ADVERTISEMENT

Paralympics ಬ್ಯಾಡ್ಮಿಂಟನ್‌: ಫೈನಲ್‌ಗೆ ಪ್ರಮೋದ್ ಭಗತ್, ಚಿನ್ನದ ಮೇಲೆ ಕಣ್ಣು

ಪಿಟಿಐ
Published 4 ಸೆಪ್ಟೆಂಬರ್ 2021, 2:47 IST
Last Updated 4 ಸೆಪ್ಟೆಂಬರ್ 2021, 2:47 IST
ಪ್ರಮೋದ್ ಭಗತ್
ಪ್ರಮೋದ್ ಭಗತ್   

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರಿದಿದೆ. ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಭಗತ್ ಅವರು ಜಪಾನ್‌ನ ಡೈಕೆ ಫುಜಿಹಾರ ವಿರುದ್ಧ 21-11, 21-16ರ ಅಂತರದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿದರು.

ಈ ಮೂಲಕ 33 ವರ್ಷದ ಏಷ್ಯಾ ಚಾಂಪಿಯನ್ ಭಗತ್, ಕನಿಷ್ಠ ಬೆಳ್ಳಿ ಪದಕವನ್ನು ಖಾತ್ರಿಪಡಿಸಿದ್ದಾರೆ. ಇಂದು ನಡೆಯಲಿರುವ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ಕಣಕ್ಕಿಳಿಯಲಿದ್ದಾರೆ.

ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆ ಪಾದಾರ್ಪಣೆಯಾಗಿದೆ. ಇದರೊಂದಿಗೆ ಫೈನಲ್‌ಗೆ ತಲುಪಿದ ಭಾರತದ ಪ್ರಥಮ ಆಟಗಾರ ಎಂಬ ಹಿರಿಮೆಗೆ ಭಗತ್ ಭಾಜನರಾಗಿದ್ದಾರೆ.

ಬ್ಯಾಡ್ಮಿಂಟನ್ ಪುರುಷರ ಮಿಶ್ರ ಡಬಲ್ಸ್ (ಎಸ್‌ಎಲ್3-ಎಸ್‌ಯು5) ವಿಭಾಗದಲ್ಲೂ ಪಲಕ್ ಕೊಹ್ಲಿ ಜೊತೆ ಸೇರಿ ಸ್ಪರ್ಧಿಸುತ್ತಿರುವ ಭಗತ್, ಇಂದೇ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

5ರ ಹರೆಯದಲ್ಲೇ ಪೋಲಿಯೊದಿಂದಾಗಿ ಪ್ರಮೋದ್ ಅವರ ಎಡಗಾಲು ಊನವಾಗಿದೆ. ಆದರೆ ಅದನ್ನು ಮೀರಿ ನಾಲ್ಕು ವಿಶ್ವ ಚಾಂಪಿಯನ್‌ಶಿಪ್ ಸೇರಿದಂತೆ ಒಟ್ಟು 45 ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಬಿಡಬ್ಲ್ಯುಎಫ್ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಎರಡು ಚಿನ್ನ, ಒಂದು ಕಂಚಿನ ಪದಕ ಮತ್ತು ಪುರುಷರ ಡಬಲ್ಸ್‌ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.