ADVERTISEMENT

PV Web Exclusive: ಪ್ಯಾರಾಲಿಂಪಿಕ್ಸ್‌; ನಿಯಮಗಳ ಗೊಂದಲಗಳಿಗೇ ಹೆಚ್ಚು ಬಲ

ವಿಕ್ರಂ ಕಾಂತಿಕೆರೆ
Published 6 ಸೆಪ್ಟೆಂಬರ್ 2021, 7:21 IST
Last Updated 6 ಸೆಪ್ಟೆಂಬರ್ 2021, 7:21 IST
ಮುಹಮ್ಮದ್ ಜಿಯಾದ್ ಜೊಲ್ಕೆಫ್ಲಿ –ಎಎಫ್‌ಪಿ ಚಿತ್ರ
ಮುಹಮ್ಮದ್ ಜಿಯಾದ್ ಜೊಲ್ಕೆಫ್ಲಿ –ಎಎಫ್‌ಪಿ ಚಿತ್ರ   

ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಪುರುಷರ ಎಫ್‌–52 ವಿಭಾಗದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಭಾರತದ ವಿನೋದ್ ಕುಮಾರ್ ಅವರ ಸಂಭ್ರಮ ಅಷ್ಟೇ ಬೇಗ ಕರಗಿಹೋಗಿತ್ತು. ಅವರ ವಿಭಾಗೀಕರಣದ ಬಗ್ಗೆ ಪ್ರತಿಸ್ಪರ್ಧಿಗಳು ದಾಖಲಿಸಿದ ಆಕ್ಷೇಪ ಮತ್ತು ಅದನ್ನು ಎತ್ತಿಹಿಡಿದ ಆಯೋಜಕರು ಪದಕ ವಾಪಸ್ ಪಡೆದುಕೊಂಡದ್ದು ಇದಕ್ಕೆ ಕಾರಣ.

ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಹೀಗೆ ಪದಕ ಕಳೆದುಕೊಂಡವರು ಅಥವಾ ನಿರಾಸೆಗೆ ಒಳಗಾದವರು ವಿನೋದ್ ಒಬ್ಬರೇ ಅಲ್ಲ. ವಿವಿಧ ದೇಶಗಳ ಅನೇಕ ಕ್ರೀಡಾಪಟುಗಳು ನಿಯಮದ ಅಡಕತ್ತರಿಗೆ ಸಿಕ್ಕಿ ಬೇಸರದಿಂದ ಮರಳಿದ್ದಾರೆ. ಕೆಲವರನ್ನು ವೈಕಲ್ಯದ ವಿಭಾಗೀಕರಣದ ಗೊಂದಲ ಕಾಡಿದ್ದರೆ ಇನ್ನು ಕೆಲವರು ಸರಿಯಾದ ಕ್ರಮವನ್ನು ಅನುಸರಿಸಲಿಲ್ಲ ಎಂಬ ಕಾರಣಕ್ಕೆ ಹೊರಬಿದ್ದಿದ್ದಾರೆ.

ಭಾರತದ ಈಜುಪಟು ಸುಯಶ್‌ ನಾರಾಯಣ್ ಜಾಧವ್‌, ಬ್ರಿಟನ್‌ನ ಸ್ಟಾರ್ ಈಜುಗಾರ್ತಿ ಎಲಿ ಸಿಮನ್ಸ್‌, ಮಲೇಷ್ಯಾದ ಶಾಟ್‌ಪಟ್ ಪಟು ಮುಹಮ್ಮದ್‌ ಜಿಯಾದ್ ಜೊಲ್ಕೆಫ್ಲಿ, ನ್ಯೂಜಿಲೆಂಡ್‌ನ ಬ್ಲೇಡ್ ರನ್ನರ್ ಅನಾ ಸ್ಟೀವನ್‌ ಮುಂತಾದವರು ಟೋಕಿಯೊದಲ್ಲಿ ಅನರ್ಹತೆಯ ‘ಶಿಕ್ಷೆ’ಗೆ ಗುರಿಯಾದವರು. ಇವರೆಲ್ಲರ ಪ್ರಕರಣಗಳೂ ವಿವಾದ ಸೃಷ್ಟಿಸಿದೆ. ವೈಕಲ್ಯದ ಆಧಾರದಲ್ಲಿ ಕ್ರೀಡಾಪಟುಗಳನ್ನು ವಿಂಗಡಿಸುವ ಕ್ರಮದ ಬಗ್ಗೆ ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಹೆಚ್ಚು ವೈಕಲ್ಯ ಇರುವವರನ್ನು ‘ಬಲಶಾಲಿ’ಗಳ ಜೊತೆ ಒಂದೇ ವಿಭಾಗದಲ್ಲಿ ಸೇರಿಸಿರುವುದಕ್ಕೆ ಕ್ರೀಡಾಪಟುಗಳೇ ಕೋಪಗೊಂಡ ಪ್ರಕರಣಗಳೂ ಪ್ಯಾರಾಲಿಂಪಿಕ್ಸ್‌ನಲ್ಲಿ ನಡೆದಿವೆ.

ADVERTISEMENT

ಸಣ್ಣ ವಯಸ್ಸಿನಲ್ಲೇ ಮೊಣಕಾಲುಗಳ ಕೆಳಭಾಗ ಮತ್ತು ಕೈಗಳ ಭಾಗದಲ್ಲಿ ಕೃತಕ ಅಂಗಗಳನ್ನು ಜೋಡಿಸಿರುವ ಫ್ರಾನ್ಸ್‌ನ ಎಸ್‌–5 ವಿಭಾಗದ ಈಜುಪಟು ಥಿಯೊ ಕ್ಯೂರಿನ್, ತಮ್ಮ ಸ್ಪರ್ಧೆ ಮುಗಿದ ನಂತರ ಆಯೋಜಕರ ವಿರುದ್ಧ ಟೀಕೆಗಳ ಮಳೆ ಸುರಿಸಿದ್ದರು. ‘ಎರಡೂ ಕೈಗಳು ಸರಿ ಇರುವವರು ನನ್ನೊಂದಿಗೆ ಸ್ಪರ್ಧಿಸಿದ್ದಾರೆ. ಈಜಿನಲ್ಲಿ ವೇಗ ಹೆಚ್ಚಿಸಿಕೊಳ್ಳಲು ಕೈಗಳು ಎಷ್ಟರ ಮಟ್ಟಿಗೆ ನೆರವಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಹಾಗಿರುವಾಗ ಕೃತಕ ಕೈಗಳನ್ನು ಜೋಡಿಸಿರುವವರನ್ನು ನಿಜವಾದ ಕೈಗಳು ಇರುವವರ ಜೊತೆ ಕಣಕ್ಕೆ ಇಳಿಸಿದರೆ ಪರಿಣಾಮ ಏನಾದೀತು’ ಎಂದು 21 ವರ್ಷದ ಥಿಯೊ ಕೇಳಿದ್ದರು.

ಮಲೇಷ್ಯಾ ಅಥ್ಲೀಟ್‌ ಗೆದ್ದ ಚಿನ್ನ ವಾಪಸ್

ಅಥ್ಲೆಟಿಕ್ಸ್‌ನ ಎಫ್‌–20 ವಿಭಾಗದ ಶಾಟ್‌ಪಟ್‌ನಲ್ಲಿ ತಮ್ಮದೇ ದಾಖಲೆ ಮುರಿದು ಚಿನ್ನ ಗೆದ್ದಿದ್ದ ಮಲೇಷ್ಯಾದ ಮುಹಮ್ಮದ್ ಜಿಯಾದ್ ಜೊಲ್ಕೆಫ್ಲಿ ಸ್ಪರ್ಧೆಗೆ ಸರಿಯಾದ ಸಮಯಕ್ಕೆ ಹಾಜರಾಗಲಿಲ್ಲ ಎಂಬ ಕಾರಣದಿಂದ ‘ತಡವಾಗಿ’ ಅನರ್ಹಗೊಳಿಸಲಾಗಿತ್ತು. ಇದಕ್ಕೆ ಅವರ ದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಆದರೆ ಆಯೋಜಕರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಭಾರತದ ವಿನೋದ್ ಕುಮಾರ್ ಅವರನ್ನು ಎಫ್‌–52 ವಿಭಾಗದಲ್ಲಿ ಸೇರಿಸಿದ್ದು ಸರಿಯಲ್ಲ ಎಂಬ ದೂರು ದಾಖಲಾದ ಹಿನ್ನೆಲೆಯಲ್ಲಿ ಪದಕ ವಾಪಸ್ ಪಡೆದುಕೊಳ್ಳಲಾಗಿತ್ತು. ಆದರೆ ಕೆಲವೇ ದಿನಗಳ ಹಿಂದೆ ತಾವೇ ಮಾಡಿದ್ದ ವರ್ಗೀಕರಣದಲ್ಲಿ ಲೋಪ ಇದ್ದರೆ ಆಯೋಜಕರ ಗಮನಕ್ಕೆ ಬರಬೇಕಿತ್ತಲ್ಲ ಎಂಬ ಆಕ್ಷೇಪ ಕೇಳಿಬಂದಿದೆ. ಪುರುಷರ ಎಸ್‌ಬಿ–7 ವಿಭಾಗದ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಸ್ಪರ್ಧಿಸಿದ್ದ ಸುಯಶ್ ಜಾಧವ್ ಅವರನ್ನು ಈಜಿದ ವಿಧಾನ ಸರಿಯಿಲ್ಲ ಎಂಬ ಕಾರಣದಿಂದ ಅನರ್ಹಗೊಳಿಸಲಾಗಿತ್ತು.

ನಾನಾ ಬಗೆ ವೈಕಲ್ಯ; ಹಲವು ರೀತಿಯ ಗೊಂದಲ

ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 10 ರೀತಿಯ ವೈಕಲ್ಯಗಳ ಆಧಾರದಲ್ಲಿ ಕ್ರೀಡಾಪಟುಗಳ ವರ್ಗೀಕರಣ ನಡೆಯುತ್ತದೆ. ದೈಹಿಕ ಕ್ಷಮತೆಯಲ್ಲಿ ಕೊರತೆ, ದೃಷ್ಟಿದೋಷ ಮತ್ತು ಬೌದ್ಧಿಕ ಸಮಸ್ಯೆಯನ್ನೇ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಈ ಮೂರು ವಿಭಾಗಗಳಲ್ಲಿ ಅನೇಕ ಬಗೆಯ ಸಮಸ್ಯೆಯಿಂದ ಬಳಲುತ್ತಿರುವವರು ಇರುತ್ತಾರೆ. ಈ ದೌರ್ಬಲ್ಯಗಳ ಆಧಾರದಲ್ಲಿ ಸರಿಸುಮಾರು ಒಂದೇ ರೀತಿಯ ತೊಂದರೆ ಇರುವವರನ್ನು ಒಂದೇ ಗುಂಪಿಗೆ ಸೇರಿಸಿ ಸ್ಪರ್ಧಾಕಣವನ್ನು ಸಿದ್ಧಗೊಳಿಸಲಾಗುತ್ತದೆ.

ಉದಾಹರಣೆಗೆ ಈಜಿನಲ್ಲಿ ಎಸ್‌ ಅಕ್ಷರವು ಫ್ರೀಸ್ಟೈಲ್‌, ಬಟರ್‌ಫ್ಲೈ ಮತ್ತು ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯನ್ನು, ಎಸ್‌ಬಿ ಎಂಬುದು ಬ್ರೆಸ್ಟ್‌ಸ್ಟ್ರೋಕ್‌ ಸ್ಪರ್ಧೆಯನ್ನು, ಎಸ್‌ಎಂ ವೈಯಕ್ತಿಕ ಮೆಡ್ಲೆಯನ್ನು ಬಿಂಬಿಸುತ್ತದೆ. ದೈಹಿಕ ವೈಕಲ್ಯವವನ್ನು 1ರಿಂದ 10 ಸಂಖ್ಯೆಯಲ್ಲಿ ಗುರುತಿಸಲಾಗುತ್ತದೆ. ಸಂಖ್ಯೆ ಕಡಿಮೆಯಾದಷ್ಟು ವೈಕಲ್ಯದ ತೀವ್ರತೆ ಹೆಚ್ಚು ಇದೆ ಎಂಬುದು ಸಾರ. ದೃಷ್ಟಿದೋಷವನ್ನು 11ರಿಂದ 13 ಸಂಖ್ಯೆಗಳಲ್ಲಿ ಗುರುತಿಸಲಾಗುತ್ತದೆ. 14ನೇ ಸಂಖ್ಯೆ ಮಾನಸಿಕ ತೊಂದರೆಯನ್ನು ಬಿಂಬಿಸುತ್ತದೆ. ಈ ರೀತಿಯ ವಿಭಾಗೀಕರಣದಲ್ಲಿ ಆಯೋಜಕರು ಎಡವುತ್ತಾರೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ದೂರು.

ಪ್ಯಾರಾಲಿಂಪಿಕ್ಸ್‌ನಲ್ಲಿ 14ನೇ ಚಿನ್ನ ಗೆದ್ದ ಅಮೆರಿಕದ ಈಜುಪಟು ಜೆಸಿಕಾ ಲಾಂಗ್ ಪ್ರಕಾರ ವಿಭಾಗೀಕರಣದಲ್ಲಿ ಮೋಸ ನಡೆಯುವ ಸಾಧ್ಯತೆಗಳು ಹೆಚ್ಚು ಇವೆ. ಫ್ರಾನ್ಸ್‌ನ ಈಜುಪಟು ಕ್ಲೇರ್ ಸುಪಿಯೊಟ್‌ ಕೂಡ ಅದನ್ನೇ ಹೇಳುತ್ತಾರೆ. ‘ಮೇಲ್ನೋಟಕ್ಕೆ ಕಾಣುವ ವೈಕಲ್ಯದ ಆಧಾರದಲ್ಲಿ ವರ್ಗೀಕರಣ ನಡೆಯುತ್ತದೆ. ಅದರಲ್ಲಿ ವೀಕ್ಷಕರ ‘ಕೈಚಳಕ’ಕ್ಕೆ ಸಾಕಷ್ಟು ಅವಕಾಶಗಳಿವೆ’ ಎಂದು ಕ್ಲೇರ್ ಅಭಿಪ್ರಾಯಪಡುತ್ತಾರೆ. ಹೆಚ್ಚು ತೊಂದರೆ ಇರುವವರ ಜೊತೆ ಸ್ಪರ್ಧಿಸಲು ಕ್ರೀಡಾಪಟುಗಳೇ ಪ್ರಯತ್ನ ನಡೆಸುವ ಸಾಧ್ಯತೆಯೂ ಇದೆ ಎನ್ನುವ ಆರೋಪವೂ ಕೇಳಿಬಂದಿದೆ.

(ಆಧಾರ: ವಿವಿಧ ಏಜೆನ್ಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.