ADVERTISEMENT

ಪನ್ನೇರಳೆ ಬೆಳೆದ ರೈತರ ಯಶೋಗಾಥೆ

ಜಿ.ಶಿವಣ್ಣ ಕೊತ್ತೀಪುರ
Published 2 ಫೆಬ್ರುವರಿ 2011, 18:30 IST
Last Updated 2 ಫೆಬ್ರುವರಿ 2011, 18:30 IST

ಮಾಗಡಿ ತಾಲ್ಲೂಕಿನ ಹೋಮಿಯೋಪತಿ ವೈದ್ಯರಾದ ಸೋಮಶೇಖರ್ ಪನ್ನೇರಳೆ ಹಣ್ಣು ಬೆಳೆದು ಲಾಭಗಳಿಸುತ್ತಿದ್ದಾರೆ. ಉಡುಕುಂಟೆ ಗ್ರಾಮದವರಾದ ಸೋಮಶೇಖರ್ 1987ರಲ್ಲಿ ಬೇಸಾಯ ಮಾಡಲು ಮುಂದಾದರು. 250 ಸೀಬೆ ಸಸಿಗಳ ಜತೆಗೆ ಎರಡು ಪನ್ನೇರಳೆ ಸಸಿಗಳನ್ನು ತಂದು ನೆಟ್ಟಿದ್ದರು. ಸೀಬೆಗಿಂತ ಪನ್ನೇರಳೆಯಲ್ಲಿ ಲಾಭವಿದೆ ಎನ್ನುವುದು ಗೊತ್ತಾದ ನಂತರ ಇನ್ನಷ್ಟು ಸಸಿಗಳನ್ನು ತಂದು ನೆಟ್ಟರು. ಅವರ  ಮೂರು ಎಕರೆ ಹಣ್ಣಿನ ತೋಟದಲ್ಲಿ 50 ಪನ್ನೇರಳೆ ಮರಗಳಿವೆ.

ಪನ್ನೇರಳೆ ಗಿಡಗಳನ್ನು ನಾಟಿ ಮಾಡಿದ ನಂತರ ಮೂರು ವರ್ಷ ನೀರು ಹಾಕಿ ಸಾಕಿದರೆ ಐದಾರು ದಶಕಗಳವರೆಗೆ ಫಲ ಕೊಡುತ್ತವೆ. ಕಸಿ ಕಟ್ಟಿದ ಗಿಡಗಳು ನೆಟ್ಟರೆ ಐದು ವರ್ಷಗಳಲ್ಲಿ ಹಣ್ಣು ಪಡೆಯಬಹುದು. ಸೋಮಶೇಖರ್ ಹತ್ತು ವರ್ಷಗಳಿಂದ ಪನ್ನೇರಳೆ ಹಣ್ಣು ಬೆಳೆಯುತ್ತಿದ್ದಾರೆ. ಪನ್ನೇರಳೆ ಮರಗಳು 30 ಅಡಿ ಎತ್ತರ ಬೆಳೆಯುತ್ತವೆ. ಮರಗಳ ತುದಿಯಲ್ಲಿರುವ ಕಾಯಿಗಳಿಗೆ ಪ್ಲಾಸ್ಟಿಕ್ ಕವರ್ ಕಟ್ಟುವುದು, ಹಣ್ಣು ಕೊಯ್ಲು ಮಾಡುವುದು ಕಷ್ಟ. ಮರ ಎತ್ತರಕ್ಕೆ ಬೆಳೆದಂತೆ ಕೊಂಬೆಗಳನ್ನು ಕತ್ತರಿಸಿ ಚಿಗುರಿದ ನಂತರ ಅವಕ್ಕೆ ಹಗ್ಗ ಕಟ್ಟಿ ನೆಲದ ಕಡೆಗೆ ಬಾಗಿಸುತ್ತಾರೆ.

ಪನ್ನೇರಳೆ ಮರಗಳು ವರ್ಷದಲ್ಲಿ ಎರಡು ಸಲ ಹಣ್ಣು ಬಿಡುತ್ತವೆ. ಹೂ ಬಿಟ್ಟ ಎರಡು ತಿಂಗಳಿಗೆ ಹಣ್ಣುಗಳು ಕೊಯ್ಲಿಗೆ  ಬರುತ್ತವೆ. ಮೂರು ತಿಂಗಳವರೆಗೆ  ಹಣ್ಣು ಸಿಗುತ್ತವೆ. ಸೋಮಶೇಖರ್ ಪ್ರತಿ ವರ್ಷ ಒಂದು ಮರಕ್ಕೆ 10 ಮಂಕರಿ ಕೊಟ್ಟಿಗೆ ಗೊಬ್ಬರ, 10 ಮಂಕರಿ ಕೋಳಿ ಗೊಬ್ಬರ, ಐದು ಕೆ.ಜಿ. ಬೇವಿನ ಹಿಂಡಿ ಹಾಕುತ್ತಾರೆ. ಪನ್ನೇರಳೆ ಮರಗಳಿಗೆ ಗೊಬ್ಬರ ಹಾಕಲು, ಕೀಟನಾಶಕ ಸಿಂಪಡಿಸಲು, ಕಾಯಿಗಳಿಗೆ ಪ್ಲಾಸ್ಟಿಕ್ ಕವರ್ ಕಟ್ಟಲು, ಹಣ್ಣು ಬಿಡಿಸಲು, ಮಾರುಕಟ್ಟೆ ಸಾಗಿಸಲು ಕೆಲಸಗಾರರು ಬೇಕು. ಈಗ ಕೆಲಸಗಾರರು ಸಿಗುವುದು ಕಷ್ಟ. ಮನೆಯವರೆಲ್ಲ ತೋಟದಲ್ಲಿ ದುಡಿದರೆ ಪನ್ನೇರಳೆ ಬೆಳೆಯುವುದು ಸುಲಭ ಎನ್ನುತ್ತಾರೆ ಸೋಮಶೇಖರ್.

ಉಷ್ಣಾಂಶದ ಸಮತೋಲನ ಕಾಪಾಡಿಕೊಳ್ಳಲು ಕಾಯಿಗಳು ಗೋಲಿ ಗಾತ್ರದಲ್ಲಿರುವಾಗಲೇ ಅವುಗಳಿಗೆ  ಪ್ಲಾಸ್ಟಿಕ್ ಕವರ್ ಹಾಕಿ ಕಟ್ಟುತ್ತಾರೆ. ಬಾಷ್ಪೀಕರಣದ ಕ್ರಿಯೆಯಿಂದ ಕವರ್ ಒಳಗೆ ಇಬ್ಬನಿ ಸಂಗ್ರಹವಾಗುತ್ತದೆ.  ಹೊರಗಿನ ಉಷ್ಣಾಂಶ ಹೆಚ್ಚಾದರೂ ಕವರ್ ಒಳಗೆ 20ರಿಂದ 25 ಡಿಗ್ರಿ ಉಷ್ಣಾಂಶ ಸ್ಥಿರವಾಗಿರುತ್ತದೆ.

ಕಾಯಿಗಳು ಹಳದಿ ಬಣ್ಣಕ್ಕೆ ತಿರುಗಿದರೆ ಹಣ್ಣಾದಂತೆ. ಸೋಮಶೇಖರ್ ಮೂರು ದಿನಗಳಿಗೊಮ್ಮೆ ಸಂಜೆ ವೇಳೆ ಹಣ್ಣು ಕೀಳುತ್ತಾರೆ. ಹಣ್ಣುಗಳ ಮೇಲ್ಪದರಕ್ಕೆ ಹಾನಿಯಾಗದಂತೆ ಕೀಳುವುದು ಮುಖ್ಯ. ಸಂಜೆ ಕಿತ್ತ ಹಣ್ಣುಗಳನ್ನು ಒದ್ದೆ ಬಟ್ಟೆಯಲ್ಲಿ ಮುಚ್ಚಿಡುತ್ತಾರೆ.

ಮರುದಿನ ಮುಂಜಾನೆಯೇ ಹಣ್ಣುಗಳನ್ನು ಗಾತ್ರಕ್ಕೆ ತಕ್ಕಂತೆ ವರ್ಗೀಕರಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಹಣ್ಣುಗಳು ತಾಜಾ ಆಗಿದ್ದರೆ ಮಾರುಕಟ್ಟೆಯಲ್ಲಿ  ಸೂಕ್ತ ಬೆಲೆ ಸಿಗುತ್ತದೆ.

50 ಮರಗಳಿಂದ ಮೂರು ದಿನಕ್ಕೊಮ್ಮೆ 10 ಮಂಕರಿ (ಸುಮಾರು 100 ಕೆ.ಜಿ.) ಹಣ್ಣು ಸಿಗುತ್ತವೆ. ಹಣ್ಣುಗಳನ್ನು ಬೆಂಗಳೂರಿನ ಕೆ.ಅರ್. ಮಾರುಕಟ್ಟೆಗೆ ಹಾಕುತ್ತಾರೆ. ದಲ್ಲಾಳಿಗಳು ಹರಾಜು ಮೂಲಕ ಬೆಲೆ ನಿರ್ಧರಿಸುತ್ತಾರೆ. ಕಳೆದ ವರ್ಷ ಸೋಮಶೇಖರ್ ಅವರಿಗೆ ಬೇಸಾಯದ ಖರ್ಚು (20ಸಾವಿರರೂ) ಕಳೆದು  ಒಂದೂವರೆ ಲಕ್ಷ ಆದಾಯ ಸಿಕ್ಕಿತ್ತು. ಈ ವರ್ಷ ಎರಡು ಲಕ್ಷ ರೂ ಅದಾಯ ನಿರೀಕ್ಷಿಸಿದ್ದಾರೆ. ಸೋಮಶೇಖರ ಅವರ ಮೊಬೈಲ್ ನಂಬರ್: 88925 74636. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.