ADVERTISEMENT

Paralympics: ಮನೋಬಲ ಪಡೆದುಕೊಂಡವರ ಛಲ

ಅವನಿ ಲೇಖರಗೆ ಆತ್ಮವಿಶ್ವಾಸ ತುಂಬಿದ ಅಭಿನವ್ ಬಿಂದ್ರಾ ಆತ್ಮಚರಿತ್ರೆ; ದೇವೇಂದ್ರ 3 ಪದಕಗಳ ಒಡೆಯ

ಏಜೆನ್ಸೀಸ್
Published 30 ಆಗಸ್ಟ್ 2021, 22:01 IST
Last Updated 30 ಆಗಸ್ಟ್ 2021, 22:01 IST
ಸುಮಿತ್ ಅಂಟಿಲ್ ಸಂಭ್ರಮ –ರಾಯಿಟರ್ಸ್ ಚಿತ್ರ
ಸುಮಿತ್ ಅಂಟಿಲ್ ಸಂಭ್ರಮ –ರಾಯಿಟರ್ಸ್ ಚಿತ್ರ   

ಟೋಕಿಯೊ/ಜೈಪುರ: ಕಾರು ಅಪಘಾತದಲ್ಲಿ ಸೊಂಟಕ್ಕಿಂತ ಕೆಳಭಾಗದ ಸ್ವಾಧೀನ ಕಳೆದುಕೊಂಡ ಅವನಿ ಲೇಖರ, ಮರ ಏರುವಾಗ ವಿದ್ಯುತ್‌ ತಂತಿ ತಾಗಿ ಎಡಗೈ ಕಳೆದುಕೊಂಡ ದೇವೇಂದ್ರ ಜಜಾರಿಯ, ಬೈಕ್ ಅಪಘಾತದಲ್ಲಿ ಕಾಲು ಕಳೆದುಕೊಂಡ ಸುಮಿತ್‌ ಅಂಟಿಲ್‌, ‘ಏಕಲವ್ಯ’ನಂತೆ ಅಭ್ಯಾಸ ಮಾಡಿದ ಯೋಗೇಶ್ ಕಾತೂನಿಯ..

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸೋಮವಾರ ಪದಕಗಳನ್ನು ಗಳಿಸಿಕೊಟ್ಟ ಕ್ರೀಡಾಪಟುಗಳು ಸಂಕಷ್ಟದಲ್ಲೇ ಬೆಳೆದು ಛಲ ಹಾಗೂ ಆತ್ಮವಿಶ್ವಾಸದಲ್ಲಿ ಬೆಳೆದವರು.

2012ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಅವನಿ ನಂತರ ಎಲ್ಲದಕ್ಕೂ ಎಲ್ಲರಲ್ಲೂ ಕೋಪ ಮಾಡಿಕೊಳ್ಳುತ್ತಿದ್ದರು. ಅವರ ಮನಸ್ತಾಪ ತಣಿಸಲು ತಂದೆ ಪ್ರವೀಣ್ ಅವರು ಜೈಪುರದ ಶೂಟಿಂಗ್‌ ರೇಂಜ್‌ಗೆ ಕರೆದುಕೊಂಡು ಹೋದರು. ಆ ಭೇಟಿ ಅವರ ಬದುಕಿನ ಹಾದಿಗೆ ಮಹತ್ವದ ತಿರುವು ನೀಡಿತು. ಐತಿಹಾಸಿಕ ಚಿನ್ನದ ಪದಕದ ವರೆಗೆ ಅವರನ್ನು ಕರೆದುಕೊಂಡು ಹೋಯಿತು.

ADVERTISEMENT

ಶೂಟಿಂಗ್ ರೇಂಜ್‌ನಲ್ಲಿ ಅಭ್ಯಾಸದಲ್ಲಿ ತೊಡಗಿದ್ದವರನ್ನು ಹುರಿದುಂಬಿಸುತ್ತಿದ್ದ ಅವನಿ ಅವರಿಗೆ ನಂತರ ಒಲಿಂಪಿಕ್ ಚಾಂಪಿಯನ್ ಶೂಟರ್ ಅಭಿನವ್ ಬಿಂದ್ರಾ ಅವರ ಆತ್ಮಚರಿತ್ರೆಯ ಪುಸ್ತಕ ಸಿಕ್ಕಿತು. ಅದನ್ನು ಓದಿದ ನಂತರ ಶೂಟಿಂಗ್‌ನಲ್ಲಿ ಸಾಧನೆ ಮಾಡುವ ಮನಸ್ಸಾಯಿತು. 2015ರಲ್ಲಿ ಅಭ್ಯಾಸ ಆರಂಭವಾಯಿತು.

ಮೂರು ಪದಕಗಳ ಒಡೆಯ
2004 ಮತ್ತು 2016ರ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ದೇವೇಂದ್ರ ಜಜಾರಿಯ ಇದೀಗ ಮೂರನೇ ಪದಕದೊಂದಿಗೆ ದೇಶದ ಶ್ರೇಷ್ಠ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ತಂದೆಯನ್ನು ಕಳೆದುಕೊಂಡ ನಂತರ ಕುಗ್ಗಿ ಹೋಗಿದ್ದ ಅವರು ಟೋಕಿಯೊದಲ್ಲಿ ಗೆದ್ದ ಬೆಳ್ಳಿ ಪದಕವನ್ನು ತಂದೆಗೆ ಅರ್ಪಿಸಿದ್ದಾರೆ. ‘ಅವರಿಂದಾಗಿ ಈ ಮಟ್ಟಕ್ಕೆ ಬೆಳೆದೆ. ಅವರಿಲ್ಲದೇ ಇರುವುದರಿಂದ ದೊಡ್ ಶೂನ್ಯ ಆವರಿಸಿದೆ’ ಎಂದು ದೇವೇಂದ್ರ ಹೇಳಿದರು.

ಎಂಟನೇ ವಯಸ್ಸಿನಲ್ಲಿ ಪಾರ್ಶ್ವವಾಯು ಸಮಸ್ಯೆಗೆ ಒಳಗಾದ ಯೋಗೇಶ್ ಅವರಿಗೆ ನಂತರ ಕೃತಕ ಅಂಗಗಳನ್ನು ಜೋಡಿಸಲಾಗಿತ್ತು. ಸೈನಿಕನ ಮಗನಾಗಿರುವ ದೆಹಲಿ ನಿವಾಸಿ ಯೋಗೇಶ್‌, ಬಿಕಾಂ ಪದವೀಧರ. ಲಾಕ್‌ಡೌನ್‌ನಿಂದಾಗಿ ಕ್ರೀಡಾಂಗಣಗಳು ಬಂದ್ ಆಗಿದ್ದುದರಿಂದ ಪ್ಯಾರಾಲಿಂಪಿಕ್ಸ್‌ಗೆ ಕೋಚ್‌ ಇಲ್ಲದೇ ಅಭ್ಯಾಸ ಮಾಡಿದ್ದರು.

ಕುಸ್ತಿಪಟುವಾಗಿದ್ದ ಹರಿಯಾಣದ ಸೋನೆಪತ್‌ ನಿವಾಸಿ ಸುಮಿತ್ 2015ರಲ್ಲಿ ಅಪಘಾತದಿಂದ ಜರ್ಜರಿತರಾಗಿದ್ದರು. ದೆಹಲಿಯ ರಾಮ್ಜಾಸ್ ಕಾಲೇಜು ವಿದ್ಯಾರ್ಥಿಯಾಗಿರುವ 23 ವರ್ಷದ ಸುಮಿತ್ ಗ್ರಾಮದ ಪ್ಯಾರಾ ಅಥ್ಲೀಟ್ ಒಬ್ಬರ ನೆರವಿನಿಂದ ಈ ಹಂತಕ್ಕೆ ಬೆಳೆದಿದ್ದಾರೆ.

ಅಭಿನಂದನೆಯ ಹೊಳೆ; ಬಹುಮಾನದ ಹೂಮಳೆ
ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಪದಕಗಳನ್ನು ಗೆದ್ದ ಪ್ಯಾರಾಲಿಂಪಿಯನ್ನರನ್ನು ಅಭಿನಂದಿಸಿದ್ದಾರೆ. ರಾಜಸ್ತಾನ್ ಸರ್ಕಾರ ಅಲ್ಲಿನ ಕ್ರೀಡಾಪಟುಗಳಿಗೆ ಬಹುಮಾನವನ್ನೂ ಘೋಷಿಸಿದೆ. ಚಿನ್ನ ಗೆದ್ದ ಅವನಿ ಅವರಿಗೆ ₹ 3 ಕೋಟಿ ನೀಡುವುದಾಗಿ ಹೇಳಿರುವ ಸರ್ಕಾರ ಬೆಳ್ಳಿ ಗಳಿಸಿದ ದೇವೇಂದ್ರ ಜಜಾರಿಯಗೆ ₹ 2 ಕೋಟಿ ಮತ್ತು ಕಂಚಿನ ಪದಕ ವಿಜೇತ ಸುಂದರ್ ಸಿಂಗ್ ಗುರ್ಜರ್‌ಗೆ ₹ 1 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್‌ ಟ್ವೀಟ್ ಮಾಡಿದ್ದಾರೆ.

ಜನ್ಮಾಷ್ಟಮಿಯ ‘ಸುಂದರ’ ಗಳಿಗೆ
ರಾಜಸ್ತಾನದ ಕರೌಲಿ ಜಿಲ್ಲೆಯ ದೆವ್ಲೆನ್ ಗ್ರಾಮದ ಸುಂದರ್‌ ಸಿಂಗ್ ಅವರಿಗೆ ಇಬ್ಬರು ಮಕ್ಕಳು. ಅವರ ಪೈಕಿ ಒಂದು ಮಗು ಜನಿಸಿದ್ದು ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ. ಸುಂದರ್ ಸಿಂಗ್ ಜನ್ಮಾಷ್ಟಮಿಯ ದಿನವೇ ಪದಕ ಗೆದ್ದಿದ್ದಾರೆ. ಸುಂದರ್ ಅವರ ತಾಯಿ ಸ್ಥಳೀಯ ಗ್ರಾಮ ಪಂಚಾಯಿತಿಯ ಸರ್ಪಂಚ್ ಆಗಿದ್ದಾರೆ. ಬೆಳಿಗ್ಗೆ ಒಟ್ಟಾಗಿ ಕುಳಿತು ಟಿವಿಯಲ್ಲಿ ಸ್ಪರ್ಧೆ ವೀಕ್ಷಿಸಿದರು. ಪದಕ ಗೆದ್ದ ಕೂಡಲೇ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು.

ಚೀನಾದ ‘ಬಾಲಕಿ’ಗೆ ದಾಖಲೆ ಸಂಭ್ರಮ
ಚೀನಾವನ್ನು ಪ್ರತಿನಿಧಿಸಿರುವ ಅತಿ ಕಿರಿಯ ಕ್ರೀಡಾಪಟು ಜಿಯಾಂಗ್ ಯುಯಾನ್ ತಮ್ಮದೇ ಹೆಸರಿನಲ್ಲಿದ್ದ ವೀಶ್ವ ದಾಖಲೆ ಮುರಿದು ಚಿನ್ನ ಗಳಿಕೆಯತ್ತ ಸಾಗಿದರು. 16 ವರ್ಷ ವಯಸ್ಸಿನ ಈಜುಪಟು ಜಿಯಾಂಗ್ ಅವರು ಎಸ್‌–6 ವಿಭಾಗದ 50 ಮೀಟರ್ಸ್‌ ಬಟರ್‌ಫ್ಲೈನಲ್ಲಿ 34.56 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮಾಡಿದ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು. ಹಿಂದಿನ ದಾಖಲೆಗಿಂತ0.30 ಸೆಕೆಂಡುಗಳಷ್ಟು ಮೊದಲು ಅವರು ಗುರಿ ಸೇರಿದರು.

ವಿನೋದ್ ಕುಮಾರ್ ಪದಕ ವಾಪಸ್
ಎಫ್‌–52 ವಿಭಾಗದ ಡಿಸ್ಕಸ್‌ ಥ್ರೋದಲ್ಲಿ ಭಾನುವಾರ ಕಂಚಿನ ಪದಕ ಗೆದ್ದುಕೊಂಡಿದ್ದ ವಿನೋದ್ ಕುಮಾರ್ ಅವರಿಗೆ ಸೋಮವಾರ ನಿರಾಸೆಯ ದಿನವಾಗಿತ್ತು. ಅಂಗವೈಕಲ್ಯದ ಹಿನ್ನೆಲೆಯಲ್ಲಿ ವರ್ಗೀಕಿಸಿರುವ ಗುಂಪಿನಲ್ಲಿ ಸ್ಪರ್ಧಿಸಲು ಅವರು ಅನರ್ಹ ಎಂದು ಆಯೋಜಕರು ತಿಳಿಸಿದ ಕಾರಣ ಪದಕ ನೀಡದೇ ಇರಲು ನಿರ್ಧರಿಸಲಾಯಿತು.

ಭಾನುವಾರ ಪದಕ ಗೆದ್ದ ನಂತರ ಕೆಲವು ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಫಲಿತಾಂಶ ತಡೆಹಿಡಿಯಲಾಗಿತ್ತು. ಪದಕ ಪ್ರದಾನ ಸಮಾರಂಭವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು. ‘ವಿನೋದ್ ಕುಮಾರ್‌ ಅವರನ್ನು ನಿರ್ದಿಷ್ಟ ವಿಭಾಗದಲ್ಲಿ ಸೇರಿಸಲು ಸಾಧ್ಯವಿಲ್ಲ. ಅವರ ವಿಭಾಗದ ವರ್ಗೀಕರಣ ಪೂರ್ಣಗೊಂಡಿಲ್ಲ ಎಂದು ನಮೂದಿಸಲಾಗಿದ್ದು ಪದಕ ನೀಡದೇ ಇರಲು ನಿರ್ಧರಿಸಲಾಗಿದೆ’ ಎಂದು ಆಯೋಜಕರು ತಿಳಿಸಿದ್ದಾರೆ.

*
ಆರಂಭದಲ್ಲಿ ಫಿಜಿಯೊ ಒಬ್ಬರ ನೆರವಿನಿಂದ ವ್ಯಾಯಾಮ ಮತ್ತು ಸ್ಟ್ರೆಚಿಂಗ್ ಮಾಡುತ್ತಿದ್ದೆ. ಕ್ರಮೇಣ ತಂದೆ ತಾಯಿಯೇ ನನ್ನ ವ್ಯಾಯಾಮದ ಗುರುಗಳಾದರು. ನನ್ನ ಸಾಮರ್ಥ್ಯವನ್ನು ಸಾಬೀತು ಮಾಡುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.
-ಅವನಿ ಲೇಖರ, ಚಿನ್ನದ ಗೆದ್ದ ಶೂಟ್‌

*
ಕ್ರೀಡೆಯಲ್ಲಿ ಏಳು–ಬೀಳು ಸಹಜ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಾಮರ್ಥ್ಯ ಹೂಡಿ ಜಾವೆಲಿನ್ ಎಸೆದಿದ್ದೇನೆ. ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ. ಆದರೆ ಚಿನ್ನದ ಪದಕ ಶ್ರೀಲಂಕಾ ಅಥ್ಲೀಟ್‌ ಪಾಲಾಯಿತು. ಇದರಲ್ಲಿ ನನಗೇನೂ ಬೇಸರ ಇಲ್ಲ.
-ದೇವೇಂದ್ರ ಜಜಾರಿಯ, ಬೆಳ್ಳಿ ಗೆದ್ದ ಜಾವೆಲಿನ್ ಪಟು

*
ಲಾಕ್‌ಡೌನ್‌ನಿಂದಾಗಿ ಎಷ್ಟೋ ಸೌಲಭ್ಯಗಳಿಂದ ವಂಚಿತನಾಗಿದ್ದೆ. ಆದ್ದರಿಂದ ಹಿಂದಿನ 18 ತಿಂಗಳು ತುಂಬ ಕಷ್ಟಕರವಾಗಿದ್ದವು. ಬೆಳ್ಳಿ ಪದಕ ಗೆಲ್ಲಲು ಸಾಧ್ಯವಾದದ್ದು ಅಪಾರ ಖುಷಿ ತಂದಿದೆ.
-ಯೋಗೇಶ್ ಕಥುನಿಯಾ ಬೆಳ್ಳಿ ಪದಕ ಗೆದ್ದ ಕ್ರೀಡಾಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.