ADVERTISEMENT

ವಿದ್ಯುತ್‌ ಕಡಿತ: ಕಳಪೆ ಟ್ರಾನ್ಸ್‌ಫಾರ್ಮರ್‌ ಕಾರಣ

ವಿದ್ಯುತ್‌ ಪರಿವರ್ತಕಗಳ ನಿಖರ ದತ್ತಾಂಶವೇ ಬೆಸ್ಕಾಂ ಬಳಿ ಇಲ್ಲ !

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 20:34 IST
Last Updated 13 ಜೂನ್ 2020, 20:34 IST
ಕಳಪೆ ನಿರ್ವಹಣೆಯಿಂದ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗುತ್ತಿರುವುದು ವಿದ್ಯುತ್‌ ಕಡಿತಕ್ಕೆ ಕಾರಣವಾಗುತ್ತಿದೆ -- –ಚಿತ್ರ/ಏಕ್ತಾ ಸಾವಂತ್
ಕಳಪೆ ನಿರ್ವಹಣೆಯಿಂದ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗುತ್ತಿರುವುದು ವಿದ್ಯುತ್‌ ಕಡಿತಕ್ಕೆ ಕಾರಣವಾಗುತ್ತಿದೆ -- –ಚಿತ್ರ/ಏಕ್ತಾ ಸಾವಂತ್   

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಿಯಮಿತವಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಹಲವೊಮ್ಮೆ ಹಲವು ಗಂಟೆಗಳಾದರೆ, ಕೆಲವೊಮ್ಮೆ ದಿನಪೂರ್ತಿ ವಿದ್ಯುತ್‌ ಇರುವುದಿಲ್ಲ. ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಇಂತಹ ಅನಿಯಮಿತ ವಿದ್ಯುತ್‌ ಕಡಿತದಿಂದ ಸಾರ್ವಜನಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ಪದೇ ಪದೇ ವಿದ್ಯುತ್‌ ಕಡಿತವಾಗುತ್ತಿರುವುದರಿಂದ ಮನೆಯಲ್ಲಿನ ರೆಫ್ರಿಜರೇಟರ್, ಎ.ಸಿ, ಟಿ.ವಿಗಳಿಗೆ ಹೆಚ್ಚು ಹಾನಿಯಾಗುತ್ತಿದೆ. ಕೈಗಾರಿಕೆಗಳಲ್ಲಿಯೂ ಇಂತಹ ಅನಿಯಮಿತ ವಿದ್ಯುತ್‌ ಕಡಿತದಿಂದ ಉತ್ಪಾದನೆ ಮೇಲೆ ಹೊಡೆತ ಬೀಳುತ್ತಿದೆ. ಈ ಸಮಸ್ಯೆಗೆ ಪ್ರಮುಖ ಕಾರಣ ವಿದ್ಯುತ್‌ ಪರಿವರ್ತಕಗಳ(ಟ್ರಾನ್ಸ್‌ಫಾರ್ಮರ್‌) ಕಳಪೆ ನಿರ್ವಹಣೆ. ಇಂತಹ ಕಳಪೆ ಗುಣಮಟ್ಟದ‍ಪರಿವರ್ತಕಗಳಿಂದ ಬೆಸ್ಕಾಂಗೂ ಆರ್ಥಿಕವಾಗಿ ದೊಡ್ಡ ಹೊರೆ ಬೀಳುತ್ತಿದೆ.

ಕೆಟ್ಟು ಹೋಗದ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಿಸುವುದಕ್ಕಾಗಿಯೇ 2017–18ರಲ್ಲಿ ಬೆಸ್ಕಾಂ ₹145 ಕೋಟಿ ಖರ್ಚು ಮಾಡಿದೆ. ಆದರೆ, ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ನಿರ್ವಹಣೆ ಕೊರತೆಯಿಂದ ಈ ಸಮಸ್ಯೆ ಪರಿಹಾರವಾಗಿಲ್ಲ. ವಿದ್ಯುತ್‌ ಪರಿವರ್ತಕಗಳಿಗೆ ಮೀಟರ್‌ ಅಳವಡಿಸುವುದರಿಂದ ವಿದ್ಯುತ್‌ ನಷ್ಟವನ್ನು ತಪ್ಪಿಸಬಹುದಲ್ಲದೆ, ಪದೇ ಪದೇ ವಿದ್ಯುತ್‌ ಕಡಿತವಾಗುವುದಕ್ಕೂ ಕಡಿವಾಣ ಹಾಕಬಹುದು.

ADVERTISEMENT

ಟ್ರಾನ್ಸ್‌ಫಾರ್ಮರ್‌ ಮೀಟರಿಂಗ್‌ ಏಕೆ ಅವಶ್ಯಕ ?: ವಿದ್ಯುತ್‌ ಮಾರ್ಗಗಳ ಮೂಲಕ ಪೂರೈಕೆಯಾಗುವುದು ಹೈವೋಲ್ಟೇಜ್‌ ವಿದ್ಯುತ್. ಆದರೆ, ನಮ್ಮಮನೆಗಳಲ್ಲಿನ ವಿದ್ಯುತ್‌ ಉಪಕರಣಗಳು ಕಡಿಮೆ ವೋಲ್ಟೇಜ್‌ ವಿದ್ಯುತ್‌ನಿಂದ ಕೆಲಸ ಮಾಡುತ್ತವೆ. ಹೀಗಾಗಿ, ಹೈವೋಲ್ಟೇಜ್‌ ವಿದ್ಯುತ್‌ ಅನ್ನು, ಲೋವೋಲ್ಟೇಜ್‌ ವಿದ್ಯುತ್‌ ಆಗಿ ಪರಿವರ್ತಿಸಬೇಕಾಗುತ್ತದೆ. ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಈ ವೋಲ್ಟೇಜ್‌ ಪರಿವರ್ತನೆಯ ಕಾರ್ಯ ನಡೆಯುತ್ತದೆ. ಮೀಟರ್‌ ಅಳವಡಿಸುವುದರಿಂದ ನಿರ್ದಿಷ್ಟ ಟ್ರಾನ್ಸ್‌ಫಾರ್ಮರ್ ಎಷ್ಟು ವಿದ್ಯುತ್‌ ಬಳಸಿಕೊಂಡಿತು ಎಂಬ ಲೆಕ್ಕ ಸಿಗುತ್ತದೆ. ಅಂದರೆ, ಗ್ರಾಹಕರಿಗೆ ಆ ಮನೆಯ ಸಾಮರ್ಥ್ಯಕ್ಕಿಂತ ಕಡಿಮೆ ಅಥವಾ ಹೆಚ್ಚು (ಓವರ್‌ಲೋಡ್‌) ವಿದ್ಯುತ್‌ ಪೂರೈಸಲಾಗಿದೆಯೇ ಎಂಬ ಬಗ್ಗೆ ದತ್ತಾಂಶ ಸಿಗುತ್ತದೆ.

ಪರಿವರ್ತಕಗಳಿಂದ ಓವರ್‌ಲೋಡ್‌ ವಿದ್ಯುತ್‌ ಪೂರೈಕೆಯಾದರೆ ಶಾರ್ಟ್‌ ಸರ್ಕೀಟ್‌ ಆಗಿ ಫ್ಯೂಸ್‌ಗೆ ಹಾನಿಯಾಗುವ ಮೂಲಕ ವಿದ್ಯುತ್‌ ಕಡಿತಗೊಳ್ಳುತ್ತದೆ. ಟ್ರಾನ್ಸ್‌ಫಾರ್ಮರ್‌ ಮೀಟರಿಂಗ್‌ ನಗರ ಪ್ರದೇಶದಲ್ಲಿ ಶೇ 100ರಷ್ಟು ಪೂರ್ಣಗೊಂಡಿದ್ದರೆ, ಗ್ರಾಮೀಣ
ಪ್ರದೇಶಗಳಲ್ಲಿ ಶೇ 62ರಷ್ಟು ಮುಗಿದಿದೆ ಎಂದು ಬೆಸ್ಕಾಂ ಹೇಳುತ್ತದೆ. ಆದರೆ, ಸಿಸ್ಟೆಪ್‌ (ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿನಿರೂಪಣೆ ಕೇಂದ್ರ) ನೇತೃತ್ವದಲ್ಲಿ ನಾವು ನಡೆಸಿದ ಸಮೀಕ್ಷೆಯ ಪ್ರಕಾರ, ವಾಸ್ತವ ಬೇರೆಯೇ ಇದೆ.

ಮೀಟರ್‌ನಲ್ಲೇ ದೋಷ: ‘ಬೆಸ್ಕಾಂ ಅಳವಡಿಸಿರುವ 707 ಟ್ರಾನ್ಸ್‌ಫಾರ್ಮರ್‌ಗಳ ಪರೀಕ್ಷೆ ನಡೆಸಿದ್ದೇವೆ. ಶೇ 40ರಷ್ಟು ವಿದ್ಯುತ್‌ಪರಿವರ್ತಕಗಳಿಗೆ ಮೀಟರ್‌ ಇರಲಿಲ್ಲ. ಮೀಟರ್‌ ಹೊಂದಿದ್ದ ಉಳಿದ ವಿದ್ಯುತ್‌ ಪರಿವರ್ತಕಗಳ ಪೈಕಿ ಶೇ 49ರಷ್ಟು ಮೀಟರ್‌ಗಳು ಕಳಪೆ ಗುಣಮಟ್ಟ ಹೊಂದಿದ್ದವು ಅಥವಾ ಹಾನಿಗೊಳಗಾಗಿದ್ದವು’ ಎಂದು ಸಿಸ್ಟೆಪ್‌ ಸಮೀಕ್ಷೆ ಹೇಳುತ್ತದೆ.

(ಸಾರ್ವಜನಿಕ ಧನಸಹಾಯದಿಂದ ನಡೆಯುವ ಆನ್‌ಲೈನ್‌ ಸುದ್ದಿಮಾಧ್ಯಮ ಊರ್ವಾಣಿ ಪ್ರತಿಷ್ಠಾನದ ‘ಸಿಟಿಜನ್‌ ಮ್ಯಾಟರ್ಸ್’‌ ವೆಬ್‌ಸೈಟ್‌ನ ವರದಿಗಾರರು ಈ ವರದಿ ಸಿದ್ಧಪಡಿಸಿದ್ದಾರೆ. ಇಂಗ್ಲಿಷ್‌ನಲ್ಲಿರುವ ಮೂಲ ಲೇಖನವನ್ನು ಓದಲು ಈ ಲಿಂಕ್‌ ಬಳಸಬಹುದು https://bengaluru.citizenmatters.in/bengaluru-bescom-power-cut-transformers-poorly-maintained-metering-cstep-study-46438)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.