ADVERTISEMENT

'ಕೆಂಪು ತೋಟ'ದ ಸುಂದರ ನೋಟ

ಮಹಾಂತೇಶಪ್ಪ ಎಸ್.ಬೆಳಲಗೆರೆ
Published 24 ಜೂನ್ 2013, 19:59 IST
Last Updated 24 ಜೂನ್ 2013, 19:59 IST
ಸಮೃದ್ಧ ದಾಳಿಂಬೆ ಗಿಡದೊಂದಿಗೆ ಶ್ರೀಧರ್, ರಾಮಾಂಜಿನಪ್ಪ
ಸಮೃದ್ಧ ದಾಳಿಂಬೆ ಗಿಡದೊಂದಿಗೆ ಶ್ರೀಧರ್, ರಾಮಾಂಜಿನಪ್ಪ   

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಬೂದಿಹಾಳ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಚೋನಾಯಕನಹಳ್ಳಿಯ ರಾಮಾಂಜಿನಪ್ಪ ಅವರ ತೋಟದಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಕೆಂಪು ಹಾಸು. ದೂರ ದೂರದವರೆಗೂ ರಂಗೇರಿರುವ ಕೆಂಬಣ್ಣ. ಇದು ದಾಳಿಂಬೆ ಕಮಾಲ್.

ಎರಡು ಎಕರೆ ಜಮೀನಿನಲ್ಲಿ ಈ ಪರಿಯಲ್ಲಿ ದಾಳಿಂಬೆ ಬೆಳೆಸಿರುವ ಕೀರ್ತಿ ರಾಮಾಂಜಿನಪ್ಪ ಅವರ ಮಗ ಶ್ರೀಧರ್ ಅವರದ್ದು. ರಾಮಾಂಜಿನಪ್ಪ ಅವರು ವಿವಿಧ ತರಕಾರಿ, ಬಾಳೆ, ಮಾವು, ಸೀಬೆ, ಚಿಕ್ಕು ಬೆಳೆಯುತ್ತಿದ್ದರು. ಶ್ರೀಧರ್ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ನೌಕರರಾಗಿದ್ದರು. ಬೇರೆಯವರ ಕೆಳಗೆ ಎಷ್ಟು ದುಡಿದರೂ ತೃಪ್ತಿ ಇಲ್ಲ ಎಂದುಕೊಂಡ ಅವರು, ಕೃಷಿಯತ್ತ ಒಲವು ತೋರಿಸಿ ಈಗ ಯಶಸ್ವಿ ಕೃಷಿಕರಾಗಿದ್ದಾರೆ. ಇವರಿಗೆ ನೆರವಾದದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಿದ್ದನಕಟ್ಟೆ ಗ್ರಾಮದ ಅನುಭವಿ ರೈತ ಚಂದ್ರಣ್ಣ. ಅವರ ಮಾರ್ಗದರ್ಶನದಂತೆ ನೂತನ ಮಹಾರಾಷ್ಟ್ರದ ಬಗ್ವಾ ತಳಿಯ 600 ದಾಳಿಂಬೆ ಗಿಡಗಳನ್ನು 10/10ಅಡಿ ಅಂತರದಲ್ಲಿ ನೆಟ್ಟರು. ಅದೀಗ ನಿರೀಕ್ಷೆಗೂ ಮೀರಿದ ಫಸಲು ನೀಡಿದೆ. ಪ್ರತಿ ಗಿಡದಲ್ಲೂ ಅರ್ಧದಿಂದ ಮುಕ್ಕಾಲು ಕಿಲೊ ತೂಕದ 80 ರಿಂದ 100 ಹಣ್ಣುಗಳು ಜೋತುಬಿದ್ದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹೆಚ್ಚಾಗಿ ಜೈವಿಕ ಗೊಬ್ಬರ ಬಳಸುವ ಇವರು ಅಗತ್ಯ ಬಿದ್ದಾಗ ಮಾತ್ರ ರಾಸಾಯನಿಕ ಗೊಬ್ಬರವನ್ನು ಬಳಸುತ್ತಾರೆ.

ಕೈತುಂಬಾ ಹಣ
ಮೊದಲ ವರ್ಷ ಸುಮಾರು 2ಲಕ್ಷ ರೂಪಾಯಿ ಬಂಡವಾಳ ಹಾಕಿದ ಶ್ರೀಧರ್ 18 ತಿಂಗಳಲ್ಲೆ ಮೊದಲ ಫಸಲು ಮತ್ತು ಹಾಕಿದ್ದ ಬಂಡವಾಳದ ಜೊತೆಗೆ ಲಾಭವು ಕೈಸೇರಿತ್ತು. ತೋಟಗಾರಿಕೆ ಇಲಾಖೆಯಿಂದ ಶೇ 80 ರಿಯಾಯಿತಿ ದರದಲ್ಲಿ ಹನಿ ನೀರಾವರಿ ಯೋಜನೆಯಿಂದ ದಾಳಿಂಬೆ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ಕೈತುಂಬಾ ಹಣ ನೋಡುತ್ತಿದ್ದಾರೆ. ದಾಳಿಂಬೆ ಹಣ್ಣಿಗೆ ಉತ್ತಮ ಬೆಲೆ ಮತ್ತು ಹೆಚ್ಚು ಬೇಡಿಕೆ ಇದೆ. ಈ ಬಾರಿ ಸುಮಾರು 6.5ಟನ್ ಹಣ್ಣು ಸಿಗಲಿದ್ದು, ಕನಿಷ್ಠ ಕಿಲೊಗೆ 100ರೂಪಾಯಿಗಳಂತೆ ಮಾರಾಟವಾಗುವ ನಿರೀಕ್ಷೆ ಇದೆ. ಇದರಿಂದ ಕನಿಷ್ಠ 6.5ಲಕ್ಷ ರೂಪಾಯಿ ಆದಾಯ ಖಂಡಿತ' ಎನ್ನುತ್ತಾರೆ ಶ್ರೀಧರ್.

ಒಂದು ಲಕ್ಷ ರೂಪಾಯಿ ಬಂಡವಾಳಕ್ಕೆ 4 ರಿಂದ 5ಲಕ್ಷ ಲಾಭ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸದಿಂದ ನುಡಿಯುವ ಇವರಿಗೆ ನಾಲ್ಕೈದು ಮಂದಿಗೆ ಕೆಲಸ ಕೊಟ್ಟ ಧನ್ಯತೆ. ಕಾಂಕ್ರೀಟ್ ಕಾಡು ಹಾಗೂ ದೂಳಿನಿಂದ ಕೂಡಿದ ಪಟ್ಟಣದಿಂದ ದೂರ ಉಳಿದು ಮನೆಮಂದಿಯೊಂದಿಗೆ ಹಸಿರಿನ ನಡುವೆ ದುಡಿಯುವುದು ಆರೋಗ್ಯದ ಜೊತೆಗೆ ಸಂತಸ ತಂದಿದೆ ಎನ್ನುತ್ತಾರೆ.

ದಾಳಿಂಬೆ ಗಿಡಗಳ ನಡುವೆ ನಿಂಬೆ, ಸಪೋಟಗಳನ್ನು ಬೆಳೆದಿದ್ದು ವರ್ಷದಲ್ಲಿ ಒಂದಲ್ಲಾ ಒಂದು ಫಸಲು ಬರುತ್ತಲೇ ಇದೆ. ಈಗಾಗಲೆ ಹೆಸರಘಟ್ಟ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರದ ರೈತರು ತಮ್ಮ ತೋಟವನ್ನು ನೋಡಿಕೊಂಡು ಹೋಗಿದ್ದಾರೆ. ಅವರಿಗೆ ಅಗತ್ಯ ಮಾಹಿತಿ ನೀಡಿದ್ದೇನೆ ಎನ್ನುತ್ತಾರೆ ಶ್ರೀಧರ್. ಸಂಪರ್ಕಕ್ಕೆ 9964350134, 8892962769.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.