ADVERTISEMENT

ಕಬ್ಬಿಗೆ ಪರ್ಯಾಯ ಈ ಗಡ್ಡೆ!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಕಬ್ಬಿಗೆ ಪರ್ಯಾಯವಾಗುವ `ಗಡ್ಡೆ~ಯೊಂದಿದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಕೆಲ ದೇಶಗಳಲ್ಲಿ ಬೀಟ್‌ರೂಟ್‌ನಿಂದ ಸಕ್ಕರೆ ತಯಾರಿಸುತ್ತಾರೆ. ಕಬ್ಬಿನಿಂದ ಸಕ್ಕರೆ ಉತ್ಪಾದನೆ ಮಾಡುವ ತಂತ್ರಜ್ಞಾನ ಎಲ್ಲೆಡೆ ಪ್ರಚಲಿತವಿದೆ. ಕಬ್ಬಿಗೆ ಪರ್ಯಾಯವಾದ ಅದಕ್ಕಿಂತ ಹೆಚ್ಚು `ಸಿಹಿ~ ಅಂಶವಿರುವ ಗಡ್ಡೆಯೊಂದಿದೆ!

ನೋಡಲು ಈ ಗಡ್ಡೆ ಮೂಲಂಗಿಯಂತೆ ಕಾಣುತ್ತದೆ. ಅದನ್ನು ಸಕ್ಕರೆ ಗಡ್ಡೆ ಎಂದೇ ಕರೆಯುತ್ತಾರೆ. ಈ ಗಡ್ಡೆಯಲ್ಲಿ ಸಕ್ಕರೆ ಅಂಶ ಹೇರಳವಾಗಿದೆ. ಇದನ್ನು ಎಲ್ಲ ಬಗೆಯ ಮಣ್ಣಿನಲ್ಲೂ ಬೆಳೆಯಬಹುದು. ಇದು ಆರು ತಿಂಗಳ ಬೆಳೆ. ಒಂದೊಂದು ಗೆಡ್ಡೆ ಸುಮಾರು 3 ಕೆ.ಜಿ. ತೂಗುತ್ತವೆ. ಯುರೋಪ್ ದೇಶಗಳಲ್ಲಿ ಈ ಗೆಡ್ಡೆಗಳಿಂದ ಸಕ್ಕರೆ ಉತ್ಪಾದಿಸುತ್ತಾರೆ.

ಕಡಿಮೆ ನೀರು ಮತ್ತು ಕಬ್ಬಿಗಿಂತ ಕಡಿಮೆ ಅವಧಿಯಲ್ಲಿ ಬೆಳೆಯುವ ಈ ಸಸ್ಯಕ್ಕೆ ರಾಸಾಯನಿಕ ಗೊಬ್ಬರದ ಅವಶ್ಯಕತೆ ಕಡಿಮೆ. ಈಗಾಗಲೇ ಈ ಗಡ್ಡೆಗಳನ್ನು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳಲ್ಲಿ ಪ್ರಾಯೋಗಿಕವಾಗಿ ಬೆಳೆಯುತ್ತಿದ್ದಾರೆ. ಮಹಾರಾಷ್ಟ್ರದ ಜಾಲ್ನಾದಲ್ಲಿ ಈ ಗಡ್ಡೆಯಿಂದ ಸಕ್ಕರೆ ತಯಾರಿಸುವ ಒಂದು ಘಟಕವೂ ಆರಂಭವಾಗಿದೆ.

ಬೆಳಗಾವಿಯ `ಸಕ್ಕರೆ ಸಂಸ್ಥೆ~ಯಲ್ಲಿ ಈ ಗಡ್ಡೆಗಳ ಬಗ್ಗೆ  ರೈತರಿಗೆ ತಿಳಿವಳಿಕೆ ನೀಡುವ ಮತ್ತು ಬೆಳೆಯುವ ಕ್ರಮಗಳನ್ನು ತಿಳಿಸುವ ತರಬೇತಿಗಳು ನಡೆಯುತ್ತಿವೆ. ಈ ಗಡ್ಡೆಗಳಿಂದ ಸಕ್ಕರೆ ತಯಾರಿಸುವ ಪ್ರಯತ್ನ ಯಶಸ್ವಿಯಾದರೆ ಸಕ್ಕರೆ ಕೊರತೆ ನೀಗಬಹುದು ಎಂದು ಸಕ್ಕರೆ ಸಂಸ್ಥೆಯ ವಿಜ್ಞಾನಿ ಡಾ. ಆರ್.ಬಿ. ಖಂಡಗಾವಿ ಅಭಿಪ್ರಾಯಪಡುತ್ತಾರೆ.

ಪ್ರತಿ ಹೆಕ್ಟೇರಿಗೆ 30 ರಿಂದ 40 ಟನ್ ಸಕ್ಕರೆ ಗಡ್ಡೆ ಇಳುವರಿ ಪಡೆಯಬಹುದು. ಕಡಿಮೆ ನೀರು ಬಳಸಿಕೊಂಡು ಬೆಳೆಯಬಹುದು. ಬೇಸಾಯ ಖರ್ಚು ಕಡಿಮೆ ಇರುವುದರಿಂದ ಅಧಿಕ ಲಾಭ ಪಡೆಯಬಹುದು. ಈ ಬೆಳೆಗೆ ಹೆಚ್ಚಿನ ಕಾರ್ಮಿಕರ ಅಗತ್ಯ ಇಲ್ಲ ಎನ್ನಲಾಗಿದೆ.

ಕಬ್ಬಿನಲ್ಲಿ ಸಕ್ಕರೆ ಅಂಶ ಶೇ 10 ರಿಂದ 11ರಷ್ಟಿದ್ದರೆ ಸಕ್ಕರೆ ಗಡ್ಡೆಯಲ್ಲಿ ಶೇ 14 ರಷ್ಟಿದೆ.  ಅಕ್ಟೋಬರ್‌ನಿಂದ  ಮೇ ತಿಂಗಳವರೆಗೆ ಬಿತ್ತನೆಗೆ ಸಕಾಲ. ಗೆಡ್ಡೆಗಳಲ್ಲಿ ಸಕ್ಕರೆ ಅಂಶ ತುಂಬಿಕೊಳ್ಳಲು 30-35 ಡಿಗ್ರಿ ಉಷ್ಣಾಂಶ ಬೇಕು. ಪ್ರತಿ ಹೆಕ್ಟೇರಿಗೆ 3.6 ಕೆ.ಜಿ. ಬಿತ್ತನೆ ಬೀಜ ಬೇಕಾಗುತ್ತದೆ. ಒಂದು ಹೆಕ್ಟೇರ್‌ನಲ್ಲಿ 1 ಲಕ್ಷದಿಂದ 1.2 ಲಕ್ಷ ಸಸಿಗಳನ್ನು ಬೆಳೆಸಬಹುದು.

ಸಕ್ಕರೆ ಗಡ್ಡೆಗಳಲ್ಲಿ ಹಲವು ತಳಿಗಳಿವೆ. ಕೀಟಬಾಧೆ, ರೋಗ ಭಾದೆಗಳನ್ನು ನಿಯಂತ್ರಿಸದಿದ್ದರೆ ಬೆಳೆ ಕೈ ತಪ್ಪಿ ಹೋಗಬಹುದು. ಈ ಬೆಳೆಗೆ ಎಲೆ ತಿನ್ನುವ ಹುಳು, ಬೇರಿಗೆ ಕೊಳೆರೋಗ, ಸೊರಗು ರೋಗಗಳು ಬರುತ್ತವೆ. ಅವನ್ನು ನಿಯಂತ್ರಿಸಲು ಸಾಧ್ಯವಿದೆ ಎನ್ನುತ್ತಾರೆ ಎಂ.ಕೆ. ಹುಬ್ಬಳ್ಳಿ ಸಕ್ಕರೆ ಕಾರ್ಖಾನೆ ಉದ್ಯೋಗಿ ಆರ್.ಆರ್. ಪಾಟೀಲ.

ಸಕ್ಕರೆ ಗಡ್ಡೆಗಳನ್ನು ಬೆಳೆಯುವ ಪ್ರಯತ್ನ ಮೊದಲು ಯಶಸ್ವಿಯಾಗಬೇಕು. ಗಡ್ಡೆಗಳಿಂದ ಸಕ್ಕರೆ ತೆಗೆಯುವ ಕಾರ್ಖಾನೆಗಳು ನಿರ್ಮಾಣವಾದರೆ ಕಬ್ಬು ಬೆಳೆಯುತ್ತಿರುವ ರೈತರು ಸಕ್ಕರೆ ಗಡ್ಡೆಗಳನ್ನು ಬೆಳೆಯಲು ಮುಂದಾಗಬಹುದು. ಇದರಿಂದ ಕಬ್ಬು ಬೆಳೆಯಲು ಖರ್ಚಾಗುತ್ತಿದ್ದ ಭಾರೀ ಪ್ರಮಾಣದ ನೀರಿನ ಉಳಿತಾಯ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT