ADVERTISEMENT

ಇಂಗ್ಲೆಂಡ್‌ ವಿರುದ್ಧ 5ನೇ ಟೆಸ್ಟ್‌ ಪಂದ್ಯ ನಡೆಯುವ ಬಗ್ಗೆ ಸಂದೇಹ: ಸೌರವ್ ಗಂಗೂಲಿ

ಪಿಟಿಐ
Published 9 ಸೆಪ್ಟೆಂಬರ್ 2021, 13:55 IST
Last Updated 9 ಸೆಪ್ಟೆಂಬರ್ 2021, 13:55 IST
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (ಎಎಫ್‌ಪಿ ಚಿತ್ರ)
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (ಎಎಫ್‌ಪಿ ಚಿತ್ರ)   

ಮ್ಯಾಂಚೆಸ್ಟರ್/ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಕೋಚ್‌ಗಳಿಗೆ ಕೋವಿಡ್ ಸೋಂಕು ತಗುಲಿರುವ ಬೆನ್ನಲ್ಲೇ ಜೂನಿಯರ್ ಫಿಜಿಯೊ ಯೋಗೇಶ್ ಪರ್ಮಾರ್ ಕೂಡ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಭಾರತ ತಂಡ ಗುರುವಾರ ಅಭ್ಯಾಸ ಕಣಕ್ಕೆ ಇಳಿಯಲಿಲ್ಲ.

ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಬೌಲಿಂಗ್‌ ಕೋಚ್ ಭರತ್ ಅರುಣ್ ಅವರಿಗೆ ಈ ವಾರದ ಆರಂಭದಲ್ಲಿ ಸೋಂಕು ತಗುಲಿತ್ತು. ಹೀಗಾಗಿ ಅವರು ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ತಂಡದ ಜೊತೆ ತೆರಳುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿತ್ತು. ಇದೀಗ ಮತ್ತೊಬ್ಬ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಂಡಿರುವುದರಿಂದ ಐದನೇ ಟೆಸ್ಟ್ ಪಂದ್ಯ ನಡೆಯುವುದರ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಂದೇಹ ವ್ಯಕ್ತಪಡಿಸಿದ್ದಾರೆ. ಆಟಗಾರರ ಆರ್‌ಟಿ–ಪಿಸಿಆರ್ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.

ರವಿಶಾಸ್ತ್ರಿ ಅವರ ಸಂಪರ್ಕದಲ್ಲಿದ್ದ ಕಾರಣ ಮುಖ್ಯ ಫಿಸಿಯೊ ನಿತಿನ್ ಪಟೇಲ್ ಅವರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಹೀಗಾಗಿ ಮ್ಯಾಂಚೆಸ್ಟರ್‌ನಲ್ಲಿ ಫಿಸಿಯೊ ಇಲ್ಲದೇ ವಿರಾಟ್ ಬಳಗ ಆಡಬೇಕಾಗಿದೆ. ಫಿಸಿಯೊ ಒಬ್ಬರನ್ನು ನಿಯೋಜಿಸುವಂತೆ ತಂಡದ ಆಡಳಿತ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯನ್ನು ಕೋರಿದೆ. ಸದ್ಯ ಬ್ಯಾಟಿಂಗ್ ಕೊಚ್ ವಿಕ್ರಂ ರಾಥೋಡ್ ಮಾತ್ರ ತಂಡದ ಜೊತೆ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.