ADVERTISEMENT

ಲಾಕ್‌ಡೌನ್‌ ಪರಿಣಾಮ | ಜುಲೈ 18ರಿಂದ ಜೆಇಇ; 26ಕ್ಕೆ ನೀಟ್‌

ಪಿಟಿಐ
Published 6 ಮೇ 2020, 3:07 IST
Last Updated 6 ಮೇ 2020, 3:07 IST
ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ 
ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌    

ನವದೆಹಲಿ: ಎಂಜಿನಿಯರಿಂಗ್ ಕೋರ್ಸ್‌ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಜುಲೈ 18ರಿಂದ 23ರವರೆಗೆ ಹಾಗೂ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಇಇಟಿ– ನೀಟ್‌) ಜುಲೈ 26ರಂದು ಜರುಗಲಿದೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಮಂಗಳವಾರ ತಿಳಿಸಿದರು.

ಕೊರೊನಾ ಹರಡುವುದನ್ನು ತಡೆಗಟ್ಟಲು ಘೋಷಿಸಲಾಗಿದ್ದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈ ಎರಡು ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

‘ಜೆಇಇ (ಮೇನ್ಸ್‌) ಜುಲೈ 18ರಿಂದ 23ರವರೆಗೆ ಹಾಗೂ ಜೆಇಇ (ಅಡ್ವಾನ್ಸ್‌ಡ್)‌ ಆಗಸ್ಟ್‌ನಲ್ಲಿ ನಡೆಸಲಾಗುವುದು’ ಎಂದು ನಿಶಾಂಕ್‌ ಮಾಹಿತಿ ನೀಡಿದರು. ದೇಶದಾದ್ಯಂತ ಇರುವ ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕಾಗಿ ಜೆಇಇ (ಮೇನ್ಸ್)‌ ನಡೆಸಲಾಗುತ್ತಿದೆ. ಇದರಲ್ಲಿ ತೇರ್ಗಡೆ ಹೊಂದಿದವರಿಗೆ ಜೆಇಇ (ಅಡ್ವಾನ್ಸ್‌ಡ್‌) ಬರೆಯಲು ಅವಕಾಶವಿರುತ್ತದೆ.

ADVERTISEMENT

ಕೇಂದ್ರ ಬದಲಿಸಲು ಅವಕಾಶ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿರುವುದರಿಂದ, ಜೆಇಇ ಹಾಗೂ ನೀಟ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನೀಡಿದೆ.

ಪ್ರಸಕ್ತ ವರ್ಷದಲ್ಲಿ ನೀಟ್‌ಗೆ 15 ಲಕ್ಷಕ್ಕೂ ಅಧಿಕ ಹಾಗೂ ಜೆಇಇಗೆ (ಮೇನ್ಸ್‌) 9 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.

ಶೀಘ್ರ ನಿರ್ಧಾರ: ‘ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬಾಕಿ ಪರೀಕ್ಷೆಗಳ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು. ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆ ಕೇವಲ ಈಶಾನ್ಯ ದೆಹಲಿಯ ವಿದ್ಯಾರ್ಥಿಗಳಿಗಷ್ಟೇ ನಡೆಸಲಾಗುವುದು. ಗಲಭೆಯಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಇರುವ ವಿದ್ಯಾರ್ಥಿಗಳಷ್ಟೇ ಇದನ್ನು ಬರೆಯಲಿದ್ದಾರೆ’ ಎಂದು ಪೋಖ್ರಿಯಾಲ್‌ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.