ADVERTISEMENT

ಕೃಷಿಹೊಂಡ ಸೃಷ್ಟಿಸಿದ ಸಮೃದ್ಧಿ

ನಟರಾಜ್ ನಾಗಸಂದ್ರ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಕೃಷಿ ಹೊಂಡದಲ್ಲಿ ಶೇಖರಣೆ ಆಗಿರುವ ಮಳೆ ನೀರು
ಕೃಷಿ ಹೊಂಡದಲ್ಲಿ ಶೇಖರಣೆ ಆಗಿರುವ ಮಳೆ ನೀರು   

ನೀರಿನ ಸಮಸ್ಯೆ ನೀಗಿಸಿಕೊಂಡು ಲಾಭದಾಯಕ ಕೃಷಿ ಮಾಡಲು ಜನ್ಮತಳೆದ ಪರಿಕಲ್ಪನೆಯೇ ಹಸಿರು ಮನೆ (ಗ್ರೀನ್‌ಹೌಸ್‌). ಕೃಷಿಹೊಂಡ ಇರುವ ಹಸಿರುಮನೆ ಇದ್ದರೆ ಕೊಳವೆ ಬಾವಿಯ ಹಂಗಿಲ್ಲದೆ ಉತ್ತಮ ಬೆಳೆ ತೆಗೆಯಬಹುದು ಎನ್ನುವುದು ಈಗಾಗಲೇ ಸಾಬೀತಾಗಿದೆ. ಅಂತಹದ್ದೇ ಮಾದರಿಯನ್ನು ಅನುಸರಿಸಿ ಯಶಸ್ಸು ಗಳಿಸಿದವರು ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ರೈತ ಎ.ನಾಗರಾಜು.

ಮಳೆ ನೀರಿನಿಂದಲೇ ಬೆಳೆ ಬೆಳೆಯುವ ಆಲೋಚನೆ ಮೂಡಿದ್ದರ ಬಗ್ಗೆ ಹೇಳುವ ನಾಗರಾಜು ಅವರು ‘ಒಂದು ದಿನ ಗ್ರೀನ್‌ ಹೌಸ್‌ ನಿರ್ಮಾಣದ ಕಾಮಗಾರಿ ಮುಕ್ತಾಯವಾಗಿತ್ತು. ಸಂಜೆ ಜೋರಾಗಿ  ಮಳೆ ಬಂತು. ಗ್ರೀನ್‌ ಹೌಸ್‌ ಮುಂದೆ ನಿಂತುಕೊಂಡಿದ್ದೆ.

ನೋಡುತ್ತಿದ್ದಂತೆ ಅರ್ಧಗಂಟೆಯಲ್ಲಿ ಇಡೀ ಪ್ರದೇಶದಲ್ಲಿ ಕೆರೆ ಅಂಗಳದಂತೆ ಮಳೆ ನೀರು ನಿಂತಿತ್ತು. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೇಲ್ಚಾವಣಿಯಿಂದ ಬರುತ್ತಿದ್ದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದುದನ್ನು ಹೇಗಾದರೂ ಮಾಡಿ ಹಿಡಿದಿಟ್ಟುಕೊಳ್ಳಬೇಕು ಎಂದು ಆಲೋಚಿಸಿದೆ’ ಎನ್ನುತ್ತಾರೆ.

ADVERTISEMENT

ಮೂರು ಎಕರೆ ಪ್ರದೇಶದ ಭೂಮಿಯಲ್ಲಿ 2 ಎಕರೆ  5 ಗುಂಟೆಯಲ್ಲಿ ಸುಮಾರು ₹65 ಲಕ್ಷ ಖರ್ಚು ಮಾಡಿ ಹಸಿರು ಮನೆ ನಿರ್ಮಿಸಲಾಗಿದೆ. 35 ಗುಂಟೆ ಪ್ರದೇಶದಲ್ಲಿ ₹1.70 ಲಕ್ಷ ಖರ್ಚು ಮಾಡಿ ಎರಡು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.

ಮಳೆ ನೀರಿನಿಂದ ಗ್ರೀನ್‌ಹೌಸ್‌ನಲ್ಲಿ ಬೆಳೆದ ದೊಣ್ಣೆ ಮೆಣಸಿನಕಾಯಿ ಗಿಡಗಳು

ಮೊದಲನೆ ಕೃಷಿ ಹೊಂಡ 160 ಅಡಿ ಉದ್ದ, 60 ಅಡಿ ಅಗಲ, 18 ಅಡಿ ಆಳ. ಎರಡನೇ ಕೃಷಿ ಹೊಂಡ 100 ಅಡಿ ಉದ್ದ, 60 ಅಡಿ ಅಗಲ, 18 ಅಡಿ ಆಳವನ್ನು ಹೊಂದಿದೆ. ಈ ಎರಡು ಕೃಷಿ ಹೊಂಡಗಳಿಗೆ ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಲ್ಲಿ ₹50,000 ಸಹಾಯಧನ ಸಹ ದೊರೆತಿದೆ. 

ಇಡೀ ಬೆಳೆಗೆ ಮಳೆ ನೀರು: 2016ರ ಫೆಬ್ರುವರಿಯಲ್ಲಿ ಬಿದ್ದ ಮಳೆಗೆ ಕೃಷಿ ಹೊಂಡಗಳು ಭರ್ತಿಯಾಗಿದ್ದವು. ಅದೇ ವೇಳೆ 2 ಎಕರೆ 5 ಗುಂಟೆ ಪ್ರದೇಶದ ಹಸಿರು ಮನೆಯಲ್ಲಿ 23 ಸಾವಿರ ಸಸಿ ದೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ನಾಟಿ ಮಾಡಲಾಯಿತು. ಡ್ರಿಪ್‌ ವ್ಯವಸ್ಥೆಯಿಂದ ಬೇರಿಗೆ ನೀರು ಉಣಿಸಲು ಆರಂಭಿಸಲಾಯಿತು. ಪ್ರತಿದಿನ ಅರ್ಧಗಂಟೆ ನೀರು ಹಾಯಿಸಲಾಗುತ್ತದೆ. ಒಂದು ಬಾರಿ ಎರಡು ಕೃಷಿ ಹೊಂಡಗಳು ಮಳೆ ನೀರಿನಿಂದ ಭರ್ತಿಯಾದರೆ 60 ದಿನಗಳ ಕಾಲ ನೀರು ಹಾಯಿಸಲು ಸಾಧ್ಯ.

ಅಷ್ಟರಲ್ಲಿ ಅಲ್ಪಸ್ವಲ್ಪ ಮಳೆ ಬಂದೇ ಬರುತ್ತಿತ್ತು. ಹೀಗಾಗಿ 2016ರ ಡಿಸೆಂಬರ್‌ನಲ್ಲಿ ದೊಣ್ಣೆ ಮೆಣಸಿನಕಾಯಿ ಸಸಿಗಳನ್ನು ಕಿತ್ತು ಹಾಕುವವರೆಗೂ ಒಮ್ಮೆಯೂ ಕೊಳವೆಬಾವಿ ನೀರನ್ನು ಬಳಸಿಕೊಳ್ಳಲಿಲ್ಲ. ಮಳೆ ನೀರನ್ನೇ ಬಳಸಿದ್ದರಿಂದ ಉತ್ತಮ ಇಳುವರಿ ಲಭಿಸಿದೆ. ರೋಗಬಾಧೆ ಕಡಿಮೆಯಾಗಿತ್ತು ಎನ್ನುತ್ತಾರೆ ನಾಗರಾಜು.

ಮಾರಾಟಕ್ಕೆ ಸಿದ್ಧಗೊಂಡಿರುವ ದೊಣ್ಣೆ ಮೆಣಸಿನಕಾಯಿ

ಕೃಷಿ ಹೊಂಡಗಳು ಮಳೆಗಾಲದಲ್ಲಿ ಸದಾ ತುಂಬಿ ಕೋಡಿ ಬೀಳುತ್ತಲೇ ಇದ್ದವು. ಹೀಗಾಗಿ ಕೃಷಿ ಹೊಂಡಗಳಿಂದ ಹೊರಹೋಗುವ ಹೆಚ್ಚುವರಿ ನೀರನ್ನು ಗ್ರೀನ್‌ ಹೌಸ್‌ ಸಮೀಪದಲ್ಲೇ ಇರುವ ಕೊಳವೆ ಬಾವಿ ಸುತ್ತ ಇಂಗು ಗುಂಡಿಯನ್ನು ನಿರ್ಮಿಸಿ ಕಾಲುವೆ ಮೂಲಕ ಅಲ್ಲಿಗೆ ಹೋಗುವಂತೆ ಮಾಡಲಾಗಿದೆ.
ಇದರಿಂದ ಅಂತರ್ಜಲ ಹೆಚ್ಚಾಗಿದೆ.

2016ರಲ್ಲಿ ಕೊಳವೆ ಬಾವಿಯಲ್ಲಿ ಸಣ್ಣ ಪ್ರಮಾಣದಲ್ಲಿ ನಿಂತು ನಿಂತು ನೀರು ಬರುತ್ತಿತ್ತು. 2017ರಲ್ಲಿ ಕೊಳವೆ ಬಾವಿಯಿಂದ ನೀರು ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದರೂ ನಿಂತು ನಿಂತು ಬರುತ್ತಿಲ್ಲ. ಕೊಳವೆ ಬಾವಿಯು ಮಳೆ ನೀರಿನಿಂದ ಮರುಪೂರಣವಾಗಿದೆ ಎನ್ನುತ್ತಾರೆ ನಾಗರಾಜು. 

ಚಿತ್ರಗಳು: ಲೇಖಕರವು                         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.