ADVERTISEMENT

ರಾಷ್ಟ್ರೀಯ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್: ಕಣದಲ್ಲಿ ಶಿವ ಥಾಪಾ, ಗೌರವ್

ಬಳ್ಳಾರಿಯಲ್ಲಿ ರಾಷ್ಟ್ರೀಯ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 16:57 IST
Last Updated 14 ಸೆಪ್ಟೆಂಬರ್ 2021, 16:57 IST
ಶಿವ ಥಾಪಾ
ಶಿವ ಥಾಪಾ   

ಬಳ್ಳಾರಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಏಷ್ಯನ್ ಪದಕವಿಜೇತ ಶಿವ ಥಾಪಾ ಮತ್ತು ಈ ಹಿಂದೆ ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತ ಗೌರವ್ ಬಿಧುರಿ ಸೇರಿದಂತೆ 400 ಬಾಕ್ಸರ್‌ಗಳು ಬುಧವಾರ ಬಳ್ಳಾರಿಯಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಪುರುಷರ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸುವವರು ನೇರವಾಗಿ ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಪ್ರವೇಶ ಪಡೆಯಲಿದ್ದಾರೆ. ಬೆಳ್ಳಿ ಪದಕ ಪಡೆದವರು ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಅರ್ಹತೆ ಗಿಟ್ಟಿಸುವರು.

‘ಇನ್ನುಳಿದ ಎರಡು ಸ್ಥಾನಗಳನ್ನು ಆಯ್ಕೆ ಟ್ರಯಲ್ಸ್‌ ಮೂಲಕ ನಿರ್ಧರಿಸಲಾಗುತ್ತದೆ. ಅದರಲ್ಲಿ ಕಂಚಿನ ಪದಕ ವಿಜೇತರು ಮತ್ತು ಹೋದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಮೂರರಲ್ಲಿ ಸ್ಥಾನ ಪಡೆದ ತಂಡಗಳಾದ ಸರ್ವಿಸಸ್, ರೈಲ್ವೆಸ್ ಮತ್ತು ಹರಿಯಾಣ ಗಳಲ್ಲಿ ಆಯ್ಕೆ ಟ್ರಯಲ್ಸ್ ನಡೆಸಲಾಗುವುದು’ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ತಿಳಿಸಿದೆ .

ADVERTISEMENT

ಈಚೆಗೆ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಐವರು ಬಾಕ್ಸರ್‌ಗಳು ಬಳ್ಳಾರಿಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ. ಅದರಲ್ಲಿ ಅಮಿತ್ ಪಂಘಾಲ್ ಕೂಡ ಇದ್ದಾರೆ.

ಶಿವ ಥಾಪಾ 63.5 ಕೆಜಿ ವಿಭಾಗದಲ್ಲಿ ಅಸ್ಸಾಂ ತಂಡವನ್ನು ಪ್ರತಿನಿಧಿಸುವರು. ಗೌರವ್ 57 ಕೆಜಿ ವಿಭಾಗದಲ್ಲಿ ರೈಲ್ವೆಸ್ ಪರ ಕಣಕ್ಕಿಳಿಯುವರು.

ಇವರಲ್ಲದೇ ಸರ್ವಿಸಸ್‌ನ ಮೊಹಮ್ಮದ್ ಹುಸಾಮುದ್ದೀನ್, ದೀಪಕ್ ಕುಮಾರ್ ಕೂಡ ಸ್ಪರ್ಧೆಯಲ್ಲಿದ್ದಾರೆ.

ತೂಕದ ವಿಭಾಗಗಳನ್ನು 10 ರಿಂದ 13ಕ್ಕೆ ಏರಿಸಲಾಗಿದೆ. 48kg, 51kg, 54kg, 57kg, 60kg, 63.5kg, 67kg, 71kg, 75kg, 80kg, 86kg, 92kg, and +92kg. ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ.

ಒಂದು ವರ್ಷದ ನಂತರ ಈ ಸ್ಪರ್ಧೆಯು ನಡೆಯುತ್ತಿದೆ. ಹೋದ ವರ್ಷ ಕೋವಿಡ್ ಕಾರಣದಿಂದಾಗಿ ರದ್ದಾಗಿತ್ತು.

ಈ ಬಾರಿ ಕೋವಿಡ್ ತಡೆ ನಿಯಮವನ್ನು ಜಾರಿಗೊಳಿಸಲಾಗಿದೆ. ಸ್ಪರ್ಧಿಗಳು, ಸಿಬ್ಬಂದಿ ಮತ್ತು ಅಧಿಕಾರಿಗಳು 72 ತಾಸುಗಳ ಮುನ್ನ ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿ ಪಡೆಯಬೇಕು.

ಬಾಕ್ಸರ್‌ಗಳಿಗೆ ಶಿರಸ್ತ್ರಾಣ

ಈ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬಾಕ್ಸರ್‌ಗಳಿಗೆ ಹೆಡ್‌ಗೇರ್ (ಶಿರಸ್ತ್ರಾಣ) ಬಳಸಲಿದ್ದಾರೆ.

ಒಟ್ಟು 35 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಮಂಡಳಿಗಳ ಸ್ಪರ್ಧಿಗಳು ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.