ADVERTISEMENT

ಎಎಫ್‌ಸಿ ಕಪ್; ನಾಕೌಟ್‌ ತಲುಪುವ ಹಾದಿಯಲ್ಲಿ ಎಟಿಕೆ ಮೋಹನ್ ಬಾಗನ್‌

ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿ

ಪಿಟಿಐ
Published 22 ಆಗಸ್ಟ್ 2021, 10:33 IST
Last Updated 22 ಆಗಸ್ಟ್ 2021, 10:33 IST
ಎಟಿಕೆ ಮೋಹನ್ ಬಾಗನ್ ತಂಡದ ರಾಯ್‌ ಕೃಷ್ಣ (ಬಲ) ಹಾಗೂ ಸಹ ಆಟಗಾರರು– ಟ್ವಿಟರ್‌ ಚಿತ್ರ
ಎಟಿಕೆ ಮೋಹನ್ ಬಾಗನ್ ತಂಡದ ರಾಯ್‌ ಕೃಷ್ಣ (ಬಲ) ಹಾಗೂ ಸಹ ಆಟಗಾರರು– ಟ್ವಿಟರ್‌ ಚಿತ್ರ   

ಮಾಲೆ, ಮಾಲ್ಡೀವ್ಸ್: ಪಂದ್ಯದ ದ್ವಿತೀಯಾರ್ಧದಲ್ಲಿ ಮೂರು ಗೋಲು ದಾಖಲಿಸಿದ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವು ಮಜಿಯಾ ಸ್ಪೋರ್ಟ್ಸ್ ಆ್ಯಂಡ್‌ ರಿಕ್ರಿಯೇಷನ್ಸ್ ತಂಡವನ್ನು ಮಣಿಸಿತು. ಆ ಮೂಲಕ ಎಎಫ್‌ಸಿ ಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪುವತ್ತ ದಿಟ್ಟ ಹೆಜ್ಜೆ ಇಟ್ಟಿತು.

ಶನಿವಾರ ರಾತ್ರಿ ನಡೆದ ಡಿ ಗುಂಪಿನ ಹಣಾಹಣಿಯಲ್ಲಿ 3–1ರಿಂದ ರಾಯ್‌ ಕೃಷ್ಣ ನಾಯಕತ್ವದ ತಂಡವು ಗೆಲುವು ಸಾಧಿಸಿತು. 25ನೇ ನಿಮಿಷದಲ್ಲಿ ಇಬ್ರಾಹಿಂ ಐಶ್ರಾಮ್‌ ಅವರು ಮಜಿಯಾ ಸ್ಪೋರ್ಟ್ಸ್‌ಗೆ ಮೊದಲ ಗೋಲು ಗಳಿಸಿ ಕೊಟ್ಟರು. ಆದರೆ ಲಿಸ್ಟನ್ ಕೊಲ್ಯಾಸೊ, ರಾಯ್ ಕೃಷ್ಣ ಮತ್ತು ಮನ್ವೀರ್‌ ಸಿಂಗ್‌ ಕ್ರಮವಾಗಿ 48, 63 ಮತ್ತು 77ನೇ ನಿಮಿಷಗಳಲ್ಲಿ ಕಾಲ್ಚಳಕ ತೋರುವ ಮೂಲಕ ತಂಡದ ಗೆಲುವಿನ ಸಂಭ್ರಮಕ್ಕೆ ಕಾರಣರಾದರು.

ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಕೋಚ್‌ ಅಂಟೋನಿಯೊ ಹಬಾಸ್‌ ಮಾರ್ಗದರ್ಶನದಲ್ಲಿರುವ ಎಟಿಕೆಎಂಬಿ, ಗುಂಪಿನ ಕೊನೆಯ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ ನಾಕೌಟ್‌ ಸ್ಥಾನ ಖಚಿಪಡಿಸಿಕೊಳ್ಳಲಿದೆ. ಗುಂಪಿನ ಕೊನೆಯ ಪಂದ್ಯವು ಬಾಂಗ್ಲಾದೇಶದ ಬಶುಂಧರಾ ಕಿಂಗ್ಸ್ ಎದುರು ಮಂಗಳವಾರ ನಡೆಯಲಿದೆ.

ADVERTISEMENT

ಬಶುಂಧರಾ ಕಿಂಗ್ಸ್ ಎದುರು ಶನಿವಾರ ಗೋಲು ರಹಿತ ಡ್ರಾ ಸಾಧಿಸಿದ್ದ ಬೆಂಗಳೂರು ಎಫ್‌ಸಿ ತಂಡವು ಸ್ಪರ್ಧೆಯಿಂದ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.