ADVERTISEMENT

PV Web Exclusive: ರೋಗಿಗಳ ಪಾಲಿಗೆ ’ಕುಸುಮ’ ಈ ವೈದ್ಯ

ಪೈಲೆಟ್ ಆಗಬೇಕಿದ್ದವರು ವೈದ್ಯರಾದರು

ಡಿ.ಕೆ.ಬಸವರಾಜು
Published 9 ಅಕ್ಟೋಬರ್ 2020, 4:33 IST
Last Updated 9 ಅಕ್ಟೋಬರ್ 2020, 4:33 IST
ಡಾ.ಸುರೇಶ್, ಹನಗವಾಡಿ
ಡಾ.ಸುರೇಶ್, ಹನಗವಾಡಿ   
""
""
""

ದಾವಣಗೆರೆ: ಪೈಲಟ್ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಹುಡುಗನಲ್ಲಿ ಕಾಣಿಸಿಕೊಂಡ ರೋಗ ಆತನನ್ನು ವೈದ್ಯನಾಗುವಂತೆ ಮಾಡಿತು. ಸೋದರ ಮಾವ ನೀಡಿದ ಸಲಹೆ ಜೀವನವನ್ನೇ ಬದಲಿಸಿತು.

ದಾವಣಗೆರೆಯ ಕರ್ನಾಟಕ ಹಿಮೊಫೀಲಿಯಾ ಸೊಸೈಟಿಯ ನಿರ್ಮಾತೃಡಾ.ಸುರೇಶ್ ಹನಗವಾಡಿ ಅವರ ಕಥೆ ಇದು.

ಹಿಮೊಫೀಲಿಯಾಗೆ ‘ಕುಸುಮ’ ರೋಗ ಎಂಬ ಇನ್ನೊಂದು ಅರ್ಥವಿದೆ. ರೋಗವನ್ನು ಒಡಲಲ್ಲಿಟ್ಟುಕೊಂಡಿರುವ ಸುರೇಶ್ ಹನಗವಾಡಿ ಅವರು ವೈದ್ಯರಾಗಿ ಇಂದು ಸಾವಿರಾರು ಹಿಮೊಫೀಲಿಯಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಹಲವು ಮಂದಿಗೆ ಚಿಕಿತ್ಸೆ ಮುಂದುವರೆಸುತ್ತಿದ್ದಾರೆ. ಇದಕ್ಕೆಬಾಲ್ಯದಲ್ಲಿ ನಡೆದ ಒಂದು ಘಟನೆಯೇ ಪ್ರೇರಣೆಯಾಯಿತು.

ADVERTISEMENT

ಸುರೇಶ್ ಹನಗವಾಡಿ ಅವರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ರಜೆಗಾಗಿ ಹರಿಹರಕ್ಕೆ ಬಂದರು. ಸೋದರ ಮಾವನಿಗೆ ಚಿಕಿತ್ಸೆಗಾಗಿ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಬಂದಾಗ ಅಲ್ಲಿನ ಹಿಮೊಫೀಲಿಯಾದಿಂದ ಆಂತರಿಕವಾಗಿ ರಕ್ತ ಸೋರಿಕೆ (ಇಂಟರ್ನಲ್ ಬ್ಲೀಡಿಂಗ್) ಆಗಿದ್ದು, ರಕ್ತ ಕೊಟ್ಟರೆ ಉಳಿಯುತ್ತೇನೆ ಎಂದು ಹನಗವಾಡಿ ಅವರ ಮಾವ ಅಲ್ಲಿನ ಓಪಿಡಿ ವೈದ್ಯರಲ್ಲಿ ಬೇಡಿಕೊಳ್ಳುತ್ತಾರೆ. ಏಕೆಂದರೆ ರೋಗ ಇರುವ ಬಗ್ಗೆ ಬೇರೆ ವೈದ್ಯರಿಂದ ವಿಷಯ ತಿಳಿದಿತ್ತು.

ಆಗ ಕೋಪಗೊಂಡ ಒಪಿಡಿ ವೈದ್ಯರು ‘ಚಿಕಿತ್ಸೆ ಬಗ್ಗೆ ನೀನು ನನಗೆ ಹೇಳುತ್ತೀಯಲ್ಲಾ. ಹಿಮೊಫೀಲಿಯಾ ಇದ್ದರೆ ರಿಪೋರ್ಟ್ ಕೊಡು‘ ಎಂದು ತಾಕೀತು ಮಾಡಿದರು. ಬೈದು ಪೇನ್ ಕಿಲ್ಲರ್ ಕೊಟ್ಟು ಕಳುಹಿಸಿದ್ದರು. ಆಗ ಸುರೇಶ್ ಹನಗವಾಡಿ ಅವರನ್ನು ಕರೆದ ಅವರ ಮಾವ ಹೇಳಿದ್ದು, ‘ನೋಡಪ್ಪಾ ಈ ರೋಗದ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ನೀನು ವೈದ್ಯನಾಗಬೇಕು. ಹಿಮೊಫೀಲಿಯಾ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಬೇಕು. ಇದಕ್ಕೆ ಪರಿಹಾರ ಹುಡುಕಬೇಕು‘. ಕೊನೆಗೆ ಅವರು ಹಿಮೊಫೀಲಿಯಾದಿಂದಲೇ ಮೃತಪಟ್ಟರು.

‘ಅಂದು ಹೇಳಿದ ಮಾತೇ ನನಗೆ ಸ್ಫೂರ್ತಿಯಾಯಿತು. ಜೊತೆಗೆ ತಂದೆ–ತಾಯಿಯಂದಿರ ಪ್ರೋತ್ಸಾಹ ಇನ್ನಷ್ಟು ಪ್ರೇರಣೆ ನೀಡಿತು. ಎಂಜಿನಿಯರ್ ಇಲ್ಲವೇ ಪೈಲಟ್ ಆಗಬೇಕು ಅಂದುಕೊಂಡಿದ್ದ ನಾನು ವೈದ್ಯನಾಗಲು ಇದು ಪ್ರೇರಣೆಯಾಯಿತು‘ ಎಂದು ನೆನಪಿಸಿಕೊಂಡರು.

ಪಿಯುಸಿ ಮುಗಿಸಿದ ಡಾ.ಸುರೇಶ್ ಹನಗವಾಡಿ ಅವರಿಗೆ ದಾವಣಗೆರೆಯ ಜೆಜೆಎಂ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಸಿಕ್ಕಿತು. ಅವರ ಮಾವನವರ ಒತ್ತಾಸೆಯೂ ಈಡೇರಿತು. ಅಂದೆಯೇ ಹಿಮೊಫೀಲಿಯಾಕ್ಕೆ ತುತ್ತಾಗಿದ್ದ ಡಾ. ಸುರೇಶ್ ಹನಗವಾಡಿ ಹಿಮೊಫೀಲಿಯಾ ರೋಗಿ ಎಂದು ಇಂಟರ್ನಲ್ ಬ್ಲೀಡಿಂಗ್ಸಮಸ್ಯೆಯನ್ನು ಸಹಪಾಠಿಗಳ ಜೊತೆ ಹೇಳಿಕೊಳ್ಳಲು ಆಗದೇ ಮನಸ್ಸಿನಲ್ಲಿಯೇ ವೇದನೆ ಅನುಭವಿಸಿದರು.

‘ರೋಗಿಗಳ ಬೆಡ್‌ ಬಳಿಯೇ ನಿಂತು ಪಾಠ ಕೇಳುವ ಸಂದರ್ಭ ಬಂದಾಗಲಂತೂ ನೀ ಜಾಯಿಂಟ್ ಬ್ಲೀಡಿಂಗ್ ಆಗಿ ರಕ್ತ ಸುರಿಯುತ್ತಿತ್ತು. ಒಂದು ವರ್ಷ ಪ್ರೀ ಫೈನಲ್‌ನಲ್ಲಿ ಕ್ಲಾಸ್‌ಗೆ ಹೋಗಲು ಆಗದೇ ಹೋದರೂ ಛಲ ಬಿಡಲಿಲ್ಲ. ನೋವನ್ನು ನುಂಗಿಕೊಂಡೇ ಕಲಿತೆ. ಕೊನೆಗೆ ಎಂಬಿಬಿಎಸ್ ಮುಗಿಸಿದೆ‘ ಎಂದು ಸ್ಮರಿಸಿಕೊಂಡರು.

ಹಿಮೊಫೀಲಿಯಾ ಸೊಸೈಟಿ ಹುಟ್ಟುಹಾಕಲು ಪಣ

‌ಎಂಬಿಬಿಎಸ್ ಮುಗಿಸಿದ ಮೇಲೆ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಿಮೊಫೀಲಿಯಾ ಇರುವ ಕುಟುಂಬಗಳ ವಿಳಾಸ ಕಲೆ ಪತ್ರ ಬರೆದು ಎಲ್ಲರೂ ಸೇರಿ ಒಂದು ಸಭೆ ನಡೆಸಿದರು. ಶಿಕ್ಷಕ ಎಂ.ಎಲ್.ಕುಲಕರ್ಣಿ ಪ್ರೋತ್ಸಾಹ ನೀಡಿದರು. ಶಿಷ್ಯವೇತನ ಬಳಸಿಕೊಂಡು 1988–99ರಲ್ಲಿಕರ್ನಾಟಕ ಹಿಮೊಫೀಲಿಯಾ ಸೊಸೈಟಿ ನೋಂದಣಿ ಮಾಡಿಸಿದರು.

ಕರ್ನಾಟಕ ಹಿಮೊಫಿಲಿಯಾ ಸೊಸೈಟಿ 1990ರಲ್ಲಿ ನಮ್ಮ ಮನೆಯಲ್ಲೇ ಆರಂಭವಾಯಿತು. ಹಂತ ಹಂತವಾಗಿ ದೊಡ್ಡದಾಗಿ ಬೆಳೆಯಿತು. ಆರಂಭದಲ್ಲಿ ಔಷಧಗಳನ್ನು ಕೊಂಡುಕೊಳ್ಳುವುದು ದುಬಾರಿಯಾಗಿತ್ತು. ಆಗ 1996ರಲ್ಲಿ ಹಣ ಜೋಡಿಸುವುದೇ ಸವಾಲಾಯಿತು. ಕಲಾವಿದ ಆರ್‌.ಟಿ. ಅರುಣ್‌ಕುಮಾರ್ ಅವರ ಸಹಾಯದಿಂದ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ್ದು, ಅನೇಕ ಮಂದಿ ವಿವಿಧ ಕೌಶಲಗಳನ್ನು ಪ್ರದರ್ಶಿಸಿದರು. ಈ ಹಣದಿಂದ ಮನೆ ಬಾಡಿಗೆ ಪಡೆದು ‘ಡೇ ಕೇರ್ ಸೆಂಟರ್’ ಆರಂಭವಾಯಿತು.

‘ನಾಲ್ಕು ವರ್ಷ ಆಕ್ಟೀವ್ ಆಗಿರುತ್ತೇನೆ, ಸಹಾಯ ಪಡೆದಿಕೊ ಎಂದಿದ್ದರು ಎಸ್‌ಪಿಬಿ‘

ಸಂಸ್ಥೆಯ ಬೆಳವಣಿಗೆಯಲ್ಲಿ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಪಾತ್ರ ದೊಡ್ಡದು. 1990ರಲ್ಲಿ ಬಾಲಸುಬ್ರಹ್ಮಣ್ಯಂ ಗಾಯನದ ಮೂಲಕ ಹಣ ಸಂಗ್ರಹಿಸಿ ಬಂದ ಹಣದಲ್ಲಿ ಈ ಸೊಸೈಟಿಗೆ ಸ್ವಂತ ಕಟ್ಟಡ ನಿರ್ಮಿಸಿದರು. ಅವರು ಬದುಕಿರುವವರೆಗೂ ಸಂಸ್ಥೆಗೆ ಸಾಕಷ್ಟು ಸಹಾಯ ಮಾಡುವುದರ ಜೊತೆಗೆ ಸ್ನೇಹಿತರಿಂದಲೂ ಹಣ ಸಂಗ್ರಹಿಸಿ ಸಂಸ್ಥೆಗೆ ನೀಡಿದ್ದರು. ಇದರಿಂದಾಗಿಯೇ ಕಡು ಬಡವರಿಗೆ ಔಷಧ, ಚಿಕಿತ್ಸೆ ಉಚಿತವಾಗಿ ದೊರೆಯುತ್ತಿದೆ.

ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಗೆ ಭೇಟಿ ನೀಡಿದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಬಾಲಕನಿಗೆ ಹಸ್ತಲಾಘವ ಮಾಡಿದರು.

2020ರ ಜನವರಿ ತಿಂಗಳಲ್ಲಿ ಹಿಮೊಫೀಲಿಯಾ ಸೊಸೈಟಿಯಲ್ಲಿ ಹೈಡ್ರೋಥೆರಪಿ ಪೂಲ್ ಉದ್ಘಾಟನೆ ನೆರವೇರಿಸಿದ ವೇಳೆ, ‘ನನಗೀಗ 74 ವರ್ಷ. ಇನ್ನೂ ಐದು ವರ್ಷ ಚುರುಕಾಗಿರಬಲ್ಲೆ. ನನ್ನಿಂದ ಏನು ಸಹಾಯ ಬೇಕೋ ಅಷ್ಟು ಪಡೆದುಕೊ’ ಎಂದಿದ್ದರು. ‘ಅವರ ಸಹಾಯದಿಂದಲೇ ಸೊಸೈಟಿಗೆ ಸ್ವಂತ ಕಟ್ಟಡದ ಜೊತೆಗೆ ಲ್ಯಾಬ್, ರಕ್ತನಿಧಿ ಕೇಂದ್ರ, ಫಿಸಿಯೋಥೆರಪಿ, ಪುನರ್ವಸತಿ ಸೇರಿ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ಸಿಗಲು ಸಾಧ್ಯವಾಯಿತು.ಜೊತೆಗೆ ಚಿತ್ರನಟಿ ಭಾವನಾ ಅವರು ನೃತ್ಯ ಮಾಡಿ ನಮ್ಮ ಸಂಸ್ಥೆಗೆ ನೆರವಾದರು’ ಎಂದು ಸುರೇಶ್ ಹನಗವಾಡಿ ಸ್ಮರಿಸಿಕೊಂಡರು.

ದಾವಣಗೆರೆಯ ಎವಿಕೆ ಕಾಲೇಜು ಮೈದಾನದಲ್ಲಿ 1999ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಸನ್ಮಾನಿಸಿದ ಕ್ಷಣ. ಕಲಾವಿದ ಆರ್.ಟಿ.ಅರುಣ್‌ಕುಮಾರ್, ಮಾಜಿ ಸಚಿವ ಎಸ್.ಮಲ್ಲಿಕಾರ್ಜುನ ಇದ್ದಾರೆ.

ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ

ಕರ್ನಾಟಕ ಹಿಮೊಫೀಲಿಯಾ ಸೊಸೈಟಿಯಲ್ಲಿ 30 ವರ್ಷಗಳಲ್ಲಿ 1000ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 850 ರೋಗಿಗಳು ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡ ರೋಗಿಗಳಿಗೆ ಸಬ್ಸಿಡಿ ದರದಲ್ಲಿ ಔಷಧ ಕೊಡಿಸುವುದರ ಜೊತೆಗೆ ಕಡು ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸುರೇಶ್ ಹನಗವಾಡಿ ಅವರು ಅಂಗವಿಕಲ ಇಲಾಖೆಯ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಮೊಫೀಲಿಯಾ ರೋಗವನ್ನು ಅಂಗವಿಕಲ ಕಾಯ್ದೆಯೊಳಗೆ ತರಲು ಇವರ ಶ್ರಮವಿದೆ.

‘ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಿಗುತ್ತಿದೆ. ರಾಷ್ಟ್ರೀಯ ಹಿಮೊಫೀಲಿಯಾ ಒಕ್ಕೂಟದ ಅಧ್ಯಕ್ಷನಾಗಿ ದೇಶದಾದ್ಯಂತ ಸಂಚರಿಸಿದ್ದೇನೆ. ದೇಶದಲ್ಲಿ 80ಕ್ಕೂ ಹಿಮೊಫೀಲಿಯಾ ಸೊಸೈಟಿಗಳು ಇದ್ದು ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ಸಿಕ್ಕಲು ಸಾಧ್ಯವಾಗಿದೆ.‘ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.