ADVERTISEMENT

ಕಲಬೆರಕೆ ಹಾಲು ಮಾರಿ ಕೋಟ್ಯಧೀಶರಾದ ಸೋದರರು!

ಏಜೆನ್ಸೀಸ್
Published 1 ಆಗಸ್ಟ್ 2019, 2:14 IST
Last Updated 1 ಆಗಸ್ಟ್ 2019, 2:14 IST
   

ಭೋಪಾಲ್‌: ಆರೇಳು ವರ್ಷಗಳ ಹಿಂದೆ ಮನೆ ಮನೆಗೆ ತೆರಳಿಹಾಲು ಮಾರುತ್ತಿದ್ದ ಸೋದರರಿಬ್ಬರು ಈಗ 2 ಕೋಟಿಯ ಹಾಲು ಶಿಥಲೀಕರಣ ಘಟಕದ ಮಾಲೀಕರು, ಮೂರು ಬಂಗಲೆಗಳ ಒಡೆಯರು, ಹತ್ತಾರು ಎಕರೆ ಜಮೀನು ಹೊಂದಿದ್ದಾರೆ. ಓಡಾಡಲು ಎಸ್‌ಯುವಿ ಕಾರುಗಳನ್ನೇ ಬಳಸುವ ಶ್ರೀಮಂತರಾಗಿದ್ದಾರೆ.

ಇದು ಚಮತ್ಕಾರವೇನಲ್ಲ. ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ದಾಕ್ಪುರ್‌ ಎಂಬಲ್ಲಿ ದೇವೇಂದ್ರ ಗುರ್ಜರ್‌ (42), ಜೈವೀರ್‌ ಗುರ್ಜರ್‌ (40) ಎಂಬುವವರ ಬದುಕಿನಲ್ಲಾಗಿರುವ ಅಭಿವೃದ್ಧಿ. ಆದರೆ, ಗುರ್ಜರ್‌ ಸೋದರರು ಈ ಮಟ್ಟಿಗಿನ ಅಭಿವೃದ್ಧಿ ಸಾಧಿಸಿದ್ದು ಮಾತ್ರ ವಾಮ ಮಾರ್ಗದಿಂದ. ಸಿಂಥೆಟಿಕ್‌ ಹಾಲು ತಯಾರಿಸಿ, ಮಾರಾಟ ಮಾಡಿ ಅವರು ಶ್ರೀಮಂತರಾಗಿದ್ದಾರೆ. ಸೋದರರ ಅಕ್ರಮವನ್ನು ಪೊಲೀಸ್‌ ಎಸ್‌ಟಿಎಫ್‌( ವಿಶೇಷ ಕಾರ್ಯಪಡೆ) ಬಯಲು ಮಾಡಿದೆ.

ಗುರ್ಜರ್‌ ಸೋದರರಂತೆಯೇ ಇನ್ನೂ ಹಲವರು ಇದೇ ಮಾರ್ಗವನ್ನು ಅನುಸರಿಸಿ ಕೇವಲ ಐದು ವರ್ಷಗಳಲ್ಲಿ ಶ್ರೀಮಂತರಾದ ಬಗ್ಗೆ ಎಸ್‌ಟಿಎಫ್‌ ತನ್ನ ಎಫ್‌ಐಆರ್‌ನಲ್ಲಿ ಹೆಸರುಗಳನ್ನು ಉಲ್ಲೇಖಿಸಿದೆ. ಈ ದಂಧೆಕೋರರು ಮಧ್ಯಪ್ರದೇಶದಲ್ಲಿ ಮಾತ್ರ ಹಾಲು ಮಾರಾಟ ಮಾಡುತ್ತಿರಲಿಲ್ಲ. ಉತ್ತರ ಪ್ರದೇಶ, ಹರಿಯಾಣ, ದೆಹಲಿ, ರಾಜಸ್ಥಾನದ ಡೇರಿ ಕಂಪೆನಿಗಳಿಗೂ ಹಾಲು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಗ್ಲೂಕೋಸ್‌, ಯೂರಿಯಾ, ಎಣ್ಣೆ, ಹಾಲಿನ ಪುಡಿ, ನೀರು ಬೆರೆಸಿ ಹಾಲಿನಂಥ ದ್ರವ ತಯಾರಿಸುತ್ತಿದ್ದ ಇವರು, ಅದಕ್ಕೆ ಹೈಡ್ರೋ ಪೆರಾಕ್ಸೈಡ್‌ ಎಂಬ ರಾಸಾಯನಿಕವನ್ನೂ ಬೆರಸುತ್ತಿದ್ದರು. ಕಲಬೆರಕೆ ಹಾಲು ಮಾತ್ರವಲ್ಲದೇಉಪ ಉತ್ಪನ್ನಗಳಾದ ಚೀಸ್‌ ಮತ್ತು ಮಾವಾ ಎಂಬ ಪದಾರ್ಥವನ್ನೂ ತಯಾರಿಸಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.

‘ಪ್ರಮುಖ ಆರು ಆರೋಪಿಗಳಾದ ದೇವೇಂದ್ರ ಗುರ್ಜರ್‌, ಜೈವೀರ್‌ ಗುರ್ಜರ್‌, ರಾಮ್‌ನರೇಶ್‌ ಗುರ್ಜರ್‌, ದಿನೇಶ್‌ ಶರ್ಮಾ, ಸಂತೋಷ್‌ ಸಿಂಗ್‌ ಮತ್ತು ರಾಜೀವ್‌ ಗುಪ್ತಾ ಅವರ ಆಸ್ತಿ, ಜೀವನ ಶೈಲಿಯಲ್ಲಿ ಭಾರಿ ಬದಲಾವಣೆಯಾಗಿರುವುದು ನಮ್ಮ ಗಮನಕ್ಕೆ ಬಂದಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ಅವರು ಶ್ರೀಮಂತರಾಗಿದ್ದರು. ಸಣ್ಣ ಡೇರಿ ಇಟ್ಟುಕೊಂಡಿದ್ದ ಅವರು ಕೋಟ್ಯದೀಶರಾಗಿದ್ದರು. ನಾವು ಇದರ ಬಗ್ಗೆ ತನಿಖೆ ಮಾಡಿದ್ದೇವೆ. ಈ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೂ ನೀಡಿದ್ದೇವೆ,’ ಎಂದು ಎಸ್‌ಟಿಎಫ್‌ನ ಸೂಪರಿಂಡೆಂಟ್‌ ರಾಜೇಶ್‌ ಭದೋರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.