ADVERTISEMENT

ಬಿಸಿಸಿಐನಲ್ಲಿ ಲೈಂಗಿಕ ದೌರ್ಜನ್ಯ ತಡೆ ನಿಯಮ ಜಾರಿ

ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 15:26 IST
Last Updated 20 ಸೆಪ್ಟೆಂಬರ್ 2021, 15:26 IST
-
-   

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ (ಪಿಒಎಸ್‌ಎಚ್) ಜಾರಿಗೊಳಿಸಲು ಸೋಮವಾರ ಅಪೆಕ್ಸ್‌ ಕೌನ್ಸಿಲ್ ಸಭೆಯು ಅನುಮೋದನೆ ನೀಡಿತು.

ಈ ನಿಯಮದ ವ್ಯಾಪ್ತಿಗೆ ಭಾರತದ ಕ್ರಿಕೆಟಿಗರು ಒಳಪಡಲಿದ್ದಾರೆ.

ಇಲ್ಲಿಯವರೆಗೂ ಲೈಂಗಿಕ ಶೋಷಣೆ ತಡೆಗಾಗಿ ಇಲ್ಲಿಯವರೆಗೂ ಯಾವುದೇ ಕಟ್ಟುನಿಟ್ಟಾದ ನಿಯಮ ಮಂಡಳಿಯಲ್ಲಿ ಇರಲಿಲ್ಲ. ಈಗ ಅನುಮೋದನೆಗೊಂಡಿರುವ ನಿಯಮವು 16 ವರ್ಷ ಮೇಲಿನ ಎಲ್ಲ ಕ್ರಿಕೆಟಿಗರು, ಪದಾಧಿಕಾರಿಗಳು, ಅಪೆಕ್ಸ್‌ ಕೌನ್ಸಿಲ್, ಐಪಿಎಲ್ ಆಡಳಿತ ಸಮಿತಿ ಸದಸ್ಯರು, ಅಧಿಕಾರಿಗಳಿಗೂ ಅನ್ವಯಿಸಲಿದೆ.

ADVERTISEMENT

ಕೌನ್ಸಿಲ್ ಸಭೆಯಲ್ಲಿ ಒಂಬತ್ತು ಪುಟಗಳ ನಿಯಮಾವಳಿಯನ್ನು ಅಂಗೀಕರಿಸಲಾಗಿದೆ. ಅದರಲ್ಲಿ ಕರ್ತವ್ಯ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ಮತ್ತು ನಿರ್ವಹಣೆಯ ಕುರಿತು ಸೂಚನೆಗಳನ್ನು ನೀಡಲಾಗಿವೆ.

ಅವು ಹೀಗಿವೆ;

* ಲೈಂಗಿಕ ದೌರ್ಜನ್ಯದ ದೂರುಗಳ ವಿಚಾರಣೆಗೆ ನಾಲ್ವರು ಸದಸ್ಯರ ಆಂತರಿಕ ಸಮಿತಿ ರಚನೆ

* ಸಮಿತಿಯ ಮುಖ್ಯಸ್ಥರನ್ನಾಗಿ ಕಾರ್ಯಸ್ಥಾನದಲ್ಲಿರುವ ಹಿರಿಯ ಮಹಿಳಾ ಅಧಿಕಾರಿಯ ನೇಮಕ

* ಕಾನೂನು ಜ್ಞಾನ, ಸಮಾಜ ಸೇವೆಯ ಅನುಭವ ಇರುವ ಇಬ್ಬರು ಉದ್ಯೋಗಿಗಳು ಸಮಿತಿಯಲ್ಲಿರಬೇಕು

* ಸರ್ಕಾರೇತರ ಸಂಸ್ಥೆ ಅಥವಾ ಮಹಿಳಾಪರ ಸಂಘಟನೆ ಮತ್ತು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಒಬ್ಬ ವ್ಯಕ್ತಿ ಸಮಿತಿಯಲ್ಲಿರಬೇಕು

* ಸಮಿತಿಯಲ್ಲಿ ಕನಿಷ್ಠ ಶೇ 50ರಷ್ಟು ಸದಸ್ಯರು ಮಹಿಳೆಯರೇ ಆಗಿರಬೇಕು

* ದೂರುದಾರರು ಘಟನೆ ನಡೆದ ಮೂರು ತಿಂಗಳೊಳಗೆ ದೂರು ದಾಖಲಿಸಬೇಕು.

* ಸಮಿತಿಯು ವಿಚಾರಣೆಯನ್ನು 90 ದಿನಗಳೊಳಗೆ ಮುಗಿಸಬೇಕು. ಬಿಸಿಸಿಐಗೆ ವರದಿ ಮತ್ತು ಶಿಫಾರಸು ಸಲ್ಲಿಸಬೇಕು

* ಆರೋಪಿಯು ತನ್ನ ಮೇಲಿನ ಆರೋಪಗಳ ಕುರಿತು ಹೇಳಿಕೆ ನೀಡಲು ಸಮಿತಿಯು ಏಳು ದಿನಗಳ ಗಡುವು ನೀಡುತ್ತದೆ.

* ವರದಿ ಕೈಸೇರಿದ 60 ದಿನಗಳೊಳಗೆ ಬಿಸಿಸಿಐ ಕ್ರಮದ ಕುರಿತು ಪ್ರಕಟಿಸಬೇಕು

* ತಪ್ಪಿತಸ್ಥರೆಂದು ಸಾಬೀತಾದರೆ ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ.

* ನಿಷೇಧ, ಆಪ್ತ ಸಮಾಲೋಚನೆ, ಸಮುದಾಯ ಸೇವೆ, ಎಚ್ಚರಿಕೆ, ಸಂಬಳ ಕಡಿತ, ಸೇವಾ ಹಿರಿತನ ಕಡಿತ, ಕೆಲಸದಿಂದ ವಜಾ ಶಿಕ್ಷೆಗಳನ್ನು ವಿಧಿಸಲಾಗುವುದು

* ಶಿಕ್ಷೆ ಅಥವಾ ವಿಚಾರಣೆ ತೃಪ್ತಿಕರವೆನಿಸದ ಸಂದರ್ಭದಲ್ಲಿ ದೂರುದಾರರು ಅಥವಾ ಆರೋಪಿಯು ಕೋರ್ಟ್‌ ಮೊರೆ ಹೋಗಲು ಅವಕಾಶವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.