ADVERTISEMENT

ಬೆಳೆಗಳ ನಡುವೆ ಅಗರ್‌

ವಾರಿಜಾ ಜಗದೀಶ್
Published 24 ಫೆಬ್ರುವರಿ 2014, 19:30 IST
Last Updated 24 ಫೆಬ್ರುವರಿ 2014, 19:30 IST
ಬೆಳೆಗಳ ನಡುವೆ ಅಗರ್‌
ಬೆಳೆಗಳ ನಡುವೆ ಅಗರ್‌   

ಊದ್, ಔದ್, ಅಗರ್, ಇತ್ಯಾದಿಯಾಗಿ ಕರೆಯಲಾಗುವ ಅಗರ್‌ವುಡ್ ಅನ್ನು ತೆಂಗು, ಅಡಿಕೆ, ಕೋಕೊ, ಕಾಫಿ, ಕಾಳುಮೆಣಸು ಇವುಗಳ ಮಧ್ಯೆ ಮಿಶ್ರ ಬೆಳೆಯಾಗಿ ಬೆಳೆಯಲು ಅತ್ಯಂತ ಸೂಕ್ತವಾಗಿದೆ. ಕಾಫಿ ತೋಟದ ಮಧ್ಯೆ ಅಗರ್‌ವುಡ್‌ ಗಿಡಗಳನ್ನು ಬೆಳೆಸಿದರೆ ಗಿಡಕ್ಕೆ ಉತ್ತಮ ನೆರಳು ದೊರಕುತ್ತದೆ. ಈ ಅಗರ್ ವುಡ್‌ನ ಗಿಡಗಳಿಗೆ ವಿಶೇಷ ಆರೈಕೆ ಏನೂ ಬೇಕಾಗಿಲ್ಲ.

ಗಂಧದ ಗಿಡಗಳನ್ನು ಬೆಳೆಸಿದರೆ ಕನಿಷ್ಠ ೨೫ ರಿಂದ ೩೦ವರ್ಷಕ್ಕೆ ಆದಾಯ ದೊರಕುತ್ತದೆ. ಆದರೆ ಈ ಅಗರ್‌ವುಡ್ ಕೇವಲ ೮ ರಿಂದ ೧೫ ವರ್ಷಕ್ಕೆ ಉತ್ತಮ ಆದಾಯ ತರುತ್ತದೆ. ತೋಟಗಳ ಬದಿಯಲ್ಲಿ, ‘ಬಾರ್ಡರ್ ಕ್ರಾಪ್’ ಆಗಿಯೂ ಬೆಳೆಯಬಹುದು.

ಈ ಎಲ್ಲಾ ವಿಶೇಷತೆಗಳನ್ನು ಮನಗಂಡು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲಿನಲ್ಲಿ ಸುಬ್ರಹ್ಮಣ್ಯರವರು ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ತೆಂಗಿನ ತೋಟದ ನಡುವೆ ಅಗರ್‌ವುಡ್ ಗಿಡಗಳನ್ನು ಬೆಳೆದಿದ್ದಾರೆ. ಈ ಗಿಡಗಳಿಗೆ ಆಗಾಗ್ಗೆ ಸ್ವಲ್ಪ ಗೊಬ್ಬರ, ನೀರನ್ನು ಒದಗಿಸುತ್ತಾರೆ.

‘ಇದು ವಾಣಿಜ್ಯ ಬೆಳೆಯಾಗಿದ್ದು, ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಅತ್ತರ್, ಸುಗಂಧ ದ್ರವ್ಯ, ಸಾಂಪ್ರದಾಯಿಕ ಔಷಧಿಗಳು, ಅಗರ್ ಬತ್ತಿ, ಪೇಪರ್ ತಯಾರಿಕೆಯಲ್ಲಿ ಬಳಸುತ್ತಾರೆ. ಕಡಿಮೆ ಹಣವನ್ನು ಹಾಕಿ ಹೆಚ್ಚು ಹಣವನ್ನು ನಿರೀಕ್ಷೆ ಮಾಡಬಹುದು’ ಎನ್ನುತ್ತಾರೆ ಸುಬ್ರಹ್ಮಣ್ಯ.

ಮುಖ್ಯ ಬೆಳೆಯಾಗಿ ಇದನ್ನು ಬೆಳೆಯುವುದಕ್ಕಿಂತ ಮಿಶ್ರ­ಬೆಳೆಯಾಗಿ ಬೆಳೆದರೆ ಅನಿರೀಕ್ಷಿತವಾಗಿ ಬಂದೆರಗುವ  ಬೆಲೆ ಇಳಿಕೆ, ರೋಗಗಳು, ಹವಾಮಾನ ವೈಪರೀತ್ಯ, ಬೇಡಿಕೆ ಕೊರತೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬಹುದು ಎನ್ನುವುದು ಅವರ ಅನಿಸಿಕೆ. ಮಲೆನಾಡು ಪ್ರದೇಶಕ್ಕೆ ಇದು ಬಹಳ ಸೂಕ್ತವಾದ ಬೆಳೆ ಎನ್ನುವುದು ಅವರ ಅಭಿಮತ. ಮಾಹಿತಿಗೆ ೦೮೧೮೧ ೨೧೨೦೪೮.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.