ADVERTISEMENT

ಬಿಳಿ ಮೆಣಸು

ಗೀತಸದಾ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಈ ಮೆಣಸಿನ ಕಾಯಿಗಳ ಬಣ್ಣ ಬಿಳಿ. ವಿಶಿಷ್ಟ ಪರಿಮಳವಿರುವ ಈ ಮೆಣಸಿನ ಕಾಯಿಗಳು ಎಳೆಯದಾಗಿರುವಾಗ ಬಿಳಿ ಬಣ್ಣದಲ್ಲಿರುತ್ತವೆ. ಬಲಿತ ನಂತರ ಅಚ್ಚ ಬಿಳಿ ಬಣ್ಣ ಪಡೆಯುತ್ತವೆ.

ದೊಣ್ಣೆ ಮೆಣಸಿನ ಜಾತಿಗೆ ಸೇರಿದ ಈ ಮೆಣಸಿನಲ್ಲಿ ನೇರಳೆ, ಹಸಿರು, ಕೇಸರಿ ಇತ್ಯಾದಿ ಬಣ್ಣಗಳ ತಳಿಗಳಿವೆ. ಚಿಕ್ಕದಾಗಿ ಪೊದೆಯಂತೆ ಬೆಳೆಯುವ ಹಸಿರು ಗಿಡದಲ್ಲಿ ಬಿಳಿ ಮೆಣಸುಗಳು ತುಂಬಿಕೊಂಡಾಗ ಗಿಡ ಬಹಳ ಆಕರ್ಷಕವಾಗಿ ಕಾಣುತ್ತದೆ.

ಹೆಚ್ಚಿನ ಆರೈಕೆಯಿಲ್ಲದೇ ಸಹಜವಾಗಿ ಬೆಳೆಯುವ ಈ ಮೆಣಸು ಕರಾವಳಿ, ಮಲೆನಾಡಿನ ಹಿತ್ತಲುಗಳಲ್ಲಿ  ಸಾಮಾನ್ಯವಾಗಿ ಕಂಡುಬರುತ್ತದೆ. ರುಚಿಯಲ್ಲಿ ಬಹಳ ಖಾರವಾಗಿರುವ ಈ ಮೆಣಸಿನ ಕಾಯಿಗಳನ್ನು ಚಟ್ನಿ, ಸಾರು, ಹಪ್ಪಳ, ಸಂಡಿಗೆ ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ಬಲಿತು ಹಣ್ಣಾದ ಮೆಣಸಿನ ಕಾಯಿಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಬಳಸಬಹುದು. ಖಾರ ಜಾಸ್ತಿಯಾಗಿರುವುದರಿಂದ ಸ್ವಲ್ಪ ಹಾಕಿದರೂ ಸಾಕು. ಈ ಮೆಣಸಿನ ಗಿಡಗಳನ್ನು ಬೆಳೆಯುವವರು ವಿರಳ. ಹೀಗಾಗಿ ಈ ಮೆಣಸು ಇನ್ನೂ ಮಾರುಕಟ್ಟೆಗೆ ಪರಿಚಯವಾಗಿಲ್ಲ.

  ಒಗು ಮಣ್ಣಿನಲ್ಲಿ ಸೊಗಸಾಗಿ ಬೆಳೆಯುವ ಈ ಮೆಣಸಿನ ಗಿಡಗಳು ಬಹಳ ಮೃದುವಾಗಿರುತ್ತವೆ. ಗಿಡಕ್ಕೆ ಆಧಾರ ಕೊಟ್ಟು ನಿಲ್ಲಿಸಬೇಕಾಗುತ್ತದೆ. ಗಿಡಗಳಿಗೆ ರೋಗ, ಕೀಟಗಳ ಬಾಧೆ ಕಡಿಮೆ. ರಾಸಾಯನಿಕ ಕೀಟನಾಶಕಗಳನ್ನು ಬಳಸುವ ಅಗತ್ಯವಿಲ್ಲ. ಉತ್ತಮ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರದ ಆರೈಕೆ ಸಾಕು. ಗಿಡಗಳು ವರ್ಷವಿಡೀ ಕಾಯಿ ಬಿಡುವುದರಿಂದ ಹೂವಿನ ಗಿಡಗಳ ನಡುವೆ ಒಂದು ಗಿಡ ನೆಟ್ಟರೂ ಸಾಕು.  

  ಮಾಗಿದ ಹಣ್ಣಿನ ಬೀಜಗಳಿಂದ ಸಸಿಗಳನ್ನು ಬೆಳೆಸಿಕೊಳ್ಳಬಹುದು. ಅಂದಕ್ಕಾಗಿ ಬೆಳೆಸಿ ಆಹಾರ ಪದಾರ್ಥಗಳಲ್ಲಿ ಖಾರಕ್ಕೆ ಬಳಸಬಹುದು. ಗಿಡಗಳನ್ನು ಕುಂಡಗಳಲ್ಲೂ ಬೆಳೆಸಬಹುದು.                         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.