ADVERTISEMENT

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಬರ್ಬೊವಾ– ಸಿನಿಯಾಕೊವಾಗೆ ಡಬಲ್ಸ್ ಗರಿ

ಇಗಾ ಸ್ವಾಟೆಕ್ – ಬೆಥನಿಗೆ ನಿರಾಸೆ

ರಾಯಿಟರ್ಸ್
Published 13 ಜೂನ್ 2021, 14:01 IST
Last Updated 13 ಜೂನ್ 2021, 14:01 IST
ಮಹಿಳಾ ಡಬಲ್ಸ್ ಪ್ರಶಸ್ತಿಯೊಂದಿಗೆ ಕಟೆರಿನಾ ಸಿನಿಯಾಕೊವಾ (ಎಡ) ಮತ್ತು ಬರ್ಬೊರಾ ಕ್ರೆಚಿಕೊವಾ– ಎಪಿ ಚಿತ್ರ
ಮಹಿಳಾ ಡಬಲ್ಸ್ ಪ್ರಶಸ್ತಿಯೊಂದಿಗೆ ಕಟೆರಿನಾ ಸಿನಿಯಾಕೊವಾ (ಎಡ) ಮತ್ತು ಬರ್ಬೊರಾ ಕ್ರೆಚಿಕೊವಾ– ಎಪಿ ಚಿತ್ರ   

ಪ್ಯಾರಿಸ್‌: ಜೆಕ್‌ ಗಣರಾಜ್ಯದ ಬರ್ಬೊರಾ ಕ್ರೆಚಿಕೊವಾ ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್‌ನಲ್ಲೂ ಪಾರಮ್ಯ ಮೆರೆದಿದ್ದಾರೆ. ಶನಿವಾರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಅವರು, ಭಾನುವಾರ ತಮ್ಮದೇ ದೇಶದ ಕಟೆರಿನಾ ಸಿನಿಯಾಕೊವಾ ಜೊತೆಗೂಡಿ ಡಬಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಫೈನಲ್ ಹಣಾಹಣಿಯಲ್ಲಿ ಜೆಕ್ ಆಟಗಾರ್ತಿಯರು 6-4, 6-2ರಿಂದ ಪೋಲೆಂಡ್‌ನ ಇಗಾ ಸ್ವಾಟೆಕ್‌ ಹಾಗೂ ಅಮೆರಿಕದ ಬೆಥನಿ ಮಟೆಕ್‌ ಸ್ಯಾಂಡ್ಸ್ ಅವರನ್ನು ಪರಾಭವಗೊಳಿಸಿದರು.

ಕ್ರೆಚಿಕೊವಾ 2000 ಇಸ್ವಿಯ ಬಳಿಕ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮಹಿಳಾ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದ ಮೊದಲ ಆಟಗಾರ್ತಿ ಎನಿಸಿಕೊಂಡರು. 2000ರಲ್ಲಿ ಫ್ರಾನ್ಸ್‌ನ ಮೇರಿ ಪಿಯರ್ಸ್‌ ಈ ಶ್ರೇಯ ಗಳಿಸಿದ್ದರು.

ADVERTISEMENT

25 ವರ್ಷದ ಕ್ರೆಚಿಕೊವಾ ಶನಿವಾರ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಮೂಲಕ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನ ಗಳಿಸಿದ್ದರು. ಸೋಮವಾರ ಪ್ರಕಟವಾಗುವ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ ಅವರು ಅಗ್ರಸ್ಥಾನಕ್ಕೇರಲಿದ್ದಾರೆ.

2020ರ ಆವೃತ್ತಿಯ ಸಿಂಗಲ್ಸ್ ವಿಭಾಗದ ಚಾಂಪಿಯನ್‌ ಸ್ವಾಟೆಕ್‌ ಮತ್ತು ಮ್ಯಾಟೆಕ್ ಸ್ಯಾಂಡ್ಸ್ ಮೂರನೇ ಬಾರಿ ಒಟ್ಟಾಗಿ ಕಣಕ್ಕಿಳಿದಿದ್ದರು. ಸಿನಿಯಾಕೊವಾ ಅವರ ವೇಗದ ಚಲನೆ ಹಾಗೂ ಕ್ರೆಚಿಕೊವಾ ಅವರ ಪ್ರಬಲ ಬೇಸ್‌ಲೈನ್ ಹೊಡೆತಗಳ ಮುಂದೆ ಅವರ ಆಟ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.