ಬಿಸಿಲು, ಮಳೆ, ಚಳಿ ಎನ್ನದೆ ಸದಾ ತೋಟವನ್ನು ಹಸಿರಾಗಿರುವಂತೆ ಮಾಡುವುದು ಕೊತ್ತಂಬರಿ ಸೊಪ್ಪು. ಇದು ಕೇವಲ ತೊಟವನ್ನಷ್ಟೇ ಅಲ್ಲ, ರೈತನ ಬದಕನ್ನು ಸದಾ ಹಸನಾಗಿಸಬಲ್ಲದು. ಬಹಳ ಸುಲಭವಾಗಿ ಬೆಳೆಯಬಹುದಾದ ಈ ಸೊಪ್ಪನ್ನು 2-3 ತಿಂಗಳಲ್ಲಿಯೇ ಬೆಳೆಯಬಹುದು. ಇದರಿಂದ ರೈತರು ವರ್ಷವಿಡೀ ಕೈತುಂಬಾ ಹಣ ಪಡೆಯಬಹುದು. ಈ ಬೆಳೆಯನ್ನು ಬೆಳೆಯುತ್ತಲೇ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿರುವ ರೈತರೂ ಅನೇಕರಿದ್ದಾರೆ.
ಅವರಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ಚಿಕ್ಕವಂಕಲಕುಂಟಿ ಗ್ರಾಮದ ಯಂಕಪ್ಪ ಗದ್ದಿ ಸಹ ಒಬ್ಬರು. ಇವರು ತಮ್ಮ ತೋಟ ಹಾಗೂ ಮನೆಯ ಸುತ್ತಮುತ್ತ ಈ ಬೆಳೆಯನ್ನು ಬೆಳೆಯುತ್ತಾ ಇತರ ರೈತರಿಗೆ ಮಾದರಿಯಾಗಿದ್ದಾರೆ.
ತಮ್ಮ ಜಮೀನಿನಲ್ಲಿ ಕೊತ್ತಂಬರಿ ಜೊತೆಗೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಾ, ಮಿಶ್ರ ಕೃಷಿಯನ್ನು ಮಾಡಿದ್ದಾರೆ. ಇವರು ತಮ್ಮ ಒಂದು ಎಕರೆಯ ಜಮೀನಿನಲ್ಲಿ ಮಿಶ್ರ ತರಕಾರಿ ಹಾಗೂ ಕೊತ್ತಂಬರಿ ಬೇಸಾಯದಿಂದ ಸಾಕಷ್ಟು ಆದಾಯ ಪಡೆದುಕೊಂಡಿದ್ದಾರೆ. ಸಾವಯವ ಪದ್ಧತಿಯಿಂದಲೇ ಭೂಮಿಯನ್ನು ಊಳುತ್ತಾ ಕೊತ್ತಂಬರಿ, ಪಾಲಕ್, ಮೆಂತೆ, ಸೌತೆಕಾಯಿ, ಹೀರೇಕಾಯಿ, ಮೂಲಂಗಿ ಸೇರಿದಂತೆ ಇನ್ನೂ ಅನೇಕ ತರಕಾರಿಯನ್ನು ಬೆಳೆಯುತ್ತಾರೆ. ಕೈ ಕೆಸರಾದರೆ ಬಾಯಿ ಮೊಸರು' ಎನ್ನುವಂತೆ ಶ್ರಮ ಪಟ್ಟು ಕೃಷಿ ಮಾಡುತ್ತ ಅತ್ಯುತ್ತಮವಾಗಿ ಪ್ರಗತಿ ಕಂಡುಕೊಂಡಿದ್ದಾರೆ.
ಕೊತ್ತಂಬರಿ ನಾಟಿ ವಿಧಾನ
ಭೂಮಿಯನ್ನು ಹದಮಾಡಿ ನಂತರ ಬೀಜ ಬಿತ್ತಬೇಕು. ಬಿತ್ತಿದ ಬೀಜದ ಮೇಲೆ ಸ್ವಲ್ಪ ನೀರನ್ನು ಹಾಯಿಸಬೇಕು. ಆಗಾಗ ನೀರುಣಿಸಬೇಕು. ಹೀಗಾದರೆ ಬೀಜ ಮೊಳಕೆಯೊಡೆದು ಸಸಿಯಾಗುತ್ತದೆ. ನಂತರ ಸ್ವಲ್ಪ ಗೊಬ್ಬರ ನೀಡಬೇಕು ಆಮೇಲೆ ನಿತ್ಯ ನೀರುಣಿಸುತ್ತಾ ಬಂದರೆ ಗಿಡಗಳು ಸೊಂಪಾಗಿ ಬೆಳೆಯುತ್ತವೆ.
ಇವರು ತರಕಾರಿಯನ್ನು ಇಳಕಲ್, ಕುಷ್ಟಗಿ, ಗಂಗಾವತಿ, ಸಿಂಧನೂರು, ಹುನಗುಂದ, ಗಜೇಂದ್ರಗಡ ಮಾರುಕಟ್ಟೆಗೆ ಒಯ್ಯುತ್ತಾರೆ. ಕೊಗ್ಗರೆಯ ಊರಿನವರು ಇವರಲ್ಲಿಗೇ ಬಂದು ಖರೀದಿಸುತ್ತಾರೆ. ವಾರದಲ್ಲಿ ಒಂದೆರಡು ಬಾರಿ ಮಾರುಕಟ್ಟೆಗೆ ಒಯ್ಯುತ್ತಾರೆ. ಇವರ ಸಂಪರ್ಕಕ್ಕೆ 9535357825
-ದೇವರಾಜ್ ಮ್ಯಾದನೇರಿ ಹೊನಗಡ್ಡಿ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.