ADVERTISEMENT

ಬಾಳೆಲ್ಲ ಬಂಗಾರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST
ಬಾಳೆಲ್ಲ ಬಂಗಾರ
ಬಾಳೆಲ್ಲ ಬಂಗಾರ   

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ತತ್ಕೊಳ ಗ್ರಾಮವು ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ. ಹೀಗಾಗಿ ಅಲ್ಲಿದ್ದ ನೂರಾರು ಕೃಷಿಕರನ್ನು ತಾಲ್ಲೂಕಿನ ವಿವಿಧೆಡೆ ಸ್ಥಳಾಂತರಿಸಿದ್ದು ಎಲ್ಲೆಡೆ ಚರ್ಚೆಯ ವಿಷಯವಾಗಿತ್ತು.

ಹೀಗೆ ಸ್ಥಳಾಂತರದಿಂದ ಫಲವತ್ತಾದ ಭೂಮಿ ಕಳೆದುಕೊಂಡು ನಿರಾಶ್ರಿತರಾದವರಲ್ಲಿ ಬಿ.ಎಸ್. ರುದ್ರಯ್ಯ ಎಂಬ ಯುವಕ ಕೂಡ ಸೇರಿದ್ದರು. ಅವರಿಗೆ ಆ ಭೂಮಿ ಬದಲಾಗಿ ಬೇರೆ ಭೂಮಿ ಸಿಕ್ಕಿದ್ದರೂ ಅದು ವ್ಯವಸಾಯಕ್ಕೆ ಅಷ್ಟೊಂದು ಹೇಳಿ ಮಾಡಿಸಿದಂತಿರಲಿಲ್ಲ. ಆದರೂ ಛಲ ಬಿಡದೆ ಬರಡು ಮಣ್ಣಿನಲ್ಲಿಯೇ ಬಾಳೆ ಬೆಳೆದು ಕಳೆದು ಹೋಗಿದ್ದ ಕೃಷಿ ಬದುಕನ್ನು ಮತ್ತೊಮ್ಮೆ ರೂಪಿಸಿಕೊಂಡಿದ್ದಾರೆ.

  ತತ್ಕೊಳ ನಿರಾಶ್ರಿತರಿಗೆ ಸರ್ಕಾರ ನೀಡಿದ ಭೂಮಿಯಲ್ಲಿಯೇ ಕೃಷಿ ಕಾಯಕ ಕೈಗೊಂಡ ಅವರು ಮೂಡಿಗೆರೆಯ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನೆರವು ಮತ್ತು ಬೆಂಗಳೂರು ಕೃಷಿ ವಿವಿ ಮಾರ್ಗದರ್ಶನ ಪಡೆದು ಎರಡು ಹೆಕ್ಟೇರ್‌ನಲ್ಲಿ `ಜಿ. ಅಂಗಾಂಶ 9~ ತಳಿಯ ಬಾಳೆ ನೆಟ್ಟರು.

ಈ ತಳಿಯಲ್ಲಿ ಒಮ್ಮೆ ನೆಟ್ಟರೆ ಮೂರು ಬೆಳೆ ತೆಗೆಯಲು ಸಾಧ್ಯ. ಒಂದು ಎಕರೆಯಲ್ಲಿ 1200 ಸಸಿಗಳನ್ನು ನೆಟ್ಟು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದಾಗಿದೆ ಎಂಬುದು ಅವರ ಅನುಭವ. ಅವರು ಅನುಸರಿಸಿದ ವಿಧಾನ ಹೀಗಿದೆ.

ಬೆಳೆಯುವ ವಿಧಾನ: ಭೂಮಿಯ ಅಗತ್ಯಕ್ಕೆ ತಕ್ಕಂತೆ ಉಳುಮೆ ಮಾಡಿ, ಆರು ಅಡಿ ಅಗಲ ಮತ್ತು ಲಭ್ಯತೆಗೆ ಅನುಗುಣವಾಗಿ ಉದ್ದವನ್ನು ನಿರ್ಧರಿಸಿ ಪಾತಿ ನಿರ್ಮಿಸಬೇಕು. ಪಾತಿಯಲ್ಲಿ ಆರು ಅಡಿ ಅಂತರವಿಟ್ಟು ತಲಾ ಎರಡು ಅಡಿ ಉದ್ದ, ಅಗಲ, ಆಳದ ಗುಣಿ ಮಾಡಿಕೊಂಡು ಬುಡಕ್ಕೆ ಕಾಡುಮಣ್ಣು ಹಾಗು ಸಗಣಿ ಗೊಬ್ಬರ ಮಿಶ್ರಣ ಹಾಕಬೇಕು.

ನಂತರ `ಜಿ. ಅಂಗಾಂಶ 9~ ಬಾಳೆ ಸಸಿ ನೆಟ್ಟು ಬುಡದ ಸುತ್ತ ಮಣ್ಣು ತುಂಬಬೇಕು. ಭೂಮಿಯ ತೇವಾಂಶಕ್ಕೆ ಅನುಗುಣವಾಗಿ ನೀರು ಕೊಡುತ್ತಾ, ಕಳೆ ನಿಯಂತ್ರಿಸಿದರೆ 11 ತಿಂಗಳಿಗೆ ಮೊದಲ ಬೆಳೆ ಕೈ ಸೇರುತ್ತದೆ. ಆರು ತಿಂಗಳು ಕಳೆಯುವ ವೇಳೆಗೆ ಬುಡದಲ್ಲಿ ಹೊಸ ಕಂದುಗಳು ಕಾಣಿಸಿಕೊಳ್ಳುತ್ತವೆ. ಆದರೆ ಇವು ಬೆಳೆಯಲು ಬಿಡದೆ ನಿಯಂತ್ರಿಸಬೇಕು. ಏಕೆಂದರೆ ಗೊನೆ ಬರುವ ಮುನ್ನ ಬೇರೆ ಕಂದು ಬೆಳೆಯಲು ಬಿಟ್ಟರೆ ಮೊದಲ ಕಂದಿನ ಬೆಳವಣಿಗೆ ಕುಂಠಿತವಾಗುತ್ತದೆ.

 ಇಳುವರಿ: ರುದ್ರಯ್ಯನವರ ಒಂದು ಎಕರೆಯಲ್ಲಿ 1200 ಗಿಡ ಇದ್ದು, ಒಂದೊಂದು ಗೊನೆ 35 ರಿಂದ 40 ಕಿಲೋದಷ್ಟು ತೂಕವಿದೆ. ಮಾರುಕಟ್ಟೆಯಲ್ಲಿ ಕಿಲೋಗೆ ಸರಾಸರಿ 12 ರೂಪಾಯಿಯಂತೆ ದರ ಪಡೆಯುತ್ತಿದ್ದಾರೆ. ಜಿ. ಅಂಗಾಂಶ 9 ಬಾಳೆಗೆ ಉತ್ತಮ ಬೇಡಿಕೆಯೂ ಇದ್ದು ಚಿಕ್ಕಮಗಳೂರು, ಹಾಸನ ಮತ್ತು ಮಂಗಳೂರು ಬಾಳೆ ಮಾರುಕಟ್ಟೆಯಲ್ಲಿ ಸ್ಥಳಿಯ ದರಕ್ಕಿಂತಲೂ ಕಿಲೋಗೆ ಎರಡು ರೂಪಾಯಿಯಷ್ಟು ಹೆಚ್ಚು ಬೆಲೆ ಸಿಗುತ್ತಿದೆ.

ಒಂದು ಎಕರೆ ಬೆಳೆಯಲು ಅವರಿಗೆ ಸುಮಾರು ಒಂದು ಲಕ್ಷ ರೂಪಾಯಿ ಖರ್ಚಾಗಿದ್ದು, ಅಂದಾಜು 4.5 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಿದ್ದಾರೆ. ಬಾಳೆ ಬುಡಗಳ ನಡುವಿನ ಖಾಲಿ ಜಾಗದಲ್ಲಿ ತರಕಾರಿ ಬೆಳೆಯುವ ಆಲೋಚನೆಯೂ ಅವರದು.

ಶ್ರದ್ಧೆಯಿಂದ ದುಡಿದರೆ ವ್ಯವಸಾಯ ಎಂದೂ ಕೈಬಿಡುವುದಿಲ್ಲ ಎನ್ನುವ ಅವರ ಸಂಪರ್ಕ ಸಂಖ್ಯೆ 94489 00226.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.