ADVERTISEMENT

ಪುಷ್ಪ ಕೃಷಿಯಲ್ಲಿ ಪಾಸಾದ ರೈತ

ಗಣಂಗೂರು ನಂಜೇಗೌಡ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಪುಷ್ಪ ಕೃಷಿಯಲ್ಲಿ ಪಾಸಾದ ರೈತ
ಪುಷ್ಪ ಕೃಷಿಯಲ್ಲಿ ಪಾಸಾದ ರೈತ   

ಸ್ವಂತ ಜಮೀನು ಇದ್ದರೂ ನಷ್ಟದ ಕಾರಣವೊಡ್ಡಿ ಕೃಷಿ ಮಾಡಲು ಹಿಂದೇಟು ಹಾಕುವವರೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬ ರೈತ ಜಮೀನು ಗುತ್ತಿಗೆ ಪಡೆದು ಪುಷ್ಪ ಕೃಷಿ ಕೈಗೊಳ್ಳುವ ಮೂಲಕ ಪ್ರತಿದಿನವೂ ಹಣ ಎಣಿಸಿಕೊಳ್ಳುತ್ತಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕು ಬಾಬುರಾಯನ ಕೊಪ್ಪಲು ಗ್ರಾಮದ ರೈತ ಕುಮಾರ್‌ ಎಂಬುವರು ಕಳೆದ ಮೂರು ವರ್ಷಗಳಿಂದ ಪುಷ್ಪ ಕೃಷಿ ಮಾಡುತ್ತಿದ್ದು ಲಾಭದ ಹಾದಿ ಕಂಡುಕೊಂಡಿದ್ದಾರೆ. ಕುಮಾರ್‌ 6,500 ಮಿರಾಬಲ್‌ (ಬಟನ್ಸ್) ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ‘ರೆಡ್‌ ಆಪಲ್‌’ ಮತ್ತು ‘ವಾನಿಶ್‌ ಪಿಂಕ್‌’ ತಳಿಯ ಮಿರಾಬಲ್‌ ಗಿಡಗಳು ಹೂವು ಕೊಡುತ್ತಿದ್ದು ದಿನ ಬಿಟ್ಟು ದಿನ ಹೂವಿನ ಕೊಯ್ಲು ಮಾಡಲಾಗುತ್ತಿದೆ. ಪ್ರತಿ ಕೊಯ್ಲಿಗೆ 600ರಿಂದ 700 ಕೆ.ಜಿ.ಯಷ್ಟು ಹೂವು ಸಿಗುತ್ತಿದ್ದು, ಪ್ರತಿ ಕೆ.ಜಿ ಹೂವಿಗೆ ₹ 60ರಿಂದ ₹ 70 ಮಾರುಕಟ್ಟೆ ದರ ಸಿಗುತ್ತಿದೆ. ಹಾಗಾಗಿ ಈ ಹೂವಿನಿಂದ ತಿಂಗಳಿಗೆ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಅರ್ಧ ಎಕರೆಯಲ್ಲಿ ಕುಮಾರ್‌ ‘ರಬ್ಬರ್‌ ಸೇವಂತಿಗೆ’ ಹೂವಿನ ಗಿಡಗಳನ್ನು ಬೆಳೆದಿದ್ದು ಅವುಗಳೂ ಹೂವು ಬಿಡುತ್ತಿವೆ. ಪ್ರತಿ ಕೊಯ್ಲಿಗೆ 20 ಕೆ.ಜಿ.ಯಷ್ಟು ಹೂವು ಸಿಗುತ್ತಿದೆ. ರಬ್ಬರ್‌ ಸೇವಂತಿಗೆ ಹೂವು ಕೊಯ್ದಿಟ್ಟ ನಂತರ 5ರಿಂದ 6 ದಿನಗಳ ದಿನಗಳವರೆಗೆ ತಾಜಾ ಆಗಿಯೇ ಇರುತ್ತದೆ. ಹಾಗಾಗಿ ಈ ಹೂವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚು. ಪ್ರತಿ ಕೆ.ಜಿ. ರಬ್ಬರ್‌ ಸೇವಂತಿಗೆ ಹೂವು ₹100ರಿಂದ ₹150ರವರೆಗೂ ಮಾರಾಟವಾಗುತ್ತಿದೆ. ಸೀಸನ್‌ನಲ್ಲಿ ಇದರ ಬೆಲೆ ₹300ರ ಗಡಿ ದಾಟುತ್ತದೆ. ಹತ್ತು ಗುಂಟೆ ವಿಸ್ತೀರ್ಣದಲ್ಲಿ ಡೇರೆ ಹೂವು ಬೆಳೆದಿದ್ದು, ಅದೂ ಈಗ ಹೂವು ಕೊಡುತ್ತಿದೆ.

ADVERTISEMENT

ಮಿರಾಬಲ್‌ ತಳಿ, ರಬ್ಬರ್‌ ಸೇವಂತಿಗೆ ಹಾಗೂ ಡೇರೆ ತಳಿ ಹೂವಿನ ಸಸಿಗಳನ್ನು ಇವರು ತಮಿಳುನಾಡಿನಿಂದ ತರಿಸಿದ್ದಾರೆ. ಮೊದಲು ಮಿರಾಬಲ್‌ ಹೂವು ಬೆಳೆದ ಕುಮಾರ್‌, ಅದರಲ್ಲಿ ಆದಾಯ ಬರುವುದು ಆರಂಭವಾದ ಬಳಿಕ ಇತರ ಹೂವು ಬೆಳೆಯಲು ಶುರು ಮಾಡಿದ್ದಾರೆ. ಕನಕಾಂಬರ, ಕಾಕಡ ಹೂವು ಬೆಳೆಯುವ ಉದ್ದೇಶವನ್ನೂ ಇವರು ಹೊಂದಿದ್ದಾರೆ. ಪುಷ್ಪ ಕೃಷಿಯನ್ನು ಪ್ರಧಾನ ಕಸುಬು ಮಾಡಿಕೊಂಡಿರುವ ಕುಮಾರ್‌ ಬೀನ್ಸ್, ಬದನೆ, ಟೊಮೆಟೊ ಇತರ ತರಕಾರಿ ಬೆಳೆಗಳನ್ನು ಸಹ ಬೆಳೆಯುತ್ತಿದ್ದು ಅದರಿಂದಲೂ ಆದಾಯ ಪಡೆಯುತ್ತಿದ್ದಾರೆ.

ಹೆಬ್ಬೇವಿನಲ್ಲಿ ಠೇವಣಿ: ಕುಮಾರ್‌ ಒಂದೂವರೆ ವರ್ಷದ ಹಿಂದೆ ಹೆಬ್ಬೇವು ನೆಟ್ಟಿದ್ದು, ಏಳೆಂಟು ವರ್ಷ ಕಳೆದರೆ ಈ ಮರಗಳು ಲಕ್ಷ ಲಕ್ಷ ಆದಾಯ ತಂದುಕೊಡಲಿವೆ ಎಂಬ ನಂಬಿಕೆಯಲ್ಲಿದ್ದಾರೆ. ಹೂವು ಮತ್ತು ತರಕಾರಿ ತೋಟದ ಬದುಗಳ ಮೇಲೆ 450 ಹೆಬ್ಬೇವು ಸಸಿಗಳನ್ನು ಅವರು ನೆಟ್ಟು ಬೆಳೆಸುತ್ತಿದ್ದಾರೆ. ‘ಹೆಬ್ಬೇವು ಬೆಳೆಸುವುದು ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣೆ ಇಟ್ಟಂತೆ. ಈ ಗಿಡವನ್ನು ನೆಟ್ಟ ನಂತರ ಹತ್ತು ವರ್ಷಕ್ಕೆ ಕಟಾವಿಗೆ ಬರುತ್ತದೆ. ಪ್ರತಿ ಹೆಬ್ಬೇವು ಮರ ಕನಿಷ್ಠ ₹30ರಿಂದ 35 ಸಾವಿರ ಬೆಲೆ ಬಾಳಲಿದೆ’ ಎಂಬ ವಿಶ್ವಾಸ ಈ ರೈತನದ್ದು.

ಕರಿಬೇವು: ಕುಮಾರ್‌ ಅವರ ತೋಟದಲ್ಲಿ 300 ಕರಿಬೇವು ಗಿಡಗಳಿವೆ. ವರ್ಷದ ಹಿಂದಷ್ಟೇ ಈ ಸಸಿಗಳನ್ನು ನೆಟ್ಟಿದ್ದು, ಮುಂದಿನ ವರ್ಷದಿಂದ ಇವು ಆದಾಯದ ಮೂಲವಾಗಲಿವೆ. ‘ವರ್ಷದಲ್ಲಿ ನಾಲ್ಕು ಬಾರಿ ಕರಿಬೇವು ಸೊಪ್ಪು ಮಾರಾಟ ಮಾಡಬಹುದು. ವಾರ್ಷಿಕ ₹ 2 ಲಕ್ಷಕ್ಕೆ ಕಡಿಮೆ ಇಲ್ಲದಂತೆ ಆದಾಯ ಪಡೆಯಬಹುದು’ ಎನ್ನುತ್ತಾರೆ ಕುಮಾರ್‌. ಇವರ ತೋಟದಲ್ಲಿ ನೂರಕ್ಕೂ ಹೆಚ್ಚು ತೆಂಗಿನ ಮರಗಳಿದ್ದು, ಮೂರು ತಿಂಗಳಿಗೊಮ್ಮೆ ತೆಂಗಿನಕಾಯಿ ಕಿತ್ತು ಮಾರಾಟ ಮಾಡುತ್ತಿದ್ದಾರೆ. ತುರ್ತಾಗಿ ಹಣ ಬೇಕೆನಿಸಿದರೆ ಎಳನೀರು ಮಾರುತ್ತಾರೆ.

ಕುಮಾರ್‌, ಕೃಷಿ ಉದ್ದೇಶಕ್ಕಾಗಿ ತಮ್ಮೂರಿಗೆ ಸಮೀಪದ ಚಿನ್ನೇನಹಳ್ಳಿ ಗ್ರಾಮದ ಬಳಿ ಮೂರೂವರೆ ಎಕರೆ ಜಮೀನನ್ನು ಗುತ್ತಿಗೆ ಪಡೆದಿದ್ದಾರೆ. ಕಗ್ಗಾಡಿನಂತಿದ್ದ ಭೂಮಿಯನ್ನು ಮಟ್ಟಸ ಮಾಡಿ ಕೊಳವೆ ಬಾವಿ ಕೊರೆಸಿ ಹನಿ ನೀರಾವರಿ ಮೂಲಕ ಹೂವು ಮತ್ತು ತರಕಾರಿ ಬೆಳೆಯುತ್ತಿದ್ದಾರೆ. ಕ್ಯಾಸೆಟ್‌ ವ್ಯಾಪಾರ ಮಾಡಿಕೊಂಡಿದ್ದ ಕುಮಾರ್‌ ಅವರಿಗೆ ಈಗ ಕೃಷಿಯೇ ಜೀವನ.

‘ಆಸಕ್ತಿಯಿಂದ ಕೃಷಿ ಮಾಡಿದರೆ ಖಂಡಿತವಾಗಿ ಲಾಭ ಸಿಗುತ್ತದೆ. ಆದರೆ ಮಾರುಕಟ್ಟೆಯ ಜ್ಞಾನ ಇಟ್ಟುಕೊಂಡು ಬೆಳೆ ಬೆಳೆಯಬೇಕು. ಯಾವ ಸೀಸನ್‌ನಲ್ಲಿ ಯಾವ ಹೂವಿಗೆ ಮತ್ತು ಯಾವ ತರಕಾರಿಗೆ ಬೇಡಿಕೆ ಕುದುರುತ್ತದೆ ಎಂಬುದನ್ನು ಮುಂಗಾಣಬೇಕು. ಮುತುವರ್ಜಿಯಿಂದ ಮಾಡಿದರೆ ಕೃಷಿಯಲ್ಲಿ ನಷ್ಟ ಎಂಬುದೇ ಇಲ್ಲ. ‘ಮಣ್ಣು ನಂಬಿದವನೇ ಮಹಾರಾಜ’ ಎಂಬ ಹಿರಿಯರ ಮಾತು ಸುಳ್ಳಲ್ಲ’ ಎಂಬುದು ಕುಮಾರ್‌ ಅವರ ದೃಢವಾದ ಮಾತು. ಸಂಪರ್ಕಕ್ಕೆ ಮೊ:9742558739.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.