ADVERTISEMENT

ನಕ್ಷತ್ರ ನೇರಳೆ ಸವಿ

ಗೀತಸದಾ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಕರಾವಳಿ ಹಾಗೂ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಈ ಆಕರ್ಷಕ ಬಣ್ಣದ ಹಣ್ಣನ್ನು ನಕ್ಷತ್ರ ನೇರಳೆ, ಸ್ಟಾರ್ ಆಪಲ್ ಎಂದೆಲ್ಲಾ ಹಲವಾರು ಹೆಸರುಗಳಿಂದ ಕರೆಯುತ್ತಾರೆ.

ಇದು ಉತ್ತಮ ನೀರಿನಂಶ ಹೊಂದಿದ್ದು, ಹುಳಿ - ಸಿಹಿ ರುಚಿಯಿಂದ ಕೂಡಿದೆ. ಹೀಗಾಗಿ ಸವಿಯಲು ಬಹಳ ರುಚಿಯಾಗಿರುತ್ತದೆ. ಇದನ್ನು ಪಾನೀಯ, ಜಾಮ್, ಗೊಜ್ಜು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. 

ಸಾಮಾನ್ಯವಾಗಿ ಫೆಬ್ರುವರಿ - ಮಾರ್ಚ್ ತಿಂಗಳಿನಲ್ಲಿ ಹಣ್ಣು ಬಿಡಲು  ಪ್ರಾರಂಭವಾಗುತ್ತದೆ. ಕೆಲವು ಮರಗಳಲ್ಲಿ ವರ್ಷಕ್ಕೆ ಎರಡು ಬಾರಿ ಕಾಯಿಗಳಾದರೆ ಇನ್ನು ಕೆಲವು ತಳಿಗಳು ವರ್ಷ ಪೂರ್ತಿ ಫಲ ಕೊಡುವುದೂ ಇದೆ.

ಜಂಬುನೇರಳೆ ಅಥವಾ ಪನ್ನೇರಳೆ ಜಾತಿಗೆ ಸೇರಿದ ಈ ಗಿಡದ ವಿಶೇಷ ಎಂದರೆ ಇದು ಬಹಳ ಎತ್ತರಕ್ಕೆ ಬೆಳೆಯುವುದಿಲ್ಲ. ಎಲೆಗಳು ವರ್ಷವಿಡೀ ಹಸಿರಾಗಿರುತ್ತವೆ. ಹಣ್ಣು ನಕ್ಷತ್ರದ ಆಕಾರ ಹೊಂದಿದ್ದು ಆಕರ್ಷಕ ನಸು ನೇರಳೆ ಬಣ್ಣದಿಂದ ಕೂಡಿರುತ್ತದೆ. ಆದ್ದರಿಂದಲೇ ಇದನ್ನು ನಕ್ಷತ್ರ ನೇರಳೆ ಎನ್ನುತ್ತಾರೆ. ಹಚ್ಚಹಸಿರು ಎಲೆಗಳಿಂದ ಕೂಡಿದ ಮರದಲ್ಲಿ ನೇರಳೆ ಬಣ್ಣದ ಹಣ್ಣುಗಳು ತುಂಬಿದಾಗ ನಕ್ಷತ್ರಗಳು ಮಿನುಗಿದಂತೆ ಭಾಸವಾಗುತ್ತದೆ. ಅದರ ಸೌಂದರ್ಯವೇ ನಯನ ಮನೋಹರ.

ಇದು ಉಷ್ಣವಲಯದಲ್ಲಿ ಬೆಳೆಯುವ ಉತ್ತಮ ಹಣ್ಣು. ಇದರ ಗಿಡವನ್ನು ಮನೆಯ ಮುಂದೆ ಅಥವಾ ಹಿತ್ತಿಲಲ್ಲಿ, ತೋಟದ ಬದಿಗಳಲ್ಲಿ, ಬೇಲಿಗಳಲ್ಲಿ ಬೆಳೆಯಬಹುದು. ಹೂವಿನ ತೋಟದ್ಲ್ಲಲಿ ಅಲಂಕಾರಿಕ ಸಸ್ಯವಾಗಿಯೂ ಬೆಳೆಸಬಹುದು. ಬೀಜದಿಂದ ಹಾಗೂ ಕಸಿ ಕಟ್ಟುವಿಕೆಯಂದ ಸಸ್ಯಾಭಿವೃದ್ಧಿ ಮಾಡಬಹುದು. ಫಲವತ್ತಾದ ಮಣ್ಣು, ಬೂದಿ, ಕೊಟ್ಟಿಗೆ ಗೊಬ್ಬರದ ಆರೈಕೆ ಇದಕ್ಕೆ ಸಾಕು. ಬಿಸಿಲು ರಕ್ಷಣೆ ಬೇಕಾದ ಜಾಗದಲ್ಲೂ ನೆರಳಿಗಾಗಿಯೂ ಇದನ್ನು ಹಾಕುವವರಿದ್ದಾರೆ. ಒಣ ಹವಾಮಾನವಿದ್ದರೂ ಇದಕ್ಕೆ ಹೊಂದಿಕೆಯಾಗುತ್ತದೆ.

ನೀರು ಬಸಿದು ಹೋಗುವ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ನೆಟ್ಟು ಮೂರು ವರ್ಷಗಳಲ್ಲೆೀ ಫಲ ಪ್ರಾರಂಭವಾಗುತ್ತದೆ. ಒಂದೊಂದು ಗಿಡದಿಂದ  ಸಾವಿರಾರು ಹಣ್ಣು ಸಿಗುತ್ತದೆ.

ಸಾಮಾನ್ಯವಾಗಿ ಸಣ್ಣ ಗಿಡದಲ್ಲಿಯೇ ಒಂದು ಸಲಕ್ಕೆ 4-5 ಕಿಲೊ ಹಣ್ಣು ಸಿಗುತ್ತದೆ. ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಿಲೊ ಒಂದಕ್ಕೆ ರೂ 25 ರಿಂದ 30 ರೂಪಾಯಿ ಧಾರಣೆ ಇರುತ್ತದೆ. ಇತ್ತೀಚೆಗೆ ಇದಕ್ಕೆ ವಾಣಿಜ್ಯ ಮಹತ್ವ ಬಂದಿದೆ. ಹೆಚ್ಚು ನೀರು ಬೇಡದ ಈ ಹಣ್ಣನ್ನು ಕಡಿಮೆ ಜಾಗದಲ್ಲೆೀ ಬೆಳೆಸಿ ಪ್ರಯೋಜನ ಹೊಂದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.