ADVERTISEMENT

ಬೀಜದ ಭತ್ತ ಬೆಳೆಯುವ ರೈತ

ಬಿ.ಸಿ.ಅರವಿಂದ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST
ಬೀಜದ ಭತ್ತ ಬೆಳೆಯುವ ರೈತ
ಬೀಜದ ಭತ್ತ ಬೆಳೆಯುವ ರೈತ   

ಮಲೆನಾಡಿನ ಬಹುತೇಕ ರೈತರು ಈಗ ಭತ್ತ ಬೆಳೆಯುವುದಿಲ್ಲ. ಭತ್ತ ಬೆಳೆಯುವುದು ಲಾಭದಾಯಕ ಅಲ್ಲ ಎಂದು ನಿರ್ಧರಿಸಿ ಅದರ ಬದಲು ಅಡಿಕೆ ಬೆಳೆಯಲು ಮುಂದಾದರು.

ಅಡಿಕೆ, ತರಕಾರಿ, ಬಾಳೆ, ತೆಂಗು ಬೆಳೆಯುತ್ತಿದ್ದ ರೈತರು ಶುಂಠಿ ಬೆಳೆಯ ಆಕರ್ಷಣೆಗೆ ಒಳಗಾಗಿದ್ದಾರೆ. ಶುಂಠಿ ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಸಲ ನಿರಾಸೆಯಾಗಿದೆ. ಈ ವರ್ಷ ಶುಂಠಿಗೆ ಕೊಳೆ ರೋಗ ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆಯೂ ಕುಸಿದಿದೆ. ಶುಂಠಿ ಬೆಳೆದವರು ಕಂಗಾಲಾಗಿದ್ದಾರೆ. 

ಆದರೆ ಚಿಕ್ಕಮಗಳೂರಿನ ಹಾಂದಿ ಗ್ರಾಮದ ಬಾ.ಪು. ದಿವ್ಯಪ್ರಸಾದ್ ಅವರಿಗೆ ಈ ಚಿಂತೆ ಇಲ್ಲ. ಇಪ್ಪತ್ತು ಎಕರೆಯಲ್ಲಿ ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರ ಸಹಭಾಗಿತ್ವದಲ್ಲಿ ಭತ್ತದ ಬೀಜೋತ್ಪಾದನೆಗೆ ಮುಂದಾಗಿದ್ದಾರೆ. ಕರ್ನಾಟಕ ಬೀಜ ನಿಗಮ ಮತ್ತು ಮೂಡಿಗೆರೆಯ ವಲಯ ಸಂಶೋಧನಾ ಕೇಂದ್ರದ ಜತೆ ಒಪ್ಪಂದ ಮಾಡಿಕೊಂಡು ತುಂಗಾ ತಳಿಯ ಮೂಲ ಬೀಜ ಪಡೆದು ನಾಟಿ ಮಾಡಿದ್ದಾರೆ.

ದಿವ್ಯಪ್ರಸಾದ್ ಅವರು ಕುಟುಂಬದವರು ಕಳೆದ 70 ವರ್ಷಗಳಿಂದ ಭತ್ತದ ಬೇಸಾಯ ಮಾಡುತ್ತ ಬಂದಿದ್ದಾರೆ. ಇಂದಿಗೂ ಅವರಿಗೆ ಭತ್ತದ ಬಗ್ಗೆ ವಿಪರೀತ ಮೋಹ. ಅವರು 20 ನಾಟಿ ಹಸುಗಳನ್ನು ಗೊಬ್ಬರಕ್ಕಾಗಿ ಸಾಕಿದ್ದಾರೆ. ಈ ಹಸುಗಳಿಗೆ ಹುಲ್ಲಿಗಾಗಿ ಭತ್ತ ಬೆಳೆಯುವ ಅನಿವಾರ್ಯತೆ ಇದೆ.

ಈ ವರ್ಷ ಅವರು ಭತ್ತದ ನಾಟಿ ಸಮಯದಲ್ಲಿ ಕಾರ್ಮಿಕರ ಕೊರತೆ ಇತ್ತು. ಅವರು ನಾಟಿ ಮಾಡುವ ಯಂತ್ರವನ್ನು ಖರೀದಿಸಿ ಅದನ್ನು ಬಳಸಿ ನಾಟಿ ಮಾಡಿದ್ದಾರೆ. 20 ಎಕರೆಯಲ್ಲಿ 5 ಕ್ವಿಂಟಲ್ ಬೀಜದ ಸಸಿ ಮಾಡಿಕೊಂಡು ನಾಟಿ ಮಾಡಿದ್ದಾರೆ.

ಸುಮಾರು 360 ಕ್ವಿಂಟಲ್ ಇಳುವರಿ ನಿರೀಕ್ಷಿಸಿದ್ದಾರೆ. ಅವರು ಬೆಳೆಯುವ ಭತ್ತವನ್ನು ಬೀಜ ನಿಗಮದವರು ಮಾರುಕಟ್ಟೆ ಬೆಲೆಗಿಂತ ಕ್ವಿಂಟಲ್‌ಗೆ ರೂ. 250 ರೂ ಹೆಚ್ಚು ಹಣ ನೀಡಿ ಖರೀದಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಬಿತ್ತನೆ ಬೀಜದ ಭತ್ತ ಬೆಳೆಯುವುದು ಲಾಭದಾಯಕ ಎನ್ನುವುದು ದಿವ್ಯಪ್ರಸಾದ್ ಅವರ ಅನುಭವ.

ಇಪ್ಪತ್ತು ಎಕರೆಯಲ್ಲಿ ಭತ್ತದ ನಾಟಿ ಮುಗಿದ ನಂತರ ಯಂತ್ರವನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಅದರಿಂದ ಅನೇಕ ರೈತರಿಗೆ ಅನುಕೂಲವಾಗಿದೆ.  

ಇನ್ನು ಬೀಜ ನಿಗಮ ಮತ್ತು ವಲಯ ಸಂಶೋಧನಾ ಕೇಂದ್ರದ ಜತೆಯಲ್ಲಿ ಮಾಡಿಕೊಂಡ ಒಪ್ಪಂದದಂತೆ  ಕೇಂದ್ರದ ಹಿರಿಯ ಅಧೀಕ್ಷಕ ಡಾ. ಡಿ. ಮಾದಯ್ಯನವರು ದಿವ್ಯಪ್ರಸಾದ್ ಅವರಿಗೆ ತಾಂತ್ರಿಕ ಮಾರ್ಗದರ್ಶನ ನೀಡುತ್ತಿದ್ದಾರೆ.

ಭತ್ತದ ಬೇಸಾಯ ಕೈಬಿಟ್ಟು ಅಡಿಕೆ ಬೆಳೆಯಲು ಮುಂದಾಗಿದ್ದ ಮಲೆನಾಡಿನ ರೈತರು ಅಡಿಕೆಗೆ ಹಳದಿ ರೋಗ ಬಂದ ಮೇಲೆ ಏನು ಬೆಳೆಯಬೇಕು ಎಂಬ ಗೊಂದಲದಲ್ಲಿದ್ದಾರೆ.

ಮಲೆನಾಡು ಮೂಲದ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡುವ ಹಾಗೂ ಗುಣ ಮಟ್ಟದ ಭತ್ತದ ಬಿತ್ತನೆ ಬೀಜಗಳಿಗೆ ಬೇಡಿಕೆ ಇರುವುದರಿಂದ ಭತ್ತ ಬೆಳೆಯುವುದು ಲಾಭದಾಯಕ. ನೀರಿನ ಅನುಕೂಲ ಇರುವ ರೈತರು ಭತ್ತದ ಬೀಜೋತ್ಪಾದನೆಗೆ ಮನಸ್ಸು ಮಾಡಬಹುದು.

ಆಸಕ್ತರು ದಿವ್ಯಪ್ರಸಾದ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್: 9448229888.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.