ADVERTISEMENT

ಪಾಳು ಜಮೀನಲ್ಲಿ ಹಾಲಿನ ಧಾರೆ

ಮಂಜುನಾಥ ಎಸ್.ರಾಠೋಡ
Published 6 ಮೇ 2013, 19:59 IST
Last Updated 6 ಮೇ 2013, 19:59 IST

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡ ಸಮೀಪದ ಬಳಗೋಡದಲ್ಲಿ ಕೆಲ ವರ್ಷಗಳ ಹಿಂದೆ ಇದ್ದ 35 ಎಕರೆ ಪಾಳುಬಿದ್ದ ಜಮೀನು ಈಗ ಹಾಲಿನಿಂದ ತುಂಬಿ ನಳನಳಿಸುತ್ತಿದೆ. ಹೈನುಗಾರಿಕೆ ಉದ್ಯಮದಲ್ಲಿ ಹೊಸದೊಂದು ಯುಗ ಪ್ರಾರಂಭವಾಗಿದೆಯೇನೋ ಎನ್ನಿಸುತ್ತಿದೆ.

ಪಾಳು ಜಮೀನಿನಲ್ಲಿ `ಕ್ಷೀರಕ್ರಾಂತಿ' ಮಾಡಿದ ಹೆಗ್ಗಳಿಕೆ ಸಮಾಜ ಸೇವಕಿಯೂ ಆದ ಸಂಯುಕ್ತಾ ಬಂಡಿ ಅವರದ್ದು. ಅಪ್ಪನಿಂದ ಬಳುವಳಿವಳಿಯಾಗಿ ಬಂದಿದ್ದ ಪಾಳು ಜಮೀನಿನಲ್ಲಿ ಈಗ ಹಾಲಿನ ಡೇರಿ ಆರಂಭವಾಗಿದೆ. ಅದರ ಹೆಸರು `ವನಶ್ರೀ'. ಸುತ್ತಲಿನ ಜನರಿಗೆ ಶುದ್ಧ ಹಾಲನ್ನು ಉಣಬಡಿಸುತ್ತಿದೆ ಈ ವನಶ್ರೀ.

`ಹಸುಗಳನ್ನು ಮಗುವಿನಂತೆ ನೋಡಿಕೊಂಡಾಗ ಮಾತ್ರ ಖರ್ಚಿಗೂ ಮಿಗಿಲಾಗಿ ಪ್ರತಿಫಲ ನೀಡುತ್ತವೆ. ಇದೇ ನನ್ನ ಸಾಧನೆಯ ಗುಟ್ಟು' ಎನ್ನುತ್ತಾರೆ ಸಂಯುಕ್ತಾ. ಈ ಅಮ್ಮನ ಕಾಳಜಿಗೆ ಪ್ರತಿಫಲವಾಗಿ ಇವರು ಸಾಕುತ್ತಿರುವ ಎಮ್ಮೆಗಳು ಇವರಿಗೆ  ಪ್ರಶಸ್ತಿಗಳನ್ನೂ ತಂದುಕೊಟ್ಟಿವೆ!

ವಿಶೇಷ ತಳಿಗಳು
ವನಶ್ರಿ ಡೇರಿ ಸದ್ಯ 60 ಎಮ್ಮೆ , 20 ಆಕಳು 40 ಕರುಗಳಿಗೆ ಆಶ್ರಯದಾತ. ಇವುಗಳಲ್ಲಿ ಹರಿಯಾಣದಿಂದ ಜಿಂಡಾ, ಗುಜರಾತಿನ ಮಿಂಡಾ, ಸೂರತ್‌ನ ಜಾಪ್ರಾ, ಪಂಜಾಬಿನ ಬಡಾ ಮತ್ತು ಮೈಸಾಣ ತಳಿಗಳು ಇಲ್ಲಿಯ ವಿಶೇಷತೆ. ಒಂದೊಂದು ಎಮ್ಮೆಗಳು ಬೆಳಿಗ್ಗೆ ಮತ್ತು ಸಾಯಂಕಾಲ 8-10ಲೀಟರ್ ಹಾಲು ನೀಡಿದರೆ ಪ್ರತಿಯೊಂದು ಹಸು 12 ರಿಂದ 14 ಲೀಟರ್‌ವರೆಗೆ ಹಾಲು ನೀಡುತ್ತದೆ. ಇದರಿಂದ ದಿನಕ್ಕೆ ಒಟ್ಟು ಸುಮಾರು 650 ಲೀಟರ್ ಹಾಲು ಸಂಯುಕ್ತಾ ಅವರ ಪಾಲಿಗೆ.

ಯಶೋಗಾಥೆ ಹೀಗಿದೆ
`ಪಾಳು ಬಿದ್ದ ಜಮೀನಿನಲ್ಲಿ ಏನು ಮಾಡುವುದೆಂದು ತಿಳಿಯಲೇ ಇಲ್ಲ. ನಂತರ ಹೊಳೆದದ್ದು ಈ ಉದ್ಯಮ. ಇದರಿಂದ ತವರು ಮನೆಯಾದ ಶಾಂತಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಯೋಗ ಆಗಬಹುದು ಎನ್ನಿಸಿತು. 32 ಎಕರೆಯಲ್ಲಿ ಜಾನುವಾರುಗಳ ವಾಸ್ತವ್ಯಕ್ಕಾಗಿ 300 ಅಡಿ ಉದ್ದ 90 ಅಡಿ ಅಗಲದ ಸುಸಜ್ಜಿತ ಶೆಡ್ ನಿರ್ಮಿಸಿದೆ. ನೀರಿನ ಬವಣೆಯಾಗಬಾರದೆಂದು ಎರಡು ಕೊಳವೆ ಬಾವಿಯನ್ನು ಕೊರೆಯಿಸಿದೆ. ಆರು ಎಕರೆ ಭೂ ಪ್ರದೇಶದಲ್ಲಿ ಜಿ 39 ಮತ್ತು ಜಿ 48 ತಳಿಯ ಹುಲ್ಲನ್ನು ಬೆಳೆಸಿದೆ. ಇದರ ಪ್ರತಿಫಲವೇ ಇಂದು ಈ ಉದ್ಯಮ ಇಷ್ಟು ಎತ್ತರಕ್ಕೆ ಬೆಳೆದಿದೆ' ಎಂದು ತಮ್ಮ ಯಶೋಗಾಥೆ ಬಿಚ್ಚಿಡುತ್ತಾರೆ ಸಂಯುಕ್ತಾ.

ನಿತ್ಯ ಎರಡು ಬಾರಿ ಎಮ್ಮೆ ಮತ್ತು ಹಸುಗಳನ್ನು ಸ್ವಚ್ಛಗೊಳಿಸುತ್ತಾರೆ ಇವರು. ಹಸುಗಳಿಗೆ `ಹೈಟೆಕ್' ಸೌಕರ್ಯ ಒದಗಿಸಿದ್ದಾರೆ. ಸುಮಾರು ಎಂಟು ಗಂಟೆಗಳವರೆಗೆ ಇಲ್ಲಿಯೇ ಕಾಲ ಕಳೆಯುವ ಇವರು ಹಸುಗಳ ಯೋಗಕ್ಷೇಮವನ್ನು ಖುದ್ದಾಗಿ ನೋಡಿಕೊಳ್ಳುತ್ತಾರೆ. ವಾರದಲ್ಲಿ ಮೂರು ಬಾರಿ ಪಶುತಜ್ಞರಿಂದ ತಪಾಸಣೆಯೂ ಈ ಹಸುಗಳಿಗಿದೆ. ಹರಿಯಾಣದ ನುರಿತ ಸಿಬ್ಬಂದಿಯನ್ನು ಜಾನುವಾರುಗಳನ್ನು ನೋಡಿಕೊಳ್ಳಲೆಂದು ನೇಮಿಸಲಾಗಿದೆ.

ಕೈಗಳಿಂದ ಹಾಲು ಕರೆದರೆ ಹಸುಗಳಿಗೆ ಹೆಚ್ಚಿನ ಮಮತೆ ಉಂಟಾಗುತ್ತದೆ ಎನ್ನುವ ಇವರು ಹಾಲನ್ನು ತೆಗೆಯಲು ಯಂತ್ರ ಅಳವಡಿಸಿಯೇ ಇಲ್ಲ. ಬಿಡುವಿಲ್ಲದಷ್ಟು ಕಾರ್ಯಗಳಿದ್ದರೂ ಜಾನುವಾರಗಳ ಮೇಲೆ ಇರುವ ವಿಶೇಷ ಆಸಕ್ತಿಯಿಂದ ನಿತ್ಯ ಎರಡು ಬಾರಿ ಡೇರಿಗೆ ಹೋಗಿ ಬರುತ್ತಾರೆ. ಎಮ್ಮೆಗಳು ಮತ್ತು ಹಸುಗಳ ಯೋಗ ಕ್ಷೇಮದ ಬಗ್ಗೆ ನಿಗಾ ವಹಿಸುತ್ತಾರೆ. ಸಗಣಿ ಮತ್ತು ಮೂತ್ರವನ್ನು ಸಂಗ್ರಹಿಸಿ ತೋಟ ಮತ್ತು ಹೊಲಗಳಿಗೆ ಹಾಕಲಾಗುತ್ತಿದೆ.

ಇದರಿಂದ ಈ ಹಿಂದಿನ ವರ್ಷಗಳಲ್ಲಿ ಇಳುವರಿಯನ್ನು ಗಮನಿಸಿದಾಗ ಶೇ 65ರಷ್ಟು ಹೆಚ್ಚಿದೆ. ಡೇರಿಯಲ್ಲಿನ ಸಗಣಿ ಮತ್ತು ಮೂತ್ರವನ್ನು ವರ್ಷವಿಡೀ ಸಂಗ್ರಹಿಸಿ ಹೊಲಗಳಿಗೆ ಹಾಕಲಾಗುತ್ತಿದೆ. ಗೊಬ್ಬರಗಳ ಸಹಾಯದಿಂದ ಎರೆಹುಳಗಳ ಸಾಕಣಿಯನ್ನೂ ಮಾಡಲಾಗುತ್ತಿದೆ.

ಸದ್ಯ ಗಜೇಂದ್ರಗಡ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಮಾರುಕಟ್ಟೆ ಮತ್ತು ಮನೆಗಳಲ್ಲಿ ಇವರ ಡೇರಿಯ ಹಾಲಿನದ್ದೇ ಸಿಂಹಪಾಲು. ಪರಿಶುದ್ಧ ಹಾಲು ಎಂಬ ಹೆಗ್ಗಳಿಕೆ ಒಂದೆಡೆಯಾದರೆ ಅಂದಿನ ದಿನವೇ ಮಾರುಕಟ್ಟೆಗೆ ಹಾಲು ಬಿಡುಗಡೆಗೊಳ್ಳುವುದು ಇನ್ನೊಂದೆಡೆ.

ಸಾಧನೆಗೆ ಸಂದ ಪ್ರಶಸ್ತಿ
ಸಂಯುಕ್ತಾ ಸಮಾಜ ಸೇವಕಿಯೂ ಹೌದು. ಸಮಾಜ ಸೇವೆ ಹಾಗೂ ಉತ್ತಮ ಹೈನುಗಾರಿಕೆಗಾಗಿ ಹಲವಾರು ಪ್ರಶಸ್ತಿ ಇವರನ್ನು ಹುಡುಕಿ ಬಂದಿವೆ. ಕರುನಾಡು ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯಿಂದ ರಾಜ್ಯ ಪ್ರಶಸ್ತಿ, ಮುಕ್ತಿ ವಾಹಿನಿ ಆತ್ಮ ಕಲ್ಯಾಣ ವತಿಯಿಂದ ರಾಜ್ಯ ಪ್ರಶಸ್ತಿ ದೊರಕಿವೆ. ಗಜೇಂದ್ರಗಡದಲ್ಲಿ ಜರುಗಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೃಷಿ ಮೇಳದಲ್ಲಿ ಉತ್ತಮ ತಳಿ ಮತ್ತು ಪಾಲನೆ ಪೋಷಣೆಗೆ 6 ಎಮ್ಮೆಗಳ ಆಯ್ಕೆಯಾಗಿ ಪ್ರಶಸ್ತಿ ಪಡೆದುಕೊಂಡಿವೆ. ಧಾರವಾಡ ಹಾಲು ಒಕ್ಕೂಟದ ವತಿಯಿಂದ ಉತ್ತಮ ಮಿಶ್ರತಳಿ ಸುಧಾರಿತ ಎಮ್ಮೆಗಳು ಪ್ರಶಸ್ತಿಗೆ ಭಾಜನವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.