ADVERTISEMENT

ಔಷಧೀಯ ಗುಣದ ಕರಿ ಜೀರಿಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST
ಔಷಧೀಯ ಗುಣದ ಕರಿ ಜೀರಿಗೆ
ಔಷಧೀಯ ಗುಣದ ಕರಿ ಜೀರಿಗೆ   

`ಸಾವು  ಒಂದನ್ನು ಹೊರತುಪಡಿಸಿ ಎಲ್ಲ ಬಗೆಯ ರೋಗಗಳನ್ನು  ನಿಯಂತ್ರಿಸಬಲ್ಲದು ಕರಿ ಜೀರಿಗೆ~ ಎಂದು ಪ್ರವಾದಿ ಮಹಮ್ಮದ್ ಪೈಗಂಬರ್ ಹೇಳಿದ್ದಾರೆ. ಇದು ಕರಿ ಜೀರಿಗೆಯ ಮಹತ್ವಕ್ಕೆ ಸಾಕ್ಷಿ.

ಜೀರಿಗೆ ಬಗ್ಗೆ ನೀವೆಲ್ಲ ಕೇಳಿದ್ದೀರಿ; ಬಳಸುತ್ತೀರಿ ಕೂಡ. ಆದರೆ ಕರಿ ಜೀರಿಗೆ ಏನಿದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಅದಕ್ಕೆ ಕಾರಣಗಳು ಇಲ್ಲ ಎಂದಲ್ಲ. ಏಕೆಂದರೆ ಈಗಲೂ ಜನ ಸಾಮಾನ್ಯರ ಮಟ್ಟಿಗೆ ಕರಿ ಜೀರಿಗೆ ಅಪರಿಚಿತ. ಅದರ ಬಗ್ಗೆ ಮಾಹಿತಿ, ಬಳಕೆ ಗೌಣ. ದಕ್ಷಿಣ ಭಾರತಕ್ಕೆ ಬಂದರೆ ಕರಿ ಜೀರಿಗೆ ಇಂದಿಗೂ ಬಳಕೆಯಾಗದ ಒಂದು ಅನಾಮಧೇಯ ವಸ್ತು.

ಆದರೆ ವಾಸ್ತವವಾಗಿ ಇದಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ.
ಇರಾನ್, ಸಿರಿಯಾ, ಪಾಕಿಸ್ತಾನ, ಟರ್ಕಿ, ಭಾರತ, ಈಜಿಪ್ಟ್, ಸೌದಿ ಅರೇಬಿಯಾ, ಆಫ್ರಿಕಾ ಖಂಡದ ಕೆಲವು ದೇಶಗಳು ಕರಿಜೀರಿಗೆಯನ್ನು ಬೆಳೆಯುತ್ತಿವೆ. ನಮ್ಮ ದೇಶದಲ್ಲಿ ಪಶ್ಚಿಮ ಬಂಗಾಳ, ಗುಜರಾತ್, ಜಮ್ಮು  ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಬಿಹಾರ  ಹಾಗೂ ಅಸ್ಸಾಂಗಳಲ್ಲಿ ಕರಿ ಜೀರಿಗೆ ವ್ಯವಸಾಯ ಗಣನೀಯವಾಗಿದೆ. ಆದರೆ ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ ಹಾಗೂ ತಮಿಳುನಾಡಿನಲ್ಲಿ ಬಲು ಕಡಿಮೆ ಎನ್ನಬಹುದು.

ಬೆಳೆ ವಿಧಾನ
ಬೀಜ ಬಿತ್ತನೆ ಮಾತ್ರವಲ್ಲದೆ ಸಸಿ ಮಡಿಗಳಲ್ಲಿ ಬೆಳೆಸಿ ನಾಟಿ ಮಾಡಬಹುದು. ನೀರು ಸರಾಗವಾಗಿ ಬಸಿದು ಹೋಗುವ ಮರಳುಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೆ ಧಾರಾಳ ಬಿಸಿಲು ಬೇಕು. ಸಸಿಗಳು ಸುಮಾರು 1 ಅಡಿ ಎತ್ತರ ಬೆಳೆಯುತ್ತವೆ. ಇದೊಂದು ದ್ವಿದಳ ಧಾನ್ಯದ ಬೆಳೆ. ಹೂಗಳು ಬಿಳಿ ಇಲ್ಲವೇ ಕಡು ನೀಲಿ ಬಣ್ಣ ಹೊಂದಿರುತ್ತವೆ.

ತ್ರಿಕೋನಾಕಾರದ ಬೀಜಗಳ ವರ್ಣ ಕಪ್ಪು, ನೋಡಲು ಈರುಳ್ಳಿ ಬೀಜದಂತೆ ಕಾಣುತ್ತದೆ.
ವಿವಿಧ ಮಸಾಲೆ ಪದಾರ್ಥಗಳ ರೀತಿಯಲ್ಲೆೀ ಕರಿ ಜೀರಿಗೆಯನ್ನು  ಸಹ ಆಹಾರ ತಯಾರಿಕೆಯಲ್ಲಿ ಪರಿಮಳ ವೃದ್ಧಿಸಲು, ರುಚಿ ಹೆಚ್ಚಿಸಲು ಬಳಸುವುದುಂಟು.

ತಮ್ಮದೇ ಆದ ವಿಶಿಷ್ಟ ರೀತಿಯ ಮಸಾಲೆ  ಪದಾರ್ಥಗಳಿಗೆ ಹೆಸರಾಗಿರುವ ಗುಜರಾತ್  ಹಾಗೂ ರಾಜಸ್ತಾನದ ಜನರ  ಬೇಳೆಸಾರು ಒಗ್ಗರಣೆಗೆ ಕರಿ ಜೀರಿಗೆ ಬೇಕೆ ಬೇಕು. ಬ್ರೆಡ್ಡು, ಕಚೋರಿ ಹಾಗೂ ಬನ್‌ಗಳ ತಯಾರಿಕೆಯಲ್ಲಿ ಕೂಡ ಇದನ್ನು ಯಥೇಚ್ಛ ಬಳಸುತ್ತಾರೆ.

ಆದರೆ ಆಹಾರಕ್ಕಿಂತ ಔಷಧೀಯ ಗುಣಕ್ಕೆ ಹೆಸರಾದ ಕರಿ ಜೀರಿಗೆಯನ್ನು ಹಿಂದಿಯಲ್ಲಿ ಕಾಲಾಜೀರಾ, ಕಲೋಂಜಿ, ಸಂಸ್ಕೃತದಲ್ಲಿ ಕೃಷ್ಣಜೀರಾ ಎಂದು ಕರೆಯುತ್ತಾರೆ.

ಶೇ 22 ರಷ್ಟು ಸಸಾರಜನಕ  ಹಾಗೂ 41ರಷ್ಟು ಕೊಬ್ಬಿನ ಅಂಶವಿರುವುದರಿಂದ ಇದನ್ನು `ಪೌಷ್ಟಿಕಾಂಶಗಳ ಆಗರ~ ಎಂದು ಕರೆಯಬಹುದು. ಮನುಷ್ಯ ದೇಹಕ್ಕೆ ಅತ್ಯುಪಯುಕ್ತ ಎಂದೇ ಪರಿಗಣಿಸಲಾಗಿರುವ ಒಮೆಗಾ-3 ಸ್ನಿಗ್ಧ ಆಮ್ಲ ಕೂಡ ಕರಿ ಜೀರಿಗೆಯಲ್ಲಿ ಅಧಿಕ ಪ್ರಮಾಣದಲ್ಲಿ ಲಭ್ಯ.
 
ಮೇಲ್ನೋಟಕ್ಕೆ ಅತಿರಂಜಿತ ವಿಷಯ ಎನಿಸಬಹುದಾದರೂ ಥೈಮೊಕ್ವಿನೋನ್, ಥೈಮೋಲ್, ಥೈಮೋ ಹೈಡ್ರೊಕ್ವಿನೋನ್ ಸೇರಿದಂತೆ ನೂರಕ್ಕೂ ಮಿಗಿಲಾಗಿ ಔಷಧೀಯ ಗುಣಗಳನ್ನು ಇದು ಹೊಂದಿದೆ. ಇವುಗಳಲ್ಲಿ ಥೈಮೊಕ್ವಿನೋನ್‌ಗೆ ಬ್ರಾಂಕೊಡಿಯಲೇಷನ್ ಗುಣಧರ್ಮವಿದ್ದು, ಶ್ವಾಸಕೋಶದ ಸೂಕ್ಷ್ಮನಾಳಗಳನ್ನು ಹಿಗ್ಗಿಸುವ ಸಾಮರ್ಥ್ಯ ಹೊಂದಿರುವುದರಿಂದ ಆಸ್ತಮಾ ರೋಗಿಗಳಿಗೆ ಒಂದು ರೀತಿಯಲ್ಲಿ ದಿವ್ಯೌಷಧಿಯೇ ಸರಿ.

ಮಧುಮೇಹ, ಕ್ಯಾನ್ಸರ್, ರಕ್ತದೊತ್ತಡ, ಚರ್ಮವ್ಯಾಧಿ, ಹೊಟ್ಟೆಯಲ್ಲಿ ಉಂಟಾಗುವ ಹುಳುಗಳ (ಜಂತು) ಬಾಧೆ, ವಾತ, ಊತ, ನೆಗಡಿ, ಕೆಮ್ಮು, ನೋವುಗಳು ಅಲ್ಲದೇ ಏಡ್ಸ್ ನಿಯಂತ್ರಣಕ್ಕೆ ಕೂಡ ಕರಿ ಜೀರಿಗೆ ಒಳ್ಳೆಯ ಮದ್ದು. ಸ್ತನ ಹಾಗೂ ಕರುಳಿನ ಬಾಲದ ಕ್ಯಾನ್ಸರ್  ನಿವಾರಣೆಯಲ್ಲಿ ಕರಿ ಜೀರಿಗೆ ಪರಿಣಾಮಕಾರಿ ಎಂದು ಅಧ್ಯಯನದಿಂದ ಗೊತ್ತಾಗಿದೆ. ಶಿಲೀಂಧ್ರ ಸೋಂಕಿತ ಕ್ಯಾಂಡಿಡಿಯಾಸಿಸ್‌ಗೂ (ಚರ್ಮವ್ಯಾಧಿ) ಇದು ಉತ್ತಮ ಔಷಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.