ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ವತಿಯಿಂದ ಈಚೆಗೆ ಮೂರು ದಿನಗಳು ಹಮ್ಮಿಕೊಂಡಿದ್ದ ‘ತೋಟಗಾರಿಕಾ ಮೇಳ’ದ ಜಾನುವಾರು ಪ್ರದರ್ಶನದಲ್ಲಿ ಈ ಬಾರಿಗೆ ಆಕರ್ಷಣೆ ಜಾಫ್ರಾಬಾದಿ ಎಮ್ಮೆ.
ಈ ಪ್ರದರ್ಶನದಲ್ಲಿ ಎಚ್.ಎಫ್.ಆಕಳು, ಮುರ್ರಾ ಎಮ್ಮೆ, ರೆಡ್ ಸಿಂಧಿ, ಗಿರ್ ಮಣಕ, ಪಂಡರಾಪೂರಿ ಎಮ್ಮೆ, ಪಂಡರಾಪೂರಿ ಕೋಣ, ಖಿಲ್ಲಾರ ಹೋರಿಗಳು, ಖಿಲ್ಲಾರ ಆಕಳು, ಜರ್ಸಿ ಆಕಳು, ಜರ್ಸಿ ಮಣಕ, ಮುರ್ರಾ ಕೋಣ, ಗಿರ್ ಹಸು ಸೇರಿದಂತೆ ಹತ್ತಾರು ತಳಿಗಳ ಜಾನುವಾರುಗಳು ಇದ್ದವಾದರೂ ಜಾಫ್ರಾಬಾದಿ ಎಮ್ಮೆಯನ್ನು ನೋಡಲು ನೂಕು ನುಗ್ಗಲು ಇತ್ತು. ಇದಕ್ಕೆ ಕಾರಣ ಈ ಎಮ್ಮೆಯ ವಿಶೇಷತೆ.
ಬೀಳಗಿ ತಾಲ್ಲೂಕಿನ ಬೂದಿಹಾಳ ಗ್ರಾಮದ ರೈತ ಭೀರಪ್ಪ ಯಡಹಳ್ಳಿ ಜಾಫ್ರಾಬಾದಿ ತಳಿಯ ಪೋಷಕ. ಈ ಎಮ್ಮೆ ನೋಡಲು ಥೇಟ್ ಕಾಡೆಮ್ಮೆ ಹಾಗೆಯೇ ಇದೆ. ಆದರೆ ಕಾಡೆಮ್ಮೆಯಷ್ಟು ಇದು ಒರಟು ಪ್ರಾಣಿಯಲ್ಲ, ಬದಲಿಗೆ ಜಾಫ್ರಾಬಾದಿ ಬಹಳ ಸೂಕ್ಷ್ಮ ಪ್ರಾಣಿ. ಇದರ ಮೂಲ ಗುಜರಾತ್. ಅಲ್ಲಿಯ ರೈತರು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕುತ್ತಾರೆ. ಕರ್ನಾಟಕದಲ್ಲಿ ಇದನ್ನು ಸಾಕುವವರು ವಿರಳ ಎಂದೇ ಹೇಳಬೇಕು. ಕೆಲವು ಕಡೆಗಳಲ್ಲಿ ನಡೆಯುವ ಜಾನುವಾರು ಪ್ರದರ್ಶನಗಳಲ್ಲಷ್ಟೇ ಕಂಡುಬರುವ ಜಾಫ್ರಾಬಾದಿ ತಳಿಯ ಎಮ್ಮೆಯ ಬಗ್ಗೆ ಇಲ್ಲಿನ ಹೆಚ್ಚಿನ ಜನರಿಗೆ ಪರಿಚಯವಿಲ್ಲ.
ಒಂದು ಜಾಫ್ರಾಬಾದಿಯ ಬೆಲೆ 80 ಸಾವಿರದಿಂದ 1.10ಲಕ್ಷ ರೂಪಾಯಿವರೆಗೆ ಇದೆ. ಇವುಗಳ ವಿಶೇಷತೆ ಎಂದರೆ ಒಂದು ಹೈನಿನಲ್ಲಿ ಎರಡು ಸಾವಿರ ಲೀಟರ್ ಹಾಲು ಕೊಡುತ್ತವೆ. ದಿನಕ್ಕೆ 16ಲೀಟರ್ ಹಾಲು ನೀಡುತ್ತದೆ. ಸ್ಥಳೀಯ ಎಮ್ಮೆಗಳಿಗಿಂತ ಜಾಫ್ರಾಬಾದಿ ತಳಿ ಎಮ್ಮೆಗಳು ಕೊಡುವ ಹಾಲಿನಲ್ಲಿ ಅಧಿಕ ಕೊಬ್ಬಿನಾಂಶ ಇರುತ್ತದೆ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಡಾ.ಎಸ್.ಎಸ್.ಬಿರಾದಾರ.
ಒಂದು ದಿನಕ್ಕೆ ಹಿಂಡಿ, ಹಸಿಹುಲ್ಲು, ಒಣಮೇವು ಸೇರಿದಂತೆ 30 ಕೆ.ಜಿ ಆಹಾರ ಇವುಗಳಿಗೆ ಬೇಕಾಗುತ್ತದೆ. ಎಮ್ಮೆಗಳು 36 ತಿಂಗಳಿಗೇ ವಯಸ್ಸಿಗೆ ಬಂದು ಗರ್ಭಧರಿಸಲು ಶಕ್ತವಾಗುತ್ತವೆ. ವಯಸ್ಸಿಗೆ ಬಂದ ಎಮ್ಮೆಗಳ ದೇಹದ ತೂಕ 500 ರಿಂದ 700ಕೆ.ಜಿಯಷ್ಟು ಇರುತ್ತದೆ. ಸ್ಥಳೀಯ ತಳಿಗಳ ಎಮ್ಮೆಗಳನ್ನು ಸುಧಾರಿಸಲು ಅವುಗಳ ಜೊತೆ ಜಾಫ್ರಾಬಾದಿ ತಳಿಗಳನ್ನು ಸಾಕಿದರೆ ರೈತರಿಗೆ ಅನುಕೂಲ.
‘ಜಾಫ್ರಾಬಾದಿ ತಳಿಗಳನ್ನು ಸಾಕಿದ್ದರಿಂದ ನಮಗೆ ಬಾಳ ಅನುಕೂಲ ಆಗೈತ್ರಿ. ಲುಕ್ಸಾನ ಏನೂ ಆಗಿಲ್ರಿ, ಹಾಲಿನ ತಾಪತ್ರಯನೂ ಇಲ್ಲ’ ಎಂದು ಭೀರಪ್ಪ ಸತಂಸ ವ್ಯಕ್ತಪಡಿಸುತ್ತಾರೆ. ಇದನ್ನು ಸಾಕುವುದರಿಂದ ಅನೇಕ ಪ್ರಯೋಜನಗಳು ಇವೆ ಎನ್ನುವುದು ಅವರ ಮಾತು. ಸರ್ಕಾರದ ಪಶು ಭಾಗ್ಯ ಯೋಜನೆ, ಎಸ್.ಸಿ.ಪಿ. ಟಿ.ಎಸ್.ಪಿ ಯೋಜನೆಯಡಿಯಲ್ಲಿ ಎಮ್ಮೆಯನ್ನು ಅವಕಾಶವಿದೆ.
ಭೀರಪ್ಪ ಅವರ ಸಂಪರ್ಕ ಸಂಖ್ಯೆ: 9902348569.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.