ADVERTISEMENT

ಬರಕ್ಕೆ ಬೆದರದ ಹಸಿರ ಹಾದಿ

ಮಾಲತಿ ಹೆಗಡೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST
ಬಸವಣ್ಣಪ್ಪ ಅಂಗಡಿ
ಬಸವಣ್ಣಪ್ಪ ಅಂಗಡಿ   

ಆ ಊರುಗಳಲ್ಲಿ 720 ಕೃಷಿ ಹೊಂಡಗಳನ್ನು ನಿರ್ಮಿಸಿ ಹತ್ತು ಕೋಟಿ ಲೀಟರ್ ಮಳೆ ನೀರನ್ನು ಹಿಡಿಯುವ ವ್ಯವಸ್ಥೆ ಮಾಡಿದ್ದಾರೆ. ಬೋಳು ಗುಡ್ಡಗಳಲ್ಲಿ, ಹೊಲಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಗಿಡ ಮರಗಳನ್ನು ಬೆಳೆಸಿದ್ದಾರೆ. ಆರು ತಿಂಗಳು ಕೂಲಿ, ಆರು ತಿಂಗಳು ಹೊಲದಲ್ಲಿ ದುಡಿಮೆ ಮಾಡುತ್ತಿದ್ದ ಜನರು ಸಮಗ್ರ ಕೃಷಿಯಲ್ಲಿ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಈ ವರ್ಷ ಬಂದ ಬರಕ್ಕೂ ಸೆಡ್ಡು ಹೊಡೆದು ನಿಂತಿದ್ದಾರೆ.

ಬಯಲುಸೀಮೆ ನೆಲದ ಆ ಹಳ್ಳಿಗಳ ಗುಡ್ಡಗಳು, ಹಸಿರು ಹೊದ್ದು ನಿಂತು ಮಹತ್ವವಾದ ಮಾತು ಹೇಳುತ್ತವೆ. ಬದುವಿನ ಮೇಲೆ ಬೆಳೆದ ಮರಗಳು ತೋಟಗಳನ್ನೇ ಮುಚ್ಚಿಡುತ್ತವೆ. ಧಾರವಾಡ ಜಿಲ್ಲೆ ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳಲ್ಲಿರುವ ಇಪ್ಪತ್ತೆರಡು ಹಳ್ಳಿಗಳ ಚಿತ್ರಣ ಇದು.

ಅದರಲ್ಲೊಂದು ಸೂರಶಟ್ಟಿಕೊಪ್ಪ ಗ್ರಾಮ. ಹುಬ್ಬಳ್ಳಿಯಿಂದ ಹಾವೇರಿಗೆ ಹೋಗುವ ರಾಷ್ಟೀಯ ಹೆದ್ದಾರಿಯ ವರೂರಿನ ಬಳಿ ತಿರುಗಿ ಐದು ಕಿಲೋಮೀಟರ್ ದೂರಕ್ಕೆ ಹೋದರೆ ಸಿಗುತ್ತದೆ ಈ ಗ್ರಾಮ. `ಬೈಫ್' ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಇಲ್ಲಿಯ ಜನರಿಗೆ ಎರೆ ಗೊಬ್ಬರ ತಯಾರಿಕೆ, ಹೈನುಗಾರಿಕೆ ತರಬೇತಿ, ನರ್ಸರಿ ಗಿಡ ಬೆಳೆಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತಾಗಿ ತಿಳಿವಳಿಕೆ ನೀಡಲಾಗಿದೆ. ಇದರಿಂದ ಇಲ್ಲಿಯ ಜನರ ಚಿತ್ರಣವೇ ಬದಲಾಗಿದೆ.

`ನಾವು ಇಲ್ಲಿಯ ಇಪ್ಪತ್ತೆರಡು ಹಳ್ಳಿಗಳಲ್ಲಿ ಸುವರ್ಣ ಗ್ರಾಮೀಣಾಭಿವೃದ್ಧಿ ಯೋಜನೆ' ಅಡಿ ವಾಡಿಯ (ತೋಟ) ಕಲ್ಪನೆ ಬಿತ್ತಿ ಒಂದು ಕುಟುಂಬಕ್ಕೆ ಸುಮಾರು ಹತ್ತು ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದೇವೆ. 1,200 ಕುಟುಂಬಗಳು ಮೊದಲಿಗಿಂತ ಆರೇಳು ಪಟ್ಟು ಆದಾಯ ಹೆಚ್ಚಿಸಿಕೊಂಡಿವೆ.

ಮಳೆ ಆಶ್ರಿತ ಬೆಳೆ ತೆಗೆಯುವ ಹೊಲದಲ್ಲಿ ತೋಟ ಮಾಡಲು ಜನ ಮೊದಲು ಹಿಂಜರಿದರು. ನಂತರ ನಾವು ನೀಡಿರುವ ತಿಳಿವಳಿಕೆಯಿಂದ ಇಂದು ಇಲ್ಲಿ ಗಮನಾರ್ಹ ಬದಲಾವಣೆ ಆಗಿದೆ' ಎನ್ನುತ್ತಾರೆ ಸಂಸ್ಥೆಯ ರಾಜ್ಯ ಸಂಯೋಜನಾಧಿಕಾರಿ ಡಾ. ಪ್ರಕಾಶ ಭಟ್ಟ.

ನೆಮ್ಮದಿಯ ಆದಾಯ
ಯೋಜನೆಯ ಫಲಾನುಭವಿ ಸೂರಶೆಟ್ಟಿಕೊಪ್ಪದ ರೈತ ಬಸವಣ್ಣಪ್ಪ ಅಂಗಡಿ, `ಮೊದ್ಲಿಗೆ ಎಲ್ಲಾರ ಹಂಗ ನಾವು ರಾಸಾಯನಿಕ ಗೊಬ್ಬರ ಬಳಸಿ ಹೊಲದಾಗ ಜೊಳ ಹತ್ತಿ ಮೆಣಸಿನಕಾಯಿ ಬೆಳಿತಿದ್ವಿ. 1988ರಾಗ `ಬೈಫ್' ಸಂಸ್ಥೆಯವರು ಬಂದ್ರು. ಒಂದೆಕರೆ ಜಮೀನಿನಲ್ಲಿ ನಾವು ಹೇಳಿದಂಗ ಅಭಿವೃದ್ಧಿಪಡಿಸಿ ಆದಾಯ ಹೆಚ್ಚಿಸಿಕೊಳ್ಳಿ ಅಂದ್ರು. ಅವ್ರ ಇಲ್ಲಿಯ ಮೂರು ಎಕರೆ ಹೊಲದ ಸುತ್ತಲೂ ಬದು ಹಾಕಿ ನೀಲಗಿರಿ, ಸಾಗವಾನಿ, ಸುಬಾಬುಲ್, ಸೀಮೆತಂಗಡಿ. ಗ್ಲಿರಿಸಿಡಿಯಾಗಳನ್ನು ಬೆಳೆಸಿದ್ದಾರೆ.

ಮೂವತ್ತು ಅಡಿ ಅಂತರದಲ್ಲಿ ಮಾವಿನಮರ, ಚಿಕ್ಕುಗಿಡ, ಹುಣಿಸೇ ಮರಗಳನ್ನು ಬೆಳೆಸಿದ್ದಾರೆ. ಮರಗಳ ಪಕ್ಕದಲ್ಲಿ ಉದಿ ಅಥವಾ ಟ್ರೆಂಚ್ ಹೊಡೆಸಿದ್ದಾರೆ. ಗಿಡಗಳ ಮಧ್ಯೆ ಜೋಳ ಬೆಳೆಯುತ್ತಾರೆ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಹೊಲದ ಮೂಲೆಯಲ್ಲಿ ಮಳೆನೀರಿಗೆ ಇಂಗುಗುಂಡಿ ತೆಗೆಸಿದ್ದಾರೆ.

ಆರಂಭದ ಮೂರು ವರ್ಷ ಬೇಸಿಗೆಯಲ್ಲಿ ಗಿಡಗಳನ್ನು ಉಳಿಸಲು ಹೊಲದಿಂದ ಒಂದು ಕಿಲೋಮೀಟರ್ ದೂರದ ಕೈ ಬೋರ್‌ವೆಲ್‌ನಿಂದ ದಿನಕ್ಕೆ ಹದಿನೆಂಟು ಬಾರಿ ಎರಡು ಕೊಡದಂತೆ ನೀರು ಹೊತ್ತು ಹಾಕಿದ್ದಾರೆ! ಈಗ ತೋಟದಿಂದ ಬರುವ ಆದಾಯದಲ್ಲಿ ನೆಮ್ಮದಿಯಿಂದ ಬದುಕಬಹುದು' ಎನ್ನುತ್ತಾರೆ.

ಕಂಪ್ಲಿಕೊಪ್ಪದ ಮಲ್ಲೇಶಪ್ಪ ಹಕಲದರ ಮೂರು ಎಕರೆ ಹೊಲ ಬಿರು ಬೇಸಿಗೆಯಲ್ಲೂ ಹಸಿರಿನಿಂದ ಕಂಗೊಳಿಸುತ್ತದೆ. ಇಡೀ ಹೊಲದಲ್ಲಿ ಸಿಗ್ನಲ್ ಹುಲ್ಲು, ಸ್ಟೈಲೊ ಹೆಮೆಟಾ ಜಾತಿಯ ಹುಲ್ಲು ಬೆಳೆಸಿದ್ದಾರೆ, ಹೈನುಗಾರಿಕೆಯಿಂದಲೂ ಆದಾಯ ಗಳಿಸುತ್ತಾರೆ. ಎರೆಹುಳ ಗೊಬ್ಬರ ತಯಾರಿಸಿ ಮಾರುತ್ತಾರೆ. ನರ್ಸರಿ ಗಿಡಗಳನ್ನು ಬೆಳೆಸಿ ಮಾರುತ್ತಾರೆ.

ಐದು ರೂಪಾಯಿ ಕೊಟ್ಟು ತಂದ ತೊಂಡೆ ಬಳ್ಳಿಯಿಂದ ಎರಡು ವರ್ಷಕ್ಕೆ ಮೂವತ್ತು ಸಾವಿರ ಗಳಿಸಿದ್ದಾರೆ. `ಈ ವರ್ಷ ಲಕ್ಷ ರೂಪಾಯಿ ತೊಂಡೆ ಬೆಳೆ ತೆಗೆಯುವ ವಿಚಾರ ಮಾಡಿದ್ದೇನೆ' ಎಂದು ಬೆರಗು ಮೂಡಿಸುತ್ತಾರೆ. ಇವರು ಬೆಳೆದ ಸಪೋಟಾ, ಮಾವು, ಲಿಂಬು, ಸೀತಾಫಲ ಗಿಡಗಳು ಫಲ ನೀಡುತ್ತಿವೆ.

ಟೊಮೆಟೊ, ಮೆಣಸು, ಬದನೆಕಾಯಿ ಮಾರಾಟಕ್ಕೆ ನೇರಮಾರುಕಟ್ಟೆ ಕಂಡುಕೊಂಡಿದ್ದಾರೆ. ಪತ್ನಿ ಕಲ್ಲವ್ವ ಪತಿಯೊಟ್ಟಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕಲ್ಲವ್ವನನ್ನು ಶ್ರೇಷ್ಠ ಕೃಷಿ ಮಹಿಳೆ ಎಂದು ಗೌರವಿಸಿದೆ.

ಸುರಶೆಟ್ಟೆಕೊಪ್ಪದ ಬಸನಗೌಡ ಪಾಟೀಲರು ತಮ್ಮ ಒಂದೆಕರೆ ಹೊಲವನ್ನು ತೋಟವಾಗಿ ಪರಿವರ್ತಿಸಿದ್ದಾರೆ. ಬೋರ್‌ವೆಲ್ ನೀರಿನ ಅನುಕೂಲವಿದ್ದರೂ ಮಿತವಾದ ನೀರಿನ ಬಳಕೆಗೆ ಆದ್ಯತೆ ನೀಡುತ್ತಾರೆ. ಎರೆಹುಳಗೊಬ್ಬರ ತಯಾರಿಸಿ ಮಾರುವುದು, ಹಸುಗಳನ್ನು ಸಾಕಿ ಹಾಲು ಮಾರುವುದು, ತರಬೇತಿ ಕೇಂದ್ರದಲ್ಲಿ ರಸಗವಳ ತಯಾರಿಸುವುದು ಹೀಗೆ ಕೃಷಿಯೊಂದಿಗೆ ಉಪಕಸುಬಿನಲ್ಲಿಯೂ ಉತ್ತಮ ಆದಾಯ ಗಳಿಸುತ್ತಾರೆ. `ಒಂದೆಕರೆ ಹೊಲದ ಆದಾಯದಿಂದ ಬಂದ ದುಡ್ಡಿನಲ್ಲಿ ಹನ್ನೆರಡು ಎಕರೆ ಹೊಲ ಲಾವಣಿ ಹಿಡಿದು ಇಬ್ಬರು ತಮ್ಮಂದಿರೊಟ್ಟಿಗೆ ದುಡಿಯುತ್ತೇನೆ. ನಮ್ಮ ಕುಟುಂಬ ಅನ್ನದ ವಿಷಯದಲ್ಲಿ ಸ್ವತಂತ್ರವಾಗಿದೆ' ಎನ್ನುತ್ತಾರೆ.

ಸುಸ್ಥಿರ ಅಭಿವೃದ್ಧಿ
ಇಂತಹ ನೂರಾರು ಚಿಕ್ಕ ಹಿಡುವಳಿದಾರ ರೈತರು ಕಂಪ್ಲಿಕೊಪ್ಪ, ಬೋಗಿನಾಗರಕೊಪ್ಪ, ಕಾಮಧೇನು, ಸೋಲಾರಕೊಪ್ಪ, ಗಂಜಿಗಟ್ಟಿ, ಸೂರಶೆಟ್ಟಿಕೊಪ್ಪದ ಸುತ್ತಮುತ್ತಲಿನ ಊರುಗಳಲ್ಲಿದ್ದಾರೆ.  ಬೈಫ್ ಸಂಸ್ಥೆಯ ಯೋಜನೆ ಇವರ ಪಾಲಿಗೆ ಸಂಜೀವಿನಿಯಾಗಿದೆ. ವರ್ಷಕ್ಕೊಮ್ಮೆ ನಡೆಯುವ ಹಸಿರು ಹಬ್ಬ, ಎರಡು ವರ್ಷಕ್ಕೊಮ್ಮೆ ನಡೆಯುವ ಸ್ನೇಹ ಜಾತ್ರೆಗಳು ಜನರ ಪ್ರೀತಿ ವಿಶ್ವಾಸಗಳ ಸಂಕೇತಗಳಾಗಿವೆ.

ಈ ಹಳ್ಳಿಗಳ ಜನರು ಬರಕ್ಕೆ ಅಂಜುವುದಿಲ್ಲ. ಕೂಲಿ ಕೆಲಸಕ್ಕೆ ಹೋಗುತ್ತಿದ್ದವರು ಸ್ವತಂತ್ರವಾಗಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಸಶಕ್ತೀಕರಣಕ್ಕೆ ಹಲವು ಮಾದರಿಗಳು ದೊರೆಯುತ್ತವೆ. ಸ್ವಸಹಾಯ ಸಂಘಗಳಿಂದ ಆರ್ಥಿಕ ಅನುಕೂಲಗಳನ್ನು ಕಲ್ಪಿಸಿಕೊಂಡಿದ್ದಾರೆ. ಶ್ರಮದಾನದ ಮೂಲಕ ಕಾಮಧೇನು ಎಂಬ ಊರಿನಲ್ಲಿ ಬಾಂದಾರ ಕಟ್ಟಿದ್ದಾರೆ. ಸಂಪರ್ಕಕ್ಕೆ ಪ್ರಕಾಶಭಟ್ಟ- 9008452447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.