ADVERTISEMENT

ಅಡಿಕೆ ತೋಟಕ್ಕೆ ಹೊದಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2013, 20:07 IST
Last Updated 30 ಸೆಪ್ಟೆಂಬರ್ 2013, 20:07 IST
ಪ್ಲಾಸ್ಟಿಕ್ ಹೊದಿಸುತ್ತಿರುವ ದೇವೇಂದ್ರಭಟ್‌
ಪ್ಲಾಸ್ಟಿಕ್ ಹೊದಿಸುತ್ತಿರುವ ದೇವೇಂದ್ರಭಟ್‌   

ಅಡಿಕೆ ತೋಟದ ತುಂಬಾ ಪ್ಲಾಸ್ಟಿಕ್ ಹೊದಿಸಿ ಆ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳುವ ಅಪರೂಪದ ಪ್ರಯೋಗ ಉತ್ತರ ಕನ್ನಡದ ಉಂಚಳ್ಳಿಯಲ್ಲಿ ನಡೆಯುತ್ತಿದೆ.

ಪ್ರತಿ ವರ್ಷ ಅಡಿಕೆ ತೋಟಕ್ಕೆ ನೀಡಿದ ಗೊಬ್ಬರ ಇಲ್ಲಿನ ಜಡಿಮಳೆಗೆ ಕೊಚ್ಚಿಕೊಂಡು ಹೋಗಿ ಇಳುವರಿ ಇಳಿಮುಖವಾಗುವುದನ್ನು ತಡೆಗಟ್ಟುವುದಕ್ಕೆ ದೇವೇಂದ್ರ ಭಟ್ ಕಂಡುಕೊಂಡ ವಿನೂತನ ಪ್ರಯೋಗ ಇದೀಗ ಯಶಸ್ಸು ಕಂಡಿದೆ. ಇವರು ತಮ್ಮಲ್ಲಿರುವ ಮುಕ್ಕಾಲು ಎಕರೆ ಅಡಿಕೆ ತೋಟಕ್ಕೆ ಬೇಕಾಗುವಷ್ಟು ಪ್ಲಾಸ್ಟಿಕನ್ನು ಹೈದರಾಬಾದ್‌ನಿಂದ ತಂದರು. ಪ್ಲಾಸ್ಟಿಕ್ ಬಳಕೆಯ ಪರಿಣಾಮ ಆರು ವರ್ಷಗಳ ಹಿಂದೆ ಐದು ಕ್ವಿಂಟಾಲ್ ಇಳುವರಿ ನೀಡುತ್ತಿದ್ದ ಅಡಿಕೆ ತೋಟ ಎರಡು ವರ್ಷಗಳಿಂದ ಬರೋಬ್ಬರಿ ಹನ್ನೆರಡು ಕ್ವಿಂಟಾಲ್ ಇಳುವರಿಯನ್ನು ನೀಡುತ್ತಿದೆ.

ತಾಡಪತ್ರೆ ಅಳವಡಿಸುವುದು ಹೇಗೆ? 
ಸಾಮಾನ್ಯವಾಗಿ ಬಳಕೆಯಾಗುವ ಪ್ಲಾಸ್ಟಿಕ್‌ಗಿಂತ ಇದು ಗುಣಮಟ್ಟದಲ್ಲಿ ಭಿನ್ನವಾಗಿದೆ. ಕೆ.ಜಿ.ಗೆ ೧೮೫ ರಂತೆ ಹೊದಿಕೆ ಖರೀದಿಸಿದ್ದಾರೆ. ಇಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಅಡಿಕೆ ತೋಟಗಳ ಮಧ್ಯೆ ನೀರು ಬಸಿದು ಹೋಗಲು ಕಾಲುವೆಗಳನ್ನು ನಿರ್ಮಿಸುವುದು ಸಾಮಾನ್ಯ. ಅಡಿಕೆ ಬುಡಕ್ಕೆ ನೀಡಿದ ಗೊಬ್ಬರ ಕೂಡಾ ಮಳೆ ನೀರಿನೊಂದಿಗೆ  ಕೊಚ್ಚಿಕೊಂಡು ಹೋಗುತ್ತದೆ.

ದೇವೇಂದ್ರ ಭಟ್ ಮಳೆಗಾಲದ ಆರಂಭದ ದಿನಗಳಲ್ಲಿ ಓಡಾಡುವ ತೋಟದ ನಿತ್ತುಗಟ್ಟು ಬಿಟ್ಟು ಬಸಿ ಕಾಲುವೆಯವರೆಗೂ ತಾಡಪತ್ರೆಯನ್ನು ಹೊದಿಸಿದ್ದಾರೆ. ಅಡಿಕೆ ಮರಗಳು, ಗಿಡಗಳು ಬರುವ ಜಾಗದಲ್ಲಿ ಕತ್ತರಿಸಿ ಮುಚ್ಚಿಗೆ ಮಾಡಿದ್ದಾರೆ. ಇನ್ನು ತೋಟಕ್ಕೆ ಗೊಬ್ಬರ ನೀಡುವಾಗ ಹೊದಿಕೆ ತೆರೆಯುತ್ತಾರೆ. ಹನಿ ನೀರಾವರಿ ಮೂಲಕ ಬುಡಗಳಿಗೆ ನೀರುಣಿಸುವ ವ್ಯವಸ್ಥೆಯೂ ಇಲ್ಲಿದೆ.

ಇನ್ನು, ಅಡಿಕೆ ಕೊಯ್ಲಿನ ಸಮಯದಲ್ಲಿ, ಬೇಸಿಗೆಗಾಲದಲ್ಲಿ ಬೇಕಾದಾಗ ತಾಡಪತ್ರೆಯನ್ನು ತೆಗೆಯಬಹುದು. ಪರಿಣಾಮ ಇಂದಿಗೂ ಪ್ರತಿ ವರ್ಷ ಅಡಿಕೆ ಬುಡಕ್ಕೆ ಹಾಕಿದ ಗೊಬ್ಬರ ಮಣ್ಣಿನೊಂದಿಗೆ ಬೆರೆತು ಹಾಗೆಯೇ ಇದೆ.

ತಾಡಪತ್ರೆ ಹೊದಿಕೆಯಿಂದ ಕಳೆದ ಆರು ವರ್ಷಗಳಿಂದ ಇವರ ತೋಟಕ್ಕೆ ಸೊರಗು ರೋಗ, ಬೇರು ಹುಳ ರೋಗಗಳು ಬಾಧಿಸಿಲ್ಲ, ಕಳೆಗಳೂ ಇಲ್ಲ. ಮಳೆಗಾಲದಲ್ಲಿ ನೀರು ನೇರವಾಗಿ ನೆಲ ಸೇರದೆ, ಫಲವತ್ತಾದ ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ, ಇದರಿಂದ ಶ್ರಮ ವ್ಯರ್ಥ ಎನ್ನುವ ಭಟ್ ಹೊದಿಕೆ ಬೇಕಾದವರಿಗೆ ಖರೀದಿಸಿ ಕೊಡುತ್ತಾರೆ. ಒಂದು ಎಕರೆಗೆ ತಾಡಪತ್ರೆ ಅಳವಡಿಸಲು ೨೮ ರಿಂದ ೩೦ ಸಾವಿರ ರೂಪಾಯಿ ಖರ್ಚು ತಗಲುತ್ತದೆ. ತಾಡಪತ್ರೆ ಎರಡು ವರ್ಷಗಳ ಕಾಲ ಬಾಳಿಕೆ ಬಂದರೂ ಬೆಳೆಗಾರ ನಷ್ಟವನ್ನು ಅನುಭವಿಸುವುದಿಲ್ಲವಂತೆ.

ಪ್ರತಿನಿತ್ಯ ನಾಲ್ಕರಿಂದ ಐದು ಕಿ.ಮೀಟರ್ ನಡೆದು ಹೋಗಿ ಸಗಣಿಯನ್ನು ಸಂಗ್ರಹಿಸಿ ತಂದು ಅದರಿಂದ ಎರೆಜಲ ತಯಾರಿಸುತ್ತಾರೆ ಅವರು. ಮನೆಯಲ್ಲಿನ ಎಲ್ಲಾ ವ್ಯರ್ಥ ಪದಾರ್ಥಗಳನ್ನು ಎರೆಜಲ ತೊಟ್ಟಿಗೆ ಹಾಕಿ ಅವನ್ನು ಅಡಿಕೆ ತೋಟಕ್ಕೆ ಸಿಂಪಡಿಸುತ್ತಾರೆ.

ಮೂರು ತಿಂಗಳಲ್ಲಿ ಮೂವತ್ತೈದು ಕ್ವಿಂಟಾಲ್ ಸಗಣಿಯನ್ನು ಹೆಕ್ಕಿ ಅದರಿಂದ ಗೊಬ್ಬರ ತಯಾರಿಸಿ ಅಡಿಕೆ ತೋಟಕ್ಕೆ ನೀಡುವ ಭಟ್‌ ಅವರು ಈವರೆಗೆ ರಾಸಾಯನಿಕದ ಮೊರೆ ಹೋಗಿಲ್ಲ. ದೇವೇಂದ್ರ ಭಟ್‌ ಅವರ ದೂರವಾಣಿ ಸಂಖ್ಯೆ : ೯೪೮೨೪೩೫೫೬೧.
ಚಂದ್ರಹಾಸ ಚಾರ್ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.