ADVERTISEMENT

National Sports Day 2021: ಹಳ್ಳಿಮಕ್ಕಳು ತಾರೆಗಳಾದಾಗ...

ಗಿರೀಶದೊಡ್ಡಮನಿ
Published 28 ಆಗಸ್ಟ್ 2021, 20:00 IST
Last Updated 28 ಆಗಸ್ಟ್ 2021, 20:00 IST
ಕ್ರೀಡಾ ತಾರೆಗಳು
ಕ್ರೀಡಾ ತಾರೆಗಳು   

ಆಗಸ್ಟ್ ಏಳರಂದು ಟೋಕಿಯೊ ಅಂಗಳದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಜೊತೆಜೊತೆಗೆ ಅವರು ಜನಿಸಿದ ಹರಿಯಾಣದ ಪುಟ್ಟ ಹಳ್ಳಿ ಖಾಂದ್ರಾ ಕೂಡ ಜಗದ್ವಿಖ್ಯಾತವಾಯಿತು. ಬಾಲ್ಯದಲ್ಲಿ ತಮ್ಮ ಮನೆಯಲ್ಲಿದ್ದ ಎಮ್ಮೆ, ಕೋಣಗಳ ಬಾಲ ಜಗ್ಗುತ್ತ, ನಾಯಿ, ಬೆಕ್ಕುಗಳಿಗೆ ಕೀಟಲೆ ಮಾಡುತ್ತಿದ್ದ ನೀರಜ್ ಮೈಕೈ ತುಂಬಿಕೊಂಡು ಗುಂಡುಗುಂಡಾಗಿದ್ದರು. ಆದರೆ ತಮ್ಮ ಮಗ ದೈಹಿಕವಾಗಿ ಗಟ್ಟಿಮುಟ್ಟಾಗಬೇಕು ಎಂದು ಸತೀಶಕುಮಾರ್ ಬಯಸಿದ್ದು ಟೋಕಿಯೊ ಚಿನ್ನಕ್ಕೆ ಕಾರಣವಾಯಿತು!

17 ಮಂದಿಯ ತುಂಬು ಕುಟುಂಬದ ಕಣ್ಮಣಿಯಾಗಿರುವ ನೀರಜ್‌ಗೆ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಇಷ್ಟವೇ ಇರಲಿಲ್ಲವಂತೆ. ಕೃಷಿಕ ಕುಟುಂಬದ ಈ ಹುಡುಗ ಯಾವತ್ತೂ ಒಲಿಂಪಿಕ್ಸ್ ಕನಸು ಕಂಡವರೇ ಅಲ್ಲ. ಆದರೆ, ಬಾಲ್ಯದಲ್ಲಿ ಲಭಿಸಿದ ಒಂದು ತಿರುವು ಅವರ ಜೀವನ ಬದಲಿಸಿತು. ಜೊತೆಗೆ ಅವರ ಗ್ರಾಮದ ಹೆಸರನ್ನು ಕೂಡ ಬೆಳಗಿಸಿತು. ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾದರೂ, ಅವರ ಸರಳತೆ ಮತ್ತು ಬದ್ಧತೆ ಬದಲಾಗಿಲ್ಲ. ಟೋಕಿಯೊದಿಂದ ಮರಳಿದ ನಂತರ ಅವರು ರಾಷ್ಟ್ರಪತಿಗಳ ಚಹಾಕೂಟ, ಪ್ರಧಾನ ಮಂತ್ರಿಗಳ ಔತಣಕೂಟ, ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ತಮಗೆ ಕೆಲವು ವರ್ಷ ತರಬೇತಿ ನೀಡಿದ ಕನ್ನಡಿಗ ಕಾಶಿನಾಥ ನಾಯ್ಕ ಅವರ ಮನೆಗೂ ಭೇಟಿ ನೀಡಿ ಸಂತಸ ಹಂಚಿಕೊಂಡರು. ಪಾಕಿಸ್ತಾನದ ಅಥ್ಲೀಟ್‌ ಕುರಿತು ತಾವು ನೀಡಿದ್ದ ಹೇಳಿಕೆಯ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ನೇರ ನುಡಿಯ ಮೂಲಕ ತೆರೆ ಎಳೆದು ಕ್ರೀಡಾಸ್ಫೂರ್ತಿಯ ಪಾಠ ಹೇಳಿದರು. ಕೋಟಿ ಕೋಟಿ ಹಣ ಹರಿದುಬಂದರೂ ತಮ್ಮೂರಿನ ಬಾಲ್ಯದ ಗೆಳೆಯರೊಂದಿಗೆ ಒಡನಾಟ, ಅಮ್ಮನ ಕೈಯಡುಗೆಯ ಚೂರ್ಮಾ ಖಾದ್ಯ ತಿನ್ನುವುದನ್ನು ಬಿಟ್ಟಿಲ್ಲ. ಬಹುಶಃ ಬೆಳೆದ ಊರಿನ ಮಣ್ಣಿನ ಗುಣವೇ ಇದಕ್ಕೆ ಕಾರಣವಿರಬೇಕು.

***

ADVERTISEMENT

ಮಣಿಪುರ ರಾಜ್ಯದ ನಾಂಗ್‌ಪೊಕ್ ಕಾಕ್‌ಚಿಂಗ್ ಎಂಬ ಈ ಕಣಿವೆ ಗ್ರಾಮದ ಹೆಸರು ಬಹಳಷ್ಟು ಜನರಿಗೆ ಪರಿಚಯವಾಗಿದ್ದು ಮೀರಾಬಾಯಿ ಚಾನು ಅವರಿಂದ. ಟೋಕಿಯೊ ಒಲಿಂಪಿಕ್ಸ್‌ನ ಮೊದಲ ದಿನವೇ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾ ಇಡೀ ಭಾರತವೇ ಸಂಭ್ರಮಿಸುವಂತೆ ಮಾಡಿದ್ದರು. ಮಣಿಪುರದ ಈ ಗ್ರಾಮಕ್ಕೆ ಸಾರಿಗೆ ಸಂಪರ್ಕವೇ ಇರಲಿಲ್ಲ. ಆಸ್ಪತ್ರೆ, ಶಾಲೆ, ದಿನಸಿ ಖರೀದಿಗೆ ಮೂವತ್ತು ಕಿಲೊ ಮೀಟರ್‌ ದೂರದ ಇಂಫಾಲವನ್ನೇ ಆಶ್ರಯಿಸಬೇಕಿತ್ತು. ತಮ್ಮ ಮನೆ ಬಳಕೆಗೆ ಕಟ್ಟಿಗೆಯ ಹೊರೆಯನ್ನು ಸರಾಗವಾಗಿ ಎತ್ತಿ ತರುತ್ತಿದ್ದ ಬಾಲಕಿ, ಕುಂಜುರಾಣಿ ದೇವಿ ಅವರ ಸಾಧನೆ ನೋಡಿ ವೇಟ್‌ಲಿಫ್ಟಿಂಗ್‌ನತ್ತ ಆಕರ್ಷಿತಳಾದಳು. ಆದರೆ, ಇಂಫಾಲದ ಅಕಾಡೆಮಿಗೆ ಹೋಗಲು ಬಸ್‌ ವ್ಯವಸ್ಥೆ ಇರಲಿಲ್ಲ. ಸ್ವಂತ ವಾಹನ ಹೊಂದುವಷ್ಟು ಆರ್ಥಿಕ ಅನುಕೂಲ ಮನೆಯಲ್ಲಿ ಇರಲಿಲ್ಲ. ಗ್ರಾಮದ ಸಮೀಪದ ನದಿ, ಹೊಳೆ ಪಾತ್ರದಿಂದ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳೇ ಅವರಿಗೆ ಸಾರಿಗೆಯಾದವು. ಆಕೆಯ ಬದ್ಧತೆ, ಆಸಕ್ತಿಯನ್ನು ಗಮನಿಸಿದ್ದ ಕೆಲವು ಟ್ರಕ್‌ ಚಾಲಕರು ಆಕೆಯನ್ನು ಇಂಫಾಲಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಮರಳಿ ಬರುವಾಗ ಮನೆ ತಲುಪಿಸುತ್ತಿದ್ದರು. ತಾವು ಒಲಿಂಪಿಕ್ ಪದಕ ಜಯಿಸಿ ಊರಿಗೆ ಮರಳಿದಾಗ ಮೀರಾ ಮಾಡಿದ ಮೊದಲ ಕಾರ್ಯವೆಂದರೆ, ಆ ಲಾರಿ ಚಾಲಕರನ್ನು ಹುಡುಕಿ ಮನೆಗೆ ಆಹ್ವಾನಿಸಿದರು. ಅವರಿಗೆ ಕಾಣಿಕೆ ಕೊಟ್ಟು, ಸನ್ಮಾನಿಸಿದರು. ಊಟ ಹಾಕಿ ಸಂಭ್ರಮಿಸಿದರು. ಆ ಚಾಲಕರು ಕಂಗಳಲ್ಲಿ ಆನಂದಭಾಷ್ಪ ತುಂಬಿಕೊಂಡು ಮೀರಾ ಸಾಧನೆಯನ್ನು ಕೊಂಡಾಡಿದರು.

***

ಪಂಜಾಬ್‌ನ ಖಲಿಯಾರಾ ಗ್ರಾಮದ ಹೆಸರು ರಾತ್ರಿ ಬೆಳಗಾಗುವುದರೊಳಗೆ ಮಾಧ್ಯಮಗಳಲ್ಲಿ ಪ್ರತಿಧ್ವನಿಸಿತು. ಅದಕ್ಕೆ ಕಾರಣರಾಗಿದ್ದು ಕಂಚಿನ ಪದಕ ಜಯಿಸಿದ ಭಾರತ ಹಾಕಿ ತಂಡದ ಗೋಲ್ ಸ್ಕೋರಿಂಗ್ ಯಂತ್ರ ಗುರ್ಜಂತ್ ಸಿಂಗ್. 41 ವರ್ಷಗಳ ನಂತರ ಭಾರತ ಹಾಕಿ ತಂಡವು ಒಲಿಂಪಿಕ್ ಪದಕ ಜಯಿಸಿದ ಸಡಗರದಲ್ಲಿ ಇಡೀ ದೇಶ ಈ ಬಾರಿ ತೇಲಾಡಿತು. ಮನ್‌ಪ್ರೀತ್ ಸಿಂಗ್ ನಾಯಕತ್ವದ ತಂಡದಲ್ಲಿ ಪಂಜಾಬ್‌ನ ಪುಟ್ಟ ಹಳ್ಳಿಗಳಿಂದ ಬಂದವರ ದಂಡೇ ಇದೆ. ತಿಮ್ಮೊವಾಲದ ಹರ್ಮನ್‌ಪ್ರೀತ್ ಸಿಂಗ್, ಬುಟಾಲಾದ ದಿಲ್‌ಪ್ರೀತ್ ಸಿಂಗ್, ಅಟ್ಟಾರಿಯ ಶಂಶೇರ್ ಸಿಂಗ್, ಚಾಹಲ್ ಕಲಾನ್‌ನ ಸಿಮ್ರನ್‌ಜೀತ್ ಸಿಂಗ್ ತಮ್ಮ ಆಟದೊಂದಿಗೆ ಹಳ್ಳಿಗಳ ಹೆಸರನ್ನೂ ವಿಖ್ಯಾತಗೊಳಿಸಿದರು.

ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ ಲವ್ಲಿನಾ ಬೊರ್ಗೊಹೈನ್ ಅವರ ಅಸ್ಸಾಂ ರಾಜ್ಯದ ಬಾರೊಮುಖಿಯಾ ಕುಗ್ರಾಮ. ಪುರುಷರ ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದ ರವಿಕುಮಾರ ದಹಿಯಾ ಅವರ ನೆಹ್ರಿ ಮತ್ತು ಕಂಚು ವಿಜೇತ ಬಜರಂಗ್ ಪೂನಿಯಾ ಅವರ ಖುದಾನ್ ಈಗ ಎಲ್ಲರಿಗೂ ಚಿರಪರಿಚಿತ.

***

ದೇಶಕ್ಕೆ ಹೆಸರು ತರಲು, ದೇಶವಾಸಿಗಳ ಬದುಕಿಗೆ ಚೈತನ್ಯ ತುಂಬಲು ಹಳ್ಳಿಗಳು ಮತ್ತು ಗ್ರಾಮೀಣರು ಎಷ್ಟು ಮುಖ್ಯ ಎಂಬುದಕ್ಕೆ ಈ ಸಾಧನೆಗಳು ನಿದರ್ಶನಗಳಾಗುತ್ತವೆ. ಪದಕ ಜಯದ ಹೊಸ್ತಿಲಲ್ಲಿ ಎಡವಿದ ಕ್ರೀಡಾಪಟುಗಳು ಮತ್ತು ತಂಡದಲ್ಲಿಯೂ ಹಳ್ಳಿಯ ಹಿನ್ನೆಲೆಯ ಪ್ರತಿಭೆಗಳಿದ್ದಾರೆ. ಈ ಒಲಿಂಪಿಕ್ ಅವರಲ್ಲಿ ಹೊಸ ಧೈರ್ಯ ತುಂಬಿದೆ.

ಉತ್ತರಪ್ರದೇಶದ ರೋಷನಾಬಾದ್‌ ಗ್ರಾಮದಲ್ಲಿ ಮಹಿಳಾ ಹಾಕಿ ತಂಡದ ವಂದನಾ ಕಟಾರಿಯಾ ಕುಟುಂಬದ ವಿರುದ್ಧ ಕೆಲವು ಕಿಡಿಗೇಡಿಗಳು ಜಾತಿನಿಂದನೆ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಆದರೆ, ದಿಟ್ಟ ಹುಡುಗಿ ಅದನ್ನು ಕ್ಯಾರೇ ಎನ್ನಲಿಲ್ಲ. ತಮ್ಮ ಆಟದ ಮೂಲಕವೇ ಉತ್ತರ ಕೊಟ್ಟರು. ಟೋಕಿಯೊದಿಂದ ಮರಳಿದಾಗ ಊರಿನ ಜನರೇ ಅವರಿಗೆ ಹಾರ ಹಾಕಲು, ಗುಲಾಲು ಹಚ್ಚಲು ಹಾತೊರೆದರು. ಹಸ್ತಲಾಘವ ಮಾಡಿ ಅಭಿನಂದಿಸಲು ಮುಗಿಬಿದ್ದರು. ‘ಈ ಸಲ ಸ್ವಲ್ಪದರಲ್ಲಿ ಪದಕ ತಪ್ಪಿಸಿಕೊಂಡಿದ್ದೇವೆ. ಮುಂದಿನ ಸಲ ಹೀಗಾಗದು. ಗೆದ್ದೇ ಗೆಲ್ಲುತ್ತೇವೆ’ ಎಂದು ವಂದನಾ ವಾಗ್ದಾನ ಮಾಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗೆದ್ದ ಏಳು ಪದಕ ವಿಜೇತರ ಪೈಕಿ ಪಿ.ವಿ. ಸಿಂಧು ಮಾತ್ರ ಹೈದರಾಬಾದ್‌ ಮಹಾನಗರಿಯಿಂದ ಬಂದವರು. ಉಳಿದೆಲ್ಲರೂ ಹಳ್ಳಿಯ ಮಣ್ಣಿನಿಂದ ತಮ್ಮ ಸಾಧನೆಯ ಹಾದಿಯನ್ನು ಮಾಡಿಕೊಂಡವರು. ನಗರದಲ್ಲಿದ್ದ ಮಾತ್ರಕ್ಕೆ ಪಿ.ವಿ. ಸಿಂಧು ಅವರಿಗೆ ಎಲ್ಲವೂ ಸರಾಗವಾಗಿ ಸಿಕ್ಕಿಬಿಟ್ಟಿತ್ತು ಎಂದು ಹೇಳಲಾಗದು.

ತಮ್ಮ ಮನೆಯಿಂದ ಪ್ರತಿನಿತ್ಯ 55 ಕಿ.ಮೀ ದೂರ ಪ್ರಯಾಣ ಮಾಡಿ ಬ್ಯಾಡ್ಮಿಂಟನ್ ತರಬೇತಿ ಪಡೆದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಮಧ್ಯಮವರ್ಗದ ಕುಟುಂಬದ ಎಲ್ಲ ಸಂಕಷ್ಟಗಳನ್ನೂ ಅವರು ಅನುಭವಿಸಿದ್ದಾರೆ. ನಗರ ಜೀವನದಲ್ಲಿ ಎದುರಾದ ಎಲ್ಲ ಸವಾಲುಗಳನ್ನೂ ಮೀರಿ ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಪದಕ ಜಯಿಸಿರುವ ಸಾಧನೆ ಮಾಡಿದ್ದಾರೆ. ಒಂದು ಪದಕ ಜಯಕ್ಕೆ ತೃಪ್ತರಾಗದೇ ಮತ್ತಷ್ಟು, ಮಗದಷ್ಟು ಸಾಧಿಸಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನತ್ತ ಚಿತ್ತ ನೆಟ್ಟಿದ್ದಾರೆ.

ನೀರಜ್ ಚೋಪ್ರಾ ಕೂಡ 90 ಮೀಟರ್ಸ್‌ಗಿಂತಲೂ ಹೆಚ್ಚು ದೂರ ಜಾವೆಲಿನ್ ಎಸೆಯುವತ್ತ ತಯಾರಿ ಆರಂಭಿಸಿದ್ದಾರೆ. ಲವ್ಲಿನಾ ಕೂಡ ಮುಂದೊಂದು ಚಿನ್ನ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಇವರೆಲ್ಲರ ಸ್ಫೂರ್ತಿಯ ಬೆಳಕಿನಲ್ಲಿ ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮುವ ಕಾಲ ಇದು. ‘ಕ್ರೀಡೆ ಬರೀ ಭಾಗವಹಿಸುವಿಕೆಯ ವೇದಿಕೆಯಲ್ಲ, ಗೆಲ್ಲುವ ಛಲ ತೋರುವ, ಸಾಮರ್ಥ್ಯಪಣಕ್ಕಿಡುವ ಕ್ಷೇತ್ರ. ನಮ್ಮನ್ನು ಕಡೆಗಣಿಸಬೇಡಿ’ ಎಂದು ಈ ಸಲದ ಒಲಿಂಪಿಯನ್ನರು ಹೇಳುತ್ತಿದ್ದಾರೆ. ಅದಕ್ಕೆ ಉತ್ತಮ ಸ್ಪಂದನೆ ದೊರೆತರೆ ರಾಷ್ಟ್ರೀಯ ಕ್ರೀಡಾ ದಿನಾಚರಣೆಗಳ ಹೊಳಪು ಇಮ್ಮಡಿಸುವುದು ಖಾತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.