ADVERTISEMENT

ರಫೇಲ್ ಡೀಲ್‌: ಸುಪ್ರೀಂಕೋರ್ಟ್‌ ತೀರ್ಪಿನ ನಂತರವೂ ಬಗೆಹರಿಯದೆ ಉಳಿದ 6 ಪ್ರಶ್ನೆಗಳು

ಖರೀದಿ ಒಪ್ಪಂದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್‌ ಚಿಟ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 11:13 IST
Last Updated 15 ಡಿಸೆಂಬರ್ 2018, 11:13 IST
   

ಬೆಂಗಳೂರು: ಸುಪ್ರೀಂಕೋರ್ಟ್‌ ನಿನ್ನೆಯಷ್ಟೇ (ಡಿ.14) ರಫೇಲ್ ಒಪ್ಪಂದ ವಿರೋಧಿಸಿ ಸಲ್ಲಿಕೆಯಾಗಿದ್ದ ಎಲ್ಲ ರಿಟ್ ಅರ್ಜಿಗಳನ್ನು ವಜಾ ಮಾಡಿ, ‘ಈ ಒಪ್ಪಂದದ ಪ್ರಕ್ರಿಯೆಗಳನ್ನು ಅನುಮಾನದಿಂದ ನೋಡುವ ಅಗತ್ಯ ಕಾಣಿಸುವುದಿಲ್ಲ’ಎಂದು ಅಭಿಪ್ರಾಯಪಟ್ಟಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ಪೀಠವು ಒಮ್ಮತದ ತೀರ್ಪು ನೀಡಿ, ‘36 ರಫೇಲ್ ವಿಮಾನಗಳ ಖರೀದಿ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಯಾವುದೇ ಕಾರಣ ಕಂಡು ಬಂದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಇದೇ ಕಾರಣಕ್ಕೆ ಅರ್ಜಿದಾರರ ಕೋರಿಕೆಯಂತೆ ತನ್ನ ಕಣ್ಗಾವಲಿನಲ್ಲಿ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿಲ್ಲ.

ರಫೇಲ್ ಖರೀದಿ ಒಪ್ಪಂದ ವಿರೋಧಿಸಿದ್ದ ಅರ್ಜಿದಾರರು ಪ್ರಸ್ತಾಪಿಸಿದ್ದ ಮೂರು ಅಂಶಗಳನ್ನು ನ್ಯಾಯಾಲಯವು ತನ್ನ ತೀರ್ಪಿನ ತಳಹದಿಯಾಗಿ ಪರಿಗಣಿಸಿದಂತೆ ಕಂಡು ಬರುತ್ತದೆ. ಈ ತೀರ್ಪಿನ ನಂತರವೂ ಉತ್ತರ ಸಿಗದ ಪ್ರಶ್ನೆಗಳು ಉಳಿದುಕೊಂಡಿವೆ. ಇವುಗಳನ್ನು ‘ಕ್ವಿಂಟ್‌’ ಜಾಲತಾಣದ ವಕ್ಷಾ ಸಚ್‌ದೇವ್ ಪಟ್ಟಿ ಮಾಡಿದ್ದಾರೆ.

ADVERTISEMENT

ಅಂಶ 1:
ಒಪ್ಪಂದ ಮಾಡಿಕೊಳ್ಳುವಾಗ ಸರಿಯಾದ ಕ್ರಮ ಅನುಸರಿಸಿಲ್ಲ

ನ್ಯಾಯಾಲಯದ ಪ್ರತಿಕ್ರಿಯೆ: ಒಪ್ಪಂದ ಮಾಡಿಕೊಳ್ಳುವ ಮೊದಲು ಅನುಸರಿಸಿದ ಕ್ರಮಗಳ ಬಗ್ಗೆ ನಮಗೆ (ನ್ಯಾಯಾಲಯಕ್ಕೆ) ತೃಪ್ತಿ ಇದೆ. ಈ ಪ್ರಕ್ರಿಯೆನ್ನು ಅನುಮಾನಿಸಲು ಯಾವುದೇ ಆಧಾರ ಕಂಡುಬರುತ್ತಿಲ್ಲ. ಸಣ್ಣಪುಟ್ಟ ಉಲ್ಲಂಘನೆಗಳು ನಡೆದಿದ್ದರೂ, ಆ ಕಾರಣಕ್ಕೆ ಗುತ್ತಿಗೆಯನ್ನು ರದ್ದುಪಡಿಸುವ ಅಥವಾ ನ್ಯಾಯಾಲಯದಿಂದ ವಿಸ್ತೃತ ಪರಿಶೀಲನೆ ಅಗತ್ಯ ಎನ್ನುವ ಸಂದರ್ಭ ಸೃಷ್ಟಿಯಾಗುವುದಿಲ್ಲ.

ಅಂಶ 2:
ಒಪ್ಪಂದದ ಮೊತ್ತ ತುಂಬಾ ಜಾಸ್ತಿ. ಹೀಗಾಗಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ

ನ್ಯಾಯಾಲಯದ ಪ್ರತಿಕ್ರಿಯೆ: ಇಂಥ ಪ್ರಕರಣಗಳಲ್ಲಿ ಒಪ್ಪಂದಕ್ಕೆಂದು ಸಲ್ಲಿಕೆಯಾಗಿದ್ದ ದರಗಳನ್ನು ಹೋಲಿಸಿ ನೋಡುವುದು ನ್ಯಾಯಾಲಯದ ಕೆಲಸವಲ್ಲ. ಗೌಪ್ಯವಾಗಿ ಇರಿಸಬೇಕಾದ ಹಲವು ವಿಚಾರಗಳು, ವಿವರಗಳು ಮತ್ತು ಉತ್ಪನ್ನಗಳು ಈ ಪ್ರಕರಣದಲ್ಲಿ ಇವೆ. ಹೀಗಾಗಿ ನಾವು ಇಲ್ಲ ಎಂದೇ ಹೇಳಬೇಕಾಗುತ್ತದೆ.

ಅಂಶ 3:
ಅನಿಲ್ ಅಂಬಾನಿ ಸಾರಥ್ಯದ ರಿಲಯನ್ಸ್‌ಗೆ ಸಹಾಯ ಮಾಡಲು ಸಹವರ್ತಿ ಸಂಸ್ಥೆಯೊಂದಿಗಿನ ಒಪ್ಪಂದದಲ್ಲಿ (ಆಫ್‌ಸೆಟ್) ಹಸ್ತಕ್ಷೇಪ ಮಾಡಲಾಗಿದೆ

ನ್ಯಾಯಾಲಯದ ಪ್ರತಿಕ್ರಿಯೆ: ಈ ಪ್ರಕ್ರಿಯೆಯಲ್ಲಿ ಸರ್ಕಾರದ ಪಾತ್ರ ದೃಢಪಟ್ಟಿಲ್ಲ. ಕೇವಲ ಪತ್ರಿಕಾ ಸಂದರ್ಶನಗಳು ಅಥವಾ ಸಲಹೆಗಳು ನ್ಯಾಯಾಲಯದ ಪರಿವೀಕ್ಷಣೆಗೆ ತಳಹದಿ ಆಗಲಾರದು. ಇಂಥ ವರದಿಗಳನ್ನು ಎರಡೂ ಪಕ್ಷಗಳು (ಮೋದಿ ಸರ್ಕಾರ ಮತ್ತು ಡಸಾಲ್ಟ್‌ ಕಂಪನಿ) ಅಲ್ಲಗಳೆದಿರುವುದನ್ನು ನಾವು ಪರಿಗಣಿಸಬೇಕಾಗುತ್ತದೆ.

***

ನ್ಯಾಯಾಲಯದ ತೀರ್ಪಿಗೆ ತಳಹದಿ ಎಂದು ಪರಿಗಣಿತವಾಗಿದ್ದ ಈ ಮೂರು ಅಂಶಗಳು ಮತ್ತು ನ್ಯಾಯಾಲಯ ನೀಡಿರುವ ತೀರ್ಪು ಗಮನಿಸಿದ ಹಲವು ತಜ್ಞರು'ನ್ಯಾಯಾಲಯ ಈಗ ನೀಡಿರುವ ತೀರ್ಪು ರಫೇಲ್ ಖರೀದಿ ಒಪ್ಪಂದದ ಸರಿ-ತಪ್ಪುಗಳನ್ನು ವಿಮರ್ಶಿಸಿಲ್ಲ. ಬಹುಮಟ್ಟಿಗೆ ನ್ಯಾಯಾಂಗಕ್ಕೆ ಇರುವ ಮಿತಿಗಳನ್ನೇ ಆಧಾರವಾಗಿರಿಸಿಕೊಂಡು ತೀರ್ಪು ನೀಡಿದೆ. ನ್ಯಾಯಾಲಯದ ಈ ಕ್ರಮ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದ ಜಾಣತನದ ನಡೆ' ಎಂದು ವಿಶ್ಲೇಷಿಸುತ್ತಿದ್ದಾರೆ.

ನ್ಯಾಯಾಲಯವು ತೀರ್ಪಿಗೆ ತಳಹದಿಯಾಗಿ ಪರಿಗಣಿಸಿರುವ ಅಂಶಗಳಲ್ಲಿ ಸಾಕಷ್ಟು ಸಮಸ್ಯೆಗಳಿರುವುದು ಕಂಡು ಬರುತ್ತದೆ. ತನ್ನ ವ್ಯಾಪ್ತಿಗೆ ಮೀರಿದ ಅನೇಕ ಅಂಶಗಳು ಈ ಪ್ರಕರಣದಲ್ಲಿದೆ ಎಂದು ನ್ಯಾಯಾಲಯ ಹೇಳಿದೆ. ಆದರೆ ವಿಚಾರಣೆ ವೇಳೆ ಮಂಡನೆಯಾದ ವಾದಗಳಲ್ಲಿನ ಕೆಲ ಮುಖ್ಯ ಅಂಶಗಳನ್ನೇ ನ್ಯಾಯಾಲಯ ನಿರ್ಲಕ್ಷಿಸಿದೆ. ಸರ್ಕಾರದ ಹೇಳಿಕೆಗಳನ್ನು ಯಥಾವತ್ತು ಪರಿಗಣಿಸಿದೆ. ಅಷ್ಟೇಅಲ್ಲ ತೀರ್ಪಿನಲ್ಲಿರುವ ಕೆಲ ಸಾಲುಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ.

ಈ ಪ್ರಕರಣದಲ್ಲಿರುವ ವಿಚಾರಗಳು ನ್ಯಾಯಾಂಗದ ವ್ಯಾಪ್ತಿಯನ್ನು ಮೀರಿವೆ ಎಂದು ಹೇಳಿರುವ ನ್ಯಾಯಾಧೀಶರು, ಸಹವರ್ತಿ ಸಂಸ್ಥೆಯ ಆಯ್ಕೆಯೂ ಸೇರಿದಂತೆ ಕೆಲ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಒಬ್ಬ ತನ್ನ ಕೈಲಿ ಸಂಪೂರ್ಣ ರೊಟ್ಟಿಯನ್ನು ಹಾಗೆಯೇ ಇರಿಸಿಕೊಳ್ಳಲು ಮತ್ತು ಅದನ್ನು ಅದೇ ಸಮಯದಲ್ಲಿ ತಿನ್ನಲು ಖಂಡಿತ ಸಾಧ್ಯವಿಲ್ಲ (having one’s cake and eating it) . ನ್ಯಾಯಾಲಯದ ತೀರ್ಪಿನಲ್ಲಿಯೂ ಈ ಗೊಂದಲವಿದೆ. ಅದು ಒಂದೆಡೆ, ‘ಈ ಪ್ರಕರಣದಲ್ಲಿ ಸರ್ಕಾರದ ಸಹಭಾಗಿತ್ವ ಇಲ್ಲ. ಹೀಗಾಗಿ ಪ್ರಕರಣದ ಪರಿಶೀಲನೆ ಸಾಧ್ಯವಿಲ್ಲ’ ಎನ್ನುತ್ತಿದೆ. ಇನ್ನೊಂದೆಡೆ, ‘ಖಾಸಗಿ ಕಂಪನಿಯೊಂದರ ವಾಣಿಜ್ಯ ಹಿತಾಸಕ್ತಿಗಳನ್ನು ಕಾಪಾಡಲು ನಡೆದಿರುವ ಅಕ್ರಮ ಯತ್ನಗಳ ಬಗ್ಗೆ ಯಾವುದೇ ಲಿಖಿತ ಆಧಾರ ಇಲ್ಲ’ ಎಂದೂ ಹೇಳುತ್ತಿದೆ.

ನ್ಯಾಯಾಲಯದ ತೀರ್ಪನ್ನು ಸಂಪೂರ್ಣ ಓದಿದ ನಂತರವೂ ಉತ್ತರ ಸಿಗದ ಪ್ರಶ್ನೆಗಳಿವು...

ಪ್ರಶ್ನೆ 1:
ಡಸಾಲ್ಟ್‌ (ರಫೇಲ್) ಮತ್ತು ಎಚ್‌ಎಎಲ್ ನಡುವೆ ಆಗಿದ್ದ ಮೂಲ ಒಪ್ಪಂದದಿಂದ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ನ್ಯಾಯಾಲಯ ಹೇಗೆ ಒಪ್ಪಿಕೊಂಡಿತು?

'ಎಚ್‌ಎಎಲ್ ಮತ್ತು ಡಸಾಸ್ಟ್‌ ನಡುವೆ ಬಗೆಹರಿಯದ ಅನೇಕ ಸಂಗತಿಗಳಿದ್ದವು. ಇದರಿಂದಾಗಿಯೇ 126 ವಿಮಾನಗಳನ್ನು ಖರೀದಿಸುವ ಒಪ್ಪಂದ ಊರ್ಜಿತವಾಗುತ್ತಿರಲಿಲ್ಲ. ಹೀಗಾಗಿ ಪ್ರಧಾನಿ ಏಪ್ರಿಲ್ 2015ರಂದು ಹೊಸ ಒಪ್ಪಂದವನ್ನು ಘೋಷಿಸಿದರು' ಎಂದು ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರವನ್ನು (ಅಫಿಡವಿಟ್) ನ್ಯಾಯಾಲಯ ಒಪ್ಪಿಕೊಂಡಿರುವುದು ತೀರ್ಪಿನ 18ನೇ ಪ್ಯಾರಾ ಓದಿದಾಗ ತಿಳಿದುಬರುತ್ತದೆ.

ಆದರೆ...
ಡಸಾಲ್ಟ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಎರಿಕ್ ಟ್ರಾಪಿಯರ್ 25ನೇ ಮಾರ್ಚ್ 2015ರಲ್ಲಿ ವಾಯುಪಡೆಯ ಮುಖ್ಯಸ್ಥರು ಮತ್ತು ಎಚ್‌ಎಎಲ್ ಅಧ್ಯಕ್ಷರ ಸಮಕ್ಷಮ ಸಾರ್ವಜನಿಕ ಹೇಳಿಕೆಯೊಂದನ್ನು ನೀಡಿದ್ದರು. 'ಜವಾಬ್ದಾರಿ ಹಂಚಿಕೆಗೆ ಸಂಬಂಧಿಸಿದಂತೆ ಎಚ್‌ಎಎಲ್ ಅಧ್ಯಕ್ಷರೊಂದಿಗೆ ಮಾಡಿಕೊಂಡಿರುವ ಒಪ್ಪಂದದಿಂದ ನನಗೆ ಸಂತಸವಾಗಿದೆ. ಒಪ್ಪಂದದ ಕರಾರುಗಳು ಶೀಘ್ರ ಅಂತಿಮಗೊಳ್ಳಲಿದ್ದು ಸಮ್ಮಿತಿಯ ಸಹಿ ಬೀಳಲಿದೆ ಎಂದು ನಾನು ನಂಬುತ್ತೇನೆ’ ಎನ್ನುವುದು ಅವರ ಹೇಳಿಕೆಯ ಸಾರವಾಗಿತ್ತು.

ಪ್ರಶ್ನೆ 2:
ಮಾರ್ಚ್ 2015ರಲ್ಲಿ 'ಪ್ರಸ್ತಾವ ಕೋರಿಕೆ' (Request For Proposal- RFP) ಹಿಂಪಡೆಯುವ ಪ್ರಕ್ರಿಯೆ ಆರಂಭವಾಗಿತ್ತು ಎನ್ನುವುದು ನಿಜವೇ ಆಗಿದ್ದರೆ ವಿದೇಶಾಂಗ ವ್ಯವಹಾರಗಳ ಖಾತೆ ಕಾರ್ಯದರ್ಶಿ 'ಮಾತುಕತೆ ಇನ್ನೂ ನಡೆಯುತ್ತಿದೆ' ಎಂದು ಏಪ್ರಿಲ್ 2015ರಲ್ಲಿ ಏಕೆ ಹೇಳಿಕೆ ನೀಡಿದ್ದರು. ಮಾರ್ಚ್ 2015ರಲ್ಲಿ ಪ್ರಸ್ತಾವ ಹಿಂಪಡೆಯುವ ಪ್ರಕ್ರಿಯೆ ಆರಂಭವಾಗಿತ್ತು ಎಂಬುದನ್ನು ನಿರೂಪಿಸಲು ಸರ್ಕಾರ ಯಾವುದಾದರೂ ದಾಖಲೆಗಳನ್ನು ಸಲ್ಲಿಸಿದೆಯೇ?

'ಪ್ರಸ್ತಾವ ಕೋರಿಕೆ' ಹಿಂಪಡೆಯುವ ಪ್ರಕ್ರಿಯೆ ಮಾರ್ಚ್ 2015ರಲ್ಲಿಯೇ ಅರಂಭವಾಗಿತ್ತು ಎನ್ನುವ ಸರ್ಕಾರದ ಹೇಳಿಕೆಯನ್ನು ನ್ಯಾಯಾಲಯ ಈಗ ಒಪ್ಪಿಕೊಂಡಿದೆ. ಆದರೆ ಈ ವಿಚಾರವು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ಹಿಂದೆ ನೀಡಿದ ಯಾವುದೇ ಹೇಳಿಕೆಗಳಲ್ಲಿ ಉಲ್ಲೇಖವಾಗಿಲ್ಲ.

ಆದರೆ...
'ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರೆಂಚ್ ಕಂಪನಿ, ಎಚ್‌ಎಎಲ್ ಮತ್ತು ರಕ್ಷಣಾ ಇಲಾಖೆ ನಡುವೆ ಮಾತುಕತೆಗಳು ನಡೆಯುತ್ತಿವೆ' ಎಂದು ಏಪ್ರಿಲ್ 8, 2015ರಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಪ್ರಶ್ನೆ 3:
ಮಹಾಲೇಖಪಾಲರು ರಫೇಲ್ ಒಪ್ಪಂದದ ಬಗ್ಗೆ ವರದಿ ಸಿದ್ಧಪಡಿಸಿದ್ದಾರೆ. ಅದರ ಮೂಲ ಪ್ರತಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಂಸದೀಯ ಸಮಿತಿಗೆ ಕಳಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ ಯಾವ ಆಧಾರದ ಮೇಲೆ ನಂಬಿತು?

ತೀರ್ಪಿನ 25ನೇ ಪ್ಯಾರಾದಲ್ಲಿ ಮಹಾಲೇಖಪಾಲರು ರಫೇಲ್ ಒಪ್ಪಂದದ ಅಂಶಗಳನ್ನು ಪರಿಶೀಲಿಸಿ, ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ನೀಡಿದ್ದಾರೆ ಎನ್ನುವ ಉಲ್ಲೇಖವಿದೆ. ನ್ಯಾಯಮೂರ್ತಿಗಳ ಪ್ರಕಾರ 'ವರದಿಯ ಮೂಲ ಪ್ರತಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಅದು ಈಗ ಸಾರ್ವಜನಿಕವಾಗಿ ಲಭ್ಯವಿದೆ'.

ಆದರೆ...
ಸಂಸದೀಯ ಸಮಿತಿಯ ಮೂವರು ಸದಸ್ಯರು, 'ಸಮಿತಿಯು ಮಹಾಲೇಖಪಾಲರ ವರದಿಯನ್ನು ಪಡೆದುಕೊಂಡಿಲ್ಲ' ಎನ್ನುವ ಮೂಲಕ ತೀರ್ಪಿನಲ್ಲಿ ಉಲ್ಲೇಖವಾಗಿರುವ ಈ ಅಂಶವನ್ನು ನಿರಾಕರಿಸಿದ್ದಾರೆ. ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ಇದು ಯಾವಾಗ ಆಗಿತ್ತು' ಎಂದು ಪ್ರಶ್ನಿಸಿದ್ದಾರೆ. ಸಂಸದರಾದ ರಾಜೀವ್‌ ಗೌಡ, ಭರ್ತೃಹರಿ ಮಹ್ತಾಬ್ ಸಹ 'ಇಂಥದ್ದೊಂದು ವರದಿ ಇರುವ ಬಗ್ಗೆಯೇ ನಮಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಹೀಗಿರುವಾಗ ನ್ಯಾಯಾಲಯ ಇಂಥದ್ದೊಂದು ವರದಿಯನ್ನು ಸಮಿತಿಗೆ ಸಲ್ಲಿಸಲಾಗಿದೆ ಎಂದು ಹೇಗೆ ನಂಬಿತು?

ನ್ಯಾಯಾಲಯವು ಹೇಳಿರುವಂತೆ ಮಹಾಲೇಖಪಾಲರ ವರದಿಯ ಮೂಲಪ್ರತಿಯು ಸಾರ್ವಜನಿಕವಾಗಿ ಲಭ್ಯವಿಲ್ಲ. ಒಪ್ಪಂದದ ಬೆಲೆ ನಿರ್ಧಾರದ ಬಗ್ಗೆ ತಾನು ಪರಿಶೀಲಿಸಬೇಕಿಲ್ಲ ಎನ್ನುವ ನಿರ್ಧಾರಕ್ಕೆ ನ್ಯಾಯಾಲಯವು ಬರಲು ನೀಡಿರುವ ತರ್ಕವೇ ಇಂಥ ತಪ್ಪು ಮಾಹಿತಿಯನ್ನು ಅವಲಂಬಿಸಿದೆ.

ಪ್ರಶ್ನೆ 4:
ಸುಪ್ರೀಂಕೋರ್ಟ್ ಎರಡು ಸರ್ಕಾರಗಳ ನಡುವೆ ಒಪ್ಪಂದ (Inter-Governmental Agreement -IGA) ಆಗಿದೆ ಎನ್ನುವ ತೀರ್ಮಾನಕ್ಕೆ ಹೇಗೆ ಬಂತು?

ಫ್ರಾನ್ಸ್‌ ಸರ್ಕಾರವು 'ಒಪ್ಪಿಗೆ ಪತ್ರ' (ಲೆಟರ್ ಆಫ್ ಕಫರ್ಟ್) ಮಾತ್ರ ಮಾತ್ರ ಕೊಟ್ಟಿದೆ. 'ಸರ್ಕಾರದ ಖಾತ್ರಿ' (ಸಾವರಿನ್ ಗ್ಯಾರೆಂಟಿ) ಕೊಟ್ಟಿಲ್ಲ. ಹೀಗಾಗಿ ಇದು ಎರಡು ಸರ್ಕಾರಗಳ ನಡುವಣ ಒಪ್ಪಂದವಾಗಲು ಹೇಗೆ ಸಾಧ್ಯ ಎಂದು ಅರ್ಜಿದಾರರು ಪ್ರಶ್ನಿಸಿದ್ದರು. ಈ ಪ್ರಶ್ನೆಯನ್ನು ತೀರ್ಪಿನ 20ನೇ ಪ್ಯಾರಾದಲ್ಲಿ ಸುಪ್ರೀಂಕೋರ್ಟ್ ಪ್ರಸ್ತಾಪಿಸಿದೆ.

ಒಪ್ಪಂದದ ಬಗ್ಗೆ ನ್ಯಾಯಾಲಯ ತಳೆದಿರುವ ನಿಲುವನ್ನು ಅರ್ಥಮಾಡಿಕೊಳ್ಳಲು ಇದು ಮುಖ್ಯ ಸಂಗತಿ ಎನಿಸಿದೆ. ಎರಡು ಸರ್ಕಾರಗಳ ನಡುವೆ ಒಪ್ಪಂದವಾಗಿದ್ದರೆ ಮಾತ್ರ ರಕ್ಷಣಾ ಉತ್ಪನ್ನಗಳ ಖರೀದಿ ಪ್ರಕ್ರಿಯೆಯ (Defence Procurement Procedure- DPP) ನಿಯಮಾವಳಿಗಳಿಗಿಂತಲೂ ಭಿನ್ನವಾದ ರೀತಿಯಲ್ಲಿ ಟೆಂಡರ್‌, ಪ್ರಸ್ತಾವ ಕೋರಿಕೆಗಳನ್ನು ಮನ್ನಿಸಲು ಅವಕಾಶವಿದೆ. ನ್ಯಾಯಾಲಯವು ತೀರ್ಪಿನ 22ನೇ ಪ್ಯಾರಾದಲ್ಲಿ 'ಬಹುತೇಕ ನಿಯಮಾವಳಿಗಳನ್ನು ಅನುಸರಿಸಲಾಗಿದೆ' ಎಂದು ಹೇಳಿದೆ.

ಆದರೆ...
ನ್ಯಾಯಾಲಯವು ‘ಸರ್ಕಾರದ ಖಾತ್ರಿ’ ಕುರಿತ ಅರ್ಜಿದಾರರ ವಾದವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅರ್ಜಿದಾರರ ವಾದದಲ್ಲಿ ಏನು ತಪ್ಪಿದೆ ಎಂಬುದನ್ನೂ ವಿವರಿಸಿಲ್ಲ.

ಪ್ರಶ್ನೆ 5:
ಮುಕೇಶ್ ಅಂಬಾನಿ ಅವರ ರಿಲಯನ್ಸ್ ಮತ್ತು ಅನಿಲ್ ಅಂಬಾನಿ ಅವರ ರಿಲಯನ್ಸ್‌ ಕಂಪನಿಗಳನ್ನು ನ್ಯಾಯಾಲವು ಎರಡು ಪ್ರತ್ಯೇಕ ವ್ಯಾಪಾರಿ ಸಂಸ್ಥೆಗಳು ಎಂದು ಈ ಹಿಂದೆ ಹೇಳಿತ್ತು. ಆದರೆ ಈಗೇಕೆ ಇವೆರಡನ್ನೂ ಒಂದೇ ಎನ್ನುವಂತೆ ಬೆಸೆದು ಮಾತನಾಡುತ್ತಿದೆ?

ತೀರ್ಪಿನ 30ನೇ ಪ್ಯಾರಾದಲ್ಲಿ ಸಹವರ್ತಿ ಸಂಸ್ಥೆಗಳ ಪರಿಗಣನೆ ಕುರಿತು ನ್ಯಾಯಾಲಯದ ತೀರ್ಪು ಪ್ರಸ್ತಾಪಿಸಿದೆ. ‘2012ರಲ್ಲಿ 126 ಮಧ್ಯಮ ಶ್ರೇಣಿ ಯುದ್ಧ ವಿಮಾನಗಳ ಖರೀದಿ ಒಪ್ಪಂದ (original 126 MMRCA deal) ಸಂದರ್ಭ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಜೊತೆಗೆ ಡಸಾಲ್ಟ್ ಒಪ್ಪಂದ ಮಾಡಿಕೊಂಡಿತ್ತು’ ಎಂದು ತೀರ್ಪು ಹೇಳುತ್ತದೆ. ಅನಿಲ್ ಅಂಬಾನಿ ಅವರ ರಿಲಯನ್ಸ್ ಕುರಿತು ಮಾತನಾಡುವಾಗ 'ಮತ್ತೊಂದು ವ್ಯಾಪಾರಿ ಸಂಸ್ಥೆ' ಎಂದೇ ನ್ಯಾಯಾಧೀಶರು ಉಲ್ಲೇಖಿಸುತ್ತಾರೆ.

ಆದರೆ...
ತೀರ್ಪಿನ 32ನೇ ಪ್ಯಾರಾದಲ್ಲಿ ‘ಅನಿಲ್ ಅಂಬಾನಿ ಅವರ ರಿಲಯನ್ಸ್ ಏರೊಸ್ಟ್ರಕ್ಚರ್ ಲಿಮಿಟೆಡ್ ಈ ವರ್ಷದ (2018) ಆರಂಭದಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ, ಅದರ ಮಾತೃಸಂಸ್ಥೆಯಾಗಿರುವ ರಿಯಲ್ಸ್ ಕಂಪನಿ ಮತ್ತು ಡಸಾಲ್ಟ್‌ ನಡುವೆ 2012ರಿಂದಲೇ ಒಪ್ಪಂದ ಆಗಿರಬಹುದು’ ಎಂದು ಹೇಳುತ್ತದೆ. ಸರ್ಕಾರಿ ವಕೀಲರು ಮಂಡಿಸಲು ಯತ್ನಿಸಿದ ಈ ವಾದವನ್ನು ಪ್ರತಿವಾದಿಗಳು ಖಂಡಿಸಿದರು. ಮೇಲ್ನೋಟಕ್ಕೇ ಇದು ತಪ್ಪು ಮಾಹಿತಿಯಿಂದ ಕೂಡಿತ್ತು. ಆದರೂ ನ್ಯಾಯಾಧೀಶರು ಈ ವಾದವನ್ನು ಒಪ್ಪಿಕೊಂಡಿದ್ದು ಅಚ್ಚರಿಯ ವಿಷಯವಾಗಿದೆ.

ಪ್ರಶ್ನೆ 6:
‘ಅನಿಲ್ ಅಂಬಾನಿ ಅವರ ಉದ್ಯಮಕ್ಕೆ ಲಾಭ ಮಾಡಿಕೊಡಲೆಂದೇ ರಫೇಲ್‌ ಖರೀದಿಗೆ ಹೊಸ ಒಪ್ಪಂದ ರೂಪುಗೊಂಡಿತು’ ಎಂದು ಫ್ರಾನ್ಸ್‌ ದೇಶದ ಮಾಧ್ಯಮಗಳು ಏಪ್ರಿಲ್ 2015ರಲ್ಲಿ ಪ್ರಕಟಿಸಿದ್ದವು. ಸೆಪ್ಟೆಂಬರ್‌ 2018ರಲ್ಲಿ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೊ ಹೊಲಾಂಡ್ ಅವರು ಫ್ರೆಂಚ್ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನವೂ ಈ ಅಂಶವನ್ನು ಪುಷ್ಟೀಕರಿಸಿತ್ತು. ಮಾಧ್ಯಮಗಳ ವರದಿಯನ್ನು ನ್ಯಾಯಾಧೀಶರು ತಳ್ಳಿಹಾಕಿದ್ದೇಕೆ?

ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳೂ ಸೇರಿದಂತೆ ರಫೇಲ್ ಒಪ್ಪಂದದ ಬಗ್ಗೆ ಮತ್ತಷ್ಟು ತನಿಖೆ ಆಗಬೇಕು ಎನ್ನುವುದು ಎಲ್ಲ ಅರ್ಜಿದಾರರ ಮುಖ್ಯ ಕೋರಿಕೆ ಆಗಿತ್ತು. ಆದರೆ ನ್ಯಾಯಾಧೀಶರು, 'ರಫೇಲ್ ಖರೀದಿ ಒಪ್ಪಂದವನ್ನು ನ್ಯಾಯಾಲಯ ಪುನರ್‌ ಪರಿಶೀಲಿಸಬೇಕು’ ಎಂಬ ಒತ್ತಾಯವನ್ನು ಒಪ್ಪಿಕೊಳ್ಳಲು ಕೇವಲ ಮಾಧ್ಯಮ ಸಂದರ್ಶನಗಳು ಮತ್ತು ಸಲಹೆಗಳನ್ನು ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಮೋದಿ ಸರ್ಕಾರ ಮತ್ತು ಡಸಾಲ್ಟ್‌ ಕಂಪನಿಗಳು ಮಾಧ್ಯಮ ವರದಿಗಳಲ್ಲಿ ಪ್ರಸ್ತಾಪವಾಗಿರುವ ಅಂಶಗಳನ್ನು ನಿರಾಕರಿಸಿವೆ ಎನ್ನುವುದು ಅವರ ಈ ಅಭಿಪ್ರಾಯಕ್ಕೆ ಆಧಾರವಾಗಿತ್ತು.

ಆದರೆ...
ಔಪಚಾರಿಕ ತನಿಖೆಯೇ ನಡೆಯದಿದ್ದರೆ ಮಾಧ್ಯಮಗಳಲ್ಲಿ ಪ್ರಸ್ತಾಪವಾಗಿರುವ ಅಂಶಗಳನ್ನು ನಿರಾಕರಿಸಲು ಹೇಗೆ ಸಾಧ್ಯ? ಭ್ರಷ್ಟಾಚಾರದ ಆರೋಪ ಹೊತ್ತಿರುವವರು ನೀಡಿರುವ ನಿರಾಕರಣೆಯ ಹೇಳಿಕೆಗಳನ್ನೇ ಆಧಾರವಾಗಿರಿಸಿಕೊಂಡು ಸುಪ್ರೀಂಕೋರ್ಟ್‌ ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದ್ದು ಏಕೆ? ಈ ವಿಷಯ ರಾಜಕೀಯಕ್ಕೆ ಬಳಕೆಯಾಗುವ ಮೊದಲು, ಅಂದರೆ ಏಪ್ರಿಲ್ 17, 2015ರಲ್ಲಿಯೇ ಫ್ರೆಂಚ್ ವೆಬ್‌ಸೈಟ್‌ನಲ್ಲಿ 'ಅನಿಲ್ ಅಂಬಾನಿ ರಕ್ಷಣಾ ಕ್ಷೇತ್ರದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಭಾರತದ ಪ್ರಧಾನಿ ಮೂಲ ಒಪ್ಪಂದವನ್ನು ರದ್ದುಪಡಿಸಿದರು' ಎಂದು ಆರೋಪಿಸಿತ್ತು.

ಫ್ರೆಂಚ್‌ ವೆಬ್‌ಸೈಟ್‌ನ ಈ ಹೇಳಿಕೆ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಹೊಲಾಂಡ್ ಅವರ ಸಂದರ್ಶನದಲ್ಲಿ ಈ ಹೇಳಿಕೆಯನ್ನು ಪುಷ್ಟೀಕರಿಸುವ ಹಲವು ಸಂಗತಿಗಳಿದ್ದವು. ಈ ಆರೋಪ ನಿರಾಕರಣೆಗೆ ಕನಿಷ್ಠ ಒಂದಿಷ್ಟು ತನಿಖೆಯಾದರೂ ನಡೆಯಬೇಕಿತ್ತು. ತನಿಖೆ ನಂತರ ನ್ಯಾಯಾಂಗದ ಪರಿಶೀಲನೆ ನಡೆಯಬಹುದಿತ್ತು. ತನಿಖೆಯೇ ಇಲ್ಲದೆ ಮಾಧ್ಯಮಗಳಲ್ಲಿ ಪ್ರಸ್ತಾಪವಾದ ಸಂಗತಿಗಳನ್ನು ನಿರಾಕರಿಸಲು ಹೇಗೆ ಸಾಧ್ಯ?

***

ರಫೇಲ್ ಕುರಿತು ನ್ಯಾಯಾಲಯದ ತೀರ್ಪಿನ ಪೂರ್ಣ ಪಠ್ಯ ಇಲ್ಲಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.