ADVERTISEMENT

ಡುರಾಂಡ್ ಕಪ್: ಎಂಟರ ಘಟ್ಟಕ್ಕೆ ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:17 IST
Last Updated 21 ಸೆಪ್ಟೆಂಬರ್ 2021, 16:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ (ಪಿಟಿಐ): ಬೆಂಗಳೂರು ಫುಟ್‌ಬಾಲ್ ಕ್ಲಬ್ ಮತ್ತು ಡೆಲ್ಲಿ ಫುಟ್‌ಬಾಲ್ ಕ್ಲಬ್ ತಂಡಗಳು ಇಲ್ಲಿ ನಡೆಯುತ್ತಿರುವ 130ನೇ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿವೆ.

ಯುವ ಭಾರತಿ ಕ್ರೀರಂಗನ್ ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 5–3 ಗೋಲುಗಳಿಂದ ಭಾರತೀಯ ನೌಕಾಪಡೆ ತಂಡದ ವಿರುದ್ಧ ಜಯಿಸಿತು. ಮೊದಲಾರ್ಧದಲ್ಲಿ 0–2ರಿಂದ ಹಿಂದಿದ್ದ ಬೆಂಗಳೂರು ನಂತರ ಪುಟಿದೆದ್ದು ಜಯಿಸಿದ್ದು ರೋಚಕವಾಗಿತ್ತು.

19ನೇ ನಿಮಿಷದಲ್ಲಿ ಜಿಜೊ ಮತ್ತು 30ನೇ ನಿಮಿಷದಲ್ಲಿ ಶ್ರೇಯಸ್ ಗೋಲು ಗಳಿಸಿ ನೌಕಾಪಡೆ ತಂಡಕ್ಕೆ 2–0 ಮುನ್ನಡೆ ಕೊಟ್ಟಿದ್ದರು. ಈ ಹಂತದಲ್ಲಿ ಬೆಂಗಳೂರು ತಂಡವು ಕೆಲವು ಉತ್ತಮ ಅವಕಾಶಗಳನ್ನು ಕೈಚೆಲ್ಲಿತ್ತು.

ADVERTISEMENT

ಆದರೆ 53ನೇ ನಿಮಿಷದಲ್ಲಿ ಲಿಂಗ್ಡೊ ನೌಕಾಪಡೆ ತಂಡದ ರಕ್ಷಣಾ ಕೋಟೆಯನ್ನು ನುಚ್ಚುನೂರು ಮಾಡಿದರು. ಬಿಎಫ್‌ಸಿಗೆ ಮೊದಲ ಗೋಲಿನ ಕಾಣಿಕೆ ನೀಡಿದರು. ಅದೇ ಹುರುಪಿನಲ್ಲಿ ಹರ್ಮನ್‌ಪ್ರೀತ್ ಸಿಂಗ್ 61ನೇ ನಿಮಿಷದಲ್ಲಿ ಗೋಲು ಹೊಡೆದು ತಂಡವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು. 75ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಬೆಂಗಳೂರು ತಂಡದ ಅಜಯ್ ಚೆಟ್ರಿ ಗೋಲು ಹೊಡೆದು ಗೆಲುವಿನ ಕನಸು ಗರಿಗೆದರಲು ಕಾರಣರಾದರು. ಆರು ನಿಮಿಷಗಳ ನಂತರ ಹರ್ಮನ್‌ಪ್ರೀತ್ ಮತ್ತೊಂದು ಗೋಲು ಹೊಡೆದರು. ಅಷ್ಟಕ್ಕೇ ನಿಲ್ಲದ ಹರ್ಮನ್‌ಪ್ರೀತ್ ಕೊನೆಯ ಹಂತದಲ್ಲಿ ಮತ್ತೊಂದು ಗೋಲು ಹೊಡೆದರು. ನೌಕಾಪಡೆಯ ಆಟಗಾರ ವಿಜಯ್ ಕೂಡ ಒಂದು ಗೋಲು ಮಾಡಿದರಾದರೂ ಸೋಲು ತಪ್ಪಿಸಲಾಗಲಿಲ್ಲ.

ಬೆಂಗಳೂರು ತಂಡದ ಹರ್ಮನ್‌ಪ್ರೀತ್ ಸಿಂಗ್ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

ಕಲ್ಯಾಣಿ ಮುನ್ಸಿಪಾಲಿಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡವು 1–0ಯಿಂದ ಕೇರಳ ಬ್ಲಾಸ್ಟರ್ಸ್‌ ಎದುರು ಜಯಿಸಿತು. ವಿಲ್ಲೀಸ್ ಪ್ಲಾಜಾ ಗಳಿಸಿದ ಗೋಲು ಜಯ ತಂದುಕೊಟ್ಟಿತು.

ಗುರುವಾರದಿಂದ ಕ್ವಾರ್ಟರ್‌ಫೈನಲ್‌ ಪಂದ್ಯಗಳು ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.