ADVERTISEMENT

ಇಂಗ್ಲೆಂಡ್‌ ಆಟಗಾರರು ಐಪಿಎಲ್‌ನಿಂದ ಹಿಂದಕ್ಕೆ; ಪ್ರಾಂಚೈಸ್ ಅಸಮಾದಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 17:21 IST
Last Updated 12 ಸೆಪ್ಟೆಂಬರ್ 2021, 17:21 IST
ಮುಂಬೈ ಇಂಡಿಯನ್ಸ್‌ ಆಟಗಾರರು (ಪಿಟಿಐ ಚಿತ್ರ)
ಮುಂಬೈ ಇಂಡಿಯನ್ಸ್‌ ಆಟಗಾರರು (ಪಿಟಿಐ ಚಿತ್ರ)   

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವಣ ಐದನೇ ಟೆಸ್ಟ್‌ ಪಂದ್ಯವನ್ನು ಕೋವಿಡ್‌ ಭೀತಿಯಿಂದಾಗಿ ರದ್ದು ಮಾಡಲಾಗಿದೆ. ಇದರ ಬೆನ್ನಲ್ಲೇಐಪಿಎಲ್‌ನಲ್ಲಿ ಆಡಲು ಇಂಗ್ಲೆಂಡ್‌ ತಂಡದ ಕೆಲವು ಆಟಗಾರರು ಹಿಂದೆ ಸರಿದಿದ್ದಾರೆ. ಈ ಬಗ್ಗೆಪ್ರಾಂಚೈಸ್‌ವೊಂದು ಅಸಮಾಧಾನ ಹೊರಹಾಕಿದೆ ಎಂದು ಇನ್‌ಸೈಡ್‌ ಸ್ಪೋರ್ಟ್ ವರದಿಯಾಗಿದೆ.

ಭಾರತದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಆಯೋಜನೆಯಾಗಿದ್ದಐಪಿಎಲ್‌-2021 ಟೂರ್ನಿಯನ್ನು ಕೋವಿಡ್‌ನಿಂದಾಗಿ ಅರ್ಧಕ್ಕೇ ನಿಲ್ಲಿಸಲಾಗಿತ್ತು. ಇದೀಗ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ಇದೇ19ರಿಂದ ಪಂದ್ಯಗಳು ಆರಂಭವಾಗಲಿದೆ. ಆದರೆ, ಇಂಗ್ಲೆಂಡ್‌ ಆಟಗಾರರಾದಜಾನಿ ಬೈರ್ಸ್ಟ್ರೋವ್‌, ಡೇವಿಡ್‌ ಮಲಾನ್‌ ಮತ್ತು ಕ್ರಿಸ್‌ ವೋಕ್ಸ್‌ ಆಡದಿರಲು ನಿರ್ಧರಿಸಿದ್ದಾರೆ.

ಜಾನಿ ಬೈರ್ಸ್ಟ್ರೋವ್‌ ಭಾರತದಲ್ಲಿ ನಡೆದ (ಐಪಿಎಲ್‌-2021) ಪಂದ್ಯಗಳಲ್ಲಿ ಸನ್‌ರೈಸರ್ಸ್‌ ಪರ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿದ್ದಾರೆ. ಮಲಾನ್ ಪಂಜಾಬ್‌ ಕಿಂಗ್ಸ್‌ ಪರ ಇದೇ ಮೊದಲ ಸಲ ಐಪಿಎಲ್‌ ಆಡಿದ್ದರು.‌ ವೋಕ್ಸ್‌ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಆಲ್ರೌಂಡರ್‌ ಆಗಿದ್ದರು.

ADVERTISEMENT

ಟೂರ್ನಿ ಆರಂಭಕ್ಕೆ ಇನ್ನು ಒಂದು ವಾರ ಇರುವಾಗ ಆಟಗಾರರು ಹಿಂದೆ ಸರಿದಿರುವ ಬಗ್ಗೆಪ್ರಾಂಚೈಸ್‌ವೊಂದರ ಅಧಿಕಾರಿಅಸಮಾಧಾನಗೊಂಡಿದ್ದಾರೆ.

ʼನಾನು ನಮ್ಮ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಇಂಗ್ಲೆಂಡ್‌ನಲ್ಲಿರುವ ಆಟಗಾರನೊಂದಿಗೆ ಗುರುವಾರ ಸಂಜೆ ಮಾತನಾಡಿದೆ. ಯುಎಇಗೆ ಸೆಪ್ಟೆಂಬರ್‌15 ರಂದು ತೆರಳುವುದಾಗಿ ಮತ್ತು ತನ್ನೊಂದಿಗೆ ಬರುವ ಸಂಗಾತಿಗೂ ಪ್ರಯಾಣ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ನಾವು ಅದಕ್ಕೆ ಒಪ್ಪಿಗೆ ಸೂಚಿಸಿದೆವು. ಆದರೆ ಶನಿವಾರ ಆ ಆಟಗಾರ ಯುಎಇಗೆ ಬರುತ್ತಿಲ್ಲ ಎಂಬ ವಿಚಾರ ತಿಳಿಯಿತು. ಇದರಿಂದ ಕೋಚ್‌ಗಳು ಮತ್ತು ತಂಡದ ಆಡಳಿತಕ್ಕೆ ಬೇಸರವಾಗಿದೆ. ಇದು ವೃತ್ತಿಪರತೆಯಲ್ಲ ಮತ್ತು ನಮ್ಮ ಒಪ್ಪಂದಕ್ಕೆ ವಿರುದ್ಧವಾದುದ್ದಾಗಿದೆ. ಈ ಬಗ್ಗೆ ಬಿಸಿಸಿಐಗೂ ತಿಳಿಸಲಾಗಿದೆʼ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಜಾಸ್‌ ಬಟ್ಲರ್‌ ಹಾಗೂ ಬೆನ್ ಸ್ಟೋಕ್ಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೊದಲೇ ತಿಳಿಸಿದ್ದರು. ಜೋಫ್ರಾ ಆರ್ಚರ್‌ ಗಾಯದ ಕಾರಣದಿಂದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದಾಗ್ಯೂ, ಇಂಗ್ಲೆಂಡ್‌ನ ಹತ್ತು ಆಟಗಾರರು ವಿವಿಧ ತಂಡಗಳ ಪರ ಕಣಕ್ಕಿಳಿಯಲು ಯುಎಇಗೆ ಆಗಮಿಸಿದ್ದಾರೆ.

ಟೂರ್ನಿಯ ಎರಡನೇ ಹಂತದ ಮೊದಲ ಪಂದ್ಯದಲ್ಲಿ (ಸೆ. 19) ಮುಂಬೈ ಇಂಡಿಯನ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಸೆಣಸಲಿವೆ. ಅಕ್ಟೋಬರ್‌15ರಂದು ಫೈನಲ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.