ADVERTISEMENT

ನೋಡಿದಿರಾ, ಬಗೆ ಬಗೆ ರಾಗಿ!

ಶಾಂತಕುಮಾರ್ ಸಿ.
Published 29 ಮೇ 2017, 19:30 IST
Last Updated 29 ಮೇ 2017, 19:30 IST
ಚಿತ್ರಗಳು: ಜಗದೀಶ್ ಮಂಡ್ಯ
ಚಿತ್ರಗಳು: ಜಗದೀಶ್ ಮಂಡ್ಯ   

ನೋಡಿದಷ್ಟೂ ಭತ್ತದ ಪೈರು ಕಾಣುತ್ತಿದ್ದ ಮಂಡ್ಯ ಜಿಲ್ಲೆಯಲ್ಲೀಗ ಖಾಲಿ ಗದ್ದೆಗಳು ಕಳವಳ ಮೂಡಿಸುವಂತಿವೆ. ಬೇಸಿಗೆ ಒಂದೆಡೆ ಇರಲಿ; ಮಳೆಗಾಲದಲ್ಲೂ ನೀರಿಲ್ಲ. ಕಾವೇರಿಯನ್ನು ನಂಬಿದ ರೈತರ ಪಾಡು ಶೋಚನೀಯ. ‘ಏನ್ಮಾಡೋದು? ನೀರಿಲ್ಲ ಅಂದ ಮೇಲೆ ಮತ್ತೇನಿದೆ?’ ಎಂದು ತಲೆಮೇಲೆ ಕೈಹೊತ್ತು ರೈತರು ಕಾಲ ತಳ್ಳುತ್ತಿದ್ದಾರೆ.

ಈ ಅವಧಿಯಲ್ಲಿ ಶಿವಳ್ಳಿ ಗ್ರಾಮದ ರೈತ ಸೋಮಶೇಖರ ಸದ್ದಿಲ್ಲದೇ ಸಿರಿಧಾನ್ಯ ಬೆಳೆದು ಅಕ್ಕಪಕ್ಕದ ಗ್ರಾಮಗಳ ರೈತರ ಗಮನ ಸೆಳೆದಿದ್ದಾರೆ. ಭತ್ತಕ್ಕೆ ನೀರಿಲ್ಲ; ಆದರೆ ಅಲ್ಪ ನೀರಿನಲ್ಲೇ ಸಿರಿಧಾನ್ಯ ಬೆಳೆಯಬಹುದಲ್ಲ ಎಂಬ ಅವರ ಚಿಂತನೆಯು ಗದ್ದೆಯಲ್ಲಿ ಸಾಕಾರಗೊಂಡಿದೆ. ಸಕ್ಕರೆಯ ನಾಡಿನಲ್ಲಿ ಸಿರಿಧಾನ್ಯಗಳ ಅಧ್ಯಾಯಕ್ಕೆ ಮತ್ತೊಂದು ಪುಟ ಸೇರ್ಪಡೆಯಾದಂತಾಗಿದೆ. ಅಂದಹಾಗೆ, ಸೋಮಶೇಖರ ಬೆಳೆದಿರುವುದು ದೇಸಿ ತಳಿ ರಾಗಿ. ಅದೂ ಒಂದೆರಡಲ್ಲ; 17 ತಳಿ!

ದಕ್ಷಿಣ ಕರ್ನಾಟಕ ಭಾಗದ ಪ್ರಮುಖ ಬೆಳೆಯಾದ ರಾಗಿಯಲ್ಲಿ ಹಲವು ದೇಸಿ ತಳಿಗಳಿವೆ. ಮುದ್ದೆಗಷ್ಟೇ ಅದರ ಬಳಕೆ ಸೀಮಿತವಲ್ಲ. ಬೇರೆ ಬೇರೆ ಉದ್ದೇಶಗಳಿಗೆ ಬೇರೆ ಬೇರೆ ತಳಿಗಳು ಹೆಸರುವಾಸಿ. ಊಟಕ್ಕೊಂದು, ಮೇವಿಗೊಂದು, ಮುದ್ದೆಗೊಂದು, ರೊಟ್ಟಿಗೊಂದು, ಅಂಬಲಿಗೊಂದು, ಸಂಡಿಗೆಗೆ ಒಂದು... ಹೀಗೆ.

ADVERTISEMENT

ಅಧಿಕ ಇಳುವರಿಯ ನೆಪದಲ್ಲಿ ರೈತರ ಹೊಲಗಳಿಗೆ ಕಾಲಿಟ್ಟ ಹೈಬ್ರಿಡ್ ತಳಿಗಳು, ದೇಸಿ ತಳಿಯನ್ನು ಮೂಲೆಗೊತ್ತಿ ಹೆಚ್ಚೆಚ್ಚು ಪ್ರದೇಶದಲ್ಲಿ ಏಕಸ್ವಾಮ್ಯ ಸಾಧಿಸುವಲ್ಲಿ ಸಫಲವಾದವು. ಆದರೆ ಒಂದಷ್ಟು ರೈತರು ದೇಸಿ ತಳಿ ಮೇಲಿನ ಪ್ರೀತಿಯಿಂದಾಗಿ, ಸ್ವಲ್ಪವಾದರೂ ಜಾಗದಲ್ಲಿ ಬೆಳೆದುಕೊಂಡು ಸಿಕ್ಕಷ್ಟು ಇಳುವರಿ ಪಡೆಯುತ್ತಿದ್ದರು.

ದೇಸಿ ತಳಿಗಳ ಮಹತ್ವವನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು, ಅವುಗಳ ಸಂರಕ್ಷಣೆಗೆ ಪ್ರಯತ್ನಿಸುತ್ತಿರುವ ‘ಸಹಜ ಸಮೃದ್ಧ’ ಬಳಗವು ರಾಗಿ ಆಯ್ದುಕೊಂಡಾಗ ಆರಂಭದಲ್ಲಿ ಸಿಕ್ಕಿದ್ದು ಬೆರಳೆಣಿಕೆಯಷ್ಟು ಮಾತ್ರ ದೇಸಿ ತಳಿ. ಅವುಗಳನ್ನು ರೈತರಿಗೆ ಕೊಟ್ಟು, ಬೆಳೆಸಿದಾಗ ಮತ್ತಷ್ಟು ರೈತರು ಆ ಕಾರ್ಯದತ್ತ ಸ್ವಯಂಪ್ರೇರಿತರಾಗಿ ಬಂದರು. ಇಂಥವರ ಪೈಕಿ ಸೋಮಶೇಖರ ಕೂಡ ಒಬ್ಬರು.

ಸತತ ಹುಡುಕಾಟ, ಸಂರಕ್ಷಣೆ ಕ್ರಮಗಳಿಂದ ಲಭ್ಯವಾಗಿದ್ದ 40 ತಳಿಗಳ ಪೈಕಿ ಸೋಮಶೇಖರ ಅವರಿಗೆ 17 ತಳಿ ರಾಗಿಯ ಬಿತ್ತನೆ ಬೀಜ ಕೊಡಲಾಯಿತು. ನರ್ಸರಿ ಮಾಡಿ, ಕಪ್ಪುಮಣ್ಣಿನ ಜಮೀನಿನಲ್ಲಿ 25 ದಿನದ ಪೈರನ್ನು ನಾಟಿ ಮಾಡಿದರು. ಕೊಟ್ಟಿಗೆ ಗೊಬ್ಬರ ಹೊರತುಪಡಿಸಿದರೆ ಮತ್ತೇನೂ ಒಳಸುರಿ ಇಲ್ಲ.

ರಾಗಿ ಮಳೆಗಾಲದಲ್ಲಿ ಮಾತ್ರ ಬೆಳೆಯುತ್ತದೆ; ಬೇಸಿಗೆ ಕಾಲಕ್ಕೆ ಹೊಂದಿಕೊಳ್ಳುವುದಿಲ್ಲ ಎಂಬ ಮಾತು ರೂಢಿಯಲ್ಲಿದೆ. ಆದರೆ ಇಲ್ಲಿ ಅದು ಸಂಪೂರ್ಣ ಸುಳ್ಳಾಗಿದೆ.

ನಾಟಿ ಮಾಡಿದಾಗ, ಒಂದು ತಿಂಗಳ ಬಳಿಕ, ಗೊಬ್ಬರ ಹಾಕಿದಾಗ ಹಾಗೂ ಕಾಳು ಕಟ್ಟುವಾಗ- ಹೀಗೆ ನಾಲ್ಕು ಸಲ ನೀರು ಕೊಡಲಾಗಿದೆ. ಉಳಿದಂತೆ ಒಣಗಿದ ನೆಲದಲ್ಲೂ ಪೈರು ಸದೃಢವಾಗಿ ಬೆಳೆದುನಿಂತಿದೆ. ಹೈಬ್ರಿಡ್ ರಾಗಿಗೆ ಇಳುಕು ರೋಗ ಅಥವಾ ಬೆಂಕಿ ರೋಗ ಸಾಮಾನ್ಯ. ಆದರೆ ದೇಸಿ ರಾಗಿ ತಳಿ ಅವೆಲ್ಲವನ್ನೂ ಎದುರಿಸಿ ನಿಲ್ಲುವ ಸಾಮರ್ಥ್ಯ ಹೊಂದಿದೆ. ಸೋಮಶೇಖರ ಗದ್ದೆಯಲ್ಲಿ ಬೆಳೆದ ರಾಗಿಯ ಎಲ್ಲ ಪೈರುಗಳೂ ಇದನ್ನು ಸಾಬೀತುಪಡಿಸುತ್ತಿವೆ.



ವಿಶೇಷ ಗುಣಧರ್ಮ
ಸದೃಢ, ಬಲಿಷ್ಠ ಪೈರು, ಗಟ್ಟಿಯಾದ ತೆನೆ ಈ ದೇಸಿ ರಾಗಿ ತಳಿಗಳ ವೈಶಿಷ್ಟ್ಯ.ಇವುಗಳ ಗುಣಧರ್ಮಗಳೂ ವಿಶೇಷ. ಅತಿ ಹೆಚ್ಚು ಇಳುವರಿ ಕೊಡುವ ತಳಿ ಒಂದಾದರೆ, ಮೂರೇ ತಿಂಗಳಲ್ಲಿ ಕೊಯ್ಲಿಗೆ ಬರುವುದು ಇನ್ನೊಂದು ತಳಿ. ಹೆಚ್ಚು ಮೇವು ಕೊಡುವುದು ಮತ್ತೊಂದು ತಳಿ.

‘ದೇಸಿ ತಳಿಗಳ ಇಳುವರಿ ಎಕರೆಗೆ ಆರು ಅಥವಾ ಎಂಟು ಕ್ವಿಂಟಲ್ ಎಂದು ಹಲವರು ದೂರುತ್ತಾರೆ. ಆದರೆ ಸರಿಯಾದ ಬೇಸಾಯ ಪದ್ಧತಿಗಳನ್ನು ಅನುಸರಿಸಿದರೆ 20 ಕ್ವಿಂಟಲ್‌ವರೆಗೆ ಇಳುವರಿ ತೆಗೆಯಲು ಸಾಧ್ಯ. ಅದು ಇಲ್ಲಿ ಕಾಣುವಂತಿದೆ’ ಎಂದು ಸೋಮಶೇಖರ ಹೇಳುತ್ತಾರೆ.

ಮಂಡ್ಯ ಮೂಲದ ಅಯ್ಯನ ರಾಗಿ ಒಂದು ಕಾಲದಲ್ಲಿ ರೈತವಲಯದಲ್ಲಿ ಜನಪ್ರಿಯವಾಗಿತ್ತು. ಭತ್ತದ ಭರಾಟೆಯಲ್ಲಿ ಕಳೆದೇ ಹೋಗುವ ಹಂತ ತಲುಪಿತ್ತು. ಈಗ ಕೆಲ ರೈತರ ಆಸಕ್ತಿಯಿಂದಾಗಿ ಅದು ಮತ್ತೆ ಹೊಲಕ್ಕೆ ಬಂದಿದೆ. ‘ನಮ್ಮ ತಂದೆ ಅಯ್ಯನ ರಾಗಿ ಬಗ್ಗೆ ಹೇಳುತ್ತಿದ್ದರು. ಮಧ್ಯೆ ನಮಗೆ ಸಿಕ್ಕಿರಲೇ ಇಲ್ಲ. ಈಗ ಅದು ಮರಳಿ ನಮ್ಮ ಹೊಲಕ್ಕೆ ಬಂದಿದೆ’ ಎಂಬ ಖುಷಿ ಸೋಮಶೇಖರ ಪತ್ನಿ ಮಣಿ ಅವರದು.

ಎಲ್ಲ ರಾಗಿ ತೆನೆಗಳು ತೆನೆ ಹೊತ್ತು ತೊನೆದಾಡುತ್ತಿರುವ ದೃಶ್ಯ ಅಕ್ಕಪಕ್ಕದ ರೈತರನ್ನು ಸೆಳೆದಿದೆ. ಸುತ್ತಲ ಗ್ರಾಮದ ಜನರು ಕೂಡ ಸೋಮಶೇಖರ ಅವರ ರಾಗಿ ಹೊಲಕ್ಕೆ ಭೇಟಿ ನೀಡುತ್ತಿದ್ದಾರೆ. ಯಾವತ್ತೋ ಎಲ್ಲೋ ನೋಡಿದ ಜವಾರಿ ತಳಿಗಳನ್ನು ಕಂಡು, ತಮಗೂ ಒಂದಷ್ಟು ಬಿತ್ತನೆ ಬೀಜ ಕೊಡುವಂತೆ ಮನವಿ ಮಾಡುತ್ತಿದ್ದಾರೆ.

‘ತಳಿ ಶುದ್ಧಗೊಳಿಸಿ, ಗುಣಮಟ್ಟದ ಬೀಜವನ್ನು ಆಸಕ್ತ ರೈತರಿಗೆ ಕೊಡಲಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬೊಬ್ಬ ರೈತ ಒಂದೊಂದು ತಳಿಯನ್ನು ಸಂರಕ್ಷಿಸಿದರೆ ಅದೇ ಮಹತ್ವದ ಕೆಲಸ’ ಎಂದು ಸೋಮಶೇಖರ ಅವರಿಗೆ ಮಾರ್ಗದರ್ಶನ ನೀಡಿರುವ ತಳಿ ಸಂರಕ್ಷಕ ಬೋರೇಗೌಡ ವಿವರಿಸುತ್ತಾರೆ.

ಕಾವೇರಿ ನೀರನ್ನು ಅವಲಂಬಿಸಿರುವ ರೈತರು ಸಿರಿಧಾನ್ಯಗಳನ್ನು ಮರೆತೇ ಹೋಗಿದ್ದಾರೆ. ಅದರಲ್ಲೂ ನೀರಿದ್ದರೆ ಮಾತ್ರ ಎರಡು ಬೆಳೆ ಭತ್ತ ಬೆಳೆಯುತ್ತಿದ್ದರು. ಆದರೆ ಭೀಕರ ಬರದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಒಂದು ಬೆಳೆಗೇ ಸಾಹಸ ಮಾಡಬೇಕಾಗಿದೆ. ಹೀಗಾಗಿ ಬೇಸಿಗೆಯಲ್ಲಿ ಗದ್ದೆಯೆಲ್ಲ ಖಾಲಿ ಖಾಲಿ! ಅದರ ಬದಲಿಗೆ ಗದ್ದೆಯಲ್ಲಿನ ತೇವಾಂಶ ಬಳಸಿಕೊಂಡೇ ಸಿರಿಧಾನ್ಯ ಬೆಳೆದವರಿದ್ದಾರೆ. ಅಂಥ ಯಶಸ್ಸಿನ ಸಾಲಿಗೆ ಸೇರುವ ಶಿವಳ್ಳಿಯ ದೇಸಿ ರಾಗಿ ಪ್ರಯೋಗ ಮತ್ತಷ್ಟು ರೈತರಿಗೆ ಪ್ರೇರಣೆ ನೀಡಬಲ್ಲದು.

ಸೋಮಶೇಖರ ಬೆಳೆಸಿರುವ 17 ದೇಸಿ ರಾಗಿ ತಳಿಗಳು:ಎಡಗು ರಾಗಿ, ಶರಾವತಿ ರಾಗಿ, ರಾಗಳ್ಳಿ ಶಿವಳ್ಳಿ ರಾಗಿ, ಜಗಳೂರು ರಾಗಿ, ಬೆಣ್ಣೆಮುದ್ದೆ ರಾಗಿ, ಹಸಿರುಕಡ್ಡಿ ರಾಗಿ, ಬೋಂಡಾ ರಾಗಿ, ಉಂಡೆ ರಾಗಿ, ಗಿಡ್ಡ ರಾಗಿ, ಅಯ್ಯನ ರಾಗಿ, ಕೆಂಪು ರಾಗಿ, ಗೋಟಿಗಡ್ಡೆ ರಾಗಿ, ನಾಗಮಲೆ ರಾಗಿ, ಗುಟ್ಟೆ ರಾಗಿ, ಬಿಳಿಗಿಡ್ಡ ರಾಗಿ, ಕರಿಗಿಡ್ಡ ರಾಗಿ, ಕೋಣಕೊಂಬಿನ ರಾಗಿ

ಮಾಹಿತಿಗೆ: 9742195387

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.