ರದ್ದು ಮಾಡಿದ್ರು’ ಕಾವೇರಕ್ಕ ಮುಗುಮ್ಮಾಗಿ ಹೇಳಿದಳು.

ಬೆಕ್ಕಣ್ಣನ ಮುಂದಿನ ವಿಡಿಯೊ ಕಾಲ್ ದೆಹಲಿಯಿಂದ ವಾಪಸಾಗಿ ವಿಮಾನ ಇಳಿಯುತ್ತಿದ್ದ ಯೆಡ್ಯೂರಜ್ಜಾರಿಗೆ. ‘ಆರು ದೊಡ್ಡ ಬ್ಯಾಗಿನಲ್ಲಿ ಏನೋ ತಗಂಡು ಹೋಗಿದ್ರಂತೆ...’ ಬೆಕ್ಕಣ್ಣನ ಪ್ರಶ್ನೆಗೆ ಯೆಡ್ಯೂರಜ್ಜಾರು ದೇಶಾವರಿ ನಕ್ಕರು.

‘ಮುಖ್ಯಮಂತ್ರಿ ಕುರ್ಚಿ ಬೋಲ್ಟು ಟೈಟು ಮಾಡಿಸಾದು ಅಲ್ಲೇ, ಅದಕ್ಕೇ ಕುರ್ಚಿನ ಬಿಚ್ಚಿ ತಗಂಡು ಹೋಗಿದ್ದೆ. ಈಗ ಎಲ್ಲಾ ಟೈಟು’.

‘ಬ್ಯಾಗಿನಲ್ಲಿ ಕುರ್ಚಿ’ ಎಂದು ಬೆಕ್ಕಣ್ಣ ಬ್ರೇಕಿಂಗ್ ನ್ಯೂಸ್ ವದರಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.