ADVERTISEMENT

ಅರೆಮಲೆನಾಡಲ್ಲೂ ಏಲಕ್ಕಿ ಘಮಲು

ಹೊಸ ಹೆಜ್ಜೆ 2

ಪೂರ್ಣಿಮ ಕಾನಹಳ್ಳಿ
Published 2 ಮೇ 2016, 19:54 IST
Last Updated 2 ಮೇ 2016, 19:54 IST
ಅರೆಮಲೆನಾಡಲ್ಲೂ ಏಲಕ್ಕಿ ಘಮಲು
ಅರೆಮಲೆನಾಡಲ್ಲೂ ಏಲಕ್ಕಿ ಘಮಲು   

ಏಲಕ್ಕಿ ತೋಟ...
ಹೀಗೆಂದಾಗ ನೆನಪಾಗುವುದು ತಂಪಾದ ಹನಾಲು ಅಥವಾ ಮಲೆನಾಡಿನ ಹಳ್ಳಿ ಭಾಷೆಯ ಹಡ್ಲು,  ಜೀಗುಡುವ ಜೀರುಂಡೆ, ಕಪ್ಪೆಗಳ ವಟರ್ ವಟರ್‌ ಶಬ್ದ, ಅಲ್ಲಲ್ಲಿ ಹರಿಯುವ ನೀರ ಕಾಲುವೆಗಳು, ಬೆತ್ತದ ಬುಟ್ಟಿ ಹಿಡಿದು ಕಟಾವು ಮಾಡುವ ಹೆಂಗಳೆಯರು...

ಮಲೆನಾಡಿನ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಮಾತ್ರ  ಬೆಳೆಯಲಾಗುತ್ತಿದ್ದ ಈ ಏಲಕ್ಕಿ ಘಮಲು ಈಗ ಅರೆಮಲೆನಾಡಿನಲ್ಲೂ ತೇಲಿ ಬರುತ್ತಿದೆ. ಬೇಲೂರು ತಾಲ್ಲೂಕಿನ ಹೆದ್ದರವಳ್ಳಿಯ ದಿನೇರವರ ಪಾಲಿಗೆ ಏಲಕ್ಕಿ ಲಕ್ಕಿಯೆನಿಸಿದೆ. ಕಳೆದ ವರ್ಷ ಅರೇಬಿಕ ನಡುವೆ ಮೂರು ಎಕರೆಯ ಪ್ರದೇಶದಲ್ಲಿ 500 ಕೆ.ಜಿ ಬೆಳೆದು ಮೂರು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.

ದಿನೇಶ್ ಕಾನೂನು ಪದವೀಧರರು. ಕೃಷಿಯಲ್ಲಿ ಅಪರಿಮಿತ ಆಸಕ್ತಿ. ವೆನಿಲ್ಲಾ, ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಇತ್ಯಾದಿ ಬೆಳೆಯುತ್ತಾರೆ. ವಿವಿಧ ಬೆಳೆಗಳ ಸಂಯೋಜನೆಯಿದ್ದರೆ ಯಾವುದಾದರೂ ಬೆಳೆ ಕೈ ಹಿಡಿಯುತ್ತದೆಂಬುದು ಇವರ ಅಭಿಮತ. ದಿನೇಶ್‌ರವರ ಏಲಕ್ಕಿ ತೋಟದ ಅರ್ಧದಷ್ಟು ಭಾಗ ಈಗ ಎಂಆರ್‌ಪಿಎಲ್‌ನ ಪೈಪ್‌ಲೈನ್‌ ಕೆಲಸಕ್ಕಾಗಿ ಬಿಟ್ಟುಕೊಟ್ಟಿದ್ದಾರೆ.

ಬೆಳೆ ಸಂಯೋಜನೆ ಚೆನ್ನಾಗಿದ್ದರಿಂದ ಒಳ್ಳೆಯ ಪರಿಹಾರವೂ ಸಿಕ್ಕಿದೆ ಎಂಬುದು ಇವರ ಅಭಿಪ್ರಾಯ. ಉಳಿದ ಅರ್ಧಭಾಗದಲ್ಲಿ ಈ ಸಲದ ಬೆಳೆ ನಳನಳಿಸುತ್ತಿದೆ. ಅರೆಮಲೆನಾಡಿನಲ್ಲಿ ಏಲಕ್ಕಿ ಬೆಳೆ ಅಸಾಧ್ಯ ಎನ್ನುವವರಿಗೆ ಇವರ ತೋಟವೇ ಉತ್ತರ ನೀಡುತ್ತದೆ. ನೀರು ನೆರಳು ತಂಪಿನ ವಾತಾವರಣ ಕಲ್ಪಿಸಿಕೊಟ್ಟರೆ ಎಲ್ಲರೂ ಬೆಳೆಯಬಹುದೆನ್ನುತ್ತಾರೆ. ಅಲ್ಲದೆ ಏಲಕ್ಕಿ ವಿಶೇಷವಾದ  ಶ್ರಮವನ್ನೇನು ಬೇಡುವುದಿಲ್ಲ ಎನ್ನುತ್ತಾರೆ.

‘ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತೆ’ ಎಂಬುದೊಂದು ಗಾದೆ ಇದೆ. ಹಾಗೆಯೇ ನೀರಿನ ಅನುಕೂಲವಿದ್ದರೆ ಎಲ್ಲಾ ಕೃಷಿಯನ್ನು ಎಲ್ಲೆಡೆಯು ಮಾಡಬಹುದೆನ್ನುವ ಉತ್ಸಾಹಿ ಬೆಳೆಗಾರರಿವರು. ಸಾಂಬಾರ ಮಂಡಳಿ ನೆರವು ವಿಜ್ಞಾನಿಗಳ ಸಲಹೆ ಪಡೆದಿದ್ದಾರೆ. ಮೂರು ಬಾರಿ ವರ್ಷದಲ್ಲಿ ಗೊಬ್ಬರ ಕೊಡುತ್ತಾರೆ.

ಮೊದಲು ನೀರಾವರಿಗಾಗಿ ಹನಿ ನೀರಾವರಿ ಅಳವಡಿಸಿದ್ದರು. ಆದರೆ ಅದರಲ್ಲಿ ಜೇಡ ಕಪ್ಪೆ ಇನ್ನಿತರ ಕೀಟಗಳು ಕುಳಿತು ತೊಂದರೆಯಾಗುತ್ತಿತ್ತು. ಹಾಗಾಗಿ 250 ಮಾಡೆಲ್ ಜೆಟ್‌ನಲ್ಲಿ  ಬೇಸಿಗೆಯಲ್ಲಿ ಹದ ನೋಡಿಕೊಂಡು 5–6 ಸಲ ನೀರು ಕೊಡುತ್ತಾರೆ. ಒಣಗಿಸಲು ಗೂಡನ್ನು ಕೂಡ ಮಾಡಿಕೊಂಡಿದ್ದಾರೆ. 

‘ಮನೆಯ ಬಾಗಿಲಿಗೆ ಮಂಗಳೂರಿನ ಬ್ಯಾರಿಗಳು ಬಂದು ಖರೀದಿಸುತ್ತಾರೆ. ನಮ್ಮದೇ ಸ್ಕೇಲ್ ಆದ್ದರಿಂದ ತೂಕದ ಬಗ್ಗೆ ನಿಶ್ಚಿಂತೆ. ಬೆಲೆಯಲ್ಲೂ ಮೋಸವಿಲ್ಲ’ ಎಂದು ಆತ್ಮವಿಶ್ವಾಸದ ನಗು ಬೀರುತ್ತಾರೆ ದಿನೇಶ್.

ಇವರ ದೂರವಾಣಿ: 9448034066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.