ADVERTISEMENT

ಅಪರೂಪದ ಬೆಳೆ - ಸರ್ವಸಾಂಬಾರ

ಅಮರಜಾ ಹೆಗಡೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST
ಅಪರೂಪದ  ಬೆಳೆ - ಸರ್ವಸಾಂಬಾರ
ಅಪರೂಪದ ಬೆಳೆ - ಸರ್ವಸಾಂಬಾರ   

ಸರ್ವಸಾಂಬಾರ ಅಥವಾ ಆಲ್‌ಸ್ಪೈಸ್ ಎಂದು ಕರೆಯುವ ಈ ಗಿಡದ ವೈಜ್ಞಾನಿಕ ಹೆಸರು ಪೈಮೆಂಟಾ ಡೈಯೋಇಕಾ. ಇದರ ಎಲೆ ಹಾಗೂ ಹಣ್ಣುಗಳು ರುಚಿ, ವಾಸನೆಗಳಲ್ಲಿ ಸಾಂಬಾರ ವಸ್ತುಗಳಾದ ದಾಲ್ಚಿನ್ನಿ, ಲವಂಗ, ನಟ್‌ಮಗ್ ಹಾಗೂ ಕಾಳುಮೆಣಸುಗಳ ಮಿಶ್ರಣದಂತೆ ಇರುವುದರಿಂದ ಈ ಗಿಡಕ್ಕೆ ಸರ್ವಸಾಂಬಾರ ಎಂಬ ಅನ್ವರ್ಥ ನಾಮವಿದೆ.

ಆಲ್‌ಸ್ಪೈಸ್, ಜಮೈಕಾ ದೇಶದಲ್ಲಿ ಒಂದು ಪ್ರಮುಖ ಬೆಳೆ. ಅಲ್ಲಿ ಕೊಲಂಬಸ್‌ನಿಂದ ಗುರುತಿಸಲಾದ ಈ ಸಾಂಬಾರ ಗಿಡವು ನಂತರದಲ್ಲಿ ಮಧ್ಯ ಹಾಗೂ ಉತ್ತರ ಅಮೆರಿಕಾದಲ್ಲಿ ಹರಡಿತು. ಭಾರತದಲ್ಲಿಯೂ ಇದರ ಬೆಳವಣಿಗೆಗೆ ಅನುಕೂಲಕರವಾದ ಹವಾಗುಣವಿದೆ. ಹೀಗಾಗಿಯೇ ಕೇರಳ, ಕರ್ನಾಟಕ ಹಾಗೂ ಒರಿಸ್ಸಾಗಳಲ್ಲಿ ಇದನ್ನು ಬೆಳೆಯುತ್ತಿದ್ದಾರೆ.

ಕೆರಿಬಿಯನ್ ತಿನಿಸುಗಳಲ್ಲಿ ಇದರ ಪಾತ್ರ ಹಿರಿದು. ಕಾಳುಮೆಣಸನ್ನು ಹೋಲುವ ಇದರ ಹಣ್ಣುಗಳನ್ನು ಪುಡಿ ಮಾಡಿಯೋ ಅಥವಾ ಇಡಿಯಾಗಿಯೋ ಬಳಸುತ್ತಾರೆ. ಆಹಾರ ಪದಾರ್ಥಗಳನ್ನು ಬೇಯಿಸುವಾಗ ಇದರ ಹಸಿರೆಲೆಗಳನ್ನು ಹಾಕಿದರೆ ಘಂ ಎಂಬ ಸುವಾಸನೆಯೊಂದಿಗೆ ಬಾಯಿಯಲ್ಲಿ ನೀರೂರಿಸುವಂತಹ ಖಾದ್ಯ ತಯಾರಾಗಿರುತ್ತದೆ.

ಉಪ್ಪಿನಕಾಯಿ, ಚಟ್ನಿ, ಪಲ್ಯದ ಪುಡಿ, ತರಕಾರಿ ಬಾತ್‌ಗಳು, ಸೂಪ್, ಸಾಸ್, ಕೇಕ್ ಹಾಗೂ ಡೆಸರ್ಟ್‌ಗಳಲ್ಲಿ ಈ ಮರದ ಎಲೆ ಹಾಗೂ ಹಣ್ಣುಗಳನ್ನು ಬಳಸುತ್ತಾರೆ. ಸುಗಂಧ ವಸ್ತುವೂ ಆದ ಸರ್ವಸಾಂಬಾರಿನಿಂದ ಎಣ್ಣೆ ತೆಗೆಯುತ್ತಾರೆ. ಗ್ಯಾಸ್ಟ್ರಿಕ್ ಹಾಗೂ ಅಜೀರ್ಣವಾದಾಗ ಇದರ ಸೇವನೆ ಪರಿಣಾಮಕಾರಿ.

10 ರಿಂದ 14 ಮೀಟರ್ ಬೆಳೆಯುವ ಈ ಮರದ ಎಲೆಗಳು ದಪ್ಪವಾಗಿದ್ದು ಸದಾ ಹಸಿರಿನಿಂದ ಕೂಡಿರುತ್ತವೆ. ಇದು ಬಹುವಾರ್ಷಿಕ ಬೆಳೆಯಾಗಿದ್ದು ಅಡಿಕೆ, ತೆಂಗು ಮುಂತಾದ ದೀರ್ಘಾವಧಿ ತೋಟಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದು. ಈ ಮರಗಳು ತೋಟದ ತೇವಾಂಶವನ್ನು ಕಾಪಾಡುವುದರ ಜೊತೆಗೆ ಕಳೆಯ ಹಾವಳಿಯನ್ನೂ ತಡೆಗಟ್ಟುತ್ತವೆ.

ಛತ್ರಿಯಂತೆ ಅಗಲವಾಗಿ ಹರಡಿಕೊಳ್ಳುವ ಈ ಮರವನ್ನು ಕಾಫಿ ತೋಟಗಳಲ್ಲಿ ಕಾಫಿ ಬೆಳೆಗೆ ನೆರಳಾಗಲು ಬೆಳೆಸಬಹುದಾಗಿದೆ. ಸಾಂಬಾರ ಪದಾರ್ಥಗಳಿಗೆ ಪರ್ಯಾಯ ಬೆಳೆಯಾದ್ದರಿಂದ ಅಂತರ‌್ರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಇದಕ್ಕೆ ಸಾಕಷ್ಟು ಬೇಡಿಕೆಯಿದೆ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.