ADVERTISEMENT

ಅಡಿಕೆ-ಪಪ್ಪಾಯ ತರವುದು ಆದಾಯ

ಸಹನಾ ಕಾಂತಬೈಲು
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಅಡಿಕೆಯೊಂದಿಗೆ ಪಪ್ಪಾಯ ಬೆಳೆಯುವುದು ಲಾಭದಾಯಕ. ಬಂಟ್ವಾಳ ತಾಲ್ಲೂಕಿನ ರೈತರೊಬ್ಬರು ಅಡಿಕೆ ನಡುವೆ ದೊಡ್ಡ ಪ್ರಮಾಣದಲ್ಲಿ ಪಪ್ಪಾಯ ಬೆಳೆದು ಯಶಸ್ವಿಯಾಗಿದ್ದಾರೆ. ಪಪ್ಪಾಯ ಮಾರಿ ತಿಂಗಳಿಗೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪಪ್ಪಾಯ ಬೆಳೆಸಿದವರು ಇವರೊಬ್ಬರೇ.

ಒಂದೇ ಬೆಳೆ ಬೆಳೆದು ರೈತರು ಈಗ ಜೀವನ ಮಾಡುವುದು ಕಷ್ಟ. ಕರಾವಳಿಯಲ್ಲಿ ಅಡಿಕೆ ಪ್ರಮುಖ ಬೆಳೆ. ಆದರೆ ಅಡಿಕೆ ಲಾಭದಾಯಕ ಬೆಳೆಯಾಗಿ ಉಳಿದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ರೈತ ವಾಸುದೇವ ಮಯ್ಯ ಅವರು ತಮ್ಮ ಅಡಿಕೆ ತೋಟದ ನಡುವೆ ಪಪ್ಪಾಯ ಬೆಳೆದು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ನೆಟ್ಟ ಏಳು ಸಾವಿರಕ್ಕಿಂತ ಹೆಚ್ಚು ಗಿಡಗಳು ಸಮೃದ್ಧ ಫಸಲು ನೀಡಿ ತಿಂಗಳಿಗೆ ಒಂದು ಲಕ್ಷ ರೂಪಾಯಿಯಷ್ಟು ಆದಾಯ ತಂದು ಕೊಡುತ್ತಿವೆ.

ವಾಸುದೇವ ಮಯ್ಯ ಅವರು ಎಂಜಿನಿಯರಿಂಗ್ ಪದವೀಧರರು. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದು ಅವರಿಗೆ ಇಷ್ಟ ಇರಲಿಲ್ಲ. ಕೃಷಿಯ ಮೇಲೆ ಅವರಿಗಿರುವ ಅಪಾರ ಪ್ರೀತಿ ಈ ಕ್ಷೇತ್ರದಲ್ಲಿ ಅವರನ್ನು ತೊಡಗಿಸುವಂತೆ ಮಾಡಿತು. 20 ಎಕರೆ ಪ್ರದೇಶದಲ್ಲಿ ಅವರು ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ಎಲ್ಲಾ ವರ್ಷ ಅಡಿಕೆಗೆ ಬೆಲೆ ಸಿಗದಿರುವುದನ್ನು ಗಮನಿಸಿ 15 ಎಕರೆಯಲ್ಲಿ ಅಡಿಕೆ ಮರಗಳ ನಡುವೆ ಪಪ್ಪಾಯ ಬೆಳೆಸಿದ್ದಾರೆ. 

ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ಪಾಣೆಮಂಗಳೂರಿನ `ಇಂದಿರಾ ಅಗ್ರಿ ಸಪ್ಲೈಸ್' ಅವರಿಂದ ತೈವಾನ್ ರೆಡ್ ಲೇಡಿ ತಳಿಯ ಪಪ್ಪಾಯ ಬೀಜಗಳನ್ನು 10 ಗ್ರಾಂಗೆ 2,100 ರೂಪಾಯಿಯಂತೆ  170 ಗ್ರಾಂ ಬೀಜಗಳನ್ನು ಖರೀದಿಸಿದರು. ಕುರಿ ಗೊಬ್ಬರ, ಕೋಳಿ ಗೊಬ್ಬರ, ಮರಳು, ಮಣ್ಣು ಮಿಶ್ರ ಮಾಡಿ ಪಾಲಿಥಿನ್ ಚೀಲಕ್ಕೆ ತುಂಬಿಸಿ ಅದರಲ್ಲಿ ಬೀಜಗಳನ್ನು ಬಿತ್ತಿದರು. ಬಿತ್ತಿದ ಬೀಜ ಎಲ್ಲವೂ ಮೊಳಕೆ ಬರುವುದಿಲ್ಲ. 700 ಬೀಜ ಬಿತ್ತಿದರೆ 400ರಿಂದ 500 ಗಿಡ ದೊರೆಯುತ್ತದೆ ಎಂಬುದು ಅವರ ಅನುಭವ. ಮೊಳಕೆ ಬಂದು ಎರಡು ತಿಂಗಳು ಆಗುವಾಗ ಗಿಡ ನೆಡಲು ರೆಡಿ ಆಗುತ್ತದೆ. ಒಂದೂ ಕಾಲು ಅಡಿ ಉದ್ದ, ಅಗಲ ಮತ್ತು ಆಳದ ಗುಂಡಿಗಳನ್ನು ತೆಗೆದು ಪ್ರತಿ ಗುಂಡಿಗೆ ಕುರಿ ಗೊಬ್ಬರ, ಕೋಳಿ ಗೊಬ್ಬರ ಹಾಕಿ ಗಿಡಗಳನ್ನು ನೆಟ್ಟರು.

ಮಳೆಗಾಲದಲ್ಲಿ ಬುಡದಲ್ಲಿ ಸ್ವಲ್ಪವೂ ನೀರು ನಿಲ್ಲಬಾರದು. ನಿಂತರೆ ಗಿಡ ಕೊಳೆತು ಹೋಗುತ್ತದೆ ಎಂಬ ಎಚ್ಚರಿಕೆಯನ್ನು ಅವರು ಕೊಡುತ್ತಾರೆ. 20 ದಿವಸದ ನಂತರ 50ಗ್ರಾಂ. ಪ್ಯಾಕ್ಟಂಪಾಸ್ ಮತ್ತು ಒಂದೂವರೆ ತಿಂಗಳ ನಂತರ ಪೊಟಾಷಿಯಂ 100ಗ್ರಾಂ, ಪ್ಯಾಕ್ಟಂಪಾಸ್ 100ಗ್ರಾಂ ಕೊಟ್ಟಿದ್ದಾರೆ.

ಆಮೇಲೆ ಪ್ರತಿ ತಿಂಗಳು 100ಗ್ರಾಂ ಪೊಟಾಷಿಯಂ ಮತ್ತು ಪ್ಯಾಕ್ಟಂಪಾಸ್ ಕೊಡಬೇಕಾಗುತ್ತದೆ. ಗಿಡಗಳ ಬೆಳವಣಿಗೆ ದೃಷ್ಟಿಯಿಂದ ಇದು ಬಹು ಮುಖ್ಯ, ಅಲ್ಲದೆಯೇ ಪ್ಯಾಕ್ಟಂಪಾಸ್ ಹಾಕಿದರೆ ಗಿಡಗಳಿಗೆ ಹಳದಿ ರೋಗ ಬರುವುದಿಲ್ಲ ಎನ್ನುತ್ತಾರೆ ಮಯ್ಯ. ಪ್ರತಿ ಮೂರು ತಿಂಗಳಿಗೊಮ್ಮೆ ಸುತ್ತಲಿನ ಮಣ್ಣನ್ನು ಬುಡಕ್ಕೆ ಏರು ಹಾಕುತ್ತಾರೆ. ನಾಟಿ ಮಾಡಿದ ಮೂರು ತಿಂಗಳಲ್ಲಿ ಗಿಡ ಹೂ ಬಿಡಲು ಪ್ರಾರಂಭಿಸುತ್ತದೆ. ಮತ್ತೆ ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ.

ಒಂದು ಗಿಡ 50 ಕೆ.ಜಿ. ಹಣ್ಣು ಕೊಡುತ್ತದೆ. ಒಂದು ಪಪ್ಪಾಯ 11/2 ದಿಂದ 3 ಕೆ.ಜಿ. ತೂಗುತ್ತದೆ. ಪ್ರತಿ ಗಿಡದಿಂದ ವಾರದಲ್ಲಿ ಎರಡು ಹಣ್ಣು ಸಿಗುತ್ತದೆ. ಹಣ್ಣುಗಳು 8ರಿಂದ 10 ದಿನಗಳವರೆಗೆ ಹಾಳಾಗದೆ ಉಳಿಯುತ್ತವೆ. ಅವರು ಪಪ್ಪಾಯವನ್ನು ಮಂಗಳೂರು, ಬಿಸಿರೋಡ್, ಪಾಣೆ ಮಂಗಳೂರು ಅಂಗಡಿಗಳಿಗೆ ವೋಲ್‌ಸೇಲ್ ದರದಲ್ಲಿ ಮಾರುತ್ತಾರೆ. ಕೆ.ಜಿ.ಗೆ ಸರಾಸರಿ 10 ರೂಪಾಯಿಯಂತೆ ತಿಂಗಳಿಗೆ 50 ಕ್ವಿಂಟಾಲ್ ಪಪ್ಪಾಯ ಮಾರುತ್ತಾರೆ. 50,000ದಿಂದ 1 ಲಕ್ಷದವರೆಗೆ ಆದಾಯ ಗಳಿಸುತ್ತಾರೆ.

ಅಡಿಕೆಯೊಂದಿಗೆ ಪಪ್ಪಾಯ ಲಾಭದಾಯಕ. ಪಪ್ಪಾಯಕ್ಕೆ ರೋಗ, ಕೀಟಗಳ ಬಾಧೆ ಇದೆ. ಆದರೆ ಇದನ್ನು ತಡೆಗಟ್ಟಲು ಪ್ರತ್ಯೇಕ ಔಷಧಿ ಕೊಡುವ ಅಗತ್ಯ ಇಲ್ಲ. ಅಡಿಕೆಗೆ ಬಿಡುವ ಔಷಧಿಯೇ ಇದಕ್ಕೂ ಸಾಕಾಗುತ್ತದೆ. ಪಪ್ಪಾಯಿಗೆ ವರ್ಷವಿಡೀ ಬೇಡಿಕೆ ಇದೆ. ಜನವರಿಯಿಂದ ಆಗಸ್ಟ್ ತನಕ ಉತ್ತಮ ಧಾರಣೆ ಸಿಗುತ್ತದೆ. ರಂಜಾನ್ ಸಮಯದಲ್ಲಂತೂ ಮುಸ್ಲಿಂ ಧರ್ಮದವರು ಮನೆಗೇ ಬಂದು ಕಟಾವು ಮಾಡಿ ಒಯ್ಯುತ್ತಾರೆ. 200 ಮರ ಇದ್ದರೆ ತಿಂಗಳಿಗೆ 15,000 ರೂ. ಆದಾಯ ಗಳಿಸಬಹುದು. ಒಂದು ಸಣ್ಣ ಕುಟುಂಬದ ಖರ್ಚನ್ನು ನಿಭಾಯಿಸಬಹುದು ಎನ್ನುತ್ತಾರೆ ವಾಸುದೇವ ಮಯ್ಯ.

ಸಹಾಯಕರು ಇಲ್ಲ
ಗಿಡ ನೆಡಲು, ಮಣ್ಣು ಏರು ಹಾಕಲು ಬಿಟ್ಟರೆ ಉಳಿದ ಕೆಲಸಗಳಿಗೆ ಅವರು ಸಹಾಯಕರನ್ನು ಇಟ್ಟುಕೊಂಡಿಲ್ಲ. ಪಪ್ಪಾಯ ಕೊಯ್ಯುವುದರಿಂದ ಹಿಡಿದು ಪ್ಯಾಕಿಂಗ್ ಮಾಡಿ ಕಳಿಸುವಲ್ಲಿಯವರೆಗೆ ಮಡದಿ ಶ್ಯಾಮಲಾ ಮಯ್ಯ, ಮಕ್ಕಳಾದ ಆಶಾ, ಉಷಾ, ಶಿವರಾಜ್ ಸಹಕರಿಸುತ್ತಾರೆ. ಪಪ್ಪಾಯ ಬೆಳೆಸಲು ಸುಮಾರು ಒಂದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಈಗ ಐದು ಲಕ್ಷ ರೂ. ಆದಾಯ ಬಂದಿದೆ.

ಇನ್ನೂ ಆದಾಯ ಬರುತ್ತಾ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪಪ್ಪಾಯ ಬೆಳೆಸಿದವರು ಇವರೊಬ್ಬರೇ. ಆಸಕ್ತರು ವಾಸುದೇವ ಮಯ್ಯ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್: 9343350233
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.